ಮಂಗಳವಾರ, ಮೇ 18, 2021
30 °C

ಗೆಳತಿ ಪಾತ್ರ ಒಲ್ಲೆ ಎಂದ ಸ್ವರ

- ಮೇಘಾ ಶೆಣೈ Updated:

ಅಕ್ಷರ ಗಾತ್ರ : | |

ಗೆಳತಿ ಪಾತ್ರ ಒಲ್ಲೆ ಎಂದ ಸ್ವರ

`ಮಾಧೋಲಾಲ್ ಕೀಪ್ ವಾಕಿಂಗ್' ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ನಟಿ ಸ್ವರ ಭಾಸ್ಕರ್ ಎರಡು ವರ್ಷಗಳಿಂದ ಸಿನಿಮಾದಿಂದ ವಿರಾಮ ಪಡೆದಿದ್ದರು. ಇದೀಗ ಸ್ವರ ಹಲವು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡು ಮತ್ತೆ ಬಂದಿದ್ದಾರೆ.ಗಂಭೀರ ಪಾತ್ರಗಳಲ್ಲಿ ತೊಡಗಿಕೊಳ್ಳಲು ಚಿಂತಿಸುತ್ತಿರುವ ಸ್ವರ, ಇನ್ನೆಂದೂ ಗೆಳತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಾರೆ ಎಂದೂ ಹೇಳಿದ್ದಾರೆ. `ತನು ವೆಡ್ಸ್ ಮನು' ಚಿತ್ರದಲ್ಲಿ ಕಂಗನಾ ರನೌತ್ ಅವರ ಆತ್ಮೀಯ ಗೆಳತಿ ಪಾಯಲ್ ಆಗಿ ನಟಿಸಿದ್ದ ಸ್ವರ ಸಾಕಷ್ಟು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರಂತೆ. `ತುಂಬಾ ಒಳ್ಳೆಯ ಪಾತ್ರ ಸಿಗಬೇಕೆಂದರೆ ಕಾಯುವುದು ಅವಶ್ಯಕವಿತ್ತು. ಒಳ್ಳೆಯ ಪಾತ್ರ ಪಡೆಯಲು ತಾಳ್ಮೆ ತುಂಬಾ ಅವಶ್ಯ' ಎಂಬುದನ್ನು ಅವರು ಮನಗಂಡಿದ್ದಾರೆ.`ತನು ವೆಡ್ಸ್ ಮನು' ಚಿತ್ರದಲ್ಲಿನ ಅಭಿನಯಕ್ಕೆ ಪ್ರಶಂಸನೀಯ ವಿಮರ್ಶೆಗಳು ಬಂದವು. ಆದರೆ ಮತ್ತೊಮ್ಮೆ ನಾನು ಸ್ನೇಹಿತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ಕೊನೆಯವರೆಗೂ ಜನರ ಮನದಲ್ಲಿ ಅಚ್ಚಳಿಯದಂತೆ ಉಳಿಯುವ ಪಾತ್ರಗಳನ್ನು ಮಾಡುವಾಸೆಯಿದೆ. ಪರದೆ ಮೇಲೆ ಸುಮ್ಮನೆ ಕಾಣಿಸಿಕೊಳ್ಳಲಾರೆ. ಒಳ್ಳೆಯ ಸಿನಿಮಾದ ಭಾಗವಾಗಬೇಕಾದರೆ ಕಾಯಲೇಬೇಕಾಗುತ್ತದೆ. ನಾನು ಕಾಯುತ್ತೇನೆ' ಎಂದವರು ದೃಢವಾಗಿ ನುಡಿದರು.ಆನಂದ್ ಎಲ್. ರೈ ನಿರ್ದೇಶನದ `ರಾಂಝನಾ', ಅನಿರುದ್ಧ್ ಚಾವ್ಲಾ ನಿರ್ದೇಶನದ `ಸಬ್ಕಿ ಬಜೇಗಿ ಬ್ಯಾಂಡ್', ದೆಬಲಾಯ್ ದೇ ನಿರ್ದೇಶನದ `ಮಚ್ಲಿ ಜಲ್ ಕಿ ರಾಣಿ ಹೈ' ಸಿನಿಮಾದಲ್ಲಿ ಸ್ವರ ಕಾಣಿಸಿಕೊಳ್ಳಲಿದ್ದಾರೆ.ಮುಖ್ಯ ಪಾತ್ರ, ಚಿಕ್ಕ ಪಾತ್ರ ಎರಡನ್ನೂ ಸಮಾನವಾಗಿ ಕಾಣುವ ಸ್ವರ ಅವರ ಪ್ರಕಾರ ಅಭಿನಯ ಮಾತ್ರ ಮುಖ್ಯ. `ಮುಖ್ಯ ಪಾತ್ರವಿರಲಿ, ಸಾಮಾನ್ಯವಿರಲಿ, ನನಗೆ ವಸ್ತು ಮುಖ್ಯ. ಪಾತ್ರಕ್ಕೆ ತಯಾರಾಗುವ ವಿಷಯದಲ್ಲೂ ಅಷ್ಟೆ.ಎರಡೂ ರೀತಿಯ ಪಾತ್ರಕ್ಕೂ ಒಂದೇ ನಿಟ್ಟಿನಲ್ಲಿ ಯೋಚಿಸುತ್ತೇನೆ. ಪಾತ್ರವೊಂದಕ್ಕೆ ಪೂರ್ಣವಾಗಿ ಒಪ್ಪಿಸಿಕೊಳ್ಳುತ್ತೇನೆ. ನಾನು ಸ್ಕ್ರೀನ್ ಮೇಲೆ ಎಷ್ಟು ಹೊತ್ತು ಕಾಣಿಸಿಕೊಳ್ಳುತ್ತೇನೆ ಎಂಬುದೂ ನನಗೆ ಮುಖ್ಯವಾಗುವುದಿಲ್ಲ' ಎಂದು ನಟನೆ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹೇಳಿಕೊಂಡರು.`ರಾಂಝನಾ' ಚಿತ್ರದಲ್ಲಿ ಸಂಪ್ರದಾಯಸ್ಥ ಬನಾರಸಿ ಹುಡುಗಿ ಬಿಂದಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸ್ವರ, ಈ ಪಾತ್ರವನ್ನು ಅತ್ಯಂತ ಪ್ರೀತಿಯ ಮತ್ತು ಸ್ಫೂರ್ತಿ ತುಂಬುವ ಪಾತ್ರ ಎಂದೂ, ಇದುವರೆಗೂ ಮಾಡಿರುವ ಚಿತ್ರಗಳಲ್ಲಿ ಇದು ತುಂಬಾ ವಿಶೇಷ ಪಾತ್ರ ಎಂಬುದನ್ನೂ ಬಣ್ಣಿಸುತ್ತಾರೆ.`ನನಗೆ ಬಿಂದಿಯಾ ಪಾತ್ರ ತುಂಬಾ ಹಿಡಿಸಿದೆ. ಆಕೆಯ ಆತ್ಮವಿಶ್ವಾಸ, ಒಂದು ರೀತಿಯ ಹುಚ್ಚುತನವೂ ಇಷ್ಟವೆನಿಸುತ್ತದೆ. ನನ್ನೊಳಗೇ ಇದ್ದರೂ ನನಗೇ ಗೋಚರಿಸದ ಹಲವು ಮುಖಗಳನ್ನೂ ನಾನು ಇದರಿಂದ ತಿಳಿದುಕೊಳ್ಳಲು ಸಾಧ್ಯವಾಯಿತು' ಎನ್ನುತ್ತಾರೆ.ಧನುಶ್ ಮತ್ತು ಸೋನಂ ಜೊತೆಗಿನ ಅಭಿನಯದ ಅನುಭವವನ್ನು ಸ್ವರ ಎಂದಿಗೂ ಮರೆಯುವುದಿಲ್ಲವಂತೆ. ಅದನ್ನು ಅವರು ಹೇಳಿಕೊಂಡಿದ್ದು ಹೀಗೆ... `ಧನುಶ್ ಅಹಂಕಾರವಿಲ್ಲದ ನಟ. ಸೋನಂ ಮತ್ತು ನಾನು ಒಟ್ಟಿಗೆ ಕಾಣಿಸಿಕೊಂಡಿರುವುದು ಕಡಿಮೆ. ಆದರೂ ಅವರು ಸಿಕ್ಕಾಗ, ನಾನು ಕಂಡಿರುವವರಲ್ಲಿ ನೀವು ತುಂಬಾ ಒಳ್ಳೆಯ ಹುಡುಗಿ ಎಂದು ಹೊಗಳಿದ್ದೆ' ಎಂದು ನೆನಪಿಸಿಕೊಂಡರು.ತಂದೆ ಆಂಧ್ರಪ್ರದೇಶದವರಾದರೂ ಪ್ರಾದೇಶಿಕ ಭಾಷೆಯಲ್ಲಿ ಸ್ವರ ಇನ್ನೂ ಕಾಣಿಸಿಕೊಂಡಿಲ್ಲ. ಅದಕ್ಕೆ ಅವರು ಉತ್ತರಿಸಿದ್ದು, `ನನ್ನ ಅಜ್ಜಿಗೆ ನನ್ನನ್ನು ತೆಲುಗು ಸಿನಿಮಾದಲ್ಲಿ ನೋಡುವಾಸೆ. ಆದರೆ ನನಗಿನ್ನೂ ಆ ಯೋಚನೆ ಬಂದಿಲ್ಲ. ತೆಲುಗು ಸಿನಿಮಾ ನೋಡಿ ಎಂಜಾಯ್ ಮಾಡುತ್ತೇನೆ. ಆದರೆ ಭಾಷೆಯನ್ನು ಸಂಪೂರ್ಣ ಕಲಿತ ಮೇಲಷ್ಟೆ ತೆಲುಗು ಸಿನಿಮಾ ರಂಗಕ್ಕೆ ಹೋಗಬೇಕೆಂದಿದ್ದೇನೆ' ಎಂದು.ಚಿಕ್ಕಂದಿನಲ್ಲೇ ನಾಟಕದ ಗೀಳು ಹತ್ತಿಸಿಕೊಂಡಿದ್ದ ಸ್ವರ ಅವರಿಗೆ ನಟನೆ  ಸಹಜವಾಗಿಯೇ ಬಂದ ವರವಂತೆ. `ಪಾತ್ರಗಳ ಭಾವನೆಗಳನ್ನು ನನ್ನಲ್ಲಿ ತುಂಬಿಸಿಕೊಳ್ಳುತ್ತೇನೆ. ಅದರಿಂದಲೇ ಅಭಿನಯದ ಬಗೆಗೆ ಅಗಾಧ ಪ್ರೀತಿ ಬೆಳೆಯಲು ಸಾಧ್ಯವಾಯಿತು' ಎನ್ನುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.