ಗುರುವಾರ , ಮೇ 6, 2021
24 °C

ಗೇಲ್ ಆಟ ನೋಡುವ ಕಾತರ

ಕೆ.ಓಂಕಾರ ಮೂರ್ತಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈ ಕ್ರಿಸ್ ಗೇಲ್ ಅದೇನು ಮೋಡಿ ಮಾಡಿದ್ದಾರೋ ಗೊತ್ತಾಗುತ್ತಿಲ್ಲ. ಟಿಕೆಟ್ ಖರೀದಿಗಾಗಿ ಕ್ರೀಡಾಂಗಣದ ಸುತ್ತ ಅಲೆದಾಡುತ್ತಿರುವ ಪ್ರತಿ ಕ್ರಿಕೆಟ್ ಪ್ರೇಮಿಯ ಮನಸ್ಸು ಹಾಗೂ ಹೃದಯದೊಳಗೆ ಪಿಸುಗುಡುತ್ತಿರುವ ಒಂದು ಹೆಸರು ಗೇಲ್!ಆದರೆ ಐಪಿಎಲ್ ಟ್ವೆಂಟಿ-20 ಟೂರ್ನಿಯ ಮೊದಲ ಪಂದ್ಯದಲ್ಲಿಯೇ ವೆಸ್ಟ್‌ಇಂಡೀಸ್‌ನ ಈ ಆಟಗಾರ ಆಡದ್ದು ಕೆಲ ಅಭಿಮಾನಿಗಳನ್ನು ಒಮ್ಮೆಲೇ ಬೆಚ್ಚಿಬೀಳುವಂತೆ ಮಾಡಿದೆ. ಇದಕ್ಕೆಲ್ಲಾ ಕಾರಣ ಗೇಲ್ ಮೇಲೆ ಪ್ರೇಕ್ಷಕರು ಇಟ್ಟಿರುವ ನಿರೀಕ್ಷೆ ಹಾಗೂ ಪ್ರೀತಿ.ಗೇಲ್ ಅನುಪಸ್ಥಿತಿಯ ನಡುವೆಯೂ ಐದನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗ ಆತ್ಮವಿಶ್ವಾಸದ ಖನಿ. ಈ ತಂಡದವರು ಮಂಗಳವಾರ ಸಂಜೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತಮ್ಮ ಎರಡನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದ್ದಾರೆ.ಮತ್ತದೇ ಪ್ರಶ್ನೆ...! ಗೇಲ್ ಈ ಪಂದ್ಯದಲ್ಲಿ ಆಡುತ್ತಾರಾ ಎಂಬುದು. ಸೋಮವಾರ ಅಭ್ಯಾಸವನ್ನೂ ಇಣುಕಿ ನೋಡುತ್ತಿದ್ದ ಅಭಿಮಾನಿಗಳದ್ದು ಕೂಡ ಅದೇ ಪ್ರಶ್ನೆ. ಅವರ ಸ್ಫೋಟಕ ಬ್ಯಾಟಿಂಗ್ ನೋಡುವ ತುಡಿತ ಹಾಗೂ ಕಾತರ. ಆದರೆ ಈ ಎಡಗೈ ಬ್ಯಾಟ್ಸ್‌ಮನ್ ತುಂಬಾ ಹೊತ್ತು ಅಭ್ಯಾಸ ನಡೆಸಿದರು.

 

ಸ್ನಾಯುಸೆಳೆತಕ್ಕೆ ಒಳಗಾಗಿರುವ ಇವರು ದೈಹಿಕ ಅರ್ಹತಾ ಪರೀಕ್ಷೆಯಲ್ಲೂ ಪಾಲ್ಗೊಂಡಿದ್ದರು. `ಗೇಲ್ ಆಡಲು ಕಣಕ್ಕಿಳಿಯುತ್ತಾರೆ ಎಂಬ ವಿಶ್ವಾಸದಲ್ಲಿ ನಾವಿದ್ದೇವೆ~ ಎಂದಷ್ಟೇ ನಾಯಕ ಡೇನಿಯಲ್ ವೆಟೋರಿ ಕೂಡ ನುಡಿದರು. ಹಾಗಾಗಿ ಆ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.ಹೊಸ ವಿಷಯವೆಂದರೆ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಆರ್‌ಸಿಬಿ ತಂಡ ಸೇರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿ ಇದ್ದ ಕಾರಣ ಈ ಆರಂಭಿಕ ಬ್ಯಾಟ್ಸ್‌ಮನ್ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಭಾನುವಾರ ಆಗಮಿಸಿರುವ ಅವರು ನೆಟ್ಸ್‌ನಲ್ಲಿ ಬಲವಾದ ಹೊಡೆತ ಬಾರಿಸುತ್ತಾ ಭರವಸೆ ಮೂಡಿಸಿದ್ದಾರೆ.ಆದರೆ ವಿದೇಶದ ನಾಲ್ಕು ಮಂದಿ ಆಟಗಾರರಿಗೆ ಮಾತ್ರ ತಂಡದಲ್ಲಿ ಆಡಲು ಅವಕಾಶವಿದೆ. ಮೊದಲ ಪಂದ್ಯದಲ್ಲಿ ವೆಟೋರಿ, ಎಬಿ ಡಿವಿಲಿಯರ್ಸ್, ಮುತ್ತಯ್ಯ ಮುರಳೀಧರನ್ ಹಾಗೂ ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್ ಕಣಕ್ಕಿಳಿದಿದ್ದರು. ಅಕಸ್ಮಾತ್ ಗೇಲ್ ಹಾಗೂ ದಿಲ್ಶಾನ್ ಅವರನ್ನು ಆಡಿಸಿದರೆ ಇವರಲ್ಲಿ ಯಾರನ್ನು ಕೈಬಿಡಬೇಕು ಎಂಬುದು ಆರ್‌ಸಿಬಿ ತಂಡಕ್ಕೆ ಈಗ ದೊಡ್ಡ ತಲೆನೋವಿನ ವಿಚಾರವಾಗಿದೆ.ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಗೆಲುವಿಗೆ ಕಾರಣರಾಗಿದ್ದ ಆಫ್ ಸ್ಪಿನ್ನರ್ ಮುರಳೀಧರನ್ ಹಾಗೂ ಡಿವಿಲಿಯ ರ್ಸ್ ಅವರನ್ನು ಕೈಬಿಡುವಂತಿಲ್ಲ. ವೆಟೋರಿ ತಂಡದ ನಾಯಕ. ಉಳಿದಿರುವ ಇನೊಬ್ಬ ಆಟಗಾರ ಮೆಕ್‌ಡೊನಾಲ್ಡ್.

 

ಅವರನ್ನು ಕೈಬಿಟ್ಟರೆ ದಿಲ್ಶಾನ್ ಅಥವಾ ಗೇಲ್‌ಗೆ ಅವಕಾಶ ನೀಡಬಹುದು. ಆದರೆ ಇಬ್ಬರನ್ನೂ ಒಟ್ಟಿಗೆ ಆಡಿಸಲು ಕಷ್ಟವಿದೆ. ಹಾಗಾಗಿ ಅಭ್ಯಾಸದ ವೇಳೆಯೇ ಆರ್‌ಸಿಬಿ ಮುಖ್ಯ ಸಲಹೆಗಾರ ಅನಿಲ್ ಕುಂಬ್ಳೆ ಹಾಗೂ ವೆಟೋರಿ ದೀರ್ಘ ಸಮಾಲೋಚನೆ ನಡೆಸುತ್ತಿದ್ದದ್ದು ಕಂಡುಬಂತು.ಆದರೆ ಎದುರಾಳಿ ನೈಟ್ ರೈಡರ್ಸ್ ತಂಡದವರು ಆರಂಭದಲ್ಲಿಯೇ ಸಮಸ್ಯೆಗೆ ಸಿಲುಕಿದ್ದಾರೆ. ಸತತ ಎರಡು ಸೋಲುಗಳನ್ನು ಸಹಿಸಿಕೊಳ್ಳಲು ಈ ತಂಡದ ಮಾಲೀಕ ಶಾರೂಖ್ ಖಾನ್‌ಗೆ ಸಾಧ್ಯವಾಗುತ್ತಿಲ್ಲ. ರಾಜಸ್ತಾನ ರಾಯಲ್ಸ್ ಎದುರಿನ ಪಂದ್ಯದ ವೇಳೆ ಶಾರೂಖ್ ಪದೇಪದೇ ತಮ್ಮ ಅಸಹನೆ ವ್ಯಕ್ತಪಡಿಸುತ್ತ್ದ್ದಿದ್ದದ್ದು ಸ್ಪಷ್ಟವಾಗಿತ್ತು.ಈ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಎನಿಸಿರುವ ನಾಯಕ ಗೌತಮ್ ಗಂಭೀರ್, ಜಾಕ್ ಕಾಲಿಸ್ ಹಾಗೂ ಬ್ರೆಂಡನ್ ಮೆಕ್ಲಮ್ ತಂಡದ ಸ್ಕೋರ್ 8 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿದ್ದು ಅದಕ್ಕೆ ಕಾರಣ. ಭಾರಿ ಮೊತ್ತಕ್ಕೆ ಹರಾಜಿನಲ್ಲಿ ಕೆಕೆಆರ್ ಪಾಲಾಗಿರುವ ಆಲ್‌ರೌಂಡರ್ ಯೂಸುಫ್ ಪಠಾಣ್ ಕೂಡ ನಿರೀಕ್ಷೆ ಸ್ಪಂದಿಸುತ್ತಿಲ್ಲ.ಶಾರೂಖ್ ಐಪಿಎಲ್‌ನ ಉಳಿದ ಫ್ರಾಂಚೈಸಿಗಳ ಮಾಲೀಕರಂತೆ ಅಲ್ಲ. ಸದಾ ತಂಡದೊಂದಿಗೆ ಇರುವ ಅವರು ಆಟಗಾರರಿಗೆ ಎಚ್ಚರಿಕೆ ನೀಡಲು ಹಿಂಜರಿಯುವುದಿಲ್ಲ. ಬಾಲಿವುಡ್‌ನ ಇತರ ನಟರನ್ನು ಕ್ರೀಡಾಂಗಣಕ್ಕೆ ಕರೆ ತರುವ ಅವರಿಗಿದು ಪ್ರತಿಷ್ಠೆಯ ವಿಷಯ.ಭಾರತ ತಂಡದ ಉಪನಾಯಕ ಸ್ಥಾನ ವಿರಾಟ್ ಕೊಹ್ಲಿ ಪಾಲಾಗಿರುವುದರಿಂದ ನಿರಾಶರಾಗಿರುವ ಗಂಭೀರ್ ಐಪಿಎಲ್‌ನಲ್ಲಿ ತಮ್ಮ ಸಾಮರ್ಥ್ಯ ತೋರಿಸುವ ವಿಶ್ವಾಸದಲ್ದ್ದ್‌ದಾರೆ. ಆದರೆ ಅಂದುಕೊಂಡ ಯೋಜನೆಯನ್ನು ಅಂಗಳದಲ್ಲಿ ಜಾರಿಗೆ ತರಲು ಅವರಿಗೆ ಸಾಧ್ಯವಾಗುತ್ತಿಲ್ಲ.ತಂಡಗಳು:

ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಡೇನಿಯಲ್ ವೆಟೋರಿ (ನಾಯಕ), ತಿಲಕರತ್ನೆ ದಿಲ್ಶಾನ್, ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಮಾಯಂಕ್ ಅಗರ್‌ವಾಲ್, ಎಬಿ ಡಿವಿಲಿಯರ್ಸ್, ಸೌರಭ್ ತಿವಾರಿ, ಜಹೀರ್ ಖಾನ್, ಚೇತೇಶ್ವರ ಪೂಜಾರ, ಆರ್.ವಿನಯ್ ಕುಮಾರ್, ಮುತ್ತಯ್ಯ ಮುರಳೀಧರನ್, ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್, ಡಿರ್ಕ್ ನಾನ್ಸ್, ಕೆ.ಪಿ. ಅಪ್ಪಣ್ಣ, ಅಭಿಮನ್ಯು ಮಿಥುನ್, ಎಸ್.ಅರವಿಂದ್, ಅರುಣ್ ಕಾರ್ತಿಕ್, ಮೊಹಮ್ಮದ್ ಕೈಫ್, ಚಾರ್ಲ್ ಲಾಂಗ್‌ವೆಲ್ಟ್, ರ‌್ಯಾನ್ ನಿನನ್, ಹರ್ಷಲ್ ಪಟೇಲ್, ಅಸದ್ ಪಠಾಣ್, ಜಮಾಲುದ್ದೀನ್ ಸಯ್ಯದ್ ಮೊಹಮ್ಮದ್,ಕೋಲ್ಕತ್ತ ನೈಟ್ ರೈಡರ್ಸ್: ಗೌತಮ್ ಗಂಭೀರ್ (ನಾಯಕ), ಜಾಕ್ ಕಾಲಿಸ್, ಬ್ರೆಂಡನ್ ಮೆಕ್ಲಮ್, ಮನೋಜ್ ತಿವಾರಿ, ಲಕ್ಷ್ಮೀ ರತನ್ ಶುಕ್ಲಾ, ಯೂಸುಫ್ ಪಠಾಣ್, ರಜತ್ ಭಾಟಿಯಾ, ಬ್ರೆಟ್ ಲೀ, ದೇವವ್ರತ ದಾಸ್, ಇಕ್ಬಾಲ್ ಅಬ್ದುಲ್ಲಾ, ಸುನಿಲ್ ನರೇನ್, ಜೈದೇವ್ ಉನದ್ಕತ್, ಎಲ್.ಬಾಲಾಜಿ, ಮನ್ವಿಂದರ್ ಬಿಸ್ಲಾ, ಪ್ರದೀಪ್ ಸಂಗ್ವಾನ್, ಸರಬ್ಜಿತ್ ಸಿಂಗ್ ಲಡ್ಡಾ, ಮೊಹಮ್ಮದ್ ಶಮಿ ಅಹ್ಮದ್, ಬ್ರಾಡ್ ಹಡಿನ್, ಎಯೊನ್ ಮಾರ್ಗನ್, ರ‌್ಯಾನ್ ಟೆನ್ ಡಾಶೆಟ್ ಹಾಗೂ ಶಕೀಬ್ ಅಲ್ ಹಸನ್.

ಪಂದ್ಯದ ಆರಂಭ: ಸಂಜೆ 4.00ಕ್ಕೆ, ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.