ಗುರುವಾರ , ಮೇ 26, 2022
28 °C

ಗೊಮ್ಮಟಗಿರಿಯಲ್ಲಿ ಇಂದು ಮಸ್ತಕಾಭಿಷೇಕ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ವೈರಾಗ್ಯಮೂರ್ತಿ ಗೊಮ್ಮಟೇಶ್ವರನಿಗೆ ಅ.16ರ ಭಾನುವಾರ 62ನೇ ಮಹಾ ಮಸ್ತಕಾಭಿಷೇಕಕ್ಕೆ ಸಕಲ ಸಿದ್ಧತೆ ನಡೆದಿದ್ದು, ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ನೇತೃತ್ವ ವಹಿಸಲಿದ್ದಾರೆ.ತಾಲ್ಲೂಕಿನ ಬಿಳಿಕೆರೆ ಹೋಬಳಿ ಬೆಟ್ಟದೂರು ಗ್ರಾಮದಲ್ಲಿನ ಗೊಮ್ಮಟಗಿರಿ ಕ್ಷೇತ್ರ ಜೈನ ಧರ್ಮದವರಿಗೆ ಯಾತ್ರಾ ಸ್ಥಳವಾಗಿದ್ದು, ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಮೂರ್ತಿಯಷ್ಟೆ ಸುಂದರವಾದ ಮೂರ್ತಿ ಇಲ್ಲಿ ಸ್ಥಾಪಿತವಾಗಿದೆ. ಆದರೆ, ಅರಬಿತಿಟ್ಟು ಅರಣ್ಯದ ಆಸು ಪಾಸಿನಲ್ಲಿ ಸ್ಥಾಪಿತವಾಗಿರುವ ಗೊಮ್ಮಟೇಶ್ವರನ ಸ್ಥಳ ಅಭಿವೃದ್ಧಿ ಇಲ್ಲದೇ ಸೊರಗುತ್ತಿದೆ.ರಾಜ್ಯದ ಬಹು ಮುಖ್ಯ ಪ್ರವಾಸಿ ತಾಣವಾಗಿರುವ ಶ್ರವಣಬೆಳಗೊಳಕ್ಕೆ ಪ್ರವಾಸೋದ್ಯಮ ಇಲಾಖೆ ನೀಡುವಷ್ಟು ಆಸಕ್ತಿಯನ್ನು ಗೊಮ್ಮಟಗಿರಿ ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತಿಲ್ಲ ಎಂಬ ಅಸಮಾಧಾನ ಆಡಳಿತ ಮಂಡಳಿ ಸದಸ್ಯರಿಗೆ ಇದೆ.ಗೊಮ್ಮಟಗಿರಿ ಕ್ಷೇತ್ರದ ಸೇವಾಸಮಿತಿ ಅಧ್ಯಕ್ಷ ಜಿ.ಎ.ಸುರೇಶ್‌ಕುಮಾರ್ ಮಾತನಾಡಿ, 62 ವರ್ಷಗಳಿಂದ ಮಸ್ತಕಾಭಿಷೇಕ ಕಾರ್ಯಕ್ರಮವನ್ನು ಸಮಿತಿ ನಡೆಸಿಕೊಂಡು ಬರುತ್ತಿದೆ. ಕ್ಷೇತ್ರಕ್ಕೆ ಮೂಲ ಸವಲತ್ತು ಒದಗಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಪ್ರಗತಿ ಮಾತ್ರ ಶೂನ್ಯ ಎಂದರು.ಕ್ಷೇತ್ರದ ಸಮಸ್ಯೆ ಬಿಡಿಸಿಡುವ ಸುರೇಶ್‌ಕುಮಾರ್, ಗೊಮ್ಮಟೇಶ್ವರನ ಸನ್ನಿಧಿಗೆ ಬಂದು ಹೋಗುವವರಿಗೆ ವಸತಿ ಗೃಹ ನಿರ್ಮಿಸಿದ್ದರೂ ಕುಡಿಯುವ ನೀರಿನ ಸಮಸ್ಯೆಯಿಂದ ಭಕ್ತಾದಿಗಳು ಉಳಿಯಲು ಇಚ್ಛಿಸುತ್ತಿಲ್ಲ. ಕ್ಷೇತ್ರಕ್ಕೆ ಕೆಆರ್‌ಎಸ್‌ನ ಹಿನ್ನೀರಿನಿಂದ ನೀರು ತರುವ ಪ್ರಯತ್ನ ಅರ್ಧಕ್ಕೆ ನಿಂತಿದೆ. ಪ್ರತಿ ವರ್ಷವು ಮಸ್ತಕಾಭಿಷೇಕದ ಸಮಯದಲ್ಲಿ ಕುಡಿಯುವ ನೀರಿಗೆ ತಾತ್ಕಾಲಿಕ ವ್ಯವಸ್ಥೆಯನ್ನು ಸಮಿತಿ ಮಾಡಿಕೊಳ್ಳುತ್ತಿದೆ ಎಂದು ವಿವರಿಸಿದರು.ಬಸ್ ಸಂಪರ್ಕ: ಮೈಸೂರು ಜಿಲ್ಲೆ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದ್ದರೂ ಮೈಸೂರು ಕೇಂದ್ರದಿಂದ 20-25ಕಿ.ಮೀ ದೂರದಲ್ಲಿರುವ  ಗೊಮ್ಮಟಗಿರಿ ಕ್ಷೇತ್ರಕ್ಕೆ ಬಂದು ಹೋಗಲು ಸಾರಿಗೆ ಬಸ್ ಸೌಲಭ್ಯವಿಲ್ಲ. ಸ್ವಂತ ವಾಹನವುಳ್ಳವರು ಕ್ಷೇತ್ರಕ್ಕೆ ಬಂದು ಹೋಗುತ್ತಾರೆ. ಪ್ರತಿದಿನ ರಸ್ತೆ ಸಾರಿಗೆ ವ್ಯವಸ್ಥೆ ಇದ್ದರೂ ಅದು ಬೆರಳೆಣಿಕೆಯಷ್ಟು ಎನ್ನುತ್ತಾರೆ ಸುರೇಶ್‌ಕುಮಾರ್.ಧೂಳು ಹಿಡಿದ ಮಾಸ್ಟರ್ ಪ್ಲಾನ್: ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಗೊಮ್ಮಟಗಿರಿ ಕ್ಷೇತ್ರದ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಿದ್ದರು. ಈ ಪ್ಲಾನ್‌ನಲ್ಲಿ ಬಸ್ ತಂಗುದಾಣ, ಆಯುರ್ವೇದ ಆಸ್ಪತ್ರೆ, ಹಿರಿಯ ನಾಗರಿಕರ ಆಶ್ರಮ ಶಾಲೆ ಸೇರಿದಂತೆ ವಸತಿ ನಿಲಯ ನಿರ್ಮಿಸುವ ಬೃಹತ್ ಯೋಜನೆ ರೂಪಿಸಿದ್ದರು. ಅರಸು ಕಾಲಾನಂತರ ಯೋಜನೆ ಧೂಳು ಹಿಡಿದಿದೆ. ಬೆಟ್ಟದೂರು ಗ್ರಾಮಕ್ಕೆ ಸೇರಿದ 100 ಎಕರೆ ಪ್ರದೇಶದಲ್ಲಿ ಗೊಮ್ಮಟೇಶ್ವರ ಕ್ಷೇತ್ರಕ್ಕೆ ದೇವರಾಜ ಅರಸು 25 ಎಕರೆ ಭೂಮಿ ಹಸ್ತಾಂತರ ಮಾಡಿದ್ದರು.ಕ್ಷೇತ್ರದಲ್ಲಿ ಹಸಿರೀಕರಣಗೊಳಿಸಲು ಅಂದು ಅರಣ್ಯ ಇಲಾಖೆಗೆ ತಾತ್ಕಾಲಿಕವಾಗಿ ಭೂಮಿ ಹಸ್ತಾಂತರ ಮಾಡಿದ್ದರು. ಇಲಾಖೆ ನೀಲಗಿರಿ ತೋಪು ನಿರ್ಮಿಸಿ ಅದರಿಂದ ಬರುವ ಲಾಭ ಅನುಭವಿಸಿದೆ. ಈಗ ಭೂಮಿಯೂ ಇಲಾಖೆಗೆ ಸೇರಿದೆ ಎನ್ನುತ್ತಿದೆ. ಈ ಸಂಬಂಧ ಅರಣ್ಯ ಸಚಿವರಾಗಿದ್ದ ಸಿ.ಎಚ್.ವಿಜಯಶಂಕರ್ ಅವರೊಂದಿಗೆ ಸಮಿತಿ ಚರ್ಚಿಸಿತ್ತು. ಸಚಿವರು ಸಕಾರಾತ್ಮಕ ಭರವಸೆ ನೀಡಿದ್ದರು ಎಂದರು.ಕಲ್ಲುಗಣಿ: ಗೊಮ್ಮಟೇಶ್ವರ ಮೂರ್ತಿ ಅಂದಾಜು 70-80 ಅಡಿ ಎತ್ತರದ ಕಲ್ಲು ಬಂಡೆ ಮೇಲೆ ನಿಂತಿದ್ದು, ಕ್ಷೇತ್ರದ ಸುತ್ತಲು ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಕ್ಷೇತ್ರದ ಸುತ್ತಲೂ ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಸಮಿತಿಯು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಮಾಡಿತ್ತು. ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ ಇದೆ. ಆದ್ದರಿಂದ ಗಣಿಗಾರಿಕೆ ನಡೆದು ಮೂರ್ತಿಗೆ ಧಕ್ಕೆಯಾಗುವ ಆತಂಕ ಕಾಡುತ್ತಿದೆ.ಹಸ್ತಾಂತರ: ಗೊಮ್ಮಟಗಿರಿ ಕ್ಷೇತ್ರದ ಉಸ್ತುವಾರಿಯನ್ನು ಚಾಮರಾಜನಗರ ಜಿಲ್ಲೆ ಕನಕಗಿರಿ ಕ್ಷೇತ್ರ (ಮಲೆಯೂರು) ಭುವನಕೀರ್ತಿ ಭಟ್ಟಾರಕ ಮಹಾಸ್ವಾಮಿ ಅವರಿಗೆ ಹಸ್ತಾಂತರಿಸಲು ಸಕಲ ಸಿದ್ಧತೆ ನಡೆದಿದೆ. ಸರ್ಕಾರಗಳು ಸ್ವಾಮೀಜಿಗಳಿಗೆ ನೀಡುವಷ್ಟು ಗೌರವವನ್ನು ಸ್ವಯಂ ಸೇವಾ ಸಂಘಟನೆ ಅಥವಾ ಸಮಿತಿಗಳಿಗೆ ನೀಡುವುದಿಲ್ಲ ಎಂದು ಬೇಸರಿಸಿದರು ಸುರೇಶ್‌ಕುಮಾರ್.12ಗಂಟೆಗೆ ಆರಂಭ: ಗೊಮ್ಮಟಗಿರಿ ದಿಗಂಬರ ಜೈನ ಅತಿಶಯ ಕ್ಷೇತ್ರದ ಗೊಮ್ಮಟೇಶ್ವರ ಮೂರ್ತಿಗೆ 62ನೇ ಮಹಾಮಸ್ತಕಾಭಿಷೇಕ ಅ.16ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್, ಸಂಸದ ಎಚ್.ವಿಶ್ವನಾಥ್, ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮತ್ತು ಸ್ಥಳಿಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.