ಶನಿವಾರ, ಆಗಸ್ಟ್ 15, 2020
21 °C

ಗೋದಾಮು ನಿರೀಕ್ಷೆಯಲ್ಲಿ ಕೃಷಿ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ನಾಡಿನ ಗಡಿಭಾಗದ ಚಿಕ್ಕೋಡಿ ತಾಲ್ಲೂಕಿನ ಜನರ ಪ್ರಮುಖ ಉದ್ಯೋಗ ಕೃಷಿಯೇ ಆಗಿದೆ. ಆದರೆ, ಸರಕಾರದ ಸವಲತ್ತುಗಳನ್ನು ರೈತಾಪಿ ಜನರಿಗೆ ತಲುಪಿಸುವ ಇಲ್ಲಿನ ಕೃಷಿ ಇಲಾಖೆ ಮಾತ್ರ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಬಿತ್ತನೆ ಬೀಜಗಳ ದಾಸ್ತಾನು ಮಾಡಲು ಗೋದಾಮುಗಳು ಇಲ್ಲದಿರುವುದು ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ.ಸರ್ಕಾರ ಕೃಷಿಕರಿಗೆ ಮುಂಗಾರು ಮತ್ತು ಹಿಂಗಾರು ಹಂಗಾಮಿಗಾಗಿ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ನೀಡುವುದರ ಜೊತೆಗೆ ಕೃಷಿ ಪರಿಕರಗಳು, ಗೊಬ್ಬರಗಳನ್ನು ಸರಬರಾಜು ಮಾಡುತ್ತದೆ. ಆದರೆ, ಅವುಗಳನ್ನು ದಾಸ್ತಾನು ಮಾಡಲು ಸುಸಜ್ಜಿತವಾದ ಗೋದಾಮು ಇಲ್ಲದಾಗಿದೆ. ಅಲ್ಲದೇ ತಾಲ್ಲೂಕಿನ ನಾಲ್ಕೂ ರೈತ ಸಂಪರ್ಕ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. 108 ಗ್ರಾಮಗಳ ಭೌಗೋಳಿಕ ವಿಸ್ತಾರವನ್ನು ಹೊಂದಿರುವ ತಾಲ್ಲೂಕು ಕೇಂದ್ರ ಚಿಕ್ಕೋಡಿಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಇದ್ದು, ತಾಲ್ಲೂಕು ವ್ಯಾಪ್ತಿಯಲ್ಲಿ ನಾಗರಮುನ್ನೋಳಿ, ಚಿಕ್ಕೋಡಿ, ಸದಲಗಾ ಮತ್ತು ನಿಪ್ಪಾಣಿ ಹೋಬಳಿ ಕೇಂದ್ರಗಳಲ್ಲಿ ರೈತ ಸಂಪರ್ಕ ಕೇಂದ್ರಗಳಿವೆ. ಆದರೆ, ನಾಲ್ಕೂ ರೈತ ಸಂಪರ್ಕ ಕೇಂದ್ರಗಳೂ ಇದುವರೆಗೂ ಬಾಡಿಗೆ ಕಟ್ಟಡಗಳಲ್ಲಿಯೇ ಕಾರ್ಯನಿರ್ವಹಿಸುತ್ತಿವೆ.ಮುಖ್ಯವಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಗೋದಾಮುಗಳ ಅವಶ್ಯಕತೆ ಇರುತ್ತದೆ. ಆದರೆ, ಕೇಂದ್ರಗಳಿಗೇ ಸ್ವಂತ ಕಟ್ಟಡಗಳ ಭಾಗ್ಯ ಇಲ್ಲವೆಂದ ಮೇಲೆ ಇನ್ನು ಗೋದಾಮುಗಳ ಮಾತು ದೂರವೇ ಉಳಿಯಿತು. ಮುಂಗಾರು ಮತ್ತು ಹಿಂಗಾರು ಹಂಗಾಮುಗಳಲ್ಲಿ ರೈತರಿಗೆ ವಿತರಿಸಲಾಗುವ ರಿಯಾಯಿತಿ ದರದ ಬಿತ್ತನೆ ಬೀಜ ಮತ್ತು ಗೊಬ್ಬರಗಳ ದಾಸ್ತಾನು ಮಾಡಲು ಗೋದಾಮುಗಳಿಗಾಗಿ ಕೃಷಿ ಇಲಾಖೆ ಅಧಿಕಾರಿಗಳು ಪರದಾಡಬೇಕಾದ ಅನಿವಾರ್ಯತೆ ಎದುರಾಗಿದೆ.ಪ್ರತಿ ತಿಂಗಳು ಗೋದಾಮು ಬಾಡಿಗೆಗಾಗಿ ಇಲಾಖೆ ಕೇವಲ ರೂ. 500 ಅನುದಾನ ಒದಗಿಸುತ್ತದೆ. ಆದರೆ, ಚಿಕ್ಕೋಡಿಯಂತಹ ಪಟ್ಟಣದಲ್ಲಿ 500 ರೂಪಾಯಿಗೆ ಸಿಂಗಲ್ ರೂಮ್ ಬಾಡಿಗೆ ಸಿಗುವುದೇ ಕಠಿಣವಾಗಿರುವಾಗ ಇನ್ನು ಗೋದಾಮು ಸಿಗುವುದು ದುರ್ಲಭವೇ ಸರಿ. ಆದರೂ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಗೋದಾಮು ಮಾಲೀಕರ ಮನವೊಲಿಸಿ ಕಡಿಮೆ ಮೊತ್ತದಲ್ಲಿ ಬಾಡಿಗೆಗೆ ಗೋದಾಮುಗಳನ್ನು ಪಡೆದು ರೈತರಿಗೆ ಅನುಕೂಲ ಒದಗಿಸುತ್ತ ಬರುತ್ತಿದ್ದಾರೆ.ವರ್ಷವಿಡೀ ಕೃಷಿಕರಿಗೆ ಇಲಾಖೆಯಿಂದ ರಿಯಾಯಿತಿ ದರಗಳಲ್ಲಿ ಕೂರಿಗೆ, ನೇಗಿಲು, ಸ್ಪ್ರೇಪಂಪ್, ಟಿಲ್ಲರ್ ಮುಂತಾದ ಕೃಷಿ ಪರಿಕರಗಳನ್ನು ಒದಗಿಸಲಾಗುತ್ತಿದ್ದು, ಅವುಗಳನ್ನೂ ದಾಸ್ತಾನು ಮಾಡಲು ಗೋದಾಮುಗಳ ಅವಶ್ಯಕತೆ ಇದೆ. ಸರಕಾರ ಕನಿಷ್ಠ ತಾಲ್ಲೂಕು ಕೇಂದ್ರ ಚಿಕ್ಕೋಡಿಯಲ್ಲಾದರೂ ಕೃಷಿ ಇಲಾಖೆಗಾಗಿ ಸುಸಜ್ಜಿತವಾದ ಗೋದಾಮು ನಿರ್ಮಿಸುವತ್ತ ಗಮನ ಹರಿಸಬೇಕು ಎನ್ನುವುದು ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಯ ಬೇಡಿಕೆ.ಇಲಾಖೆ ಗೋದಾಮುಗಳಿಗಾಗಿ ಕೇವಲ 500 ರೂಪಾಯಿ ಮಾಸಿಕ ಬಾಡಿಗೆ ನೀಡುವುದು ನಿಜ. ಬಿತ್ತನೆ ಬೀಜ ಕಂಪೆನಿಗಳು ಮಾರಾಟವಾದ ಬೀಜಗಳ ಮೇಲೆ ರೈತ ಸಂಪರ್ಕ ಕೇಂದ್ರಗಳಿಗೆ ಶೇ.4 ರಷ್ಟು ಕಮೀಶನ್ ನೀಡುತ್ತಿದ್ದು, ಆ ಕಮೀಶನ್ ಮೊತ್ತವನ್ನು ಬಾಡಿಗೆಗೆ ನೀಡಿ ಸರಿದೂಗಿಸಲಾಗುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಬಿ. ರೊಟ್ಟಿ ಹೇಳುತ್ತಾರೆ.ರೈತ ಸಂಪರ್ಕ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿಮಾರ್ಣಕ್ಕಾಗಿ ನಿಪ್ಪಾಣಿ ನಗರಸಭೆ, ಸದಲಗಾ ಪಟ್ಟಣ ಪಂಚಾಯತಿ ಹಾಗೂ ನಾಗರಮುನ್ನೋಳಿ ಗ್ರಾಮ ಪಂಚಾಯತಿಗಳು ನಿವೇಶನವನ್ನೂ ನೀಡಿವೆ. ಸರಕಾರ ಈ ಕೇಂದ್ರಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕಾದ ಅಗತ್ಯವಿದೆ.ವಿಶೇಷವೆಂದರೆ ಚಿಕ್ಕೋಡಿ ಪಟ್ಟಣದಲ್ಲಿ ತಾ.ಪಂ.ಗೆ ಸೇರಿರುವ ಹಳೆ ಉಪವಿಭಾಗಾಧಿಕಾರಿಗಳ ಕಚೇರಿ ಕಳೆದೊಂದು ವರ್ಷದಿಂದ ನಿಷ್ಪ್ರಯೋಜಕವಾಗಿದೆ. ಈ ಕಟ್ಟಡವನ್ನಾದರೂ ದುರಸ್ತಿಗೊಳಿಸಿ ಕೃಷಿ ಇಲಾಖೆ ಗೋದಾಮುಗಾಗಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಿದರೆ, ಕೃಷಿಕರಿಗೆ ಅನುಕೂಲವಾಗುವ ಜೊತೆಗೆ ತಾಲ್ಲೂಕು ಪಂಚಾಯತಿಗೂ ಆದಾಯ ದೊರಕುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.