ಮಂಗಳವಾರ, ಜೂನ್ 15, 2021
21 °C

ಗ್ರಂಥಾಲಯಕ್ಕೆ ಬೇಕಿದೆ ಸ್ವಂತ ಆಲಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಗ್ರಂಥಾಲಯ ಮೇಲ್ವಿಚಾರಕರನ್ನು ಬೇರೆಡೆ ವರ್ಗ ಮಾಡಿರುವುದರಿಂದ ಒಂದು ವಾರದಿಂದ ಸಾರ್ವಜನಿಕ ಗ್ರಂಥಾಲಯಕ್ಕೆ ಬೀಗ ಹಾಕಲಾಗಿದೆ. ಇದರಿಂದ ಓದುಗರು ಪರದಾಡುವಂತಾಗಿದೆ.ಪಟ್ಟಣದ ಸಾರ್ವಜನಿಕ ಗ್ರಂಥಾಲಯವನ್ನು ಪದೇ ಪದೇ ಸ್ಥಳಾಂತರ ಮಾಡುತ್ತಿರುವ ಕ್ರಮವೂ ಸಹ ವಾಚಕರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಇದುವರೆಗೆ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಕಲ್ಪಿಸಲಾಗಿಲ್ಲ. ಸದ್ಯ ಇರುವ ಸಾರ್ವಜನಿಕ ಗ್ರಂಥಾಲಯ ಡಾ. ರಾಜ್‌ಕುಮಾರ್ ರಸ್ತೆಯ ಪಕ್ಕದಲ್ಲಿರುವ ಬಾಡಿಗೆ ಕಟ್ಟಡದಲ್ಲಿದೆ. ವಾಹನ ಹಾಗೂ ಜನರ ಅಧಿಕ ಸಂಚಾರ ಇರುವುದರಿಂದ ಸದ್ದುಗದ್ದಲವೂ ಹೆಚ್ಚು. ಇದರಿಂದ ಓದುಗರಿಗೆ ಕಿರಿಕಿರಿಯಾಗುತ್ತಿದೆ. ಈ ಗ್ರಂಥಾಲಯ ಮಹಡಿ ಮೇಲೆ ಇರುವುದರಿಂದ ವಯೋವೃದ್ಧ ಸಾಹಿತ್ಯಾಸಕ್ತರು, ಓದುಗರು ಮಹಡಿ ಹತ್ತಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.ಪೂಜ್ಯಪಾದ, ನಾಗಾರ್ಜುನ, ಹರಳಯ್ಯ, ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ, ಮಿಣ್ಯ ಗುರುಸಿದ್ದ ಕವಿ, ಮುಡಿಗುಂಡ ಅಪ್ಪಾಜಿ ಕವಿ, ರಂಗಾಚಾರ‌್ಯ, ವೆಂಕಟಸುಬ್ಬಾಶಾಸ್ತ್ರಿಗಳು, ವಿ.ಶ್ರೀನಿವಾಸ ಶಾಸ್ತ್ರಿ, ಎಚ್.ವಿ. ನಂಜುಂಡಯ್ಯ, ಕುಮಾರ ನಿಜಗುಣ ಸೇರಿದಂತೆ ರಾಜ್ಯಕ್ಕೆ ಅಮೂಲ್ಯ ಸಾಹಿತ್ಯ ರತ್ನಗಳನ್ನು ಕೊಳ್ಳೇಗಾಲ  ತಾಲ್ಲೂಕು ನೀಡಿದೆ. ತಾಲ್ಲೂಕಿನಲ್ಲಿಯೇ ಗ್ರಂಥಾಲಯಕ್ಕೆ ಸ್ವಂತ ನೆಲೆ ಇಲ್ಲದಿರುವುದು ವಿಷಾದನೀಯ ಎನ್ನುತ್ತಾರೆ ವಾಚಕರು.ಮಹಿಳೆಯರು ಸೇರಿದಂತೆ ಅಸಂಖ್ಯಾತ ಓದುಗರು ಈ ಗ್ರಂಥಾಲಯದಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.  ಆರಂಭದ ದಿನಗಳಲ್ಲಿ ಪ್ರತಿಷ್ಠಿತ ಪೀಸ್ ಪಾರ್ಕ್‌ನಲ್ಲಿ ರೀಡಿಂಗ್‌ರೂಂ ಜತೆಯಲ್ಲಿಯೇ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿತ್ತು. ಕೊಠಡಿಯ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಕಟ್ಟಡ ಪಾಳುಬಿದ್ದು ಎತ್ತಂಗಡಿಯಾಗುವ ಸ್ಥಿತಿ ಬಂದಿತು.ಕೋಲ್ಕತ್ತದ `ರಾಜಾರಾಮ್ ಮೋಹನ್ ರಾಯ್ ಫೌಂಡೇಷನ್~ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಹಾಗೂ ಸರ್ಕಾರದ ಅನುದಾನ ಇದ್ದರೂ ಸಹ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣವಾಗದಿರುವುದು ವಿಪರ್ಯಾಸವೇ ಸರಿ.ಈ ಹಿಂದೆ ಗ್ರಂಥಾಲಯ ನಡೆಯುತ್ತಿದ್ದ ಪೀಸ್‌ಪಾರ್ಕ್ ಈಗ ಸುಸಜ್ಜಿತ ಪಾರ್ಕ್ ಆಗಿ ಅಭಿವೃದ್ಧಿ ಹೊಂದಿದ್ದು, ಇಲ್ಲಿ ರೀಡಿಂಗ್ ರೂಂ ನಿರ್ಮಾಣ ಮಾಡಿ ದೂಳು ಹಿಡಿಯುತ್ತಿದೆ. ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಗ್ರಂಥಾಲಯವನ್ನು ಪೀಸ್‌ಪಾರ್ಕ್‌ನಲ್ಲಿ ಪ್ರಾರಂಭವಾಗುವಂತೆ ಮಾಡುವತ್ತ ಗಮನ ಹರಿಸಬೇಕು ಎಂಬುದು ಎನ್.ರಾಜೇಶ್, ಮಾ.ಸುರೇಶ್ ಅವರ ಒತ್ತಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.