ಬುಧವಾರ, ಜೂನ್ 23, 2021
29 °C

ಗ್ರಾಮೀಣ ಕಲೆ ಹಳ್ಳಿಗರ ಶ್ರಮ ಸಂಸ್ಕೃತಿಯ ಪ್ರತಿಬಿಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಗ್ರಾಮೀಣ ಕಲೆಗಳು ಹಳ್ಳಿಗರ ಶ್ರಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ಇಲ್ಲಿನ ಕಾಗೋಡು ರಂಗಮಂಚ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಶನಿವಾರ ಏರ್ಪಡಿಸಿದ್ದ ಬಯಲಾಟ- ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹಳ್ಳಿಗರು ಅನಕ್ಷರಸ್ಥರಾದರೂ ತಾವು ಗಳಿಸಿದ ಲೋಕಜ್ಞಾನದ `ಶ್ರೀಮಂತಿಕೆ~ಯಿಂದ  ಕಲೆಯಲ್ಲಿ ಅಸಾಧಾರಣ ಪ್ರತಿಭೆ ತೋರುತ್ತಿರುವುದು ವಿಸ್ಮಯಕಾರಿ ಸಂಗತಿಯಾಗಿದೆ. ಈ ನೆಲದ ಸೊಗಡನ್ನು ಸಮರ್ಥವಾಗಿ ಹಿಡಿದಿಡುವ ಬಯಲಾಟದಂತಹ ಸಶಕ್ತ ಗ್ರಾಮೀಣ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ ಎಂದರು.ಗ್ರಾಮೀಣ ಹಿನ್ನೆಲೆಯ ಕಲೆಗಳ ಬಗ್ಗೆ ಯುವಜನರು ಆಸಕ್ತಿ ತೋರದೆ ಇದ್ದರೆ ಹೆಚ್ಚು ಕಾಲ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಈ ಕಲಾಪರಂಪರೆಯ ಮಹತ್ವವನ್ನು ಯುವಜನರಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.ರಂಗಕರ್ಮಿ ಡಾ.ಗುರುರಾವ್ ಬಾಪಟ್ ಮಾತನಾಡಿ, ಪೇಟೆಯ ವಿದ್ಯಾವಂತ ಜನರು ನಡೆಸುವ ರಂಗಚಟುವಟಿಕೆ ಕೆಲವೇ ಜನರಿಗೆ ಸೀಮಿತವಾಗಿದೆ. ಆದರೆ ಹಳ್ಳಿಯಲ್ಲಿ ನಡೆಯುವ ಬಯಲಾಟದಂತಹ ಚಟುವಟಿಕೆಯಲ್ಲಿ ಇಡೀ ಊರಿಗೆ ಊರೇ ಪಾಲ್ಗೊಳ್ಳುವ ಮತ್ತು ಸಂಭ್ರಮಪಡುವ ಅಪೂರ್ವ ಸನ್ನಿವೇಶವನ್ನು ಕಾಣಬಹುದು ಎಂದರು.ಪೇಟೆಯ ಸುಶಿಕ್ಷಿತ ಜನರು ಕಲೆಯಲ್ಲಿ ತಾವು ಮಾಡಿದ್ದು ಮಾತ್ರ ಶ್ರೇಷ್ಠ ಎಂಬ ಭ್ರಮೆಯಲ್ಲಿ ಸಾಂಸ್ಕೃತಿಕ ಯಜಮಾನಿಕೆಯನ್ನು ಸಾಧಿಸುವ ಪ್ರಯತ್ನ ಮಾಡಬಾರದು. ಗ್ರಾಮೀಣ ಮೂಲದ ಕಲೆಗಳಿಗೆ ಗಟ್ಟಿಯಾದ ತಳಪಾಯವಿದೆ ಎಂಬ ಅಂಶವನ್ನು ನಗರದ ಜನರು ಅರಿತುಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಮಂಚ ಸಂಸ್ಥೆಯ ಅಧ್ಯಕ್ಷ ಕಾಗೋಡು ಅಣ್ಣಪ್ಪ ಮಾತನಾಡಿ, ಬಯಲಾಟ ಕಲೆ ಹಳ್ಳಿಯ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇತ್ತೀಚಿನ ದಿನಗಳಲ್ಲಿ ಬಯಲಾಟ ತಂಡಗಳಿಗೆ ಸೂಕ್ತ ವೇದಿಕೆ ದೊರಕುತ್ತಿಲ್ಲ. ಈ ಕೊರತೆಯನ್ನು ತುಂಬುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ಬಯಲಾಟದ ಭಾಗವತ ಅದರಂತೆ ಹುಚ್ಚಪ್ಪ ಹಾಗೂ ಪೋಟೊಗ್ರಫಿಯಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಉಲ್ಲಾಸ್ ಶ್ಯಾನುಭಾಗ್ ಅವರನ್ನು ಸನ್ಮಾನಿಸಲಾಯಿತು. ಈಶ್ವರ್‌ನಾಯ್ಕ ಕುಗ್ವೆ ಸ್ವಾಗತಿಸಿದರು. ಬಿ.ನಿಂಗಪ್ಪ ವಂದಿಸಿದರು. ನಾಗೇಂದ್ರ ಕುಮಟಾ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಅದರಂತೆ ಕಲ್ಲೇಶ್ವರ ಶಿವಪ್ಪ ನಾಯಕ ಬಯಲಾಟ ತಂಡದಿಂದ  `ಸುಧನ್ವಾರ್ಜುನ ಕಾಳಗ~ ಬಯಲಾಟ ಪ್ರದರ್ಶನ ನಡೆಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.