ಗುರುವಾರ , ಮೇ 19, 2022
23 °C

ಗ್ರಾಮ ನ್ಯಾಯಾಲಯಗಳ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಗ್ರಾಮಮಟ್ಟದಲ್ಲಿಯೇ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಲು ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರಂಭಿಸಲಾಗಿರುವ ಗ್ರಾಮ ನ್ಯಾಯಾಲಯಗಳು ಇನ್ನು ಮುಂದೆ ಇಡೀ ರಾಜ್ಯದಾದ್ಯಂತ ವಿಸ್ತರಣೆಯಾಗಲಿವೆ ಎಂದು ಜಿಲ್ಲಾ ನ್ಯಾಯಾಧೀಶ ಎಸ್.ವಿ.ಕುಲಕರ್ಣಿ ಹೇಳಿದರು.ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ತಾಲ್ಲೂಕು ಆಡಳಿತದ ಆಶ್ರಯದಲ್ಲಿ ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲಾಗಿರುವ ಕಾನೂನು ಸಾಕ್ಷರತಾ ರಥಯಾತ್ರೆ ಅಂಗವಾಗಿ ಕಲಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಧಾನ ದಿವಾಣಿ ನ್ಯಾಯಾಧೀಶ(ಹಿ.ಶ್ರೇ.) ಜಿ.ವಿ.ತುರಮರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನು ಅರಿತು ಕಾನೂನು ಪಾಲನೆ ಮಾಡುವುದರ ಜೊತೆಗೆ ಇತರರು ಕಾನೂನು ಪಾಲಿಸುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.ತಹಸೀಲ್ದಾರ ಸಿದ್ದು ಹುಲ್ಲೋಳಿ (ಜನನ ಮರಣ ಕಾಯ್ದೆ), ಪಿಡಿಓ ಮೇತ್ರಿ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ), ಬಿಎಲ್‌ಡಿಇಎ ಕಾಲೇಜು ಪ್ರಾಧ್ಯಾಪಕ ಡಾ.ಟಿ.ಪಿ.ಗಿರಡ್ಡಿ (ಸಮೂಹ ಮಾಧ್ಯಮ ಮತ್ತು ಕಾನೂನು ಸಾಕ್ಷರತೆ), ವಕೀಲರ ಸಂಘದ ಅಧ್ಯಕ್ಷ ಎನ್.ಎಸ್.ದೇವರವರ (ಮಹಿಳೆಯರ ಆಸ್ತಿ ಹಕ್ಕು) ಕುರಿತು ವಿಶೇಷ ಉಪನ್ಯಾಸ ನೀಡಿದರು.ಎನ್‌ಆರ್‌ಇಜಿ ಅಡಿಯಲ್ಲಿ ಒಂದುವರೆ ವರ್ಷದ ಹಿಂದೆ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ದುಡಿದ ಕೆಲಸಕ್ಕೆ ಇನ್ನೂ ವರೆಗೂ ಸಂಬಳ ಬಂದಿಲ್ಲ ಎಂದು ಕೆಲವು ಮಹಿಳಾ ಕಾರ್ಮಿಕರು ಸಭೆಯ ಗಮನ ಸೆಳೆದರು. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿ ಸಂಬಳ ಬಟವಡೆಗೆ ವ್ಯವಸ್ಥೆ ಮಾಡಲು ನ್ಯಾಯಾಧೀಶರು ಅಧಿಕಾರಿಗಳಿಗೆ ಸೂಚಿಸಿದರು.ಕಳೆದ ಮೂರು ವರ್ಷಗಳಿಂದ ಗ್ರಾಮ ಸಭೆ ಕರೆದಿಲ್ಲ ಎಂದು ಗ್ರಾಮಸ್ಥ ರವಿ ಪೂಜಾರ ದೂರಿದರು. ಗ್ರಾಮದಲ್ಲಿ ಸ್ಮಶಾನಕ್ಕೆ ಸ್ಥಳಾವಕಾಶ ಮಾಡಿಕೊಡಲು ಸಂಗಪ್ಪ ಉಪ್ಪಲದಿನ್ನಿ ಒತ್ತಾಯಿಸಿದರು.ಗ್ರಾ.ಪಂ.ಅಧ್ಯಕ್ಷ ರಾಮಪ್ಪ ಜೊಂಗನವರ, ಉಪಾಧ್ಯಕ್ಷೆ ಕಲಾವತಿ ದಡ್ಡಿಮನಿ, ಎಪಿಪಿ ಸಿ.ಎಸ್.ಬಡಿಗೇರ, ಎಪಿಪಿ ಹೆಚ್.ಜಿ.ಮುಲ್ಲಾ, ಗ್ರಾ.ಪಂ.ಸದಸ್ಯರಾದ ಲಕ್ಷ್ಮಪ್ಪ ತಳವಾರ, ಭೀಮಪ್ಪ ಮಾದರ, ಲಕ್ಷ್ಮವ್ವ ಸಾವಂತ, ರತ್ನವ್ವ ಮುಗಳಖೋಡ, ಉಪತಹಸೀಲ್ದಾರ ಡಿ.ಐ.ಹೆಗ್ಗೊಂಡ   ಉಪಸ್ಥಿತರಿದ್ದರು.ಜ್ಯೋತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಿಡಿಪಿಓ ಮಲ್ಲಿಕಾರ್ಜುನ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಎಸ್.ಜಿ.ಭೂಮಾರ ನಿರೂಪಿಸಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.