ಗುರುವಾರ , ಮೇ 6, 2021
22 °C

ಗ್ರಾಮ ಸಭೆಯ ನಿರ್ಣಯವೂ, ನೀಲಗಿರಿ ನಾಟಿಯೂ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮ ಸಭೆಯ ನಿರ್ಣಯವೂ, ನೀಲಗಿರಿ ನಾಟಿಯೂ...

ಗ್ರಾಮ ಸಭೆ ಎಂಬುದು ಹಳ್ಳಿಯ ವಿಧಾನಸಭೆ. ವಿಶಾ­ಲಾರ್ಥ­ದಲ್ಲಿ ಗ್ರಾಮ ಪಂಚಾಯಿತಿ ಎಂದರೆ ಗ್ರಾಮೀಣ ಜನತೆಯ ಸ್ಥಳೀಯ ಸರ್ಕಾರ. ಗ್ರಾಮೀಣ ಪ್ರದೇಶಗಳ ಸಮಗ್ರ ಮತ್ತು ಪರಿಣಾಮ-ಕಾರಿ ಅಭಿವೃದ್ಧಿಯನ್ನು ನೆರವೇರಿಸಲು ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆಗಳನ್ನು ನಡೆಸಲೇಬೇಕು.  ಕರ್ನಾಟಕ ಪಂಚಾಯತ್ ರಾಜ್ ಅಧಿನಿ­ಯಮ 1993ಕ್ಕೆ ಅನುಗುಣ­ವಾಗಿ, ಜನರ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಪರಿಣಾಮಕಾರಿ ವೇದಿಕೆ­ಯಾಗಿ ಕಾರ್ಯನಿರ್ವಹಿಸಲು ಗ್ರಾಮಸಭೆಗಳಿಗೆ ಅಧಿಕಾರ­ವನ್ನು ಕೊಡಲಾಗಿದೆ.ಆದರೆ, ಜನರಿಂದ ಜನರಿಗಾಗಿ ಜನರಿಗೋಸ್ಕರ ಎಂಬ ಪ್ರಜಾಪ್ರಭುತ್ವದ ಆಶಯವನ್ನು ತಳಮಟ್ಟದಲ್ಲಿ ಜಾರಿಗೆ ತರಲು ರೂಪಿಸಲಾಗಿರುವ ವಿಕೇಂದ್ರೀಕೃತ ಪ್ರಜಾಪ್ರಭುತ್ವದ ನಿಜವಾದ ಚೈತನ್ಯವು ಮೂಲೆಗುಂಪಾಗಿದೆ ಎಂಬುದು ಸದ್ಯದ ವಿಪರ್ಯಾಸ. ವಿಕೇಂದ್ರೀಕೃತ ಆಡಳಿತದ ತಳಹ­ದಿಯು ಜನರ ಪಾಲ್ಗೊಳ್ಳುವಿಕೆ­ಯಿಂದ ಮತ್ತು ಆ ಮೂಲಕ ಕೈಗೊಳ್ಳಲಾಗುವ ಸ್ಥಳೀಯವಾದ ಮಹ­ತ್ವದ ಆಡಳಿತಾತ್ಮಕ ತೀರ್ಮಾನಗಳು ಮತ್ತು ಅವುಗಳ ಅನುಷ್ಠಾನ­ದಿಂದಲೇ  ಹೆಚ್ಚು ಬಲಗೊ­ಳ್ಳುತ್ತದೆ.ವಿಕೇಂದ್ರೀಕರಣದ ಶ್ರೇಷ್ಠ ಮಾದರಿ ಗ್ರಾಮಸಭೆ. ಹೀಗಾಗಿಯೇ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳನ್ನು ನಿಯಮಿತವಾಗಿ ನಡೆಸುವುದು ಪಂಚಾ­ಯಿತಿಗಳಿಗೆ ಕಡ್ಡಾಯವೂ ಹೌದು. ಅದಕ್ಕಾಗಿ 2004ರಲ್ಲಿ ವಿಸ್ತೃತ ಮಾರ್ಗಸೂಚಿಯನ್ನೂ ನೀಡಲಾಗಿದೆ. ಗ್ರಾಮ ಸಭೆ ಮತ್ತು ಜನರ ಸಹ­ಭಾಗಿತ್ವ ಪರಸ್ಪರ ಪೂರಕವಾದ ಸಂಗತಿ­ಗಳು. ಜನರಿಲ್ಲದ ಗ್ರಾಮ ಸಭೆಗಳನ್ನು ಕಲ್ಪಿಸಿಕೊಳ್ಳಲು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅವಕಾಶವೂ ಇಲ್ಲ. ಗ್ರಾಮ ಮತ್ತು ಗ್ರಾಮದ ಜನ– ಗ್ರಾಮ ಸಭೆಯ ಪ್ರೇರಕ ಶಕ್ತಿಗಳು.ಮೂರು ತಿಂಗಳಿಗೊಮ್ಮೆ ವಾರ್ಡ್‌ ಸಭೆ

ಪ್ರತಿ ಗ್ರಾಮ ಪಂಚಾಯತಿಯಲ್ಲಿರುವ ಎಲ್ಲ ಗ್ರಾಮಗಳಲ್ಲಿನ ಪ್ರತಿ­ಯೊಂದು ವಾರ್ಡ್‌ಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ವಾರ್ಡ್ ಸಭೆ­ಗಳನ್ನು ನಡೆಸಬೇಕು. ವಾರ್ಡ್ ಸಭೆಗಳ ಶಿಫಾರಸುಗಳನ್ನು ಪರಿಗ­ಣಿ­ಸ­ಬೇಕೆ? ಬೇಡವೇ ಎಂಬ ಬಗ್ಗೆ ನಿರ್ಧ­ರಿಸಲು ಪ್ರತಿ ಮೂರು ತಿಂಗಳಿ­ಗೊಮ್ಮೆ ಗ್ರಾಮ ಸಭೆಗಳು ನಡೆಯ­ಬೇಕು. ವರ್ಷದಲ್ಲಿ ನಾಲ್ಕು ತ್ರೈಮಾಸಿಕ ಸಭೆಗಳು ನಡೆಯಲೇ­ಬೇಕು. ಪ್ರತಿ ತ್ರೈಮಾಸಿಕ ಸಭೆಗೂ ಅದರದ್ದೇ ಆದ ನಿರ್ದಿಷ್ಟ ಗುರಿಗಳೂ ಇರುತ್ತವೆ.ಅವು­ಗ­ಳೊಂದಿಗೆ ಸಮಕಾಲೀನ ಸಮಸ್ಯೆಗಳ ವಿಶ್ಲೇಷಣೆ ಮತ್ತು ಪರಿಹಾರದ ಕುರಿತು ಆದ್ಯತೆಗೆ ಅನುಗುಣವಾಗಿ ಚರ್ಚಿಸು­ವುದು ಮುಖ್ಯ, ಗ್ರಾಮ ಸಭೆಗಳಲ್ಲಿ ಕೈಗೊಳ್ಳುವ ನಿರ್ಣ­ಯಗಳಿಗೂ ಅದರದ್ದೇ ಆದ ಮಹತ್ವ ಇರುತ್ತದೆ. ಸ್ಥಳೀಯ ಮಟ್ಟದ ಜನ ಸಮುದಾಯ, ಪರಿ­ಸರಕ್ಕೆ ಸಂಬಂ­­ಧಿ­ಸಿದಂತೆ ಸಭೆಯ ನಿರ್ಣಯ­ವನ್ನು ಅಷ್ಟು ಸುಲಭ­ವಾಗಿ ಯಾರೂ ಮೀರು­ವಂತಿಲ್ಲ. ಗ್ರಾಮ ಸಭೆಯ ನಿರ್ಣಯಕ್ಕೆ ಅದ­ರದ್ದೇ ಆದ ಅಧಿಕಾರದ ಬಲವೂ ಉಂಟು.ಗ್ರಾಮ ಸಭೆಯ ನಿರ್ಣಯಗಳು

ಆದರೆ, ಇವೆಲ್ಲವೂ ಗ್ರಾಮ ಸಭೆ­ಗಳಲ್ಲಿ ನಿಜಕ್ಕೂ ಅಡಕಗೊಳ್ಳು­ತ್ತ­ವೆಯೇ ಎಂಬುದು ಪ್ರಮುಖ ಪ್ರಶ್ನೆ. ಮುಖ್ಯವಾಗಿ ಜನ ಪಾಲ್ಗೊಳ್ಳು­ತ್ತಾರೆಯೇ? ಅವರ ಮಾತಿಗೆ ಬೆಲೆ ಸಿಗುತ್ತದೆಯೇ? ಪ್ರಮುಖ ಜನ­ಪರ ನಿರ್ಧಾರಗಳಿಗೆ ಗ್ರಾಮ ಸಭೆ ವೇದಿಕೆಯಾಗುತ್ತದೆಯೇ ಎಂದು ಹಳ್ಳಿ­ಗಳಲ್ಲಿ ಕೇಳಿದರೆ ನಿರಾಶಾದಾಯಕ ಪ್ರತಿಕ್ರಿಯೆಗಳೇ ದೊರಕು­ತ್ತವೆ. ಇನ್ನು ಗ್ರಾಮ ಸಭೆಯ ನಿರ್ಣಯಗಳು ಏನು ಎಂಬುದು ಬಹುತೇಕ ಸಂದರ್ಭಗಳಲ್ಲಿ ಆಯಾ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಜನಕ್ಕೆ ಗೊತ್ತೇ ಇರುವುದಿಲ್ಲ.ಗ್ರಾಮ ಸಭೆ ಎಂಬುದು ಒಂದು ಆಡಳಿತಾತ್ಮಕ ಪ್ರಕ್ರಿಯೆ ಎಂಬು­ದ­­ಕ್ಕಿಂತಲೂ ಬಹುತೇಕ ಸಂದರ್ಭಗಳಲ್ಲಿ ಅದನ್ನೊಂದು ಆಚ­ರ­ಣೆಯ ಮಟ್ಟಿಗೆ ಸೀಮಿತಗೊಳಿಸಲಾಗಿದೆ ಎಂದೇ ಹೇಳ­ಬೇಕಾ­ಗುತ್ತದೆ. ಗಮನ ಸೆಳೆಯುವ ಅಗರ ಗ್ರಾ. ಪಂಚಾಯ್ತಿ ಇಂಥ ಸನ್ನಿವೇಶದಲ್ಲಿ, ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂ­ಕಿನ ದುಗ್ಗಸಂದ್ರ ಹೋಬಳಿಯ ಅಗರ ಗ್ರಾಮ ಪಂಚಾ­ಯಿತಿ ಭಿನ್ನವಾಗಿ ಗಮನ ಸೆಳೆಯುತ್ತಿದೆ.ಅಧಿಕಾರ ವಿಕೇಂದ್ರೀಕರಣದ ಪಾಠ­ಗಳನ್ನು ಗ್ರಾಮಗಳಿಗೆ ಹೇಳಿ­ಕೊಟ್ಟಿರುವ ರಾಜ್ಯ ಸರ್ಕಾರವೇ ಈಗ ಆ ಪಾಠದ ನಿಯಮಗಳನ್ನು ಮೀರು­ತ್ತಿರುವುದು ಸದ್ಯದ ವಿದ್ಯಮಾನ. ಗ್ರಾಮಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಜಾರಿ ಮಾಡಲು ಈ ಪಂಚಾಯಿತಿ ಪರದಾಡು­ತ್ತಿದೆ. ಆದರೆ, ಸಚಿವ ಸಂಪುಟದ ತೀರ್ಮಾನ ಎಂಬುದು ಪಂಚಾ­ಯಿತಿ ಎಂಬ ಗುಬ್ಬಿ ಮೇಲೆ ಪ್ರಯೋಗಿಸಿದ ಬ್ರಹ್ಮಾಸ್ತ್ರದಂತೆ ಕಾಣುತ್ತಿದೆ.ನೀಲಗಿರಿ ನಿಷೇಧ...

ಸೆಪ್ಟೆಂಬರ್ 4ರಂದು ನಡೆಸಿದ ಗ್ರಾಮ ಸಭೆಯಲ್ಲಿ ಈ ಪಂಚಾಯಿತಿಯು ಒಂದು ಪ್ರಮುಖ ನಿರ್ಣಯವನ್ನು ಅಂಗೀಕರಿ­ಸಿದೆ. ‘ಸಾರ್ವಜನಿಕರ ತೀರ್ಮಾನದಂತೆ ಪಂಚಾಯಿತಿ ವ್ಯಾಪ್ತಿಯಲ್ಲಿ ನೀಲಗಿರಿ ಸಸಿಗಳನ್ನು ಅರಣ್ಯ ಇಲಾಖೆಯಿಂದ ನಾಟಿ ಮಾಡಿಸ­ಬಾರದು ಎಂದು ಸರ್ವಾನುಮತದಿಂದ ತೀರ್ಮಾನಿ­ಸಲಾ­ಯಿತು. ಈ ವಿಚಾರವನ್ನು ಸರ್ಕಾರಕ್ಕೆ ಪತ್ರದ ಮೂಲಕ ಸಲ್ಲಿಸಲು ತೀರ್ಮಾನಿ­ಸಲಾಯಿತು' ಎಂಬುದು ನಿರ್ಣಯದ ಸಾರಾಂಶ. ಈ ನಿರ್ಣಯವನ್ನು ಕೈಗೊಳ್ಳಲು ಒಂದು ಪ್ರಮುಖ ಕಾರಣವೂ ಇದೆ.‘ನೀಲಗಿರಿ ನಿಲ್ಲಿಸಿ, ಶ್ರೀಗಂಧ ಬೆಳೆಸಿ’ ಎಂದು ಜಿಲ್ಲಾಡಳಿತವು ಸುಮಾರು ಒಂದು ವರ್ಷದಿಂದ ಜಿಲೆಯಾದ್ಯಂತ ಅಭಿಯಾನವನ್ನು ನಡೆಸುತ್ತಿರುವ ವೇಳೆಯಲ್ಲೇ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗ­ಮವು ಜಿಲ್ಲೆಯ ಮುಳಬಾಗಲು ಮತ್ತು ಶ್ರೀನಿವಾಸಪುರ ತಾಲ್ಲೂ­ಕಿನ 302 ಎಕರೆ ಪ್ರದೇಶದಲ್ಲಿ ನೀಲಗಿರಿ ಬೆಳೆಯಲು ಮುಂದಾಗಿದೆ.ನಿಗಮವು ನೀಲಗಿರಿ ಬೆಳೆಯಲು ಮುಂದಾಗಿರುವುದಕ್ಕೆ ತಡೆ ಒಡ್ಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ವಿವಿಧ ಸಂಘಟನೆಗಳ ನೆರವಿನೊಂದಿಗೆ ಎರಡೂ ತಾಲ್ಲೂಕಿನ ನೂರಾರು ಮಂದಿಯಿಂದ ಸಹಿ ಸಂಗ್ರಹಿಸಿದ ಅಗರ ಪಂಚಾಯ್ತಿ ಅದನ್ನು ಜಿಲ್ಲಾಧಿ­ಕಾರಿ ಡಿ.ಕೆ.ರವಿ ಅವರಿಗೂ ಸಲ್ಲಿಸಿತ್ತು. ಆ ನಿಟ್ಟಿನಲ್ಲೇ ಅವರು ನಿಗಮದ ಕೋಲಾರ ವಿಭಾಗದ ವಿಭಾಗೀಯ ವ್ಯವಸ್ಥಾಪಕ­ರಿಗೆ ವಿರುದ್ಧ ಷರತ್ತು ಬದ್ಧ ಆದೇಶವನ್ನು ಹೊರಡಿ­ಸಿದ್ದರು. ಆದರೆ, ನೀಲಗಿರಿ ಬೆಳೆಯಲು ಸಚಿವ ಸಂಪುಟದ ಅನು­ಮೋದನೆ ದೊರಕಿ­ರುವ ಹಿನ್ನೆಲೆ­ಯಲ್ಲಿ ಅವರು ಆಗಸ್ಟ್ ತಿಂಗಳಲ್ಲಿ ಆದೇಶವನ್ನು ವಾಪಸ್‌ ಪಡೆದರು.ಅದು ಎರಡೂ ತಾಲ್ಲೂಕಿನ ಮತ್ತು ವಿಶಾಲವಾಗಿ ಇಡೀ ಜಿಲ್ಲೆಯ ರೈತರನ್ನು ಕಂಗೆಡಿಸಿದ ಘಟನೆ. ಆದರೆ ಅಗರ ಪಂಚಾಯಿತಿ ತನ್ನದೇ ಮತ್ತೊಂದು ಪ್ರತಿಭಟನೆಯ ದಾರಿ­ಯನ್ನು ಹುಡುಕಿ­ಕೊಂಡಿತು. ಆಗ ಮೂಡಿದ್ದು ಗ್ರಾಮ ಸಭೆಯ ನಿರ್ಣಯ. ಬರಗಾಲ ಪೀಡಿತ ಜಿಲ್ಲೆಯಲ್ಲಿ ಮೊದಲೇ ನೀರಿಗೆ ಹಾಹಾಕಾರ­ವಿದೆ. ಇಂಥ ಸನ್ನಿವೇಶದಲ್ಲಿ ನೀಲಗಿರಿ­ಯನ್ನು ನಾಟಿ ಮಾಡಿದರೆ, ಮಣ್ಣಿನ ಫಲವತ್ತತೆ, ಅಂತರ್ಜಲ ಮಟ್ಟ ಕುಸಿಯುತ್ತದೆ, ಹೀಗಾಗಿ ನೀಲ­ಗಿರಿ ಸಸಿಗಳನ್ನು ನೆಡುವ ಬದಲು ಹೊಂಗೆ, ಬೇವು ಮೊದಲಾದ ಪರಿಸರ­ಸ್ನೇಹಿ ಸಸಿಗಳನ್ನು ನೆಡಬೇಕು ಎಂಬುದು ನಿರ್ಣಯದ ಮತ್ತೊಂದು ಅಂಶ. ಅದು ಆಗ್ರಹವೂ ಹೌದು.ಆದರೆ, ಅದರ ಹೊರತಾಗಿಯೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ಪಂಚಾಯಿತಿ ವ್ಯಾಪ್ತಿಯಲ್ಲಿ ನೆಡು­ತೋಪು ಮಾದರಿ­ಯಲ್ಲಿ ನೀಲಗಿರಿ ಸಸಿಗಳನ್ನು ನಾಟಿ ಮಾಡಲು ಮುಂದಾಗಿದೆ. ಅದನ್ನು ತಡೆಯುವ ಯತ್ನದಲ್ಲಿ ಹೋರಾಟವೊಂದು ರೂಪು­ಗೊಂಡಿದೆ. ಪಂಚಾಯಿತಿ ಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ನಿಗಮದ ಸಿಬ್ಬಂದಿಯ ನಡುವೆ ವಾಗ್ವಾದ, ತಳ್ಳಾಟಗಳೂ ನಡೆಯು­ತ್ತಿವೆ. ಈಗ ಪ್ರಕರಣವು ಪೊಲೀಸ್ ಠಾಣೆಯ ಮೆಟ್ಟಿಲು ಏರಿದೆ.ಶ್ರೀನಿವಾಸಪುರ ಮತ್ತು ಮುಳ­ಬಾಗಲು ತಾಲ್ಲೂಕು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನೀಲಗಿರಿ ಸಸಿಗಳನ್ನು ನೆಡಬಹುದು ಎಂದು 2011ರಲ್ಲೇ ಅರಣ್ಯ ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಣಯಿಸ­ಲಾಗಿದೆ. ಅದಕ್ಕೆ ಸಚಿವ ಸಂಪುಟದ ಒಪ್ಪಿಗೆಯೂ ದೊರೆತಿದೆ. ಹೀಗಾಗಿ ಸ್ಥಳಿಯರಾದ ಯಾರ ಮಾತನ್ನೂ ಕೇಳುವ ಅವಶ್ಯಕತೆ ಇಲ್ಲ. ನೀಲಗಿರಿಯಿಂದ ನೀರಿಗಾಗಲೀ, ಮಣ್ಣಿ­ಗಾಗಲೀ ತೊಂದರೆ­ಯಾ­ಗು­ವುದಿಲ್ಲ ಎಂದು ಸಂಶೋಧನೆಗಳಿಂದ ಸಾಬೀತಾ­ಗಿದೆ ಎಂಬುದು ಅರಣ್ಯ ಅಭಿವೃದ್ಧಿ ನಿಗಮದ ಪ್ರತಿಪಾದನೆ.2011ರ ಮಾರ್ಚ್‌ ತಿಂಗಳಲ್್ಲಿ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರವು ನೀಲಗಿರಿಯನ್ನು ಕೃತಕ ನೆಡುತೋಪು ಮಾದರಿ­ಯಲ್ಲಿ ಬಯಲು ಸೀಮೆಯಲ್ಲಿರುವ ಮಧ್ಯಮ ಫಲವತ್ತತೆ ಮತ್ತು ಗಡಿನಾಡು ಪ್ರದೇಶದ ಕಡಿಮೆ ಫಲವತ್ತತೆ ಇರುವ ಬೆಟ್ಟ ಪ್ರದೇಶ­ಗಳಲ್ಲಿ ಮಾತ್ರ ಬೆಳೆಸಬೇಕು. ಇತರೆ ಪ್ರದೇಶಗಳಲ್ಲಿ ಬೆಳೆಸ­ಬಾರದು ಎಂದು ಹೇಳಿದೆ. ನೀಲಗಿರಿ ಬೆಳೆಸಬಹುದಾದ ಪ್ರದೇಶಗಳಲ್ಲಿ ಭೂಫಲ­ವತ್ತತೆ ಹೆಚ್ಚಿಸುವ ಗೊಬ್ಬರ ಗಿಡ ಸೇರಿದಂತೆ ಸ್ಥಳೀಯ ಸಸ್ಯಗಳೊಡನೆ ಮಿಶ್ರ ನೆಡುತೋಪು ಬೆಳೆಸಬೇಕು ಎಂದು ತಿಳಿಸಿದೆ. ಈ ಸಂಗತಿಯನ್ನು  ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ನಿಗಮವು ಬರಪೀಡಿತ ಕೋಲಾರ ಜಿಲ್ಲೆಯನ್ನು ಮತ್ತಷ್ಟು ಕಷ್ಟಕ್ಕೆ ದೂಡಲು ಮುಂದಾ­ಗಿದೆ ಎಂಬುದು ರೈತರ ಪ್ರತಿಪಾದನೆ.ಅರಣ್ಯ ಅಭಿವೃದ್ಧಿ ನಿಗಮದ ಹಟಮಾರಿತನ

ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್.ರಮೇಶ ಕುಮಾರ್ ಮತ್ತು ಮುಳಬಾಗಲು ಕ್ಷೇತ್ರದ ಶಾಸಕ ಜಿ.ಮಂಜುನಾಥ್ ಅವರ ಸ್ಪಷ್ಟ ವಿರೋಧದ ನಡುವೆಯೂ ನೀಲಗಿರಿ ನಾಟಿ ಮಾಡಲು ನಿಗಮ ಹಠ ತೊಟ್ಟ ತುಂಟ ಬಾಲಕನಂತೆ ವರ್ತಿಸುತ್ತಿದೆ. ಈ ಸನ್ನಿವೇಶವು ಒಟ್ಟಾರೆಯಾಗಿ ಪಂಚಾಯತ್‌ರಾಜ್ ವ್ಯವಸ್ಥೆ ಮತ್ತು ಅಧಿಕಾರ ವಿಕೇಂದ್ರೀಕರಣ ಪರಿಕಲ್ಪನೆ­ಯನ್ನೇ ಅಣಕಿಸಿ ನಗುತ್ತಿದೆ. ಗ್ರಾಮ ಸಭೆಯೊಂದರ ನಿರ್ಣಯವು ಹೀಗೆ ಸಾರ್ವಜನಿಕ ಆಡ­ಳಿತದ ಎಲ್ಲ ಹಂತದಲ್ಲೂ ಲೆಕ್ಕಕ್ಕೇ ಇಲ್ಲದಂತಾಗಿದೆ. ಗ್ರಾಮ ಪಂಚಾ­ಯಿತಿ ಎಂದರೆ ಗ್ರಾಮ ಸರ್ಕಾರ. ಅಲ್ಲಿ ನಡೆದಿರುವ ಗ್ರಾಮ ಸಭೆಯು ಸ್ಥಳೀಯ ಶಾಸನದಂತೆ. ಸ್ಥಳೀಯ ಜನ ಮತ್ತು ಪರಿಸರಕ್ಕೆ ಸಂಬಂಧಿಸಿ ಪಂಚಾಯಿತಿಯು ಅಂಗೀಕರಿಸುವ ನಿರ್ಣಯ ಅದು.ಗ್ರಾಮಸಭೆಯಲ್ಲಿ ತೀರ್ಮಾನ ಕೈಗೊಂಡಿ­ರುವುದರಿಂದ ನೀಲಗಿರಿ ಸಸಿಗಳನ್ನು ನಾಟಿ ಮಾಡದಂತೆ ನಿಗಮದ ವಿರುದ್ಧ ಕ್ರಮ ಕೈಗೊಳ್ಳ­ಬೇಕು ಎಂದು ಪಂಚಾಯಿತಿ ಅಧ್ಯಕ್ಷ ಎಂ.ಎನ್. ಬಲರಾಮೇಗೌಡ ಅವರು ಸಲ್ಲಿಸಿದ ದೂರನ್ನು ಸ್ವೀಕರಿಸಲು ಜಿಲ್ಲಾ ಪೊಲೀಸ್ ವರಿಷ್ಠಾ­ಧಿಕಾರಿಗಳು ನಿರಾಕರಿಸಿ, ವಾಪಸು ಕಳಿಸಿದ್ದಾರೆ, ನೀಲಗಿರಿ ನೆಡಬಹುದು ಎಂದು ಸಚಿವ ಸಂಪುಟವೇ ನಿರ್ಧರಿಸಿರು­ವುದಾಗ ಅದನ್ನು ಪಂಚಾಯಿತಿ ವಿರೋಧಿಸುವುದು ಸರಿಯಲ್ಲ ಎಂಬ ಸಲಹೆಯನ್ನೂ ನೀಡಿದ್ದಾರೆ! ಗ್ರಾಮ ಪಂಚಾಯಿತಿಯು ಹೀಗೆ ದಿಕ್ಕು ತೋಚದೆ ಅತಂತ್ರ ಸ್ಥಿತಿಯಲ್ಲಿ ನಿಂತಿದೆ. ಅದರಿಂದ  ಪಂಚಾಯತ್ ರಾಜ್ ಆಡಳಿತ ವ್ಯವಸ್ಥೆಯಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸುವ ಆಶಯಕ್ಕೂ ಧಕ್ಕೆ ಬಂದಿದೆ.ಅಗರ ಪಂಚಾಯಿತಿಯ ಗ್ರಾಮ­ಸಭೆಯ ನಿರ್ಣಯಕ್ಕೆ ಬೆಂಬಲ­ವಾಗಿ ನಿಂತಿರುವ ನೂರಾರು ಹಳ್ಳಿ ಜನರನ್ನು ಯಾರೂ ಗಂಭೀರ­ವಾಗಿ ಪರಿಗಣಿ­ಸುತ್ತಿಲ್ಲ. ಜನರಿಗೆ ಅಧಿಕಾರವನ್ನು ವಹಿಸಿಕೊಡುವ ಸಾಂಸ್ಥಿಕ ವ್ಯವಸ್ಥೆಯಾದ ಗ್ರಾಮಸಭೆಯ ಪಾಡು ಇದು. ಅಧಿಕಾರ ವಿಕೇಂದ್ರೀಕರಣದ ಪ್ರಯುಕ್ತ ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿರುವ ಆಡಳಿತಾತ್ಮಕ ಅಧಿಕಾರಕ್ಕೆ ಇಲ್ಲಿ ಏನು ಬೆಲೆ? ಎಂಬ ಪ್ರಶ್ನೆಯೂ ಇದೇ ವೇಳೆ ಮೂಡುತ್ತದೆ.ಇತ್ತೀಚೆಗೆ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ರಮೇಶ್‌ ಕುಮಾರ್, ಗ್ರಾಮ ಪಂಚಾಯಿತಿ­ಯೊಂದರ ಹೋರಾ­ಟದ ಕುರಿತು ಸರ್ಕಾರದ ಗಮನ ಸೆಳೆಯಬೇಕಾಗಿದ್ದ ಜಿಲ್ಲಾ ಪಂಚಾ­ಯಿತಿಯು ನಿರ್ಲಕ್ಷ್ಯ ವಹಿಸಿದೆ ಎಂಬ ಗಂಭೀರ ಆರೋಪ­ವನ್ನೂ ಮಾಡಿದ್ದಾರೆ. ಆ ಮೂಲಕ, ಪಂಚಾಯತ್‌ರಾಜ್ ವ್ಯವಸ್ಥೆಯ ಮೇಲಿನ ಹಂತದಲ್ಲಿರುವ ಜಿಲ್ಲಾ ಪಂಚಾಯಿತಿಯ ಕಾರ್ಯವೈಖರಿಯ ಕಡೆಗೂ ಅವರು ಗಮನ ಸೆಳೆದಿದ್ದಾರೆ.ನಿಂತಲ್ಲೇ ನಿಂತ ಸಭೆಯ ನಡಾವಳಿ

ಗ್ರಾಮ ಪಂಚಾಯಿತಿಯ ಪರವಾಗಿ ಇಷ್ಟೆಲ್ಲ ಹೇಳಿದ ಬಳಿಕ, ಇನ್ನೊಂದು ವಿಪರ್ಯಾಸವನ್ನು ಇಲ್ಲಿ ಹೇಳಲೇ­ಬೇಕಾಗಿದೆ.

ಸೆಪ್ಟೆಂಬರ್ 4ರಂದು ನಡೆದ ಗ್ರಾಮ ಸಭೆಯ ನಡಾವಳಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆಯೇ ಎಂದು ಕೇಳಿದರೆ ಪಂಚಾಯಿತಿ ಅಭಿ­ವೃದ್ಧಿ ಅಧಿಕಾರಿ ವರದರಾಜು ಇನ್ನೂ ಇಲ್ಲ ಎನ್ನುತ್ತಾರೆ. ಮನೆ ಫಲಾನು­ಭವಿಗಳ ಪಟ್ಟಿಯನ್ನು ಸಭೆಯಲ್ಲಿ ಸಂಪೂರ್ಣವಾಗಿ ತಯಾ­ರಿ­ಸಲು ಆಗಲಿಲ್ಲ. ಹೀಗಾಗಿ ಸಭೆಯ ನಡಾವಳಿಗಳನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ ಎಂಬುದು ಅವರ ಸ್ಪಷ್ಟನೆ.ಸಭೆಯ ನಡಾವಳಿಗಳನ್ನು ಕೂಡಲೇ ಕಡ್ಡಾಯವಾಗಿ ಸ್ಕ್ಯಾನ್ ಮಾಡಿ ಪಂಚ­ತಂತ್ರ ತಂತ್ರಾಂಶದಲ್ಲಿ ಅಪ್‌ ಲೋಡ್ ಮಾಡಬೇಕು ಎಂದು ಗ್ರಾಮೀಣಾ­ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾ­ಖೆಯು ಪದೇಪದೇ ಸುತ್ತೋಲೆ­ಗಳನ್ನು ಕಳಿಸುತ್ತಲೇ ಇರುತ್ತದೆ. ಆದರೂ ಇಂಥ ಸನ್ನಿವೇಶಗಳು ತಪ್ಪುವುದಿಲ್ಲ.ನೀಲಗಿರಿಯನ್ನು ವಿರೋಧಿಸಿ ಗ್ರಾಮ­ಸಭೆಯಲ್ಲಿ ನಿರ್ಣಯ ಕೈಗೊಂಡು ತಿಂಗಳಾದರೂ, ಅದನ್ನು ಸರ್ಕಾರದ ಗಮನಕ್ಕೆ ತಾರದೆ ಪಂಚಾಯಿತಿಯ ಪ್ರಮುಖರು ಜನರೊಂದಿಗೆ ಸೇರಿ­ಕೊಂಡು ಹೋರಾಟ ನಡೆಸುತ್ತಿರುವುದು, ಪಂಚಾಯಿತಿ ಹೇಗೆ ಕಾರ್ಯ­ನಿರ್ವ­ಹಿ­ಸ­ಬೇಕು ಮತ್ತು ಹೇಗೆ ಕಾರ್ಯನಿರ್ವ­ಹಿಸಬಾರದು ಎಂಬುದಕ್ಕೂ ಕನ್ನಡಿ ಹಿಡಿಯುತ್ತಿದೆ. ಸನ್ನಿವೇಶಗಳ ಅಗತ್ಯಕ್ಕೆ  ತಕ್ಕಂತೆ ಗ್ರಾಮ ಪಂಚಾಯಿತಿಗಳಲ್ಲಿ ಇರಲೇಬೇಕಾದ ಪೂರಕ ಮನೋಭಾವ ಮತ್ತು ಕಾರ್ಯವೈಖರಿಯ ಅಗತ್ಯದ ಕುರಿತೂ ಒತ್ತಿ ಹೇಳುತ್ತಿದೆ.ಒಂದೆಡೆ ಗ್ರಾಮಸಭೆಯ ನಿರ್ಣಯ ಸರ್ಕಾರದ ಗಮನಕ್ಕೆ ಬಾರದೇ ಇನ್ನೂ ಪಂಚಾಯಿತಿಯ ದಾಖಲೆ ಪುಸ್ತಕದಲ್ಲೇ ಉಳಿ­ದಿದೆ. ಮತ್ತೊಂ­ದೆಡೆ 2011ರ ಸರ್ಕಾರದ ಸುತ್ತೋಲೆಯನ್ನೇ ಅಂತಿಮ ಶಾಸನ ಎಂಬ ರೀತಿಯಲ್ಲಿ ಅರಣ್ಯ ಅಭಿವೃದ್ಧಿ ನಿಗಮವು ಪ್ರತಿಪಾದಿ­ಸು­ತ್ತಿದೆ. ಅಗರ ಪಂಚಾಯಿತಿಯ ನೆರವಿಗೆ ಬರಬೇಕಾಗಿದ್ದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು ನಿರ್ಲಿಪ್ತ ಧೋರಣೆ  ಅನುಸರಿಸುತ್ತಿವೆ.

ಇಂಥ ಸನ್ನಿವೇಶದಲ್ಲಿ ಗ್ರಾಮ ಸಭೆಗೆ ಮತ್ತು ಸಭೆಯಲ್ಲಿ ಕೈಗೊಂಡ ನಿರ್ಣಯ­ಗಳಿಗೆ ಏನು ಮಹತ್ವ ಮತ್ತು ಅರ್ಥ ಎಂಬ ಪ್ರಶ್ನೆಯೂ ಅನಾಥವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.