ಗುರುವಾರ , ಜೂನ್ 17, 2021
21 °C

ಘರ್ಕುಲ್ ಗೃಹ ನಿರ್ಮಾಣ ಹಗರಣ: ಶಾಸಕ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಲಗಾಂವ್ (ಪಿಟಿಐ): `ಘರ್ಕುಲ್ ಗೃಹ ನಿರ್ಮಾಣ ಹಗರಣ~ಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಿವಸೇನಾ ಶಾಸಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಸುರೇಶ ಜೈನ್ ಅವರನ್ನು ಭಾನುವಾರ ಬಂಧಿಸಲಾಗಿದೆ.1990ರಲ್ಲಿ ಶಿವಸೇನೆ ಮತ್ತು ಬಿಜೆಪಿ ಸರ್ಕಾರದ ಆಡಳಿತದಲ್ಲಿ ಜೈನ್ ಅವರು ವಸತಿ ಸಚಿವರಾಗಿದ್ದರು. ಕಟ್ಟಡ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟಿರುವುದು ಮತ್ತು 29 ಕೋಟಿ ರೂಪಾಯಿ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇಂದೋರ್‌ನಲ್ಲಿರುವ ತಮ್ಮ ಭಾವನ ಮನೆಗೆ ತೆರಳುತ್ತಿದ್ದಾಗ ಮಧ್ಯರಾತ್ರಿ ಧರಂಗಾಂವ್ ಜಿಲ್ಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಜೈನ್ ಅವರು 29 ಕೋಟಿ ರೂಪಾಯಿ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಮತ್ತು ಘರ್ಕುಲ್ ಗೃಹ ನಿರ್ಮಾಣ ಯೋಜನೆಯ ಗುತ್ತಿಗೆದಾರರಾದ ಖಾಂದೇಶ್ ಬಿಲ್ಡರ್ಸ್‌ಗೆ ಅನುಕೂಲ ಮಾಡಿಕೊಟ್ಟಿರುವ ಆರೋಪ ಎದುರಿಸುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮೂಲಗಳು ತಿಳಿಸಿವೆ.ಗುಂಪು ಮನೆಗಳ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನ ಮಾಡಿಕೊಳ್ಳುವ ಮುಂಚೆಯೇ ಟೆಂಡರ್ ಕರೆದ ಆರೋಪ ಜೈನ್ ಮೇಲಿದೆ. 2006ರ ಈ ಹಗರಣಕ್ಕೆ ಸಂಬಂಧಿಸಿದಂತೆ ಜಲಗಾಂವ್ ನಗರಸಭೆ ಮಾಜಿ ಆಯುಕ್ತ ಪ್ರವೀಣ್ ದೂರು ದಾಖಲಿಸಿದ್ದರು ಮತ್ತು ಪೊಲೀಸ್ ಅಧಿಕಾರಿ ಇಶು ಸಿಂಧು ಅವರಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿತ್ತು. ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ವಿರುದ್ಧ ಜೈನ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣ ವಿಚಾರಣೆಗೆ ಇನ್ನೂ ಬಾಕಿ ಉಳಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.