ಭಾನುವಾರ, ಜನವರಿ 26, 2020
24 °C

ಚಂದ್ರಲೇಖ ಹಾಡಿದಾಗ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಇದು ಎಲ್ಲಾ ವರ್ಗದವರಿಗೂ ಖುಷಿ ನೀಡುವ ಸಿನಿಮಾ. ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕ ಹೊಟ್ಟೆಹುಣ್ಣಾಗುವಂತೆ ನಗುವುದು ಖಚಿತ’ ಎಂದು ವಿಶ್ವಾಸದಿಂದ ನುಡಿದರು ನಟ ಚಿರಂಜೀವಿ ಸರ್ಜಾ.ಇದು ಪಕ್ಕಾ ಓಂಪ್ರಕಾಶ್ ರಾವ್‌ ಮಾದರಿ ಸಿನಿಮಾ. ಅವರು ಹೇಳಿದ್ದಷ್ಟನ್ನೇ ಕ್ಯಾಮೆರಾ ಮುಂದೆ ಶ್ರದ್ಧೆಯಿಂದ ಮಾಡಿದ್ದೇನೆ ಎಂದು ಮಾತು ಮುಂದುವರಿಸಿದರು ಅವರು.ಅದು ‘ಚಂದ್ರಲೇಖ’ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭ. ಹಾಡುಗಳ ಜೊತೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯ ಕಾರ್ಯಕ್ರಮವೂ ಇತ್ತು. ಈ ಎರಡೂ ‘ಬಿಡುಗಡೆ’ಗಳನ್ನು ಮಾಡಿದ್ದು ನಟ ಸುದೀಪ್‌ ದಂಪತಿ. ಆತ್ಮೀಯನಾದ ಕಿರಿಯ ಸಹೋದ್ಯೋಗಿ ಚಿರಂಜೀವಿ ಸರ್ಜಾರ ಹೊಸ ಚಿತ್ರದ ಆಡಿಯೊ ಬಿಡುಗಡೆ ಮಾಡಿ ಶುಭ ಹಾರೈಸಿದರು ಸುದೀಪ್‌.ತೆಲುಗಿನ ‘ಪ್ರೇಮ ಚಿತ್ರಕಥಾ’ ಸಿನಿಮಾದ ಕನ್ನಡ ಅವತರಣಿಕೆ ‘ಚಂದ್ರಲೇಖ’. ಪಾತ್ರಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳುವ ಚಿರಂಜೀವಿ ಸರ್ಜಾ ಅವರ ಶ್ರದ್ಧೆಯನ್ನು ಪ್ರಶಂಸಿಸಿದರು ಓಂಪ್ರಕಾಶ್‌ರಾವ್‌. ಮತ್ತೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವವರು ನಿರ್ದೇಶಕ, ನಟ ನಾಗಶೇಖರ್‌. ನಾಗಶೇಖರ್‌ ಅವರ ನಟನೆ ಓಂಪ್ರಕಾಶ್‌ ಅವರಲ್ಲಿ ಹಿರಿಯ ನಟ ಸುಂದರಕೃಷ್ಣ ಅರಸ್‌ ಅವರ ನೆನಪು ತಂದಿದೆ. ಸಂಭಾಷಣೆಗಳನ್ನು ಒಪ್ಪಿಸುವ ಕ್ರಮದಲ್ಲಿ ಶೇಕಡಾ 10ರಷ್ಟಾದರೂ ಸುಂದರಕೃಷ್ಣ ಅರಸ್‌ ಅವರ ಛಾಯೆಯನ್ನು ಅವರಲ್ಲಿ ಕಾಣಬಹುದು ಎಂದರು ಓಂ. ಹೆಚ್ಚಿನ ಅಭಿನಯ ಬೇಡುವ ಈ ಚಿತ್ರಕ್ಕೆ ಕಲಾವಿದರ ಸಹಕಾರ ದೊಡ್ಡದು ಎಂಬ ಅಭಿಪ್ರಾಯ ಅವರದು.ತಮಗೆ ನಟನೆಯ ಪಟ್ಟುಗಳನ್ನು ಹೇಳಿಕೊಟ್ಟು, ನಟಿಯಾಗಿ ರೂಪಿಸಿದ ನಿರ್ದೇಶಕ ಓಂಪ್ರಕಾಶ್‌ ರಾವ್‌ ಅವರಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ನಾಯಕಿ ಶಾನ್ವಿ ಶ್ರೀವಾಸ್ತವ್ ಮಾತುಗಳು ಸೀಮಿತವಾಗಿದ್ದವು.ಮೂಲ ಚಿತ್ರದಲ್ಲಿ ಹಾಡುಗಳನ್ನು ಹೊಸೆದಿದ್ದ ಜೆಬಿ ಈ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದು ಕನ್ನಡದಲ್ಲಿ ಅವರ ಮೊದಲ ಚಿತ್ರ. ಸುದೀಪ್‌, ಪ್ರಿಯಾ ಸುದೀಪ್, ಶೈಲೇಂದ್ರ ಬಾಬು, ರಾಮು, ಧ್ರುವ ಸರ್ಜಾ, ಸುಮಂತ್‌ ಶೈಲೇಂದ್ರ, ಸಾಧು ಕೋಕಿಲ ಮುಂತಾದವರು ಆಡಿಯೊ ಸೀಡಿ ಬಿಡುಗಡೆ ಸಮಾರಂಭದಲ್ಲಿದ್ದರು.ಚಿತ್ರ: ಕೆ.ಎನ್‌. ನಾಗೇಶ್‌ಕುಮಾರ್‌

ಪ್ರತಿಕ್ರಿಯಿಸಿ (+)