ಶುಕ್ರವಾರ, ಮೇ 14, 2021
21 °C

ಚಡಚಣ: ಎರಡು ಯೋಜನೆ ಇದ್ದರೂ ತಪ್ಪದ ಬವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಡಚಣ: ಇದು ಕರ್ನಾಟಕದ ಗಡಿ ಯಲ್ಲಿರುವ ಪಟ್ಟಣ. ಪ್ರಮುಖ ವ್ಯಾಪಾರಿ ಕೇಂದ್ರ. ಸುಮಾರು 40 ಸಾವಿರ ಜನಸಂಖ್ಯೆ ಹೊಂದಿರುವ ಈ ಚಡಚಣ ಪಟ್ಟಣದಲ್ಲಿ ನೀರು ಪೂರೈಕೆಗೆ ಎರಡು ಯೋಜನೆಗಳಿದ್ದರೂ ಸರಿಯಾದ ನಿರ್ವಹಣೆ ಇಲ್ಲ. ಶುಚಿತ್ವ- ಶುದ್ಧೀಕರಣ ಸರಿಯಾಗಿ ಆಗುತ್ತಿಲ್ಲ. ನೀರಿಗಾಗಿ ಜನತೆಯ ಅಲೆದಾಟವೂ ತಪ್ಪುತ್ತಿಲ್ಲ.ಚಡಚಣ ಪಟ್ಟಣಕ್ಕೆ ಹೊಳೆಸಂಖ ಗ್ರಾಮದ ಹತ್ತಿರದ ಭೀಮಾ ನದಿಯಿಂದ ನೀರು ಪೂರೈಕೆಯಾಗುತ್ತಿದೆ. ಸುಮಾರು ಎರಡು ವರ್ಷಗಳ ಹಿಂದೆ ಬಹುಹಳ್ಳಿಗಳ ಶಾಶ್ವತ ಕುಡಿಯವ ನೀರು ಪೂರೈಕೆ ಯೋಜನೆಯಡಿ ಸುಮಾರು ರೂ.3.30 ಕೋಟಿ ವೆಚ್ಚದಲ್ಲಿ ಶಾಸಕ ವಿಠ್ಠಲ ಕಟಕಧೋಂಡ ಅವರ ಪರಿಶ್ರಮದ ಫಲವಾಗಿ ಭೀಮಾ ನದಿಯ ನೀರು ಪೂರೈಕೆಯಾಗುತ್ತಿದೆ.ಅಂದಾಜು 25 ವರ್ಷಗಳ ಹಿಂದೆ ಪಟ್ಟಣಕ್ಕೆ ಆಗಿನ ಶಾಸಕ, ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು ಭೀಮಾ ನದಿಯಿಂದ ನೀರು ತರುವ ಯೋಜನೆ ರೂಪಿಸಿದ್ದರು. ಪೈಪ್‌ಲೈನ್ ಕಾಮಗಾರಿಯೂ ಮುಗಿದಿತ್ತು. ಆದರೆ, ಕೆಲ ದಿನಗಳಲ್ಲಿ ಆ ಯೋಜನೆಯೂ ಸ್ಥಗಿತಗೊಂಡಿತ್ತು. ಗ್ರಾಮ ಪಂಚಾಯಿತಿ ಸದಸ್ಯರ ಸತತ ಪ್ರಯತ್ನದ ಫಲವಾಗಿ ಈ ಯೋಜನೆಯ ಮೂಲಕವೂ ಕಳೆದ ಒಂದು ತಿಂಗಳಿನಿಂದ ನೀರು ಪೂರೈಕೆಯಾಗುತ್ತಿದೆ.ಇಷ್ಟೆಲ್ಲ ಅನುಕೂಲತೆ ಇದ್ದರೂ ಸಮರ್ಪಕ ನಿರ್ವಹಣೆ ಇಲ್ಲದೆ ನಾವು ಪರದಾಡು ವಂತಾಗಿರುವುದು ದುರದೃಷ್ಟಕರ ಎನ್ನುತ್ತಾರೆ ಗ್ರಾಮಸ್ಥರು.ಪಟ್ಟಣದಲ್ಲಿ ಹಲವು ದಶಕಗಳ ಹಿಂದೆ ಅಳವಾಡಿಸಲಾಗಿರುವ ಕೊಳುವೆಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ. ಆ ಕೊಳವೆಗಳ ಮೂಲಕ ನೀರು ಪೂರೈಕೆ ಮಾಡುತ್ತಿರುವುದರಿಂದ ಸತತವಾಗಿ ಕೊಳವೆ ಗಳು ಒಡೆದು ನೀರು ಪೋಲಾಗತ್ತಿರುವುದು ಒಂದೆಡೆಯಾದರೆ, ಕೆಲವು ಬಡಾವಣೆಗಳಲ್ಲಿ ನೀರು ಪೂರೈಕೆ ಮಾಡಬೇಕಾದ ಕೊಳವೆ ಮಾರ್ಗಗಳೇ ಇಲ್ಲ. ಹೀಗಾಗಿ ಗ್ರಾಮಸ್ಥರು ಸಾರ್ವಜನಿಕ ನಲ್ಲಿಗಳ ಮುಂದೆ ಗಂಟೆಗಟ್ಟಲೆ ಸರದಿಯಲ್ಲಿ ನಿಂತು ನೀರು ತರುವುದು ತಪ್ಪುತ್ತಿಲ್ಲ.ನುಣಿಚಿಕೊಳ್ಳುತ್ತಿರುವ ಜಿಲ್ಲಾ ಆಡಳಿತ: `ಭೀಮಾ ನದಿಯಿಂದ ಪಟ್ಟಣದ ವರೆಗೆ ನೀರು ಪೂರೈಕೆಯ ಹೊಣೆ ಹೊರಬೇಕಾದ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ ದವರು ಯೋಜನೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿಲ್ಲ. ಇದರ ನಿರ್ವಹಣೆಯ ವೆಚ್ಚವೂ ಭರಿಸುತ್ತಿಲ್ಲ. ಇನ್ನು ಗ್ರಾಮ ಪಂಚಾಯಿತಿಯೂ ಇದರ ನಿರ್ವಹಣೆಗೆ ಮುಂದಾಗುತ್ತಿಲ್ಲ. ಈ ಯೋಜನೆಯ ನಿರ್ವಹಣೆಗೆ ಬೇಕಾದ ಅನುದಾನವೂ ಗ್ರಾಮ ಪಂಚಾಯಿತಿಯಲ್ಲಿ ಇಲ್ಲ~ ಎನ್ನುತ್ತಾರೆ ಸದಸ್ಯರೊಬ್ಬರು.`ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಆಡಳಿತ ಎರಡೂ ಕೈಚೆಲ್ಲಿದ್ದರಿಂದ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ ನಮ್ಮ ಸ್ಥಿತಿ~ ಎನ್ನುತ್ತಾರೆ ಪಟ್ಟಣದ ನಿವಾಸಿಗಳು.ಜಾಕ್‌ವೆಲ್ ಶುಚಿಗೊಳಿಸಿ:

`ಭೀಮಾ ನದಿಯಿಂದ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿರುವ ಮಾರ್ಗ ಮಧ್ಯೆ ಹಾವಿನಾಳ ಹತ್ತಿರವಿರುವ ಜಾಕ್‌ವೆಲ್‌ಗಳಲ್ಲಿ ವ್ಯಾಪಕವಾದ ಪಾಚಿ ಮತ್ತು ಕಶ್ಮಲ ಸೇರಿಕೊಂಡಿದೆ. ಇದರಿಂದ ಪಟ್ಟಣಕ್ಕೆ ಪೂರೈಕೆಯಾಗುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಬಳಕೆಗೆ ಮಾತ್ರ ಉಪಯೋಗಿಸುತ್ತಿದ್ದೇವೆ. ಶುದ್ಧವಾದ ಕುಡಿಯುವ ನೀರನ್ನು ಮೂರ‌್ನಾಲ್ಕು ಕಿಲೋ ಮೀಟರ್ ದೂರದಿಂದ ತರುವುದು ಅನಿವಾರ್ಯವಾಗಿದೆ~ ಎಂದು ಬಹುತೇಕರು ಹೇಳುತ್ತಾರೆ.ಇನ್ನು ಕೆಲ ಸ್ಥಿತಿವಂತರು 20 ಲೀಟರ್ ಬಾಟಲ್ ನೀರನ್ನು ಕೊಂಡು ತರುತ್ತಿದ್ದರೆ, ಕೆಲವರು ತಲಾ ಒಂದು ಕೊಡಕ್ಕೆ ರೂ.5 ತೆತ್ತು ನೀರು ಖರೀದಿಸುತ್ತಿದ್ದಾರೆ.

ಮಾಹಿತಿಗೆ ಸಂಪರ್ಕಿಸಿ

ವಿಜಾಪುರ ಜಿಲ್ಲೆಯಲ್ಲಿ ಈಗ ಭೀಕರ ಬರ. ಜೀವಜಲ ಬತ್ತಿ ಬರಿದಾಗುತ್ತಿದೆ. ಜನತೆ ಎದುರಿಸುತ್ತಿರುವ ಸಮಸ್ಯೆಯ ಮೇಲೆ `ಪ್ರಜಾವಾಣಿ~ಯ ಕ್ಷಕಿರಣ `ಬರದ ನಾಡಿನ ಬವಣೆ~ ಅಂಕಣ. ನಿಮ್ಮೂರಿನ ಸಮಸ್ಯೆ ಪರಿಹಾರಕ್ಕೆ ಈ ಅಂಕಣ ಸೂಕ್ತ ವೇದಿಕೆ.ನಮ್ಮ ವಿಳಾಸ: ಜಿಲ್ಲಾ ವರದಿಗಾರರು, ಪ್ರಜಾವಾಣಿ, ಸಾಂಗ್ಲಿಕರ ಕಾಂಪ್ಲೆಕ್ಸ್, ಸಕಾಫ್ ರೋಜಾ, ಕೇಂದ್ರ ಬಸ್ ನಿಲ್ದಾಣದ ಹತ್ತಿರ. ವಿಜಾಪುರ. ದೂರವಾಣಿ ಸಂಖ್ಯೆ: 08352-221515, ಮೊಬೈಲ್: 9448470153 (ಗಣೇಶ ಚಂದನಶಿವ).  

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.