ಸೋಮವಾರ, ಮೇ 23, 2022
24 °C

ಚದುರಂಗರ ಪಾತ್ರಗಳು ಎದ್ದು ಬಂದಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚದುರಂಗ ಕಾವ್ಯನಾಮದಿಂದ ಪ್ರಸಿದ್ಧರಾದ ಸುಬ್ರಹ್ಮಣ್ಯರಾಜೇ ಅರಸ್ ಅವರು ಕಥೆ, ಕಾದಂಬರಿ, ಸಿನಿಮಾದ ಮೂಲಕ ಅನನ್ಯ ಸೃಜನಶೀಲ ಕವಿಯಾಗಿ ಹೆಸರಾದವರು.ಅವರ `ಸರ್ವಮಂಗಳ~, `ಉಯ್ಯೊಲೆ~, `ವೈಶಾಖ~, `ಹೆಜ್ಜಾಲ~ ಕಾದಂಬರಿಗಳು ಓದುಗರಲ್ಲಿ ಸಂಚಲನವನ್ನುಂಟು ಮಾಡಿದವು. `ಸರ್ವಮಂಗಳ~ ಮತ್ತು `ಉಯ್ಯೊಲೆ~ ಚಲನಚಿತ್ರಗಳಾಗಿಯೂ ಜನಮನ ಗೆದ್ದಿವೆ.

 

ಚದುರಂಗರ ಕುರಿತು ಕಥೆಗಾರ ಕಾ.ತ. ಚಿಕ್ಕಣ್ಣ ರಚಿಸಿರುವ `ಚದುರಂಗ~ ನಾಟಕವನ್ನು `ಕರ್ನಾಟಕ ಕಲಾ ಸಂಭ್ರಮ~ ತಂಡ ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿತು.ಒಬ್ಬ ಕವಿಯನ್ನು ಕಂಡರೆ ಮತ್ತೊಬ್ಬ ಕವಿ ಮುನಿಯುವ, ಸಾಹಿತಿಗಳ ಗುಂಪುಗಾರಿಕೆಯ ನಡುವೆ ಒಬ್ಬ ಕವಿ ಮತ್ತೊಬ್ಬ ಕವಿಯನ್ನು ನಾಟಕದ ಮೂಲಕ ಅನುಸಂಧಾನ ಮಾಡುವುದು ನಿಜಕ್ಕೂ ಸಂತೋಷದ ಸಂಗತಿ. ಕನ್ನಡದಲ್ಲಿ ಪ್ರೊ. ಕಿ.ರಂ. ನಾಗರಾಜ ಅವರು ಸಂಸದ ಮೂಲಕ ಈ ರೀತಿಯ ಪ್ರಯೋಗವನ್ನು ಮಾಡಿದ್ದಾರೆ.

 

ಇದೇ ರೀತಿಯಲ್ಲಿ ನರಸಿಂಹನ್ ಅವರು `ಟಿಪಿಕಲ್ ಕೈಲಾಸಂ~, ಸಿ.ಆರ್. ಸಿಂಹ ಅವರು `ರಸಋಷಿ ಕುವೆಂಪು~, ರಾಜೇಂದ್ರ ಕಾರಂತರವರು ಕೆ.ಎಸ್. ನರಸಿಂಹ ಸ್ವಾಮಿ ಅವರನ್ನು ಕುರಿತು `ಮೈಸೂರು ಮಲ್ಲಿಗೆ~ ನಾಟಕಗಳನ್ನು ಮಾಡಿದ್ದಾರೆ. ಇದೇ ಸಾಲಿನಲ್ಲಿ ಕಾ.ತ ಚಿಕ್ಕಣ್ಣ ಅವರ `ಚದುರಂಗ~ ನಾಟಕವು ಇತ್ತೀಚೆಗೆ ಸೇರ್ಪಡೆಗೊಂಡಿದೆ.ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಸಾಂಬಶಿವ, ವರದಪ್ಪ ಹಾಗೂ ಮಾದೇಗೌಡರೊಂದಿಗೆ ಸಂಶೋಧನ ವಿದ್ಯಾರ್ಥಿ ವೆಂಕಟಸ್ವಾಮಿ ತನ್ನ ಸಂಶೋಧನಾ ವಿಷಯವನ್ನು ಚರ್ಚಿಸುವುದರೊಂದಿಗೆ ಪ್ರಾರಂಭವಾಗುವ ನಾಟಕವು ಇತ್ತೀಚಿನ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಹಾಗೂ ಸಂಶೋಧನೆಯನ್ನು ಕುರಿತು ವಿಡಂಬಿಸುತ್ತಲೇ ಸಂಶೋಧನಾರ್ಥಿಗಳು ಎದುರಿಸುತ್ತಿರುವ ಸವಾಲುಗಳನ್ನು ತಿಳಿಸುತ್ತದೆ.ವೆಂಕಟಸ್ವಾಮಿ ತನ್ನ ಸಂಶೋಧನೆಯ ವಸ್ತುವಾದ ಚದುರಂಗರ ಬದುಕು-ಬರಹವನ್ನು ಕುರಿತು ಕ್ಷೇತ್ರಕಾರ್ಯಕ್ಕೆಂದು ಕಲ್ಲಹಳ್ಳಿಗೆ ಹೋದಾಗ ಚದುರಂಗರ ಕಥೆ-ಕಾದಂಬರಿಗಳ ಪಾತ್ರಧಾರಿಗಳಾದ ನಾಗಜ್ಜಿ, ಲಕ್ಕ, ಹಕಲಯ್ಯ, ಬೀರಲಿಂಗ, ರುಕ್ಮಿಣಿ, ನಟರಾಜ, ಸರ್ವಮಂಗಳ ಮೊದಲಾದವರನ್ನು ಮುಖಾಮುಖಿಯಾಗುತ್ತಾನೆ.

 

ವೆಂಕಟಸ್ವಾಮಿಯ ಪುಸ್ತಕದ ತಿಳಿವಳಿಕೆಯ ಎದುರಿಗೆ ಲಕ್ಕನ ಅನುಭವದ ಜ್ಞಾನ ಮಾತನಾಡುತ್ತಾ ಹೋಗುತ್ತದೆ. ಲಕ್ಕನ ಅನುಭಾವಿಕ ಮಾತುಗಳಿಗೆ ವೆಂಕಟಸ್ವಾಮಿ ವಿದ್ವತ್‌ಲೋಕದ ಪರಿಭಾಷೆಗಳ ಉಪವ್ಯಾಖಾನ ನಡೆಯುತ್ತದೆ.ಯಾವ ಭಾಷಿಕ ಜ್ಞಾನವರ್ಗದ ಉಪಾದಿಗಳ ಹಂಗೂ ಇಲ್ಲದಂತೆ ಲಕ್ಕನ ಅನುಭವದ ಜ್ಞಾನ ಸ್ಥಳೀಯ ಲೋಕಜ್ಞಾನವಾಗಿ ಅರಳುತ್ತದೆ. ಹೀಗೆ ವೆಂಕಟಸ್ವಾಮಿಯು ಚಂದುರಂಗರ ಕಥೆ, ಕಾದಂಬರಿಗಳ ಪಾತ್ರಗಳೊಂದಿಗೆ ಮುಖಾಮುಖಿಯಾಗುತ್ತಲೇ ಚದುರಂಗರ ಬದುಕು ಬರಹವನ್ನು ಅರಿಯಲು ಪ್ರಯತ್ನಿಸುತ್ತಾನೆ.ಚದುರಂಗರು ಕಲ್ಲಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಮುಂದೆ ಮೈಸೂರಿನಲ್ಲಿ  ನೆಲೆ ನಿಂತರು. ಅವರ ಅನುಭವ ಜ್ಞಾನವೆಲ್ಲ ತಮ್ಮ ಊರಿನ ಸುತ್ತಮುತ್ತಲಿನದು. ಕಲ್ಲಹಳ್ಳಿಯ ಪಕ್ಕದ ಗುಡ್ಡದ ಬಳಿಯಲ್ಲಿಯೇ ಸರ್ವಮಂಗಳ ಕಾದಂಬರಿಯ ನಟರಾಜ ಹಾಗೂ ಸರ್ವಮಂಗಳ ಹಾಡುತ್ತಾ ನಲಿದದ್ದು.

 

ಮಕ್ಕಳೆಲ್ಲಾ ಸಂತೋಷದಿಂದ ಆಡಿ ಕುಣಿದಾಡಿದ ಹೆಮ್ಮರವೇ ಹೆಜ್ಜಾಲ. `ಮುಳ್ಳಿನ ಕಥೆ~ಯ ರುಕ್ಮಿಣಿ ಇಲ್ಲಿಯವಳೆ. ಹೀಗೆ ನಾಟಕದಲ್ಲಿ ಚದುರಂಗರ ಕಥೆ ಕಾದಂಬರಿಯ ಪಾತ್ರ ಸನ್ನಿವೇಶಗಳ್ಲ್ಲೆಲ ಕಲ್ಲಹಳ್ಳಿಯ ಪರಿಸರದ್ದು.

 

ನಾಟಕಕಾರರು ಚದುರಂಗರ ಬದುಕು ಮತ್ತು ಪಾತ್ರಗಳನ್ನು ಒಂದೇ ಸೂತ್ರದಲ್ಲಿ ಕಟ್ಟಿರುವುದರಿಂದ ಪ್ರೇಕ್ಷಕರಲ್ಲಿ ಗೊಂದಲವನ್ನುಂಟು ಮಾಡುತ್ತದೆ. ಹಳ್ಳಿಯ ಅನಕ್ಷರಸ್ಥ ಮುದುಕಿ ಚದುರಂಗರ ಸಾಹಿತ್ಯವನ್ನು ವಿಮರ್ಶೆ ಮಾಡುವುದು ಎಷ್ಟು ಸರಿ? ನಾಟಕ ರಚನಾಬಂಧ ಸಡಿಲವಾಗಿದ್ದು, ನೀರಸದಿಂದ ಬೇಸರವನ್ನುಂಟು ಮಾಡುತ್ತದೆ.

ನಾಗಜ್ಜಿಯಾಗಿ ಹನುಮಕ್ಕ ಮರಿಯಮ್ಮನಳ್ಳಿಯವರ ಅಭಿನಯ ಅಭಿನಂದನೀಯ.ಹಳ್ಳಿಯ ಸೀದಾಸಾದಾ ಅಜ್ಜಿಯಂತೆ, ದೇವನೂರು ಮಹಾದೇವ ಅವರ ಸಾಕಜ್ಜಿಯಂತೆ ಕಾಣುತ್ತಾರೆ. ಹಕಲಯ್ಯನಾಗಿ ರಂಗಸ್ವಾಮಿ, ಹಲಗೆಗೌಡನಾಗಿ ಶಿವಕಾಗೇವಾಡಿ, ಅಭಿನಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಕ್ಕಳಾಗಿ ಗಣೇಶ್, ಮೇಘ, ವಾಸುದೇವ, ಚರಿತ್ರಾ ರಾವ್ ಮಕ್ಕಳಾಟದಲ್ಲಿ ಮನಗೆಲ್ಲುತ್ತಾರೆ.ನಟರಾಜ ಸರ್ವಮಂಗಳರಾಗಿ ಧನಂಜಯ್, ಸಾವಿತ್ರಿರಾವ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ವೆಂಕಟಸ್ವಾಮಿಯಾಗಿ ಗಣೇಶ್ ಇನ್ನೂ ಹೆಚ್ಚು ಮನಸ್ಸಿಟ್ಟು ಸಂಭಾಷಣೆ ನೀಡಿ, ಅಭಿನಯಿಸಿದ್ದರೆ ಚೆನ್ನಾಗಿರುತ್ತಿತ್ತು.ವಿಶ್ವವಿದ್ಯಾಲಯದ ಕೊಠಡಿ, ಹೆಜ್ಜಾಲ, ಗುಡ್ಡ, ಪುರಾತನ ಬಂಗಲೆ, ಹಳ್ಳಿ ಮೊದಲಾದ ಪರಿಸರವನ್ನು ಮಹೇಶ್, ಮಂಜುನಾರಾಯಣ್, ರಕ್ಷಿತ್, ದಿವಾಕರ್, ರಾಜಣ್ಣರವರು ರಂಗಸಜ್ಜಿಕೆಯಲ್ಲಿ ಯಶಸ್ವಿಯಾಗಿ ಮೂಡಿಸಿದ್ದಾರೆ. ಕೊಳಲಿನ ನಿನಾದದ ಮೂಲಕ ಇಸ್ಮಾಯಿಲ್ ಗೋನಾಳ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

 

`ಉಂಡಾಡ ಬಹುದು ಓಡಿ ಬಾ ಎನ್ನಪ್ಪ~, `ದೋಣಿಯೊಳಗೆ ನೀನು~, `ಮಲ್ಲಯ್ಯ ಮಲೇ ಸ್ವಾಮಿ~, `ನನ್ನವಳು ನನ್ನೆದೆಯ ಹೊನ್ನಾಡನಾಡುವಳು~, `ಲಕ್ಕಪ್ಪ ಲೋ ಲೋ~, `ತಾರೆಗಳ ದಾಟುವೆವು~ ಮೊದಲಾದ ಹಾಡುಗಳನ್ನು ವೆಂಕಟೇಶ್ ಜೋಶಿ, ಶಾಂತಾ ಕುಲಕರ್ಣಿ, ಆಶಿಶ್ ಜಿ. ನಾಯಕ್, ಶ್ರಿವಿದ್ಯಾ ಹಿಮ್ಮೇಳದಲ್ಲಿ ಸುಶ್ರಾವ್ಯವಾಗಿ ಹಾಡಿದ್ದಾರೆ.ನಾಟಕದಲ್ಲಿ ಚದುರಂಗರು ತಮ್ಮ ಚಲನಚಿತ್ರಗಳಲ್ಲಿ ಬಳಸಿಕೊಂಡ ಹಾಡುಗಳನ್ನು, ನರಸಿಂಹಸ್ವಾಮಿಯವರ ಹಾಡನ್ನು ಬಳಸಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ.ಮಾದೇವಸ್ವಾಮಿ ಅವರದು ಬೆಳಕು, ರಾಮಕೃಷ್ಣ ಬೆಳತ್ತೂರು ಅವರದು ಪ್ರಸಾಧನ. ಯುವ ನಿರ್ದೇಶಕ ಸಂಪತ್‌ಕುಮಾರ್ ನ. ಚದುರಂಗ ನಾಟಕವನ್ನು ವಿನ್ಯಾಸ ಮಾಡಿ ನಿರ್ದೇಶಿಸಿದ್ದು, ನಿರ್ಮಾಣ ಕರ್ನಾಟಕ ಕಲಾ ಸಂಭ್ರಮದ ಜೋಗಿಲ ಸಿದ್ಧರಾಜು ಅವರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.