ಶನಿವಾರ, ಮೇ 28, 2022
26 °C

ಚನ್ನಪಟ್ಟಣದ ಲಕ್ಷ್ಮಿಗೆ ಒಲಿದ ಸರಸ್ವತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ‘ನಾವು-ನಮ್ಮಿಂದ ಹಾಗೂ ನಮ್ಮ ಮನೆಯಿಂದ ಮೊದಲು ಕನ್ನಡವನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯ ಮಾಡಬೇಕು. ಇದನ್ನು ಎಲ್ಲ ಕನ್ನಡಿಗರು ಮಾಡಬೇಕು. ಕನ್ನಡ ಉಳಿಸುವ ಕಾರ್ಯಕ್ಕೆ ಬೇರೆಯವರನ್ನು ಅವಲಂಬಿಸುವ ಅಗತ್ಯ ಇಲ್ಲ’...ಹೀಗೆಂದು ಹೇಳಿದವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರ್ಯಾಂಕ್‌ಗಳಿಸಿ ಏಳು ಚಿನ್ನದ ಪದಕಗಳನ್ನು ಗಳಿಸಿರುವ ಚನ್ನಪಟ್ಟಣದ ‘ಚಿನ್ನ’ದ ಹುಡುಗಿ ಸಿ.ಜಿ.ಲಕ್ಷ್ಮಿ.ಕನ್ನಡ ಸಾಹಿತ್ಯದಲ್ಲಿ ನಡೆದಿರುವ ಕೃಷಿಯ ಬಗ್ಗೆ ಹೊರ ಜಗತ್ತಿಗೂ ಗೊತ್ತಾಗಬೇಕು. ಅದೇ ರೀತಿ ಹೊರ ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ಹೊರ ಹೊಮ್ಮಿರುವ ಸಾಹಿತ್ಯ ರಚನೆಗಳು ಕನ್ನಡಕ್ಕೂ ಬರಬೇಕು.ಇದಕ್ಕಾಗಿ ನಿರಂತರ ಭಾಷಾಂತರ ಪ್ರಕ್ರಿಯೆ ನಡೆಯುತ್ತಿರಬೇಕು. ಇದರಿಂದಲೂ ಕನ್ನಡ ಉಳಿಕೆ ಮತ್ತು ಬೆಳವಣಿಗೆ ಸಾಧ್ಯವಾಗುತ್ತದೆ ಎನ್ನುತ್ತಾರೆ ಅವರು.ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಂದ ಚಿನ್ನದ ಪದಕಗಳನ್ನು ಸ್ವೀಕರಿಸಿದ ಲಕ್ಷ್ಮಿ ಅವರು ಚನ್ನಪಟ್ಟಣದಲ್ಲಿ ‘ಪ್ರಜಾವಾಣಿ’ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅವರ ಜತೆಗಿನ ಸಂದರ್ಶನದ ವಿವರ ಕೆಳಕಂಡಂತಿದೆ. *ಎಂ.ಎ ಪದವಿಯಲ್ಲಿ ಕನ್ನಡ ಆಯ್ಕೆ ಮಾಡಿಕೊಳ್ಳಲು ಕಾರಣವೇನು ?

ಲಕ್ಷ್ಮಿ: ಕನ್ನಡ ಸಾಹಿತ್ಯ ಓದಬೇಕು ಎಂಬ ಆಸಕ್ತಿ ಹೆಚ್ಚಿತ್ತು.ಹಾಗಾಗಿ ಪದವಿಯಲ್ಲಿ ಕನ್ನಡವನ್ನು ಐಚ್ಛಿಕವಾಗಿ ತೆಗೆದುಕೊಂಡೆ. ಇನ್ನಷ್ಟು ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕು ಎನ್ನಿಸಿದ್ದರಿಂದ ಸ್ನಾತಕೋತ್ತರ ಪದವಿಯಲ್ಲಿಯೂ ಕನ್ನಡವನ್ನೇ ಆರಿಸಿಕೊಂಡೆ. ಇಷ್ಟಕ್ಕೆ ಸಾಕಾಗಿಲ್ಲ. ಸದ್ಯದಲ್ಲಿಯೇ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಎಂ.ಫಿಲ್ ಪದವಿಗೆ ನೋಂದಣಿ ಮಾಡಿಸಲಿದ್ದೇನೆ. ಆ ನಂತರ ಪಿಎಚ್.ಡಿ ಪದವಿ ಪಡೆಯುವ ಆಕಾಂಕ್ಷಿಯೂ ಇದೆ. ನಂತರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತೇನೆ. *ಎಂ.ಎ ಪದವಿಯಲ್ಲಿ ರ್ಯಾಂಕ್ ಹಾಗೂ ಚಿನ್ನದ ಪದಕ ಬರುವ ನೀರಿಕ್ಷೆ ಇತ್ತಾ ?

ಲಕ್ಷ್ಮಿ: ರ್ಯಾಂಕ್ ಬರುವ ನಿರೀಕ್ಷೆ ಇತ್ತು. ಆದರೆ ಏಳು ಚಿನ್ನದ ಪದಕಗಳು ನನಗೆ ಬರುತ್ತವೆ ಎಂದು ಊಹಿಸಿರಲಿಲ್ಲ.ನಿರೀಕ್ಷೆಯನ್ನೂ ಮೀರಿ ಫಲಿತಾಂಶ ಬಂದಿರುವುದರಿಂದ ಸಂತಸ ಹೆಚ್ಚಾಗಿದೆ. *ರ್ಯಾಂಕ್ ಬರಲು ನೀವು ಹೇಗೆ ಅಧ್ಯಯನ ನಡೆಸಿದಿರಿ ?

ಲಕ್ಷ್ಮಿ: ನಿತ್ಯ ಜ್ಞಾನಭಾರತಿಗೆ ಚನ್ನಪಟ್ಟಣದಿಂದ ಬಸ್‌ನಲ್ಲಿ ಸಂಚರಿಸುತ್ತಿದೆ. ಬೆಳಿಗ್ಗೆ ಮನೆ ಬಿಟ್ಟರೆ ಪುನಃ ಮನೆಗೆ ಬರುತ್ತಿದ್ದದ್ದು ಸಂಜೆ 7 ಗಂಟೆಗೆ. ಓದಲು ಹೆಚ್ಚಿನ ಸಮಯ ಸಿಗುತ್ತಿರಲಿಲ್ಲ. ಆದರೆ ಅಲ್ಪ ಅವಧಿಯಲ್ಲಿಯೇ ಹೆಚ್ಚು ಶ್ರದ್ಧೆಯಿಂದ ಓದುತ್ತಿದ್ದೆ. ಶ್ರದ್ಧೆಯಿಂದ ಓದಿದರೆ ಅದು ಫಲ ಕೊಡುತ್ತದೆ ಎನ್ನುವುದಕ್ಕೆ ನನ್ನ ಫಲಿತಾಂಶವೇ ಸಾಕ್ಷಿ. *ಕನ್ನಡ ಬೆಳವಣಿಗೆಗೆ ಏನೇನಾಗಬೇಕು ?

ಲಕ್ಷ್ಮಿ: ಪ್ರಮುಖವಾಗಿ ಭಾಷಾಂತರದ ಕೆಲಸಗಳು ಆಗಬೇಕು. ಕನ್ನಡದ ಸಾಹಿತ್ಯ ಬೇರೆ ಭಾಷೆಗಳಿಗೆ, ಬೇರೆ ಭಾಷಾ ಸಾಹಿತ್ಯ ಕನ್ನಡ ಭಾಷೆಗೆ ಬರಬೇಕು. ಆಗ ನಮ್ಮಲ್ಲಿ ನಡೆದಿರುವ ಸಾಹಿತ್ಯ ಚಳವಳಿ, ಪರಿಸರ ಹಾಗೂ ಇತರ ಘಟನೆಗಳು ಬೇರೆಯವರಿಗೆ ಗೊತ್ತಾಗುತ್ತದೆ. ಅದೇ ರೀತಿ ಬೇರೆ ಪ್ರದೇಶಗಳ ಪರಿಚಯ ನಮಗೂ ಆಗುತ್ತದೆ. ಇದರಿಂದ ಕನ್ನಡದ ವ್ಯಾಪ್ತಿಯೂ ವಿಸ್ತರಿಸುತ್ತದೆ. ತಂತ್ರಜ್ಞಾನವನ್ನೂ ಕೂಡ ಸಮರ್ಪಕವಾಗಿ ಬಳಸಿಕೊಂಡು ಕನ್ನಡದ ಅಭಿವೃದ್ಧಿ ಮಾಡಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಕೆಲಸಗಳು ಆಗಬೇಕಿವೆ.

ಕನ್ನಡದ ಬಗ್ಗೆ ಕೀಳರಿಮೆ ಬಿಡಬೇಕು. ಕನ್ನಡದಲ್ಲಿ ವ್ಯಾಸಂಗ ಮಾಡಿದರೆ ಕೆಲಸ ಸಿಗುವುದಿಲ್ಲ ಎಂಬ ಹಿಂಜರಿಕೆ ಬಿಟ್ಟು, ಆಸಕ್ತಿ ಮತ್ತು ಶ್ರದ್ಧೆಯಿಂದ ಅಧ್ಯಯನ ನಡೆಸಬೇಕು. ಆಗ ಕೆಲಸ ತನ್ನಿಂದ ತಾನೇ ಹುಡುಕಿಕೊಂಡು ಬರುತ್ತದೆ.ಚಿನ್ನದ ಹುಡುಗಿ ಸಿ.ಜೆ.ಲಕ್ಷ್ಮಿ ವಿವರ

ಚನ್ನಪಟ್ಟಣದ ವ್ಯಾಪಾರಿ ಎಚ್.ಎನ್.ಗೋವಿಂದಸ್ವಾಮಿ ಮತ್ತು ಎಂ.ಪಿ.ಕಲ್ಪನಾ ಅವರ ಮೂರನೇ ಪುತ್ರಿಯಾದ ಸಿ.ಜಿ.ಲಕ್ಷ್ಮಿ ಅವರ ಬಹುತೇಕ ವ್ಯಾಸಂಗ ಗೊಂಬೆ ನಗರ ಚನ್ನಪಟ್ಟಣದಲ್ಲಿ ಆಗಿದೆ.ಇಲ್ಲಿನ ಸೇಂಟ್ ಜೋಸೆಫ್ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಅವರು, 8ರಿಂದ 10ನೇ ತರಗತಿವರೆಗೆ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದಿದ್ದಾರೆ.ನಂತರ ಇದೇ ಶಾಲೆ ಆವರಣದ ಪಿ.ಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿ, ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ (ಎಚ್‌ಎಸ್‌ಕೆ) ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿದ್ದಾರೆ.ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ಎಂ.ಎ ಕನ್ನಡ ಪದವಿಗೆ ಸೇರಿದ್ದಾರೆ. ಎಲ್ಲ ಸೆಮಿಸ್ಟರ್‌ಗಳಲ್ಲಿಯೂ ಅತ್ಯಧಿಕ ಅಂಕಗಳನ್ನು ಗಳಿಸಿ ರ್ಯಾಂಕ್ ಪಡೆದು, ಚಿನ್ನದ ಪದಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಮುಂದೆ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದ್ದಾರೆ.ಏಳು ಚಿನ್ನದ ಪದಕಗಳು ಯಾವುವು ?

* ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದ ಪದಕ (ಒಟ್ಟಾರೆ ಸಾಧನೆಗೆ)

*ರಾಜ್‌ಕುಮಾರ್ ಜನ್ಮ ಸಮಿತಿಯ ಪದಕ (ಕರ್ನಾಟಕದ ಶಾಸನ ಮತ್ತು ಸಾಂಸ್ಕೃತಿಕ ಇತಿಹಾಸ ವಿಷಯಕ್ಕೆ)

* ಜೆ.ಆರ್.ತಮ್ಮಣ್ಣ ಪದಕ (ಕನ್ನಡ ಸಾಹಿತ್ಯ ವಿಷಯಕ್ಕೆ)

* ಜಿ.ಪಿ.ರಾಜರತ್ನ ಪದಕ (ಆಧುನಿಕ ಸಾಹಿತ್ಯ ಅಧ್ಯಯನ)

*ನಂಜನಗೂಡು ತಿರುಮಲಾಂಬ ಸೆಂಟಿನರಿ ಸಮಿತಿ ಪದಕ (ಒಟ್ಟಾರೆ ಸಾಧನೆಗೆ)

* ಬಿ.ಎಲ್.ಲಕ್ಕೇಗೌಡ ಪದಕ (ಒಟ್ಟಾರೆ ಸಾಧನೆಗೆ)

*ಕೆ.ಎಲ್.ನಾಗಮಣಿ ಪದಕ 


 

*ನಿಮ್ಮ ಮೆಚ್ಚಿನ ಸಾಹಿತಿ ?

ಲಕ್ಷ್ಮಿ: ಶಿವರಾಮ್ ಕಾರಂತ ಅವರು ನನ್ನ ಮೆಚ್ಚಿನ ಸಾಹಿತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.