ಗುರುವಾರ , ಮಾರ್ಚ್ 4, 2021
18 °C

ಚಲನಚಿತ್ರೋತ್ಸವ: ಜಯಾ ಬಚ್ಚನ್‌ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಲನಚಿತ್ರೋತ್ಸವ: ಜಯಾ ಬಚ್ಚನ್‌ ಉದ್ಘಾಟನೆ

ಬೆಂಗಳೂರು: ಜನವರಿ 28ರಿಂದ ಫೆಬ್ರುವರಿ  5ರವೆಗೆ ನಡೆಯಲಿರುವ 8ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಭಾರತೀಯ ಚಿತ್ರರಂಗದ ಹಿರಿಯ ನಟಿ ಜಯಾ ಬಚ್ಚನ್‌ ಉದ್ಘಾಟಿಸಲಿದ್ದಾರೆ.ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ನಡೆದ ಚಲನಚಿತ್ರೋತ್ಸವ ಸಂಘಟನಾ ಸಮಿತಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಈ ಬಾರಿ ಬೆಂಗಳೂರು ಮಾತ್ರವಲ್ಲದೇ ಮೈಸೂರಿನಲ್ಲೂ ಚಿತ್ರ ಪ್ರದರ್ಶನಗಳು ನಡೆಯಲಿವೆ.ವಿಧಾನಸೌಧದ ಮುಂಭಾಗದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಫೆಬ್ರುವರಿ 5 ರಂದು ಮೈಸೂರಿನ ಅರಮನೆ ಮುಂಭಾಗದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ’ ಎಂದು ಮಾಹಿತಿ ನೀಡಿದರು.‘ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.  ಉದ್ಘಾಟನೆಗೂ ಮುನ್ನ ಖ್ಯಾತ ಕಲಾವಿದೆ ಶೋಭನಾ ಮತ್ತು ನಿರುಪಮಾ ರಾಜೇಂದ್ರ  ಅವರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ’ ಎಂದರು.‘ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗುಲ್ಜಾರ್‌, ಹಾಲಿವುಡ್‌ ನಿರ್ಮಾಪಕ ಅಶೋಕ್‌ ಅಮೃತ್‌ರಾಜ್‌ ಮತ್ತು ಖ್ಯಾತ ನಟಿ, ನಿರ್ದೇಶಕಿ ಅಪರ್ಣಾ ಸೇನ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.172 ಚಿತ್ರಗಳು: ಚಲನಚಿತ್ರೋತ್ಸವದಲ್ಲಿ 52 ರಾಷ್ಟ್ರಗಳ 172 ಚಿತ್ರಗಳು ಪ್ರದರ್ಶನಗೊಳ್ಳಲಿವೆ. 15 ಕನ್ನಡ ಚಿತ್ರಗಳೂ ಇರಲಿವೆ. ಉದ್ಘಾಟನಾ ದಿನದಂದು ಕನ್ನಡ ಚಿತ್ರ ‘ತಿಥಿ’ ಪ್ರದರ್ಶನಗೊಳ್ಳಲಿದೆ’ ಎಂದು ವಿವರಿಸಿದರು.ಮೂರು ವಿಭಾಗ: ‘ಏಷ್ಯಾ, ಭಾರತೀಯ ಮತ್ತು ಕನ್ನಡ ಚಿತ್ರಗಳ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಈ ವರ್ಷ ಪ್ರಶಸ್ತಿ ಮೊತ್ತವನ್ನು ₹11 ಲಕ್ಷದಿಂದ ₹ 17 ಲಕ್ಷಕ್ಕೆ ಹೆಚ್ಚಿಸಲಾಗಿದೆ’ ಎಂದರು.12 ಸಾವಿರ ಜನರಿಗೆ ಅವಕಾಶ: ಬೆಂಗಳೂರಿನ ಓರಾಯನ್‌ ಮಾಲ್‌ನಲ್ಲಿರುವ ಪಿವಿಆರ್‌ ಸಿನಿಮಾದ 11 ಪರದೆಗಳಲ್ಲಿ ಚಿತ್ರಗಳು ಪ್ರದರ್ಶನ ಗೊಳ್ಳಲಿವೆ. ಮೈಸೂರಿನಲ್ಲಿರುವ ಮಾಲ್‌ ಆಫ್‌ ಮೈಸೂರಿನ ಐನಾಕ್ಸ್‌ ಚಿತ್ರ ಮಂದಿರದ ನಾಲ್ಕು ತೆರೆಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿವೆ. ಪ್ರತಿ ತೆರೆಯಲ್ಲಿ ದಿನಂಪ್ರತಿ ಐದು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಪ್ರತಿ ದಿನ ಎರಡೂ ಕಡೆಗಳಲ್ಲಿ (ಬೆಂಗಳೂರು, ಮೈಸೂರು) 12 ಸಾವಿರ ಪ್ರೇಕ್ಷಕರಿಗೆ ಚಿತ್ರ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.‘ಇತ್ತೀಚೆಗೆ ನಿಧನ ಹೊಂದಿದ ಖ್ಯಾತ ನಿರ್ದೇಶಕರಾದ ಕೆ.ಎಸ್‌.ಎಲ್‌. ಸ್ವಾಮಿ, ಸಿದ್ದಲಿಂಗಯ್ಯ ಮತ್ತು ಗೀತಪ್ರಿಯ ಅವರ ಚಿತ್ರಗಳನ್ನೂ ಪ್ರದರ್ಶಿಸಲಾಗುವುದು’ ಎಂದು ಹೇಳಿದರು.ಚಿತ್ರರಂಗಕ್ಕೆ ರಜೆ: ಸಮಾರೋಪ ಸಮಾರಂಭದಲ್ಲಿ ಇಡೀ ಚಿತ್ರರಂಗವೇ ಭಾಗವಹಿಸಲಿದೆ. ಆ ದಿನ ಕನ್ನಡ ಚಿತ್ರರಂಗಕ್ಕೆ ರಜೆ ಘೋಷಿಸಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.* ಈ ಬಾರಿ ವಿಜೃಂಭಣೆಯಿಂದ ಚಲನಚಿತ್ರೋತ್ಸವ ಆಚರಿಸಲು ನಿರ್ಧರಿಸಿದ್ದೇವೆ. ಬೆಂಗಳೂರು ನಗರವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಗಮ್ಯಸ್ಥಾನ ಆಗಬೇಕೆಂಬುದು ನಮ್ಮ ಉದ್ದೇಶ

ಸಿದ್ದರಾಮಯ್ಯ,

ಮುಖ್ಯಮಂತ್ರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.