ಚಲವಾದಿ ಕುಟುಂಬಕ್ಕೆ ಧನಸಹಾಯ

ವಿಜಯಪುರ: ಬೆಂಕಿ ಅವಘಡದಿಂದ ಎಲ್ಲವನ್ನೂ ಕಳೆದುಕೊಂಡು, ಅಕ್ಷರಶಃ ಬೀದಿ ಪಾಲಾಗಿ, ಮಗುವಿನ ಚಿಕಿತ್ಸೆಗಾಗಿ ನಗರದ ಅಶ್ವಿನಿ ಆಸ್ಪತ್ರೆಯಲ್ಲಿರುವ ಮುದ್ದೇಬಿಹಾಳ ತಾಲ್ಲೂಕು ನಾಗರಬೆಟ್ಟ ಗ್ರಾಮದ ಶ್ರೀಶೈಲ ಚಲವಾದಿ ಕುಟುಂಬಕ್ಕೆ ನಾಗಠಾಣ ಶಾಸಕ ಪ್ರೊ.ರಾಜು ಆಲಗೂರ ಸೇರಿದಂತೆ, ದಲಿತ ಸಂಘಟನೆಗಳ ಮುಖಂಡರು ನೆರವಿನ ಹಸ್ತ ನೀಡಿದ್ದಾರೆ.
ಇದೇ 12ರ ಶನಿವಾರದ ಸಂಚಿಕೆಯಲ್ಲಿ ‘ಪ್ರಜಾವಾಣಿ’ ಈ ಕುಟುಂಬ ಎದುರಿಸುತ್ತಿರುವ ಸಂಕಷ್ಟದ ಸ್ಥಿತಿಯನ್ನು ‘ಬೀದಿಗೆ ಬಿದ್ದ ಬದುಕು: ನೆರವಿಗೆ ಮೊರೆ’ ಶೀರ್ಷಿಕೆಯಡಿ ಮಾನವೀಯ ವರದಿ ಪ್ರಕಟಿಸಿತ್ತು. ಪತ್ರಿಕಾ ವರದಿ ಓದಿದ ವಸತಿ ಖಾತೆಯ ಸಂಸದೀಯ ಕಾರ್ಯದರ್ಶಿಯೂ ಆದ ಶಾಸಕ ರಾಜು ಆಲಗೂರ ಅಶ್ವಿನಿ ಆಸ್ಪತ್ರೆಗೆ ತೆರಳಿ ಮಗುವಿನ ಆರೋಗ್ಯ ವಿಚಾರಿಸಿದರು. ಕುಟುಂಬದ ಸ್ಥಿತಿಗತಿಯನ್ನು ಮಗುವಿನ ತಾಯಿ ಗೀತಾ ಅವರಿಂದ ಪಡೆದು, ಧೈರ್ಯ ತುಂಬಿದ್ದರು.
ನಂತರ ದಲಿತ ಸಂಘಟನೆಗಳ ಮುಖಂಡರ ಸಭೆ ನಡೆಸಿ ಕುಟುಂಬಕ್ಕೆ ವೈಯಕ್ತಿಕ ನೆರವು ನೀಡುವಂತೆ ಮನವಿ ಮಾಡಿದ ರಾಜು ಆಲಗೂರ, ಮೊದಲಿಗೆ ತಾವೇ ₹ 10 ಸಾವಿರ ದೇಣಿಗೆಯನ್ನು ಮುಖಂಡರ ಕೈಗೆ ನೀಡಿ, ಉಳಿದವರು ಸಾಥ್ ನೀಡುವಂತೆ ಕೇಳಿಕೊಂಡರು. ಶಾಸಕರ ಮನವಿಗೆ ಸ್ಪಂದಿಸಿದ ಎಸ್.ಎಸ್.ಗುದ್ದಿಗೆನ್ನವರ ₹ ಐದು ಸಾವಿರ, ನಿವೃತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸುಭಾಸ ಗುಡಿಮನಿ, ಬಿ.ವೈ.ಬೆಳ್ಳುಬ್ಬಿ ತಲಾ ₹ 2 ಸಾವಿರ, ಸಂಘಟನೆ ಮುಖಂಡರಾದ ನಾಗರಾಜ ಲಂಬು, ಸಾಬೂ ಚಲವಾದಿ ತಲಾ ₹ 2 ಸಾವಿರ, ಅಡಿವೆಪ್ಪ ಸಾಲಗಲ್ಲ, ಶ್ರೀನಾಥ ಪೂಜಾರಿ, ಕೆಬಿಜೆಎನ್‌ಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಶೇಖರ ಎಡಹಳ್ಳಿ ತಲಾ ₹ 1 ಒಂದು ಸಾವಿರ ನೀಡಿದರು.
ಎಲ್ಲರಿಂದ ಸಂಗ್ರಹಗೊಂಡ ₹ 26 ಸಾವಿರ ನಗದನ್ನು ದಲಿತ ಸಂಘಟನೆಗಳ ಮುಖಂಡರು ಸೋಮವಾರ ಆಸ್ಪತ್ರೆಗೆ ತೆರಳಿ ಮಗುವಿನ ತಂದೆ–ತಾಯಿಗೆ ನೀಡಿ, ಸಾಂತ್ವನ ಹೇಳಿದರು. ಇದೇ ಸಂದರ್ಭ ಮಾನವೀಯ ಸೇವೆ ಒದಗಿಸಿದ ಆಸ್ಪತ್ರೆಯ ಸಿಬ್ಬಂದಿಗೂ ಅಭಿನಂದನೆ ತಿಳಿಸಿದರು.
ಇಓಗೆ ಸೂಚನೆ: ಮುದ್ದೇಬಿಹಾಳ ತಾಲ್ಲೂಕಿನ ಚಲವಾದಿ ಸಮಾಜದ ಮುಖಂಡರ ಜತೆ ಚರ್ಚಿಸಿದ ರಾಜು ಆಲಗೂರ ಬೀದಿಗೆ ಬಂದಿರುವ ಶ್ರೀಶೈಲ ಚಲವಾದಿ ಕುಟುಂಬಕ್ಕೆ ನೆರವು ನೀಡಿ ಎಂದು ಸೂಚಿಸಿದರು.
ಮುದ್ದೇಬಿಹಾಳ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಜತೆ ದೂರವಾಣಿಯಲ್ಲಿ ಮಾತನಾಡಿದ ಸಂಸದೀಯ ಕಾರ್ಯದರ್ಶಿ, ಶ್ರೀಶೈಲ ಕುಟುಂಬಕ್ಕೆ ಮನೆ ಮಂಜೂರು ಮಾಡು ವಂತೆ ಸೂಚಿಸುವ ಜತೆಗೆ, ಸರ್ಕಾರದ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಆದೇಶಿಸಿದರು ಎಂದು ದಲಿತ ಸಂಘಟನೆಗಳ ಮುಖಂಡ ಅಡಿವೆಪ್ಪ ಸಾಲಗಲ್ಲ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.