ಶನಿವಾರ, ಮೇ 21, 2022
24 °C

ಚಳವಳಿಗಳ ನೆಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಗಂಡು ಮೆಟ್ಟಿನ ನಾಡೆಂದೇ ಖ್ಯಾತಿ ಪಡೆದಿರುವ ಧಾರವಾಡ ನೆಲದಲ್ಲಿಯೇ ಸಮಗ್ರ ಕರ್ನಾಟಕದ ಕಲ್ಪನೆ  ಚಿಗುರೊಡೆಯಿತು. ಮುಂಬೈ, ಮದ್ರಾಸು, ಮೈಸೂರು, ಹೈದರಾಬಾದ್ ಹಾಗೂ ಕೊಡಗು ಭಾಗಗಳಲ್ಲಿ ಹಂಚಿ  ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸುವ ಏಕೀಕರಣಕ್ಕೆ ಚಳವಳಿ ಆರಂಭಕ್ಕೆ ಕಾರಣವಾಗಿದ್ದು ಇದೇ ಧಾರವಾಡ. ಆಲೂರು ವೆಂಕಟರಾವ್ ಸೇರಿದಂತೆ ಹತ್ತಾರು ಮಹನೀಯರು ಆರಂಭದ ದಿನಗಳಲ್ಲಿ ಏಕೀಕರಣ ಚಳವಳಿಗೆ ಒತ್ತಾಸೆಯಾಗಿ ನಿಂತರು. 1928ರಿಂದಲೇ ಕರ್ನಾಟಕ ಏಕೀಕರಣದ ಮಾತುಗಳು ಇಲ್ಲಿ ಕೇಳಿ ಬಂದಿದ್ದವು. ಏಕೀಕರಣ ಚಳವಳಿಯಲ್ಲಿ ಅನೇಕ ಸಾಹಿತಿ, ಕಲಾವಿದರು, ಸಮಾಜದ ಮುಖಂಡರು ಹಗಲಿರಳು ಶ್ರಮಿಸಿದರು. 1953ರ ಮೇ ತಿಂಗಳಿನಲ್ಲಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ ಅಸ್ತಿತ್ವಕ್ಕೆ ಬಂದು ಚಾಲನೆ ಒದಗಿಸಿತು. ಅದರ ಪರಿಣಾಮವಾಗಿ ಆ ದಿನಗಳಲ್ಲಿ ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳು ಸೋತರು, ಏಕೀಕರಣ ಪರ ಉಮೇದುವಾರರು ಗೆದ್ದರು.1956ರ ನವೆಂಬರ್ 1ರಂದು ಕರ್ನಾಟಕ ಏಕೀಕರಣವಾಯಿತು. ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರಿಡಲು ಧಾರವಾಡ ಜಿಲ್ಲೆಯಲ್ಲಿ ಉಗ್ರ ಚಳವಳಿ ನಡೆಯಿತು. ಧಾರವಾಡದಲ್ಲಿ ಅನೇಕ ಚಳವಳಿಗಳು ಆರಂಭವಾಗಿ ರಾಜ್ಯವ್ಯಾಪಿಯಾಗಿ ಬೆಳೆದು ಯಶಸ್ವಿಯಾಗಿವೆ.ಸುಮಾರು ನೂರು ವರ್ಷಗಳಿಗಿಂತ ಹೆಚ್ಚು ಕಾಲ ನಡೆದ ಸ್ವಾತಂತ್ರ್ಯ ಚಳವಳಿಗೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. 1819ರಲ್ಲಿ ಜಿಲ್ಲೆಯ ಕಲೆಕ್ಟರ್ ಆಗಿ ಥ್ಯಾಕರೆ ನೇಮಕಗೊಂಡರು. 1824ರಲ್ಲಿ ಕಿತ್ತೂರು ಸಂಸ್ಥಾನದಲ್ಲಿ ರಾಣಿ ಚೆನ್ನಮ್ಮನ ಪತಿ ಸ್ವೀಕರಿಸಿದ ದತ್ತು ಪುತ್ರನಿಗೆ ಬ್ರಿಟಿಷ್ ಸರ್ಕಾರ ಮಾನ್ಯತೆ ನೀಡಲಿಲ್ಲ. ಸರ್ಕಾರದ ವಿರುದ್ಧ ಪ್ರತಿಭಟಿಸಿದ ಚೆನ್ನಮ್ಮನ ಭಂಟರು ಥ್ಯಾಕರೆ ಸೇರಿದಂತೆ ಏಳು ಜನರನ್ನು ಕೊಂದು ಹಾಕಿದರು. ಸ್ವಾತಂತ್ರ್ಯ ಹೋರಾಟದ ನಿಟ್ಟಿನಲ್ಲಿ ಇದೊಂದು ಪ್ರಮುಖ ಘಟನೆ.ಬ್ರಿಟಿಷರ ಆಡಳಿತದ ವಿರುದ್ಧ ಜಿಲ್ಲೆಯಲ್ಲಿ ತೀವ್ರ ಸಶಸ್ತ್ರ ಪ್ರತಿಭಟನೆ ಆರಂಭವಾದದ್ದು 1858ರಲ್ಲಿ. ಮುಂಡರಗಿ ಭೀಮರಾಯರು ಸರ್ಕಾರದ ವಿರುದ್ಧ ಬಂಡಾಯ ಹೂಡಿದರು. 1857-58ರಲ್ಲಿ ಧಾರವಾಡ ಜಿಲ್ಲೆಯಲ್ಲಿ ಈ ಹೋರಾಟಕ್ಕೆ ಸಂಬಂಧಿಸಿದಂತೆ 40 ಜನರನ್ನು ಗಲ್ಲಿಗೇರಿಸಲಾಯಿತು. ಜಿಲ್ಲೆಯಲ್ಲಿ ರಾಷ್ಟ್ರೀಯ ಚಟುವಟಿಕೆಗಳು ಆರಂಭವಾಗಿದ್ದು 1895-96ರ ಸುಮಾರಿನಲ್ಲಿ.1893ರಲ್ಲಿ ಎ.ಒ.ಹ್ಯೂಂ ಅವರು ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಸಂದರ್ಶಿಸಿ ರಾಜಕೀಯ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಸ್ವಾತಂತ್ರ್ಯ ಹಾಗೂ ಏಕೀಕರಣ ಚಳವಳಿಗಳು ಜೊತೆ ಜೊತೆಯಾಗಿ ಜಿಲ್ಲೆಯಲ್ಲಿ ಬೆಳೆದುಬಂದವು.1921ರ ಜುಲೈ 1 ರಂದು ಸಾರಾಯಿ ಪಿಕೆಟಿಂಗ್‌ಗೆ ಸಂಬಂಧಿಸಿ ಹರತಾಳ ನಡೆಯಿತು. ಈ ಸಂದರ್ಭದಲ್ಲಿ ನಡೆದ ಗೋಲಿಬಾರ್‌ನಲ್ಲಿ ಮೂವರು ಖಿಲಾಫತ್ ಕಾರ್ಯಕರ್ತರು ಸಾವನ್ನಪ್ಪಿದರು. ಜಿಲ್ಲೆಯಲ್ಲಿ 1930 ಏಪ್ರಿಲ್ 15ಕ್ಕೆ ಧಾರವಾಡದಲ್ಲಿ ಅಂಕೋಲಾದಿಂದ ತರಲಾದ ಕರಮುಕ್ತ ಉಪ್ಪನ್ನು ಸಾರ್ವಜನಿಕ ಸಭೆಯಲ್ಲಿ ಹರಾಜು ಹಾಕುವುದರ ಮೂಲಕ ಕಾನೂನು ಭಂಗ ಚಳವಳಿ ನಡೆಸಲಾಯಿತು. ಹೀಗೆ ಹಲವು ರೀತಿಯಲ್ಲಿ ಧಾರವಾಡ ಜಿಲ್ಲೆ ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಆದ ಕಾಣಿಕೆ ನೀಡಿತು.

ಗೋಕಾಕ ಚಳವಳಿ

ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಇರಬೇಕು ಎನ್ನುವ ನಿಲುವನ್ನು ಎತ್ತಿ ಹಿಡಿದ ಡಾ. ವಿ.ಕೃ.ಗೋಕಾಕ ಭಾಷಾ ಸಮಿತಿಯ ವರದಿಯ ಅನುಷ್ಠಾನಕ್ಕೆ 1982ರಲ್ಲಿ ರಾಜ್ಯದ ಉದ್ದಗಲದಲ್ಲಿ ಅಭೂತಪೂರ್ವ ಹೋರಾಟ ನಡೆಯಿತು. ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಿದ ಈ ವರದಿಯ ಮೇಲೆ ಸರ್ಕಾರ ಯಾವುದೇ ನಿರ್ಣಯ ತೆಗೆದುಕೊಳ್ಳಲಿಲ್ಲ. ಆದ್ದರಿಂದ ವರದಿಯನ್ನು ಅನುಷ್ಠಾನಗೊಳಿಸಲು ಪ್ರತಿಭಟನೆಗಳು ಶುರುವಾದವು. ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಗಳ ನೇತೃತ್ವದಲ್ಲಿ ಚಳವಳಿ ಆರಂಭವಾಯಿತು. ಕೆಲವೇ ದಿನಗಳಲ್ಲಿ ಚಳವಳಿ ರಾಜ್ಯವ್ಯಾಪಿಯಾಗಿ ಬೆಳೆಯಿತು. ನಾಡಿನ ನಾನಾ ಕ್ಷೇತ್ರಗಳ ಗಣ್ಯರು ಚಳವಳಿಗೆ ಧುಮುಕಿದರು. ಡಾ. ರಾಜಕುಮಾರ್ ಅವರು ಹೋರಾಟಕ್ಕೆ ಕೈಜೋಡಿಸಿದರು. ನಂತರ ಚಳವಳಿ ದೊಡ್ಡ ಹೋರಾಟದ ರೂಪ ಪಡೆಯಿತು. ಗೋಕಾಕ್ ವರದಿಗಾಗಿ ನಡೆದ ಚಳವಳಿ ಆರಂಭವಾದದ್ದು ಧಾರವಾಡದಲ್ಲಿ ಎಂಬುದು ಚಾರಿತ್ರಿಕ ಮಹತ್ವ ಪಡೆಯಿತು.

ಹೈಕೋರ್ಟ್‌ಗಾಗಿ ಹೋರಾಟ

ಧಾರವಾಡದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂಬ ಒತ್ತಾಯ ಏಕೀಕರಣ ಚಳವಳಿ ಸಂದರ್ಭದಲ್ಲಿಯೇ ಕೇಳಿ ಬಂದಿತ್ತು. ಆದರೆ ಅದಕ್ಕಾಗಿ ಚಳವಳಿ ತೀವ್ರವಾದದ್ದು ಸುಮಾರು ಮೂರು ದಶಕಗಳ ಹಿಂದೆ. ಪೀಠ ಸ್ಥಾಪನೆಗೆ ನಿರಂತರವಾಗಿ ಹೋರಾಟ ನಡೆಯಿತು.ಹೋರಾಟವು ಉಗ್ರ ಸ್ವರೂಪ ಪಡೆದಾಗಲೆಲ್ಲ ಸರ್ಕಾರ ಪೀಠ ಆರಂಭಿಸುವ ಭರವಸೆ ನೀಡುತ್ತಿತ್ತು.

ನಿರಂತರ ಹೋರಾಟದ ಫಲವಾಗಿ 2008ರ ಜುಲೈ 4 ರಂದು ಹೈಕೋರ್ಟ್ ಸಂಚಾರಿ ಪೀಠ ಉದ್ಘಾಟನೆಯಾಯಿತು. ಜುಲೈ 7 ರಂದು ಕಾರ್ಯಾರಂಭ ಮಾಡಿತು. ಕನ್ನಡದ ನೆಲ-ಜಲ-ಭಾಷೆಗಾಗಿ ಚಳವಳಿಗಳು ಈ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ನೂರು  ವರ್ಷಗಳಿಗಿಂತ ಹೆಚ್ಚಿನ ಇತಿಹಾಸ ಇರುವ ಕರ್ನಾಟಕ ವಿದ್ಯಾವರ್ಧಕ ಸಂಘ  ಕನ್ನಡ ಸಾಹಿತ್ಯ ಪರಿಷತ್ತಿಗಿಂತ ಹಳೆಯ ಸಂಸ್ಥೆ. ಅದು ಅನೇಕ ಚಳವಳಿಗೆ ಮಾರ್ಗದರ್ಶನ ನೀಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.