ಗುರುವಾರ , ಏಪ್ರಿಲ್ 15, 2021
22 °C

ಚಳಿಗಾಲದ ಅಧಿವೇಶನಕ್ಕೆ ತಯಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಜಾಮಾಬಾದ್ (ಪಿಟಿಐ): ಭ್ರಷ್ಟಾಚಾರದ ಆರೋಪಗಳಿಗೆ ಸಿಲುಕಿರುವ ಸರ್ಕಾರವನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ನಾಯಕ ಅನಂತಕುಮಾರ್ ಹೇಳಿದ್ದಾರೆ.ಸರ್ಕಾರ ಆರೋಪಿ ಸ್ಥಾನದಲ್ಲಿ ನಿಂತಿದೆ. ಮುಂಬರುವ ಚಳಿಗಾಲದ ಅಧಿವೇಶನ ಭಾರಿ ಕೋಲಾಹಲಕ್ಕೆ ಸಾಕ್ಷಿಯಾಗಲಿದೆ ಎಂದು ಎಲ್.ಕೆ.ಅಡ್ವಾಣಿ ಅವರ ಜನಚೇತನ ಯಾತ್ರೆಯ ಸಂಚಾಲಕರೂ ಆದ ಅನಂತಕುಮಾರ್ ಸ್ಪಷ್ಟಪಡಿಸಿದರು.ಮಾಹಿತಿ ಹಕ್ಕು ಕಾಯಿದೆಗೆ ತಿದ್ದುಪಡಿ ತರಲು ಸರ್ಕಾರ ಹವಣಿಸುತ್ತಿದೆ. ಮಹಾಲೇಖಪಾಲರನ್ನೂ ದೂಷಿಸುತ್ತಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯೊಂದಿಗೂ ಸರ್ಕಾರ ಸಹಕರಿಸುತ್ತಿಲ್ಲ. ಸುಪ್ರೀಂಕೋರ್ಟ್ ತಮ್ಮ ಕಾರ್ಯವೈಖರಿ ಮೇಲೆ ನಿಗಾ ಇಟ್ಟಿರುವುದನ್ನೂ ಸರ್ಕಾರಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಟೀಕಾಸ್ತ್ರ ಪ್ರಯೋಗಿಸಿದರು.ಅಡ್ವಾಣಿ ಭ್ರಷ್ಟಾಚಾರದ ವಿರುದ್ಧ ದೇಶವ್ಯಾಪಿ ದೊಡ್ಡ ಯಾತ್ರೆ ನಡೆಸುತ್ತಿದ್ದರೂ ಕಾಂಗ್ರೆಸ್ ಮೌನವಾಗಿದೆ.  ಎನ್‌ಡಿಎ ಆಡಳಿತ ನಡೆಸಿದಾಗ ಯಾವ ಹಗರಣವೂ ನಡೆಯದಿರುವುದೇ ಆ ಪಕ್ಷ ಸುಮ್ಮನಿರಲು ಕಾರಣ ಎಂದು ವಿವರಿಸಿದರು.2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಯುಪಿಎ ಸರ್ಕಾರದ ಬಳಿ ಯಾವ ಉತ್ತರವೂ ಇಲ್ಲ ಎಂದು ಪ್ರಹಾರ ಮಾಡಿದರು.ಚಳಿಗಾಲದ ಅಧಿವೇಶನವನ್ನು ಗಮನದಲ್ಲಿ ಇರಿಸಿಕೊಂಡೇ ಜನಚೇತನ ಯಾತ್ರೆ ನಡೆಸಲು ತೀರ್ಮಾನಿಸಲಾಯಿತು. ಬಹುಶಃ ನ.21ರಂದು ಚಳಿಗಾಲದ ಅಧಿವೇಶನ ಆರಂಭವಾಗಬಹುದು. ಹೀಗಾಗಿ ಹಬ್ಬ ಹಾಗೂ ಇನ್ನಿತರ ಕೆಲವು ವಿಶೇಷ ದಿನಗಳನ್ನು ಹೊರತುಪಡಿಸಿದರೆ ನಮಗೆ ಯಾತ್ರೆ ನಡೆಸಲು ನಮಗೆ ಲಭ್ಯವಿದ್ದುದು 38 ದಿನಗಳು ಮಾತ್ರ.ಇಷ್ಟು ದಿನಗಳಲ್ಲಿ ಇಡೀ ರಾಷ್ಟ್ರದಾದ್ಯಂತ ಯಾತ್ರೆ ನಡೆಸಲು ಆಗದು. ಹೀಗಾಗಿ ಕೆಲವು ರಾಜ್ಯಗಳಲ್ಲಿ ಯಾತ್ರೆಗೆ ಹೆಚ್ಚು ಸಮಯ ನಿಗದಿ ಮಾಡಲು ಸಾಧ್ಯವಾಗಿಲ್ಲ ಎಂದು ಅನಂತಕುಮಾರ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.