ಭಾನುವಾರ, ಮೇ 16, 2021
23 °C

ಚಾಂಪಿಯನ್ಸ್ ಲೀಗ್: ರಾಯಲ್ ಚಾಲೆಂಜರ್ಸ್‌ಗೆ ಗೇಲ್ ಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಂಪಿಯನ್ಸ್ ಲೀಗ್: ರಾಯಲ್ ಚಾಲೆಂಜರ್ಸ್‌ಗೆ ಗೇಲ್ ಬಲ

ಬೆಂಗಳೂರು: ವೆಸ್ಟ್ ಇಂಡೀಸ್‌ನ ದೈತ್ಯ ಆಟಗಾರ ಕ್ರಿಸ್ ಗೇಲ್ ಬ್ಯಾಟಿಂಗ್ ಬಲದ ಮೇಲೆ ಸಾಕಷ್ಟು ಭರವಸೆ ಇಟ್ಟು ತವರು ನೆಲದಲ್ಲಿನ ಮೊದಲ ಪಂದ್ಯದಲ್ಲಿ ಗೆಲುವು ಪಡೆಯಬೇಕು. ಇದು ಸದ್ಯಕ್ಕೆ ರಾಯಲ್ ಚಾಲೆಂಜರ್ಸ್ ಪಡೆಯ ಆಶಯ.

 

ಈ ಮೂಲಕ ವಾರಿಯರ್ಸ್ ತಂಡದ ಎದುರಿನ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸಬೇಕು ಎನ್ನುವ ಕಾತರ ಡೇನಿಯನ್ ವೆಟೋರಿ ಪಡೆಯದ್ದು. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಚಾಂಪಿಯನ್ಸ್ ಲೀಗ್ ಟೂರ್ನಿಯ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಶುಭಾರಂಭಕ್ಕಾಗಿ ಕಸರತ್ತು ನಡೆಸಲಿವೆ.ಈ ಹಿಂದೆ ಉಭಯ ತಂಡಗಳಿಗೂ ಪ್ರಶಸ್ತಿ ಜಯಿಸಲು ಒಂದು ವಿಜಯ ಸಾಕಿತ್ತು. ಆದರೆ ಅದು ಸಾಧ್ಯವಾಗದೇ ನಿರಾಸೆಯ ಮೊಗ ಹೊತ್ತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಆದರೆ ಈ ಸಲದ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆಲುವಿನ ಮೂಲಕವೇ ಪ್ರಶಸ್ತಿ ಜಯಿಸುವ ಅಭಿಯಾನಕ್ಕೆ ಚಾಲನೆ ನೀಡಬೇಕು ಎನ್ನುವ ಕನಸು ಆರ್‌ಸಿಬಿ ಹಾಗೂ ವಾರಿಯರ್ಸ್ ತಂಡಗಳದ್ದು.ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಾಲ್ಕನೇ ಆವೃತ್ತಿಯ ಫೈನಲ್‌ನಲ್ಲಿ ಆರ್‌ಸಿಬಿ ಮುಗ್ಗರಿಸಿದರೆ, ವಾರಿಯರ್ಸ್ ಕಳೆದ ಸಲದ ಚಾಂಪಿಯನ್ಸ್ ಟೂರ್ನಿಯಲ್ಲಿ ರನ್ನರ್ ಆಪ್ ಆಗಿತ್ತು. ಎರಡೂ ತಂಡಗಳು ಶರಣಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು. ಆದ್ದರಿಂದಲೇ ಮೊದಲ ಪಂದ್ಯದಿಂದಲೇ ಗೆಲುವಿನ ಯಾತ್ರೆ ಆರಂಭಿಸಬೇಕು ಎನ್ನುವ ಬಯಕೆ ಉಭಯ ತಂಡಗಳದ್ದಾಗಿವೆ.ಐಪಿಎಲ್ ನಾಲ್ಕನೇ ಆವೃತ್ತಿಯಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ ಕ್ರಿಸ್ ಗೇಲ್ ಆರ್‌ಸಿಬಿ ತಂಡದ ಬ್ಯಾಟಿಂಗ್‌ನ ಬಲ ಎನಿಸಿದ್ದಾರೆ. ಇದಕ್ಕೆ ಎ.ಬಿ. ಡಿವಿಲಿಯರ್ಸ್, ತಿಲಕರತ್ನೆ ದಿಲ್ಶಾನ್ ಹಾಗೂ ಮೊಹಮ್ಮದ್ ಕೈಫ್ ನೆರವು ಅಗತ್ಯ. ತಂಡಕ್ಕೆ ಬೌಲಿಂಗ್ ಶಕ್ತಿ ಎನಿಸಿದ್ದ ವೇಗಿ ಜಹೀರ್ ಖಾನ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂಗ್ಲೆಂಡ್ ಪ್ರವಾಸದ ವೇಳೆ ಈ ಆಟಗಾರ ಗಾಯಗೊಂಡಿದ್ದರು.

ಆದ್ದರಿಂದ ಈ ಟೂರ್ನಿಯಲ್ಲಿ ಆಡುತ್ತಿಲ್ಲ. ಇದು ವಾರಿಯರ್ಸ್ ತಂಡಕ್ಕೆ ಅನುಕೂಲವಾಗಬಹುದು. ಜಹೀರ್ ಅನುಪಸ್ಥಿತಿಯನ್ನು ಸಮರ್ಥವಾಗಿ ಮೆಟ್ಟಿನಿಲ್ಲಬಲ್ಲ ವಿಶ್ವಾಸ ಯುವ ಆಟಗಾರರಾದ ಎಸ್. ಅರವಿಂದ್ ಹಾಗೂ ಅಭಿಮನ್ಯು ಮಿಥುನ್ ಅವರದ್ದು.ಗೇಲ್ ಈ ಸಲದ ಐಪಿಎಲ್‌ನಲ್ಲಿ 12 ಪಂದ್ಯಗಳಿಂದ 608 ರನ್ ಗಳಿಸಿ ಕ್ರೀಡಾ ಪ್ರೇಮಿಗಳ ಮನ ಗೆದ್ದಿದ್ದರು. ಆದ್ದರಿಂದ ಗೇಲ್ ಮತ್ತೆ ರನ್ ಹೊಳೆ ಹರಿಸಬಹುದು ಎನ್ನುವ ನಿರೀಕ್ಷೆ. ಈ ನಿರೀಕ್ಷೆ ನಿಜವಾದರೆ, ಬೆಂಗಳೂರಿನ ತಂಡಕ್ಕೆ ಗೆಲುವು ಕಷ್ಟವೇನಲ್ಲ. ಬುಧವಾರವಷ್ಟೇ 32ನೇ ವರ್ಷದ ಜನ್ಮದಿನ ಆಚರಿಸಿಕೊಂಡ `ಬರ್ತ್ ಡೇ ಬಾಯ್~ ಗೇಲ್ ತಮ್ಮ ಬ್ಯಾಟ್ ಮೂಲಕವೇ ತಂಡಕ್ಕೆ ಗೆಲುವಿನ ಉಡುಗೊರೆ ನೀಡುವ ಕಾತರದಲ್ಲಿದ್ದಾರೆ.ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಆಗಮಿಸಿದ ದಿಲ್ಶಾನ್ ಸೇರಿದಂತೆ ಇತರ ಆಟಗಾರರು ಗುರುವಾರ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು. ಇದೊಂದು ರೀತಿಯಲ್ಲಿ ಗೇಲ್ ಹಾಗೂ ವಾರಿಯರ್ಸ್ ನಡುವಿನ ಹೋರಾಟವೆನ್ನಬಹುದು. ಆದರೆ ವಾರಿಯರ್ಸ್ ತಂಡವನ್ನು ಸುಲಭವಾಗಿ ಪರಿಗಣಿಸುವಂತಿಲ್ಲ. ಜೊಹಾನ್ ಬೋಥಾ, ಕಾಲಿನ್ ಇಂಗ್ರಾಮ್ ಈ ತಂಡದ ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ.ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಡೇನಿಯಲ್ ವೆಟೋರಿ (ನಾಯಕ), ಕ್ರಿಸ್ ಗೇಲ್, ಎ.ಬಿ. ಡಿವಿಲಿಯರ್ಸ್, ತಿಲಕರತ್ನೆ ದಿಲ್ಶಾನ್, ವಿರಾಟ್ ಕೊಹ್ಲಿ, ಮೊಹಮ್ಮದ್ ಕೈಫ್, ಮಯಂಕ್ ಅಗರವಾಲ್,      ಶ್ರೀನಾಥ್ ಅರವಿಂದ್, ಅರುಣ್ ಕಾರ್ತಿಕ್, ರಾಜು ಭಟ್ಕಳ, ಅಭಿಮನ್ಯು ಮಿಥುನ್, ಡಿರ್ಕ್ ನಾನೆಸ್, ಅಸಾದ್ ಖಾನ್ ಪಠಾಣ್, ಜಮಾಲುದ್ದೀನ್ ಸಯ್ಯದ್ ಮೊಹಮ್ಮದ್ ಹಾಗೂ ಸೌರಭ್ ತಿವಾರಿ.ವಾರಿಯರ್ಸ್: ಜೊಹಾನ್ ಬೋಥಾ (ನಾಯಕ), ನಿಕಿ ಬೋಯೆ, ಮಾರ್ಕ್ ಬೌಷರ್, ಕಾಲಿನ್ ಇಂಗ್ರಾಮ್, ಆ್ಯಂಡ್ರ್ಯೂ ಬಿರ್ಚ್, ಜಸ್ಟಿನ್ ಕ್ರೂಶ್, ಲೈಲಾ ಮೆಯರ್, ಮಖಾಯ್ ಎಂಟಿನಿ, ವೇಯ್ನ ಪಾರ್ನೆಲ್, ಆಶ್ವೆಲ್ ಪ್ರಿನ್ಸ್, ಜಾನ್ ಸ್ಮಟ್ಸ್, ಕೆಲ್ಲಿ ಸ್ಮಟ್ಸ್, ರಸ್ಟಿ ಥೆರಾನ್, ಕ್ರೆಗ್ ತಯ್ಸೆನ್, ಲೊನ್ವಾಬೊ ಸೊಸೊಬೆ.

ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ಆರಂಭ: ರಾತ್ರಿ 8.00 ಕ್ಕೆ

ನೇರ ಪ್ರಸಾರ: ಸ್ಟಾರ್ ಕ್ರಿಕೆಟ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.