ಭಾನುವಾರ, ಫೆಬ್ರವರಿ 28, 2021
31 °C

ಚಾಮರಾಜೇಶ್ವರ ರಥೋತ್ಸವಕ್ಕೆ ಜನಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜೇಶ್ವರ ರಥೋತ್ಸವಕ್ಕೆ ಜನಸಾಗರ

ಚಾಮರಾಜನಗರ: ನಗರದಲ್ಲಿ ಬುಧವಾರ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಆಷಾಢ ಮಾಸದಲ್ಲಿ ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಮಂದಿ ಸಾಕ್ಷಿ ಯಾದರು. ಬೆಳಿಗ್ಗೆ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನ ನೆರವೇರಿಸಲಾಯಿತು. ಬಳಿಕ ದೇವರ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿನಾಯಕ ರಥ, ಚಂಡಿಕೇಶ್ವರ ರಥ, ಸುಬ್ರಮಣ್ಯ ರಥ ಮುಂದೆ ಚಲಿಸಿದರು. ಅವುಗಳ ಹಿಂದೆಯೇ ಚಾಮರಾಜೇಶ್ವರ ಸ್ವಾಮಿಯ ದೊಡ್ಡ ರಥ ಹಾಗೂ ಕೆಂಪನಂಜಾಂಬ ದೇವಿಯ ರಥ ಚಲಿಸಿತು. ರಥ ಚಲಿಸುತ್ತಿದ್ದ ಬೀದಿಬದಿಯಲ್ಲಿ ಸಾಲುಗಟ್ಟಿ ನಿಂತಿದ್ದ ಭಕ್ತರು ಜವನ-ಬಾಳೆಹಣ್ಣು ಎಸೆದು ಪುನೀತರಾದರು.ರಥವು ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಬಳಿಗೆ ಬರುವ ವೇಳೆಗೆ ಸೂರ್ಯ ಕಾದುಕೆಂಡವಾಗಿದ್ದ. ಆದರೆ, ಭಕ್ತರ ಉತ್ಸಾಹ ಕಡಿಮೆಯಾಗಿರಲಿಲ್ಲ. ರಥದಲ್ಲಿ ಡೋಲಿನ ಸದ್ದು ಹೆಚ್ಚುತ್ತಿತ್ತು. ರಥದ ಮುಂಭಾಗದಲ್ಲಿ ಯುವಕರು ಮುಖಕ್ಕೆ ಬಣ್ಣ ಮೆತ್ತಿಕೊಂಡು ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದರು. ಗೊರವರ ಕುಣಿತದ ಕಲಾವಿದರು ಕೂಡ ನೃತ್ಯ ಪ್ರದರ್ಶಿಸಿದರು.ರಥದ ಬೀದಿ, ಗುರುನಂಜನಶೆಟ್ಟರ ಛತ್ರ, ಮಹಾವೀರ ವೃತ್ತ, ವೀರಭದ್ರಶ್ವರಸ್ವಾಮಿ ದೇಗುಲದಿಂದ ಹಳೆ ಬಸ್‌ನಿಲ್ದಾಣ, ನೃಪತುಂಗ ವೃತ್ತದ ಮೂಲಕ ರಥವು ದೇವಸ್ಥಾನಕ್ಕೆ ಮರಳಿದಾಗ ಮಧ್ಯಾಹ್ನ 3.15ಗಂಟೆಯಾಗಿತ್ತು. ರಥ ಶಿಥಿಲಗೊಂಡಿದ್ದ ಪರಿಣಾಮ ಸ್ವಸ್ಥಾನಕ್ಕೆ ಮರಳುವ ವೇಳೆಗೆ ಭಕ್ತರು ನಿಟ್ಟುಸಿರು ಬಿಟ್ಟರು.ವರ್ತಕರ ಸಂಘ ಮತ್ತು ವಿವಿಧ ಸಂಘಟನೆಗಳಿಂದ ಅನ್ನ ಸಂತರ್ಪಣೆ ನಡೆಯಿತು. ದೇವಸ್ಥಾನದ ಅಕ್ಕಪಕ್ಕದಲ್ಲಿ ಸೇವಾ ಸಂಸ್ಥೆಗಳಿಂದ ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು. ಬಿಸಿಲಿನ ಝಳದಿಂದ ತತ್ತರಿಸಿದ ನಾಗರಿಕರು, ಮಜ್ಜಿಗೆ ಕುಡಿದು ದಣಿವಾರಿಸಿಕೊಂಡರು. ರಾಜಸ್ತಾನ ಸಮಾಜದಿಂದ ಭಕ್ತರಿಗೆ 20 ಸಾವಿರ ಲಾಡು ವಿತರಿಸಲಾಯಿತು. ದೇವಸ್ಥಾನದ ಮುಂಭಾಗ ಭಕ್ತರು ತೆಂಗಿನಕಾಯಿ ಒಡೆದು ಭಕ್ತ ಸಮರ್ಪಿಸಿದರು.ಶಾಸಕ ಸಿ. ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಸೆಲ್ವಿಬಾಬು, ಪೌರಾಯುಕ್ತ ವಿ.ಎಚ್. ಕೃಷ್ಣಮೂರ್ತಿ, ಚೂಡಾ ಅಧ್ಯಕ್ಷ ಎಸ್. ಬಾಲಸುಬ್ರಮಣ್ಯ, ಜಿಲ್ಲಾಧಿಕಾರಿ ಕೆ.ಆರ್. ಸುಂದರ್, ಉಪ ವಿಭಾಗಾಧಿಕಾರಿ ಎ.ಬಿ. ಬಸವರಾಜು, ತಹಶೀಲ್ದಾರ್ ಆರ್. ರಂಗಸ್ವಾಮಯ್ಯ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.