ಶನಿವಾರ, ಮೇ 21, 2022
27 °C

ಚಾಮುಂಡಿಗೆ ದರ್ಶನ್ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ನ್ಯಾಯಾಂಗ ಬಂಧನದಲ್ಲಿ ಇದ್ದು, ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಚಿತ್ರನಟ ದರ್ಶನ್ ಕುಟುಂಬ ಸಮೇತರಾಗಿ ಶನಿವಾರ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್, ತಾಯಿ ಮೀನಾ ತೂಗುದೀಪ, ಸಹೋದರ ದಿನಕರ್ ಜೊತೆಯಲ್ಲಿ ಸಂಜೆ 7 ಗಂಟೆಗೆ ದೇವಸ್ಥಾನಕ್ಕೆ ಬಂದ ದರ್ಶನ್ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಮೇಲ್ಛಾವಣಿಗೆ ತೆರಳಿದ ಅವರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿ ನಗೆ ಬೀರಿದರು.  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಜೀವನದಲ್ಲಿ ಮತ್ತೊಮ್ಮೆ ತಪ್ಪು ಮಾಡುವುದಿಲ್ಲ. ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ಅವರಿಗೆ ಋಣಿಯಾಗಿರುತ್ತೇನೆ. ನನ್ನಿಂದ ಚಿತ್ರರಂಗಕ್ಕೆ ಯಾವುದೇ ತೊಂದರೆ ಆಗುವುದಿಲ್ಲ~ ಎಂದು ಚುಟುಕಾಗಿ ಉತ್ತರಿಸಿದರು.ದರ್ಶನ್ ಬರುವಿಕೆಯನ್ನು ಅರಿತ ಅಭಿಮಾನಿಗಳು ಮಧ್ಯಾಹ್ನ 3 ಗಂಟೆಯಿಂದಲೇ ಚಾಮುಂಡಿ ಬೆಟ್ಟಕ್ಕೆ ಆಗಮಿಸತೊಡಗಿದರು. ಸುಮಾರು 4 ತಾಸು ನೆಚ್ಚಿನ ನಟನನ್ನು ನೋಡಲು ಕಾದು ಕುಳಿತರು. ದರ್ಶನ್ ಕಾರಿನಲ್ಲಿ ಬರುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದರು. ಪಟಾಕಿಗಳನ್ನು ಸಿಡಿಸಿ ಈಡುಗಾಯಿಗಳನ್ನು ಒಡೆದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡಿದರು. ದೇವಸ್ಥಾನಕ್ಕೆ ಬರುವ ಮುನ್ನ ದರ್ಶನ್ ತಿ.ನರಸೀಪುರ ರಸ್ತೆಯಲ್ಲಿರುವ ತೋಟದ ಮನೆಗೆ ತೆರಳಿದ್ದರು.ಅನಿತಾ ಭೇಟಿ: ದರ್ಶನ್ ಕುಟುಂಬ ಸಮೇತರಾಗಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ವೇಳೆಗೆ ಶಾಸಕಿ ಅನಿತಾ ಕುಮಾರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. `ಮೈಸೂರಿನಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದು, ಪೂಜೆ ಸಲ್ಲಿಸಲು ಬೆಟ್ಟಕ್ಕೆ ಬಂದಿದ್ದೇನೆ~ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.