ಸೋಮವಾರ, ಏಪ್ರಿಲ್ 12, 2021
26 °C

ಚಿಕ್ಕಬಳ್ಳಾಪುರ: ನಕ್ಸಲ್ ಬೆಂಬಲಿತ ಉಪನ್ಯಾಸಕರು?

ಪ್ರಜಾವಾಣಿ ವಾರ್ತೆ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಕ್ಸಲರ ಪತ್ತೆಗಾಗಿ ನಕ್ಸಲ್ ನಿಗ್ರಹ ಪಡೆಯು ಮಡಿಕೇರಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಬೆನ್ನಲ್ಲೇ  ನಗರದ ಸರ್ಕಾರಿ ಪ್ರಥಮ ಕಾಲೇಜಿನ ನಾಲ್ವರು ಉಪನ್ಯಾಸಕರು ಸೇರಿದಂತೆ ಇತರ ಕಾಲೇಜುಗಳ ಒಟ್ಟು ಎಂಟು ಉಪನ್ಯಾಸಕರು ಮತ್ತು ಶಿಕ್ಷಣ ಇಲಾಖೆ ವ್ಯವಸ್ಥಾಪಕರು ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ವಿವಿಧ ಸಂಘಟನೆಗಳು ಪೊಲೀಸರಿಗೆ ದೂರು ನೀಡಿವೆ.ಚಿಂತಾಮಣಿ, ದೊಡ್ಡಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರಿನ ಕಾಲೇಜುಗಳಲ್ಲಿ ಆರೋಪಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.ಚಿಕ್ಕಬಳ್ಳಾಪುರದ ನಾಗರಿಕ ಹಿತರಕ್ಷಣಾ ಸಮಿತಿ ಸಂಚಾಲಕರು, ಕೋಲಾರದ ಪ್ರಜಾ ವಿಮೋಚನಾ ಚಳವಳಿ ಮುಖಂಡರು ಮತ್ತು ವಿವಿಧ ಸಂಘಟನೆಗಳ ಸದಸ್ಯರು, ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹೆಬ್ರಿ, ಕಾರ್ಕಳ, ಉಡುಪಿಯ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಆರೋಪಿ ಉಪನ್ಯಾಸಕರ ವಿರುದ್ಧ ಪೊಲೀಸರಿಗೆ, ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ದೊಡ್ಡಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಂತಾಮಣಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೋಲಾರದ ಬಾಲಕರ ಸರ್ಕಾರಿ ಕಾಲೇಜಿನಲ್ಲಿ ಆರೋಪಿ ಉಪನ್ಯಾಸಕರು ಮತ್ತು ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಯ ವ್ಯವಸ್ಥಾಪಕರು ನಕ್ಸಲ್ ಚಟವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಕಾಲೇಜು ಶಿಕ್ಷಣ ಇಲಾಖೆಯು ತನ್ನ ಕೇಂದ್ರ ಕಚೇರಿಯ ವ್ಯವಸ್ಥಾಪಕ ಮತ್ತು ಎಂಟು ಮಂದಿ ಉಪನ್ಯಾಸಕರಿಗೆ ನೋಟಿಸ್ ಹೊರಡಿಸಿದೆ. `ದೂರಿನಲ್ಲಿ ಪ್ರಸ್ತಾಪಿಸಿರುವ ಸಂಗತಿಗಳ ಬಗ್ಗೆ ನೋಟಿಸ್ ತಲುಪಿದ 15 ದಿನದಲ್ಲಿ ದೂರುಗಳ ಕುರಿತು ಸ್ಪಷ್ಟವಾದ ವಿವರಣೆ ನೀಡಬೇಕು. ತಪ್ಪಿದ್ದಲ್ಲಿ, ನಿಮ್ಮ ವಿವರಣೆ ಏನೂ ಇಲ್ಲವೆಂದು ಭಾವಿಸಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು~ ಎಂದು ಎಚ್ಚರಿಕೆ ನೀಡಿದೆ.`ವಿವಿಧ ಸಂಘಟನೆಗಳ ಮುಖಂಡರು 2012ರ ಜೂನ್ 6ರಂದು ಪೊಲೀಸರಿಗೆ ದೂರು ನೀಡಿದ್ದಲ್ಲದೆ ರಾಜ್ಯಪಾಲರಿಗೂ ಪತ್ರ ಬರೆದಿದ್ದಾರೆ. ಅದರ ಪ್ರತಿ ಮುಖ್ಯಮಂತ್ರಿ, ಸಚಿವರಿಗೂ ಕಳಿಸಿದ್ದರು. ಆ ದೂರಿನ ಆಧಾರದ ಮೇಲೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಜುಲೈ 5ರಂದು ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆದು, ದೂರು ಕುರಿತು  ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಅದರ ಆಧಾರದ ಮೇಲೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯು ಸೆಪ್ಟೆಂಬರ್ 9ರಂದು ಎಲ್ಲ ಒಂಬತ್ತು ಮಂದಿಗೆ ನೋಟಿಸ್ ಹೊರಡಿಸಿದೆ. ವಿವರಣೆ ನೀಡುವಂತೆ ಸೂಚಿಸಿದೆ~ ಎಂದು ಉಪನ್ಯಾಸಕರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.`ವಿವಿಧ ಸಂಘಟನೆಗಳು ಈ ರೀತಿಯ ದೂರುಗಳನ್ನು ನೀಡಿ, ನೆಮ್ಮದಿ ಹಾಳು ಮಾಡಿವೆ. ಪ್ರತಿನಿತ್ಯ ಮಾನಸಿಕ ಕಿರಿಕಿರಿ ಅನುಭವಿಸುತ್ತಿರುವ ನಮಗೆ ದಿಕ್ಕೇ ತೋಚದಂತಾಗಿದೆ. ನಕ್ಸಲ್ ಚಟುವಟಿಕೆ ಗಂಧ-ಗಾಳಿ ಗೊತ್ತಿರದ ನಮಗೆ ಅನಗತ್ಯ ತೊಂದರೆ ನೀಡಲಾಗುತ್ತಿದೆ. ಕಾಲೇಜಿನಲ್ಲಿ ಸಾಧನೆ ಮಾಡಿದರೆ ಅಥವಾ ಒಳ್ಳೆಯ ವ್ಯಕ್ತಿ ಎನಿಸಿಕೊಂಡರೆ ಸಾಕು, ನಮ್ಮ ವಿರುದ್ಧ ದೂರು ನೀಡಲಾಗುತ್ತದೆ. ದೂರು ನೀಡಿರುವ ಸಂಘಟನೆಗಳಿಗೆ ನಕ್ಸಲ್ ಚಟುವಟಿಕೆ ಮತ್ತು ಸಿದ್ಧಾಂತದ ಕುರಿತು ಸಂಪೂರ್ಣ ಅರಿವು ಇದ್ದಂತಿದೆ. ಪೊಲೀಸರು ಅವರನ್ನೇ ಮೊದಲು ವಿಚಾರಣೆ ಒಳಪಡಿಸಿ, ಮಾಹಿತಿ ತೆಗೆದುಕೊಳ್ಳಲಿ~ ಎಂದೂ ಅವರು ಹೇಳುತ್ತಾರೆ.`ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿ ಅಮಾಯಕ ಉಪನ್ಯಾಸಕರನ್ನು ಬೆದರಿಸುವ ತಂತ್ರ ಅಲ್ಲಲ್ಲಿ ಕಂಡು ಬರುತ್ತಿದೆ. ಶಿವಮೊಗ್ಗದ ಉಪನ್ಯಾಸಕರ ವಿರುದ್ಧವೂ ಇದೇ ರೀತಿ ದೂರು ನೀಡಲಾಗಿತ್ತು. ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲು ನವೆಂಬರ್‌ನಲ್ಲಿ ಆಯಾ ಕಾಲೇಜುಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸುತ್ತೇವೆ. ಪ್ರಕರಣದ ಕುರಿತು ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಪ್ರಕರಣದ ಸತ್ಯಾಂಶ ಬಹಿರಂಗಪಡಿಸಬೇಕು~ ಎಂದು ಪ್ರಜಾಸತ್ತಾತ್ಮಕ ಜನರ ವೇದಿಕೆ (ಪಿಡಿಎಫ್) ಸಂಘಟನೆ ಸಂಚಾಲಕ ಪ್ರೊ.ನಗರಿಬಾಬಯ್ಯ ಆಗ್ರಹಿಸಿದ್ದಾರೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.