ಗುರುವಾರ , ಜುಲೈ 29, 2021
24 °C

ಚಿತ್ರಕಲೆ ಎಲ್ಲರನ್ನು ತಲುಪುವ ಮಾಧ್ಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಚಿತ್ರಕಲೆ ಎಲ್ಲ ವರ್ಗದ ಜನರನ್ನು ಸಮಾನವಾಗಿ ತಲುಪುವಂಥ ಮಾಧ್ಯಮ’ ಎಂದು ಹಾಸನದ ಎಸ್‌ಡಿಎಂ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರಸನ್ನ ಎನ್.ರಾವ್ ನುಡಿದರು.ಚಿತ್ಕಲಾ ಫೌಂಡೇಶನ್, ಹಾಸನ ಜಿಲ್ಲಾ ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಹಾಸನ ಜಿಲ್ಲಾ ಸರ್ಕಾರಿ ನೌಕರರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಕಲಾಭವನದಲ್ಲಿ ಆಯೋಜಿಸಿರುವ ಎಸ್.ಆರ್. ವೆಂಕಟೇಶ್ ಅವರ ಕಲಾ ಕೃತಿಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಬರವಣಿಗೆ, ಭಾಷಣ ಮುಂತಾದ ಕಲೆಗಳಿಗೆ ಕೆಲವು ಇತಿಮಿತಿಗಳಿವೆ. ಅವು ಎಲ್ಲರನ್ನೂ ಸಮಾನವಾಗಿ ತಟ್ಟಲಾರವು. ಆದರೆ ಚಿತ್ರಕಲೆ ಇವುಗಳನ್ನು ಮೀರಿದ್ದು. ಎಲ್ಲ ವರ್ಗದ ಜನರನ್ನೂ ಅದು ಸಮಾನವಾಗಿ ತಟ್ಟುತ್ತದೆ. ಇಂಥ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲೂ ಚಿತ್ರಕಲೆಯ ಬಗ್ಗೆ ಆಸಕ್ತಿ ಹುಟ್ಟಿಸಲು ಸಾಧ್ಯವಾಗುತ್ತದೆ’ ಎಂದು ಅವರು ನುಡಿದರು.ಕಲಾವಿದ ವೆಂಕಟೇಶ್ ಮಾತನಾಡಿ, ‘ಚಿತ್ರಕಲೆ ಇತರ ಕಲೆಗಳಂತಲ್ಲ. ಇದು ಮೌನ ಮಾಧ್ಯಮ. ಕಲಾ ಕೃತಿ ಮೌನವಾಗಿದ್ದರೂ ಸಹೃದಯನಿಗೆ ಅದು ಅನೇಕ ವಿಚಾರಗಳನ್ನು ತಿಳಿಸುತ್ತದೆ. ನೋಡುಗರೊಂದಿಗೆ ಸಂವಹನ ನಡೆಸುವುದರಲ್ಲೇ ಚಿತ್ರಕಲೆಯ ಸಾರ್ಥಕತೆ ಇದೆ’ ಎಂದರು.ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ, ‘ಹಾಸನದಲ್ಲಿ ಚಿತ್ರ ಕಲೆಯ ಭವ್ಯ ಪರಂಪರೆ ಇದ್ದರೂ ಈಚೆಗೆ ಅದರತ್ತ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿದ್ದೇವೆ. ಅದನ್ನು ಪುನರುಜ್ಜೀವನ ಮಾಡುವ ಕಾರ್ಯ ಮಾಡಬೇಕಾಗಿದೆ. ಐತಿಹಾಸಿಕವಾಗಿ ನೋಡಿದರೂ ನಮ್ಮಲ್ಲಿ ಒಂದು ಪರಂಪರೆಯನ್ನು ವಿಕೃತಗೊಳಿಸುವ ಹುನ್ನಾರವೇ ನಡೆದಿರುವುದು ವ್ಯಕ್ತವಾಗುತ್ತದೆ’ ಎಂದರು.ಎಚ್.ಎನ್. ಶಿವಣ್ಣ, ವಿಜಯ ನಾಗ್ವೇಕರ್, ಡಾ. ಮೋಹನ ರಾವ್, ಎಂ. ನಾಗರಾಜ, ಟಿ.ಎಚ್. ಅಪ್ಪಾಜಿಗೌಡ ಮತ್ತಿತರರು ವೇದಿಕೆಯಲ್ಲಿದ್ದರು. ಹಾಸನದ ವಿವಿಧ ಶಾಲೆ ಮಕ್ಕಳು ಚಿತ್ರಗಳನ್ನು ಬಿಡಿಸುವ ಮೂಲಕ ಕಲಾವಿದ ಎಸ್.ಆರ್. ವೆಂಕಟೇಶ್ ಅವರಿಗೆ ಚಿತ್ರಾಭಿಷೇಕ ನಡೆಸಿದರು. ಚಿತ್ಕಲಾ ಫೌಂಡೇಶನ್ ಅಧ್ಯಕ್ಷ ಬಿ.ಎಸ್. ದೇಸಾಯಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.ಪ್ರದರ್ಶನ ಮೇ 4ರವರೆಗೆ ನಡೆಯಲಿದ್ದು, ಪ್ರದರ್ಶನದ ಅಂಗವಾಗಿ ಮಕ್ಕಳಿಗೆ ತರಬೇತಿ ಸೇರಿದಂತೆ ಪ್ರತಿ ದಿನ ವಿವಿಧ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.