ಶುಕ್ರವಾರ, ಜೂಲೈ 10, 2020
26 °C

ಚಿನ್ನದ ಹುಡುಗನಿಗೆ ವಿಜ್ಞಾನಿ ಆಗುವಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ‘ಅತಿಹೆಚ್ಚು ಚಿನ್ನದ ಪದಕಗಳು ಬಂದಿದ್ದಕ್ಕೆ ತುಂಬಾ ಖುಷಿ ಆಗಿದೆ. ಜ್ಞಾನದ ಹಸಿವು ಇಲ್ಲಿಗೇ ಮುಗಿದಿಲ್ಲ. ಮುಂದೆ ವಿದೇಶದಲ್ಲಿ ಓದಿ ವಿಜ್ಞಾನಿ ಆಗುವ ಆಸೆ ಇದೆ’....ಹೀಗೆಂದು ಅಭಿಪ್ರಾಯ ಹಂಚಿಕೊಂಡವರು ಬೀದರ್ ತಾಲ್ಲೂಕಿನ ಕಮಠಾಣ ಸಮೀಪ ಇರುವ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ನಾಲ್ಕನೇ ಘಟಿಕೋತ್ಸವದಲ್ಲಿ ಏಳು ಚಿನ್ನದ ಪದಕ ಬಾಚಿಕೊಂಡ ಎಚ್.ಬಿ. ರಾಕೇಶ.ಬೆಂಗಳೂರಿನ ಹೆಬ್ಬಾಳ ಪಶು ಮಹಾವಿದ್ಯಾಲಯದ ಬಿ.ವಿ.ಎಸ್ಸಿ ಆಯಂಡ್ ಎ.ಎಚ್. ವಿದ್ಯಾರ್ಥಿ ರಾಕೇಶ, ಡಾ.ಆರ್.ಡಿ. ನಿರಂಜಯ್ಯ ಸ್ಮರಣಾರ್ಥ ಎರಡು ಚಿನ್ನದ ಪದಕ, ದಿ ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 304-ಎಸ್ ಚಿನ್ನದ ಪದಕ, ಆರ್. ಗುಂಡೂರಾವ್- ಎಫ್.ಎಂ. ಖಾನ್ ಚಿನ್ನದ ಪದಕ, ಕರ್ನಾಟಕ ವೆಟರ್ನರಿ ಅಸೋಸಿಯೇಶನ್ ಚಿನ್ನದ ಪದಕ ಮತ್ತು ಶ್ರೀಮತಿ ಬಿ. ಹೊಸಳ್ಳಿ ಗುಲ್ಲಮ್ಮ ಚಿನ್ನದ ಪದಕ ಸೇರಿದಂತೆ ಅತಿ ಹೆಚ್ಚು ಪದಕ ಪಡೆದು ಗಮನ ಸೆಳೆದಿದ್ದಾರೆ.ಪಶು ಸಂಗೋಪನಾ ಸಚಿವ ಹಾಗೂ ಸಹಕುಲಾಧಿಪತಿ ರೇವುನಾಯಕ್ ಬೆಳಮಗಿ ಪದಕ ಪ್ರದಾನ ಮಾಡಿದರು. ಭಾರತೀಯ ಕೃಷಿ ವಿಜ್ಞಾನಿಗಳ ಆಯ್ಕೆ ಮಂಡಳಿ ಅಧ್ಯಕ್ಷ ಡಾ. ಸಿ.ಡಿ. ಮಾಯೆ, ಕುಲಪತಿ ಪ್ರೊ. ಸುರೇಶ ಹೊನ್ನಪ್ಪಗೋಳ್ ಮತ್ತಿತರರು ಉಪಸ್ಥಿತರಿದ್ದರು.ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಕೂಲಂಬಿ ಗ್ರಾಮದವರಾದ ರಾಕೇಶ ಕೃಷಿ ಕುಟುಂಬದಿಂದ ಬಂದವರು. ತಂದೆ ಬಸಲಿಂಗಪ್ಪ ಮತ್ತು ತಾಯಿ ಶಂಕರಮ್ಮ. ನನ್ನೆಲ್ಲ ಪದಕಗಳು ನನ್ನ ತಂದೆ ತಾಯಿಯವರಿಗೆ ಸಲ್ಲಬೇಕು ಎಂದು ಭಾವಾವೇಶದಿಂದ ನುಡಿಯುತ್ತಾರೆ.ಇನ್ನು ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ಉದ್ದೇಶ ಇದೆ. ನಂತರ ವಿಜ್ಞಾನಿ ಆಗಿ ಸ್ವಂತ ಊರು, ಸಮಾಜ ಮತ್ತು ದೇಶಕ್ಕಾಗಿ ಕೆಲಸ ಮಾಡುವ ಬಯಕೆ ಇದೆ ಎಂದು ವಿವರಿಸುತ್ತಾರೆ. ರಾಕೇಶ ಸದ್ಯ ಉತ್ತರ ಪ್ರದೇಶದ ರಾಯಬರೇಲಿ ಐವಿಆರ್‌ಐನಲ್ಲಿ ಎನಿಮಲ್ ಗೈನೋಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.