ಭಾನುವಾರ, ಜೂನ್ 13, 2021
25 °C

ಚಿನ್ನ: ಹೂಡಿಕೆಯ ಜಾಣ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು. ಈ ಕುರಿತು ಇತ್ತೀಚೆಗೆ ನಡೆಸಿದ ಸಮೀಕ್ಷೆಯೂ ಇದನ್ನು  ಸ್ಪಷ್ಟಪಡಿಸಿದೆ. ಇಂದು ಮಹಿಳೆಯರೂ ಕುಟುಂಬದ ಜವಾಬ್ದಾರಿಯನ್ನೂ ಹೊರುತ್ತಿದ್ದಾರೆ, ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿದ್ದಾರೆ. ಮಹಿಳೆಯರ ಸಂಪಾದನೆಯೂ ಹೆಚ್ಚುತ್ತಿದೆ. ಒಂದೆಡೆ ವರಮಾನ ಹೆಚ್ಚಿದಂತೆ ಖರ್ಚಿನ ಪ್ರಮಾಣವೂ ಹೆಚ್ಚಾಗ್ದ್ದಿದರೆ ಇನ್ನೊಂದೆಡೆ ಉಳಿತಾಯದ ಪ್ರಮಾಣದಲ್ಲಿಯೂ ಹೆಚ್ಚಳ ಕಂಡುಬಂದಿದೆ.ಕುಟುಂಬವೊಂದರ ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡಲ್ಲಿ, ಹಣಕಾಸು ವಿಷಯಗಳು ಸೇರಿದಂತೆ   ಎಲ್ಲಾ ವಿಷಯಗಳಲ್ಲಿಯೂ ಮಹಿಳೆ, ಪುರುಷನಿಗೆ ಸರಿಸಮಾನವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾಳೆ. ಅಲ್ಲದೇ ಉಳಿತಾಯದ ವಿಷಯಕ್ಕೆ ಬಂದಾಗ ಬಹುಶಃ ಪುರುಷನಿಗಿಂತ ಆಕೆಯೇ ಖಚಿತವಾಗಿ ಉಳಿತಾಯದ ಮಾರ್ಗಗಳನ್ನು ಕಂಡುಕೊಳ್ಳುತ್ತಾಳೆ.ಹಿಂದೆಲ್ಲಾ ಚಿನ್ನಾಭರಣಗಳ ಖರೀದಿಯೇ ದೊಡ್ಡ ಸಂಪತ್ತು ಎಂದು ಭಾವಿಸಲಾಗಿತ್ತು.  ಅಷ್ಟೇ ಅಲ್ಲ, ಅದೊಂದು ಹಣ ಹೂಡಿಕೆಯ ದೊಡ್ಡ ಮಾರ್ಗ ಎಂದೂ ಪರಿಗಣಿಸಲಾಗಿತ್ತು.

 

ಆದರೆ, ಇಂದು ಪರಿಸ್ಥಿತಿ ಬದಲಾಗಿದ್ದು ಚಿನ್ನಾಭರಣಗಳ ರೂಪದಲ್ಲಿ ಹೂಡಿಕೆ ಎನ್ನುವುದು ಹಳೆಯ ಮಾತಾಗಿದೆ. ಇಂದು ಚಿನ್ನ ಖರೀದಿ, ಉಡುಗೊರೆಯಾಗಿ ಚಿನ್ನ ನೀಡುವುದು ಮತ್ತು ಚಿನ್ನಾಭರಣಗಳನ್ನು ಧರಿಸುವುದು  ಮಂಗಳ ಕಾರ್ಯಗಳಿಗೆ ಮಾತ್ರ ಸೀಮಿತವಾಗಿದೆ. ದುಡಿಯುವ ಮಹಿಳೆ ಪ್ರತಿ ದಿನ ಆಭರಣಗಳನ್ನು ಧರಿಸಿ ಕಚೇರಿಗಳಿಗೆ ತೆರಳುವುದಿಲ್ಲ.ಇಷ್ಟೆಲ್ಲಾ ಆದರೂ ಕೂಡ ಚಿನ್ನಾಭರಣಗಳ ಖರೀದಿಯತ್ತಲೇ ಮಹಿಳೆಯರು ಒಲವು ತೋರುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಆಭರಣಗಳನ್ನು ದಿನನಿತ್ಯ ಧರಿಸುವುದರಿಂದ ಸವಕಳಿಗೂ ಕಾರಣವಾಗುತ್ತದೆ. ಇವೆಲ್ಲದರ ಜೊತೆಗೆ ಮೇಕಿಂಗ್ ಚಾರ್ಜ್ ಕೂಡ ಗ್ರಾಹಕನ ಪಾಲಿಗೆ ಸೇರುತ್ತದೆ. ದಿನೇ ದಿನೇ ಫ್ಯಾಷನ್ ಬದಲಾಗುವುದರಿಂದ ಖರೀದಿಯ ಕೆಲವು ವರ್ಷಗಳ ಬಳಿಕ ಆಭರಣಗಳು ಮೂಲೆಗುಂಪಾಗುವ ಸಾಧ್ಯತೆಯೂ ಇದೆ.ಹಲವು ಸಂದರ್ಭಗಳಲ್ಲಿ ಆಭರಣಗಳ ಅಂದವನ್ನು ಹೆಚ್ಚಿಸಲು ಅವುಗಳಿಗೆ ಹರಳುಗಳನ್ನು ಜೋಡಿಸಲಾಗುತ್ತದೆ. ಇದು ಆಭರಣಗಳ ತೂಕವನ್ನು ಹೆಚ್ಚಿಸುತ್ತದೆಯೇ ಹೊರತು, ಅದರ ಮೌಲ್ಯವನ್ನು ಖಂಡಿತಾ ಹೆಚ್ಚಿಸದು.ಮಾರಾಟದ ವೇಳೆಯಲ್ಲಂತೂ ಹರಳುಗಳಿಗೆ ಯಾವುದೇ ಬೆಲೆಯೂ ದೊರಕದು.  ಚಿನ್ನದ ಆಭರಣಗಳಿಗೆ ಸಂಬಂಧಿಸಿ ಹೇಳುವುದಾದಲ್ಲಿ ಒಂದೆಡೆ ಅವುಗಳ ನಗದು ಪ್ರಮಾಣವೂ ಕಡಿಮೆಯಾದರೆ ಇನ್ನೊಂದೆಡೆ ವೇಸ್ಟೇಜ್ ಪ್ರಮಾಣವೂ ಹೆಚ್ಚು.ಹಾಗಾಗಿ ಇಂದು ಜಾಣ ಮಹಿಳೆಯರು ಚಿನ್ನದ ಆಭರಣಗಳ ಬದಲಾಗಿ ಚಿನ್ನದ ನಾಣ್ಯಗಳ ಖರೀದಿಯತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆಭರಣಗಳಿಗೆ ಹೋಲಿಸಿದಲ್ಲಿ ಚಿನ್ನದ ನಾಣ್ಯಗಳು ಆಕರ್ಷಕ ಮಾತ್ರವಲ್ಲದೆ ಅವುಗಳು ಪೂರ್ಣರೂಪದಲ್ಲೇ ದೊರೆಯುವುದರಿಂದ ವೇಸ್ಟೇಜ್ ಕೂಡ ಕಡಿಮೆ.ಚಿನ್ನದ ನಾಣ್ಯಗಳು ಮಾರುಕಟ್ಟೆಯಲ್ಲಿ ಶುದ್ಧರೂಪದಲ್ಲಿಯೇ ದೊರೆಯುವುದರಿಂದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ಮಾರುವ ವೇಳೆ ದೊರೆಯುವ ಲಾಭವೂ ಹೆಚ್ಚು. ಮಾರಾಟದ ವೇಳೆ  ಖರೀದಿದಾರರು ಚಿನ್ನದ ನಾಣ್ಯಗಳಿಗೆ ಮಾರುಕಟ್ಟೆಯಲ್ಲಿರುವ ದರವನ್ನೇ ಚಿನ್ನದ ನಾಣ್ಯಗಳಿಗೆ ನಿಗದಿಪಡಿಸುತ್ತಾರೆ.

ಉದಾಹರಣೆಗೆ ಹೇಳುವುದಾದರೆ, ಒಂದು ವರ್ಷದ ಹಿಂದೆ ಹತ್ತು ಗ್ರಾಂನ ಚಿನ್ನದ ಸರ ಮತ್ತು ಚಿನ್ನದ ನಾಣ್ಯವನ್ನು ಖರೀದಿಸಿದಲ್ಲಿ ಮಾರಾಟದ ವೇಳೆ ಚಿನ್ನದ ನಾಣ್ಯ ಶುದ್ಧ ರೂಪದಲ್ಲಿರುವುದರಿಂದ (ಅಂದರೆ 24 ಕ್ಯಾರೆಟ್) ಅದರ ನಗದು ದರ ಪ್ರಮಾಣ ಹೆಚ್ಚಾಗಿರುತ್ತದೆ.ಇದೇ ವೇಳೆ ಹೆಚ್ಚು ಬೆಲೆ ನೀಡಿ ಖರೀದಿಸಿದ ಚಿನ್ನದ ಸರಕ್ಕೆ (ಮೇಕಿಂಗ್ ಚಾರ್ಜ್ ಸೇರಿ) ಕೇವಲ 22 ಅಥವಾ 23 ಕ್ಯಾರೆಟ್ ಬೆಲೆ ಮಾತ್ರ ದೊರೆಯುತ್ತದೆ. ಇದರೊಂದಿಗೆ ವಿನ್ಯಾಸ ಬದಲಾವಣೆ ಮತ್ತು ಸವಕಳಿ ಮೊತ್ತವೂ ಸೇರುವುದರಿಂದ ಕೊನೆಯಲ್ಲಿ ದೊರೆಯುವ ಬೆಲೆ ಮಾತ್ರ ಕಡಿಮೆ. ಆದರೆ, ನಮ್ಮಲ್ಲಿ ಮದುವೆ, ಹಬ್ಬ ಹರಿದಿನ ಮುಂತಾದ ಶುಭ ಸಮಾರಂಭಗಳಲ್ಲಿ ಚಿನ್ನದ ಆಭರಣಗಳನ್ನು ಧರಿಸುವುದು ಸಂಪ್ರದಾಯ. ಜೊತೆಗೆ ಇಂಥ ಶುಭ ಸಮಾರಂಭಗಳಿಗೆ ಚಿನ್ನ ಉಡುಗೊರೆಯಾಗಿ ನೀಡುವುದು ವಾಡಿಕೆ.

 

ಹಾಗಾಗಿ ಹೊಸ ತಲೆಮಾರಿನ ಮಹಿಳೆಯರು ಇಂಥ ಸಂದರ್ಭಗಳಲ್ಲಿ ಸ್ವಲ್ಪ ಚಿನ್ನದ ಆಭರಣಗಳ ಖರೀದಿ ಜೊತೆಗೆ ಹೆಚ್ಚಿನ ಸಂಖ್ಯೆಯ ನಾಣ್ಯಗಳನ್ನೂ ಖರೀದಿಸಿದಲ್ಲಿ ಅದು ಚಾಣಾಕ್ಷತನದ ನಿರ್ಧಾರವಾಗಲಿದೆ.  ಇದು ಆಯಾ ಸಂದರ್ಭಗಳ ಅಗತ್ಯಗಳಿಗೆ  ನ್ಯಾಯ ಒದಗಿಸಿಕೊಡಲಿದೆ. ಜೊತೆಗೆ ಹೂಡಿಕೆಯಲ್ಲೂ ಜಾಣ ನಿಲುವು ತೆಗೆದುಕೊಂಡಂತೆ ಆಗುತ್ತದೆ.ಇಷ್ಟೇ ಅಲ್ಲದೆ ಚಿನ್ನದ ನಾಣ್ಯಗಳನ್ನು ಸುಂದರ ವಿನ್ಯಾಸದ ಆಭರಣಗಳ ನಿರ್ಮಾಣಕ್ಕೆ ಬಳಸಿಕೊಳ್ಳಬಹುದಲ್ಲದೆ ಸಿದ್ಧ ಆಭರಣಗಳ ಖರೀದಿಯ ವೇಳೆ ವಿನಿಮಯ ಮಾಡಲೂ ಸಾಧ್ಯವಾಗುತ್ತದೆ. ಹಾಗಾಗಿ ಮುಂದಿನ ಪೀಳಿಗೆಯ ಮಹಿಳೆಯರು ಚಿನ್ನದ ನಾಣ್ಯ ಖರೀದಿಸಿ ಹೆಚ್ಚು ಜಾಣ್ಮೆ ಮೆರೆಯಿರಿ...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.