ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಮೂಗೆ ಡಾಕ್ಟರೇಟ್: ಮಣಿದ ರಾಜ್ಯಪಾಲ

Last Updated 7 ಫೆಬ್ರವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾರಸ್ವತ ಲೋಕದ ಒತ್ತಡಕ್ಕೆ ಮಣಿದಿರುವ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಸಂಶೋಧಕ ಡಾ.ಎಂ. ಚಿದಾನಂದ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡಿದ್ದಾರೆ.

ಚರ್ಚ್‌ಗಳ ಮೇಲಿನ ದಾಳಿಯನ್ನು ತಾವು ಸಮರ್ಥಿಸಿಲ್ಲ ಎಂದು ಡಾ. ಚಿದಾನಂದ ಮೂರ್ತಿ ಅವರೇ ನೀಡಿರುವ ಸ್ಪಷ್ಟನೆಯ ಕಾರಣ ರಾಜ್ಯಪಾಲರು ಅವರಿಗೆ ಗೌರವ ಡಾಕ್ಟರೇಟ್ ನೀಡಲು ಅನುಮತಿ ನೀಡಿದ್ದಾರೆ. ಈ ಕುರಿತು ಬೆಂಗಳೂರು ವಿ.ವಿ.ಗೆ ಮಾಹಿತಿ ನೀಡಲಾಗಿದೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ. ಕವಿ ಕೆ.ಎಸ್.ನಿಸಾರ್ ಅಹಮದ್, ಕಲಾವಿದ ಬಿ.ಕೆ.ಎಸ್. ವರ್ಮ ಮತ್ತು ಡಾ.ಎಂ. ಚಿದಾನಂದ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡುವಂತೆ ರಾಜ್ಯಪಾಲರಿಗೆ ಬೆಂಗಳೂರು ವಿ.ವಿ. ಶಿಫಾರಸು ಮಾಡಿತ್ತು. ನಿಸಾರ್ ಅಹಮದ್ ಮತ್ತು ಬಿ.ಕೆ.ಎಸ್. ವರ್ಮ ಅವರಿಗೆ ಗೌರವ ಡಾಕ್ಟರೇಟ್ ನೀಡಲು ರಾಜ್ಯಪಾಲರು ಅನುಮತಿ ನೀಡಿದ್ದರು.

ಡಾ. ಮೂರ್ತಿ ಅವರಿಗೆ ಸಂಬಂಧಪಟ್ಟಂತೆ ಕೆಲವು ಮಾಧ್ಯಮ ವರದಿಗಳನ್ನು ಪರಿಗಣಿಸಿದ ರಾಜ್ಯಪಾಲರು ಅವರಿಗೆ ಗೌರವ ಡಾಕ್ಟರೇಟ್ ನೀಡಲು ಅನುಮತಿ ನೀಡುವುದಕ್ಕಿಂತ ಮೊದಲು ಕೆಲವು ವಿಷಯಗಳನ್ನು ಪರಿಶೀಲಿಸಲು ಬಯಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಸೇರಿದಂತೆ ಕನ್ನಡ ಸಾರಸ್ವತ ಲೋಕದ ಅನೇಕ ವಿದ್ವಾಂಸರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ರಾಜ್ಯಪಾಲರು ಪರಿಗಣಿಸಿದ್ದಾರೆ. ರಾಜ್ಯಪಾಲರಿಗೆ ವಿದ್ವಾಂಸರ ಬಗ್ಗೆ ಅಪಾರವಾದ ಗೌರವ ಇದೆ’ ಎಂದು ಪ್ರಕಟಣೆ ಹೇಳಿದೆ.

ರಾಜ್ಯಪಾಲರನ್ನು ಭೇಟಿ ಮಾಡಿದ್ದ ಬೆಂಗಳೂರು ವಿ.ವಿ.ಯ ಸಿಂಡಿಕೇಟ್ ಸದಸ್ಯರು ಡಾ. ಮೂರ್ತಿ ಅವರಿಗೆ ಡಾಕ್ಟರೇಟ್ ಪದವಿ ನೀಡಲು ಅನುಮತಿ ನೀಡುವಂತೆ ಕೋರಿದ್ದರು. ಚಿ.ಮೂ. ಅವರಿಗೆ ಗೌರವ ಡಾಕ್ಟರೇಟ್ ನಿರಾಕರಿಸಿದ್ದನ್ನು ಖಂಡಿಸಿ ಭಾನುವಾರ ಮುಕ್ತಾಯವಾದ 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಿರ್ಣಯವನ್ನು ಕೈಗೊಂಡಿತ್ತು.

‘ರಾಜ್ಯಪಾಲರು ಕ್ಷಮೆಯಾಚಿಸಲಿ’: ಚಿದಾನಂದ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನಿರಾಕರಿಸಿದ ರಾಜ್ಯಪಾಲರು ಈ ನಾಡಿನ ಜನರ ಕ್ಷಮೆ ಕೋರಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಚರ್ಚ್ ಮೇಲಿನ ದಾಳಿ ಕುರಿತು ಸೋಮಶೇಖರ್ ಆಯೋಗ ಕೊಟ್ಟಿರುವ ವರದಿ ಇನ್ನೂ ಸಂಪುಟ ಸಭೆಯ ಮುಂದೆಯೇ ಬಂದಿಲ್ಲ. ಆಗಲೇ ರಾಜ್ಯಪಾಲರು ಆ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ. ರಾಜ್ಯದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಒಂದೇ ತಾಯಿಯ ಮಕ್ಕಳ ಹಾಗೆ ಸೌಹಾರ್ದದಿಂದ ಬದುಕುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ರಾಜ್ಯಪಾಲರ ಪ್ರತಿಕ್ರಿಯೆ ಸರಿ ಇಲ್ಲ. ಹೀಗಾಗಿ ಅವರು ನಾಡಿನ ಜನರ ಕ್ಷಮೆ ಕೋರಬೇಕು ಎಂದರು.

ಪದವಿ ಸ್ವೀಕರಿಸುವೆ: ಚಿ.ಮೂ.
ಗೌರವ ಡಾಕ್ಟರೇಟ್ ನೀಡಲು ರಾಜ್ಯಪಾಲರು ಅನುಮತಿ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾ. ಚಿದಾನಂದ ಮೂರ್ತಿ ಅವರು ಪದವಿ ಸ್ವೀಕರಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಯ ಜೊತೆ ಮಾತನಾಡಿದ ಅವರು, ‘ಗೌರವ ಡಾಕ್ಟರೇಟ್ ನೀಡಲು ರಾಜ್ಯಪಾಲರು ಅನುಮತಿ ನೀಡಿರುವ ವಿಚಾರ ನನಗೆ ಸೋಮವಾರ ಮಧ್ಯಾಹ್ನ ತಿಳಿಯಿತು. ಸುಮಾರು 2.30ಕ್ಕೆ ನನಗೆ ರಾಜ್ಯಪಾಲರ ಕಚೇರಿಯಿಂದ ದೂರವಾಣಿ ಕರೆ ಬಂತು. ವಾಹನ ಕಳಿಸುತ್ತೇವೆ, ಸಂಜೆ ರಾಜಭವನಕ್ಕೆ ಬರಬೇಕು ಎಂದು ಅವರು ಕೋರಿದರು’ ಎಂದು ತಿಳಿಸಿದರು.

ಸಂಜೆ 5.30ರ ಸುಮಾರಿಗೆ ಅವರು ರಾಜ್ಯಪಾಲರನ್ನು ಭೇಟಿ ಮಾಡಿದರು. ‘ನಿಮ್ಮ ಬಗ್ಗೆ ನನಗೆ ಸರಿಯಾಗಿ ತಿಳಿದಿರಲಿಲ್ಲ. ‘ಪ್ರಜಾವಾಣಿ’ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಓದಿ ನನಗೆ ನಿಮ್ಮ ಬಗ್ಗೆ ತಿಳಿಯಿತು. ‘ಪ್ರಜಾವಾಣಿ’ ಪ್ರಕಟಿಸಿದ ವರದಿಯನ್ನು ಇಂಗ್ಲಿಷ್‌ಗೆ ಅನುವಾದ ಮಾಡಿಸಿಕೊಂಡು ನಾನು ಓದಿದೆ. ಗೌರವ ಡಾಕ್ಟರೇಟ್ ಸ್ವೀಕರಿಸಲು ನೀವು ಒಪ್ಪಿಕೊಳ್ಳಬೇಕು ಎಂದು ರಾಜ್ಯಪಾಲರು ಕೋರಿದರು, ನಾನು ಒಪ್ಪಿಕೊಂಡೆ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT