ಬುಧವಾರ, ಜೂನ್ 3, 2020
27 °C
ಪ್ರಾಣಿಗಳ ಜೀವಕ್ಕೂ ಸಂಚಕಾರ: `ಅಶುಭ' ಉಂಟುಮಾಡುವ ಶುಭಾಶಯ ಬ್ಯಾನರ್

ಚುನಾವಣೆ: ತಲೆನೋವಾದ ಪ್ಲಾಸ್ಟಿಕ್ ತ್ಯಾಜ್ಯ

ಮಂಜುನಾಥ ಹೆಬ್ಬಾರ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣೆ: ತಲೆನೋವಾದ ಪ್ಲಾಸ್ಟಿಕ್ ತ್ಯಾಜ್ಯ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ರಂಗು ಬರುತ್ತಿದ್ದಂತೆ ನಗರದದೆಲ್ಲೆಡೆ ಪ್ರಚಾರದ ಭರಾಟೆಯೂ ಶುರುವಾಗಿದೆ. ಪ್ಲಾಸ್ಟಿಕ್ ಬಂಟಿಂಗ್ಸ್, ಬ್ಯಾನರ್‌ಗಳನ್ನು ಹಾಕುವವರ ವಿರುದ್ಧ ಬಿಬಿಎಂಪಿ ಚಾಟಿ ಬೀಸಿದ್ದರೂ ರಾಜಕೀಯ ಪಕ್ಷಗಳು ಹಳೆಯ ಚಾಳಿ ಮುಂದುವರಿಸಿವೆ. ನಗರದ ಎಲ್ಲೆಂದರಲ್ಲಿ ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳಿಗೆ ಶುಭಾಶಯ ಕೋರುವ, ಬೆಂಬಲ ಸಾರುವ ಬ್ಯಾನರ್‌ಗಳು ಬೀಡುಬಿಟ್ಟಿವೆ.ಜನರ ಮತ ಸೆಳೆಯಲು ಪ್ರಮುಖ ರಾಜಕೀಯ ಪಕ್ಷಗಳು ವಿವಿಧ ಬಗೆಯ ಪ್ರಚಾರ ತಂತ್ರಗಳನ್ನು ಅನುಸರಿಸುತ್ತವೆ. ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳ ಮೂಲಕ ಮತ ಯಾಚಿಸುವುದು ಸುಲಭ ಮಾರ್ಗ. ಇದಕ್ಕೆ ದೊಡ್ಡ ಮೊತ್ತದ ಬಜೆಟ್ ಬೇಕಾಗಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳ ಮುಖಂಡರು ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಮುನ್ನವೇ ಈ ಮೂಲಕ ಪ್ರಚಾರ ಆರಂಭಿಸಿದ್ದಾರೆ. ನಗರದ ಪ್ರಮುಖ ಗಲ್ಲಿಗಲ್ಲಿಗಳಲ್ಲಿ, ಪ್ರಮುಖ ಗೋಡೆಗಳಲ್ಲಿ, ಮರಗಳಲ್ಲಿ ಪ್ರಚಾರ ಸಾಮಗ್ರಿಗಳು ರಾರಾಜಿಸಲು ಆರಂಭಿಸಿವೆ. `ಕಸ ರಗಳೆ'ಯಿಂದ ನಾಲ್ಕಾರು ತಿಂಗಳಿಂದ ತತ್ತರಿಸಿದ್ದ ಉದ್ಯಾನನಗರಿಯಲ್ಲಿ ಮತ್ತೆ ಕಸ ವಿಲೇವಾರಿ ಸಮಸ್ಯೆ ಉದ್ಭವಿಸುವ ಭೀತಿ ಎದುರಾಗಿದೆ.`ಪ್ಲಾಸ್ಟಿಕ್ ಹಲವಾರು ವರ್ಷಗಳ ಕಾಲ ಮಣ್ಣಿನಲ್ಲಿ ಕರಗದೆ ಇರುತ್ತದೆ. ಇದರಿಂದಾಗಿ ಭೌತಿಕ ಗುಣಗಳ ಮೇಲೆ ಪರಿಣಾಮ ಬೀರುತ್ತದೆ. ಭೂಮಿಯ ಆಳಕ್ಕೆ ಬೇರು ಹೋಗದಂತೆ ತಡೆ ಒಡ್ಡುತ್ತದೆ. ಆಧುನಿಕ ಕಾಲಘಟ್ಟದಲ್ಲಿ ಪ್ಲಾಸ್ಟಿಕ್ ಒಂದು ರೀತಿಯಲ್ಲಿ ಹಿತಶತ್ರು ಇದ್ದಂತೆ. ನಗರದಲ್ಲಿ ಕಸ ಸಮಸ್ಯೆ ಬಿಗಡಾಯಿಸಿದ್ದು, ಚುನಾವಣಾ ಪ್ರಚಾರಕ್ಕೆ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಯಂತ್ರಣ ಹೇರಬೇಕು. ಕಾಗದ ವಸ್ತುಗಳು ಭೂಮಿಯಲ್ಲಿ ಬೇಗ ಕರಗುತ್ತವೆ. ಕಾಗದದ ಸಾಮಗ್ರಿಗಳನ್ನೇ ಚುನಾವಣಾ ಪ್ರಚಾರಕ್ಕೆ ಬಳಸಬೇಕು' ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನಿ ಡಾ.ಸಿ.ಎ. ಶ್ರೀನಿವಾಸಮೂರ್ತಿ ಸಲಹೆ ನೀಡಿದರು.ಪ್ರಾಣಿಗಳನ್ನೇಕೆ ಕೊಲ್ಲುವಿರಿ?: `ಬೇಕಾಬಿಟ್ಟಿಯಾಗಿ ಎಲ್ಲದಕ್ಕೂ ಪ್ಲಾಸ್ಟಿಕ್ ಬಳಸಿ ಮೂಕ ಪ್ರಾಣಿಗಳನ್ನು ಏಕೆ ಕೊಲ್ಲುತ್ತೀರಿ' ಎಂಬುದು ನಗರದ ಡೇರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ವೆಂಕಟೇಶಯ್ಯ ಅವರ ಕಟುವಾದ ಪ್ರಶ್ನೆ. `ನಗರದಲ್ಲಿ ಕಸವನ್ನು ಬೇರ್ಪಡಿಸುತ್ತಿಲ್ಲ. ಇದರಿಂದಾಗಿ ಹಸಿ ಕಸದ ಜೊತೆಗೆ ಪ್ಲಾಸ್ಟಿಕ್ ಸಹ ಜಾನುವಾರುಗಳ ಹೊಟ್ಟೆ ಸೇರುತ್ತದೆ. ಚುನಾವಣಾ ಸಂದರ್ಭದಲ್ಲಿಯಂತೂ ಗಲ್ಲಿ ಗಲ್ಲಿಯಲ್ಲಿ ಪ್ಲಾಸ್ಟಿಕ್ ಧ್ವಜ ಬಿದ್ದಿರುತ್ತದೆ. ಮಾನವನ ನಿರ್ಲಕ್ಷ್ಯದ ಧೋರಣೆಗೆ ಜಾನುವಾರುಗಳು ಬಲಿಪಶುಗಳು' ಎಂದು ಅವರು ಬೇಸರ ವ್ಯಕ್ತಪಡಿಸಿದರು.`ಪ್ಲಾಸ್ಟಿಕ್ ವಸ್ತುಗಳ ಸೇವನೆಯಿಂದ ಜಾನುವಾರುಗಳು ಅಜೀರ್ಣ, ಹೊಟ್ಟೆ ಊದಿಕೊಳ್ಳುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತವೆ. ಪ್ಲಾಸ್ಟಿಕ್ ವಸ್ತುಗಳನ್ನು ಸೇವಿಸಿದ 2-3 ದಿನಗಳಲ್ಲೇ ಅದರ ದುಷ್ಟರಿಣಾಮ ಜಾನುವಾರುಗಳ ಮೇಲಾಗಲು ಆರಂಭವಾಗುತ್ತದೆ. ಅತಿಯಾದ ಪ್ಲಾಸ್ಟಿಕ್ ಸೇವನೆ ಜಾನುವಾರುಗಳ ಸಾವಿಗೂ ಕಾರಣವಾಗುತ್ತದೆ' ಎಂಬುದು ಅವರ ಎಚ್ಚರಿಕೆಯ ನುಡಿ. ಚುನಾವಣಾ ಪ್ರಚಾರದಲ್ಲಿ ಪ್ಲಾಸ್ಟಿಕ್ ಪರಿಕರಗಳ ಬಳಸದಂತೆ ಕಟ್ಟುನಿಟ್ಟಿನ ನಿಷೇಧ ಹೇರಬೇಕು ಎಂದು ಸಲಹೆ ನೀಡುತ್ತಾರೆ.ಸೌಂದರ್ಯಕ್ಕೆ ಧಕ್ಕೆ: `ಹಸಿರುನಗರಿ ಎಂದು ಪ್ರಖ್ಯಾತಿ ಗಳಿಸಿರುವ ನಗರದ ಸೌಂದರ್ಯ ದಿನೇ ದಿನೇ ಕುಸಿತ ಕಾಣುತ್ತಿದೆ. ಚಿತ್ರವಿಚಿತ್ರವಾದ ಬ್ಯಾನರ್‌ಗಳು, ಬಂಟಿಂಗ್ಸ್‌ಗಳು ಕಪ್ಪು ಚುಕ್ಕೆ ಇದ್ದಂತೆ. ಬಿಬಿಎಂಪಿ ಸಹ ಒಂದು ಬಾರಿ ಕಾರ್ಯಾಚರಣೆ ನಡೆಸಿ ಮೌನಕ್ಕೆ ಶರಣಾಗಿ ಬಿಡುತ್ತದೆ. ರಾಜಕೀಯ ಪಕ್ಷಗಳಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಕಠಿಣ ಕ್ರಮ ಕೈಗೊಂಡರೆ ಸ್ವಲ್ಪ ಮಟ್ಟಿಗೆ ಇದಕ್ಕೆ ನಿಯಂತ್ರಣ ಹೇರಬಹುದು. ಚುನಾವಣಾ ಸಮಯದಲ್ಲೇ ಮತ್ತೆ ಕಸ ಸಮಸ್ಯೆ ಬಿಗಡಾಯಿಸುವ ಆತಂಕ ಎದುರಾಗಿದೆ' ಎಂದು ಸಾಫ್ಟ್‌ವೇರ್ ಎಂಜಿನಿಯರ್ ಸುಧೀಂದ್ರ ಆತಂಕ ವ್ಯಕ್ತಪಡಿಸುತ್ತಾರೆ.ಹಬ್ಬದ ಸಂಭ್ರಮ: `ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ಪ್ರಚಾರಕ್ಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ. ರಾಜಕೀಯ ಪಕ್ಷಗಳು ಹಾಗೂ ಕಾರ್ಯಕರ್ತರಿಗೂ ಜಾಗೃತಿ ಮೂಡಿದೆ. ಪ್ಲಾಸ್ಟಿಕ್‌ನಿಂದ ತಯಾರಾದ ಚುನಾವಣಾ ಸಾಮಗ್ರಿಗಳಿಗಂತೂ ಬೇಡಿಕೆ ಇಲ್ಲ. ನಾವಂತೂ ಪ್ಲಾಸ್ಟಿಕ್‌ನಿಂದ ತಯಾರಿಸಿದ ಧ್ವಜ, ಬಂಟಿಂಗ್ಸ್‌ಗಳನ್ನು ಮಾರುವುದೇ ಇಲ್ಲ' ಎಂಬುದು ನಗರದ ರುಷಬ್ ಎಂಟರ್‌ಪ್ರೈಸಸ್‌ನ ಮಾಲೀಕ ಅನಿಲ್ ಅವರ ವಾದ.`2004ರ ಚುನಾವಣೆಯ ವೇಳೆ ರಾಜ್ಯಚುನಾವಣಾ ಆಯೋಗ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತು. ಅದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಕಾಯ್ದೆಗೂ ತಿದ್ದುಪಡಿ ತರಲಾಯಿತು. ಆದರೂ, ಗ್ರಾಮೀಣ ಪ್ರದೇಶಗಳಲ್ಲಿ ಅರಿವಿನ ಕೊರತೆಯಿಂದ ಚುನಾವಣೆ ಪ್ರಚಾರಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ' ಎಂದು ಹೇಳುವ ಅವರು, `ನಗರದಲ್ಲಿ ಪ್ಲಾಸ್ಟಿಕ್ ಬಂಟಿಂಗ್ಸ್, ಬ್ಯಾನರ್‌ಗಳು, ಫ್ಲೆಕ್ಸ್‌ಗಳ ಬದಲು ಈಗ ಕಾಗದದ ಬಾವುಟ, ಟೋಪಿ, ಶಾಲುಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಬಳಸಲಾಗುತ್ತಿದೆ' ಎಂದು ವಿವರ ನೀಡುತ್ತಾರೆ.`ಚುನಾವಣೆ ಒಂದು ರೀತಿಯಲ್ಲಿ ಹಬ್ಬ ಇದ್ದಂತೆ. ಆಗ ಸಂಭ್ರಮ ಇರಲೇಬೇಕು. ಬಂಟಿಂಗ್ಸ್, ಬ್ಯಾನರ್, ಬಾವುಟ ಎಲ್ಲ ಇದ್ದಾಗ ಚುನಾವಣೆಗೆ ಹಬ್ಬದ ಸಂಭ್ರಮ ಬರುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳು ಇವುಗಳ ಬಳಕೆಗೆ ಹೆಚ್ಚಿನ ಒಲವು ತೋರುವುದು ಸಹಜ' ಎನ್ನುವ ಅವರು, `ಬಾವುಟ, ಟೋಪಿ, ಶಾಲುಗಳು ಜನರನ್ನು ಪರಿಣಾಮಕಾರಿಯಾಗಿ ಸುಲಭವಾಗಿ ತಲುಪುತ್ತವೆ. ಖರ್ಚು ಕಡಿವೆು' ಎಂದರು.`ಚುನಾವಣಾ ಸಂದರ್ಭದಲ್ಲಿ ಪ್ಲಾಸ್ಟಿಕ್ ಸಾಮಗ್ರಿಗಳಿಗೆ ನಿಯಂತ್ರಣ ಹಾಗೂ ನಿಷೇಧ ವಿಧಿಸುವ ಸಂಬಂಧ ಬಿಬಿಎಂಪಿ ಹಾಗೂ ರಾಜ್ಯ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಯಾವುದೇ ಪಾತ್ರ ಇಲ್ಲ' ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ವಾಮನಾಚಾರ್ಯ ಸ್ಪಷ್ಟಪಡಿಸಿದರು. `ಪ್ಲಾಸ್ಟಿಕ್ ದುಷ್ಪರಿಣಾಮದ ಕುರಿತು ಮಂಡಳಿ ವತಿಯಿಂದ ಮುಂದಿನ ದಿನಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಳ್ಳುತ್ತೀರಾ' ಎಂದು ಪ್ರಶ್ನಿಸಿದಾಗ, `ಈವರೆಗೆ ಅಂತಹ ಯಾವುದೇ ಯೋಚನೆ ಮಾಡಿಲ್ಲ. ಈ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳುವುದೂ ಇಲ್ಲ' ಎಂದರು.`ತೆರವಿಗೆ ಸೂಚನೆ'

ಚುನಾವಣಾ  ನೀತಿ ಸಂಹಿತೆ  ಪ್ರಕಾರ ಎಲ್ಲ ಅನಧಿಕೃತ ಹೋರ್ಡಿಂಗ್‌ಗಳು, ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ. ಅಂತಹ ಚಟುವಟಿಕೆ ನಡೆಸುವವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಬಂದರೆ ಪ್ರಚಾರದಲ್ಲಿ ಪ್ಲಾಸ್ಟಿಕ್ ಸಾಮಗ್ರಿ ಸಂಪೂರ್ಣ ನಿಷೇಧಕ್ಕೆ ಕ್ರಮ ಕೈಗೊಳ್ಳುತ್ತೇವೆ.

-ಅನಿಲ್ ಕುಮಾರ್ ಝಾ, ರಾಜ್ಯ ಮುಖ್ಯ ಚುನಾವಣಾ ಆಯುಕ್ತಕ್ರಿಮಿನಲ್ ಪ್ರಕರಣ: ಆಯುಕ್ತ ಎಚ್ಚರಿಕೆ

ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಚುನಾವಣಾ ಪ್ರಚಾರಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಂಟಿಂಗ್ಸ್, ಬ್ಯಾನರ್‌ಗಳನ್ನು ಬಳಸುವುದಕ್ಕೆ ಅವಕಾಶ ಇಲ್ಲ. ಈಗಾಗಲೇ ಅಂತಹ ಬ್ಯಾನರ್‌ಗಳನ್ನು ಕಿತ್ತು ಹಾಕಿದ್ದೇವೆ. ಆದರೆ, ಕಣ್ಣು ತಪ್ಪಿಸಿ ಹಾಕುತ್ತಿದ್ದಾರೆ. ಬ್ಯಾನರ್‌ಗಳನ್ನು ಹಾಕಿದ ವೇಗದಲ್ಲೇ ನಾವು ಅದನ್ನು ತೆರವು ಮಾಡುತ್ತಿದ್ದೇವೆ. ಪ್ಲಾಸ್ಟಿಕ್ ದುಷ್ಪರಿಣಾಮದ ಬಗ್ಗೆ ಈಗಾಗಲೇ ಸಾಕಷ್ಟು ಜಾಗೃತಿ ಮೂಡಿಸುವ ಪ್ರಯತ್ನವೂ ಆಗಿದೆ. ಪಕ್ಷಕ್ಕೆ ಹಾಗೂ ಅಭ್ಯರ್ಥಿಗೆ ಬೆಂಬಲ ಸಾರಿ ಪ್ಲಾಸ್ಟಿಕ್ ಬಂಟಿಂಗ್ಸ್ ಹಾಕಿದ್ದರೆ ಆ ಪಕ್ಷದ ಹಾಗೂ ಅಭ್ಯರ್ಥಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುವುದು.

-ಸಿದ್ದಯ್ಯ, ಬಿಬಿಎಂಪಿ ಆಯುಕ್ತ

`ಪ್ರತಿಷ್ಠೆ ಪ್ರದರ್ಶನಕ್ಕೆ ಬಳಕೆ'

ಚುನಾವಣಾ ಪ್ರಚಾರಕ್ಕೆ ಪ್ಲಾಸ್ಟಿಕ್ ಬಳಸದಂತೆ ಸಂಪೂರ್ಣ ನಿಷೇಧ ಹೇರಬಹುದು. ಈ ಮೂಲಕ ನಗರದ ಕಸ ಸಮಸ್ಯೆಗೆ ತಕ್ಕ ಮಟ್ಟಿಗೆ ಪರಿಹಾರ ದೊರಕುತ್ತದೆ. ವಿದೇಶಗಳಲ್ಲಿ ಚುನಾವಣಾ ಪ್ರಚಾರಕ್ಕೆ ಪ್ಲಾಸ್ಟಿಕ್ ಬಳಸುವುದಿಲ್ಲ. ಇದರ ಬದಲು ಜನರೊಂದಿಗೆ ಮುಖಾಮುಖಿ, ಸಮಾವೇಶ, ಸಭೆಗಳನ್ನು ನಡೆಸಿ ಮತದಾರರೊಂದಿಗೆ ಸಂವಾದ ನಡೆಸಲಿ. ಅದು ಬಿಟ್ಟು ಪ್ರತಿಷ್ಠೆ ಪ್ರದರ್ಶನಕ್ಕೆ ಪ್ಲಾಸ್ಟಿಕ್ ಬಂಟಿಂಗ್ಸ್, ಬ್ಯಾನರ್ ಬಳಸುವುದು ಬೇಡ.

-ಕಾತ್ಯಾಯಿನಿ ಚಾಮರಾಜ್, `ಸಿವಿಕ್ ಬೆಂಗಳೂರು' ಕಾರ್ಯನಿರ್ವಾಹಕ ಟ್ರಸ್ಟಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.