ಬುಧವಾರ, ಜೂನ್ 16, 2021
28 °C

ಚುನಾವಣೆ: ನಿರೀಕ್ಷೆಯ ಜೊತೆ ನಿರಾಶೆಯ ಭಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೊನೆಗೂ ಲೋಕಸಭಾ ಚುನಾವಣೆ ಬಾಗಿಲಿಗೆ ಬಂದು ನಿಂತಿದೆ. ಕೇಂದ್ರ ಚುನಾವಣಾ ಆಯೋಗ ಬುಧವಾರ ಚುನಾವಣೆಯ ಮಾಹಿತಿ ನೀಡುತ್ತಿದ್ದಂತೆ ರಾಜಕಾರಣಿಗಳು ಚುರುಕುಗೊಂಡರೆ, ಜನರು ರಾಜಕೀಯ ಚಟುವಟಿಕೆಗಳ ಬಗ್ಗೆ ಕುತೂಹಲಗೊಂಡಿದ್ದಾರೆ. ಚುನಾವಣೆಯ ಬಗ್ಗೆ ಹಾಗೂ ಮುಂದೆ ಬರಲಿರುವ ಹೊಸ ಸರ್ಕಾರದ ಬಗ್ಗೆಯೂ ಜನರಲ್ಲಿ ಅಪಾರ ನಿರೀಕ್ಷೆ, ಭರವಸೆ ಮೂಡಿದೆ.ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಜನರ ಭಾವನೆ, ಆಲೋಚನೆ, ಆಕಾಂಕ್ಷೆಗಳ ಕುರಿತು ತಿಳಿಯಲು ತೆರಳಿದ ‘ಪ್ರಜಾವಾಣಿ’ಯ ಮಾತಿಗೆ ಸಿಕ್ಕ ಕೆಲವರಿಗೆ ಚುನಾವಣೆಯ ಬಗ್ಗೆ ಮಾಹಿತಿಯೇ ಇಲ್ಲ. ಕೆಲವರು ಅದು ಐದು ವರ್ಷಗಳಿಗೊಮ್ಮೆ ನಡೆಯುವ ರಾಜಕೀಯ ಸಂಪ್ರದಾಯ ಎಂದು ಹೇಳಿ ಸುಮ್ಮನಾದರು. ಅನೇಕರು ಕುತೂಹಲಕಾರಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ದರು. ಈ ಪೈಕಿ ಆಯ್ದವರ ಹೇಳಿಕೆಗಳು ಇಲ್ಲಿವೆ:‘ಪಕ್ಷೇತರರಿಗೆ ಕಡಿವಾಣ ಹಾಕಬೇಕು’

ಚುನಾವಣೆ ಎಂದರೆ ಕೆಲವರಿಗೆ ಒಂದು ಬಗೆಯ ಉದ್ಯೋಗ ವಾಗಿ ಪರಿಣಮಿಸಿದೆ. ಕೆಲವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದೇ ಇದಕ್ಕೆ ಉದಾಹರಣೆ. ಇಂಥ ಚಟುವಟಿಕೆಗೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು. ಸ್ಪರ್ಧಿ ಸಲು ಅವಕಾಶ ನೀಡಿದರೂ ಒಂದು ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸುವಾಗ ಅದರ ವೆಚ್ಚವನ್ನು ಅವರೇ ಭರಿಸು ವಂತೆ ಮಾಡಬೇಕು. ಇಲ್ಲವಾದರೆ ಜನರು ಕೊಟ್ಟ ತೆರಿಗೆಯ ಹಣ ಪೋಲಾದಂತಾ ಗುತ್ತದೆ. ಅನೇಕ ರಾಜಕೀಯ ಪಕ್ಷಗಳು ಮತ್ತು ಮುಖಂಡರಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಚುನಾವಣೆಗಳು ವೇದಿಕೆಯಾಗುತ್ತವೆ. ಇದು ಗೊತ್ತಿದ್ದೂ ನಾವೆಲ್ಲ ಮತದಾನ ಮಾಡುತ್ತೇವೆ. ಇದು ಕಳ್ಳರ ಸಾಮ್ರಾಜ್ಯದಲ್ಲಿ ಒಳ್ಳೆಯ ಕಳ್ಳನನ್ನು ಹುಡುಕುವ ಯತ್ನ ಅಷ್ಟೇ.

 –ಭಾನುಪ್ರಕಾಶ್‌, ಭೂ ಅಭಿವೃದ್ಧಿ ಕಂಪೆನಿ ನೌಕರಸ್ವಂತ ಹೊಟ್ಟೆ ತುಂಬಿಸುವ ಪ್ರವೃತ್ತಿ ಬಿಡಲಿ

ಚುನಾವಣೆ ದಿನಾಂಕಗಳನ್ನು ಘೋಷಿಸಿದ್ದು ಗೊತ್ತಾಗಿದೆ. ಈ ಚುನಾವಣೆಯ ನಂತರವಾದರೂ ಒಳ್ಳೆಯ ಸರ್ಕಾರ ಅಸ್ತಿತ್ವಕ್ಕೆ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನ ಪ್ರತಿನಿಧಿಗಳು ಅಧಿಕಾರಕ್ಕೆ ಬರಲಿ. ಮತ ಪಡೆದು ಅಧಿಕಾರಕ್ಕೆ ಬಂದ ನಂತರ ಸ್ವಂತ ಹೊಟ್ಟೆ ತುಂಬಿಸಿಕೊಂಡು ಜನರನ್ನು ಮರೆಯುವ ಪ್ರವೃತ್ತಿ ಇನ್ನಾದರೂ ನಿಲ್ಲಲಿ.ದೇಶದಲ್ಲಿ ಅನೇಕ ಸಮಸ್ಯೆಗಳಿದ್ದರೂ ರಾಜಕಾರಣಿಗಳು ಸ್ವಾರ್ಥ ಸಾಧನೆಗಾಗಿ ಮಾತ್ರ ‘ಸೇವೆ’ ಮಾಡುತ್ತಾರೆ. ಜನರಿಗೆ ಕುಡಿಯಲು ನೀರಿಲ್ಲದಿದ್ದರೂ ರಾಜಕಾರಣಿಗಳ ಮನೆಯಲ್ಲಿ ದೊಡ್ಡ ದೊಡ್ಡ ಟ್ಯಾಂಕ್‌ಗಳು ತುಂಬಿರುತ್ತವೆ. ಇಂಥ ದೃಶ್ಯಗಳು ಜಿಗುಪ್ಸೆಗೆ ಕಾರಣವಾಗುತ್ತವೆ. ಮೊದಲ ಬಾರಿ ಲೋಕಸಭಾ ಚುನಾವಣೆಗೆ ಮತದಾನ ಮಾಡಲಿದ್ದೇನೆ. ನನ್ನ ಮತ ದೇಶದ ಒಳಿತಿಗೆ, ಉತ್ತಮ ಶಿಕ್ಷಣಕ್ಕೆ, ಸುಭಿಕ್ಷಕ್ಕೆ ಕಾರಣವಾಗಬೇಕು ಎಂಬುದು ನನ್ನ ಅಭಿಲಾಷೆ.

–ಮಧುಮತಿ ಕೊಡ್ಲಿವಾಡ, ಖಾಸಗಿ ಕಂಪೆನಿ ಉದ್ಯೋಗಿಯಾರು ಬಂದರೂ ನಮ್ಮ ಪಾಡು ತಪ್ಪದು

ಪ್ರತಿ ಬಾರಿ ಚುನಾವಣೆ ಬಂದಾಗಲೂ ಹೊಸ ನಿರೀಕ್ಷೆಗಳು ಗರಿಗೆದರುತ್ತವೆ. ಆದರೆ ನಮ್ಮ ಭರವಸೆಗಳು ಈಡೇರುವುದೇ ಇಲ್ಲ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ನಮ್ಮಂಥವರ ಪಾಡು ತಪ್ಪಲಾರದು. ಸಂಚಾರ ದಟ್ಟಣೆ, ವಾಹನ ಸಂಚಾರ ಸ್ಥಗಿತಗೊಳ್ಳುವುದು ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾದರೆ ಅನೇಕರಿಗೆ ಸಮಾಧಾನವಾಗಬಹುದು.

–ಮಂಜುನಾಥ ಸೋಮಲಾಪುರ, ಆಟೊ ಚಾಲಕಎಲ್ಲರ ರಕ್ಷಣೆ ಸರ್ಕಾರದ ಹೊಣೆ

ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆ ದಿನಗಳೆದಂತೆ ಹೆಚ್ಚಾಗುತ್ತಿದೆ. ಜನರಲ್ಲಿ ಭೀತಿ ಹುಟ್ಟಿಸುವ ಇಂಥ ಕೃತ್ಯಗಳು ಇಲ್ಲದಾಗಬೇಕು. ಎಲ್ಲರಿಗೂ ರಕ್ಷಣೆ ಸಿಗಬೇಕು. ಇದಕ್ಕಾಗಿ ದೇಶದಲ್ಲಿ ಸಮಗ್ರ ಬದಲಾವಣೆಯ ಅಗತ್ಯವಿದೆ.ಮತದಾನದ ಬಗ್ಗೆ ನನಗೆ ವಿಶೇಷ ಆಸಕ್ತಿ ಇಲ್ಲ. ಎಲ್ಲರೂ ಹೋಗುವಾಗ ನಾನೂ ಜೊತೆಯಲ್ಲಿದ್ದು ಮತ ಹಾಕುತ್ತೇನೆ. ನನ್ನ ಮತಕ್ಕೆ ಎಂದಾದರೂ ಪೂರ್ಣ ಪ್ರಮಾಣದ ಗೌರವ ಸಿಕ್ಕಿದೆ ಎಂದು ಅನಿಸುವುದಿಲ್ಲ. ಈಗ ಬೆಲೆ ಏರಿಕೆ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಹೊಸ ಸರ್ಕಾರ ಬಂದ ಮೇಲಾದರೂ ಅಗತ್ಯ ವಸ್ತುಗಳು ಅಗ್ಗವಾಗಿ ಸಿಗುವಂತಾಗಲಿ ಎಂಬುದು ನನ್ನ ಆಶಯ.

–ರೋಹಿಣಿ ಸಾಲಿ, ಸ್ಟುಡಿಯೋ ಮಾಲಕಿಶಾಂತಿಯುತ ಚುನಾವಣೆ ಆಗಲಿ

ಚುನಾವಣೆ ಶಾಂತಿಯುತವಾಗಿ ನಡೆಯಬೇಕು. ಹಣ, ಹೆಂಡಕ್ಕೆ ದಾಸರಾಗಿ ಯಾರೂ ಮತ ಹಾಕಬಾರದು. ಆಮಿಷಗಳನ್ನು ಒಡ್ಡಲು ರಾಜಕೀಯ ಪಕ್ಷಗಳು ಮುಂದಾಗ ಬಾರದು. ಹೊಸ ಸರ್ಕಾರ ಬಂದ ನಂತರ ದೇಶಕ್ಕೆ, ಜನತೆಗೆ ಒಳಿತಾಗಬೇಕು. ರೈತರು ಸುಭಿಕ್ಷರಾಗಬೇಕು. ಐಟಿ–ಬಿಟಿ ಕ್ಷೇತ್ರವೂ ಬೆಳೆಯಬೇಕು.

–ಲಕ್ಷ್ಮಣ ಮಜಗಿ, ರಸಗೊಬ್ಬರ ವ್ಯಾಪಾರಿದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ

ರಾಜಕಾರಣಿಗಳ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ಹೀಗಾಗಿ ಚುನಾವಣೆ ಘೋಷಣೆಯಾದ ಕೂಡಲೇ ಹೊಸ ನಿರೀಕ್ಷೆಗಳು ಗರಿಗೆದರಿವೆ. ನೀರು, ರಸ್ತೆ, ವಿದ್ಯುತ್‌ ಮುಂತಾ ದ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸ ಇನ್ನೂ ಕೂಡ ದೇಶದಲ್ಲಿ ಆಗಲಿಲ್ಲ. ಇದು ಇಲ್ಲದೆ ಅಭಿವೃದ್ಧಿಯ ಮಾತುಗಳನ್ನಾಡುವುದು ಹೇಗೆ? ಅನೇಕ ಬಾರಿ ಮತದಾನ ಮಾಡಿದ್ದೇನೆ. ವಾಜಪೇಯಿ ಅವರಂಥ ವ್ಯಕ್ತಿ ಮತ್ತೆ ದೇಶದ ಪ್ರಧಾನಿ ಯಾಗಬೇಕಾ ಗಿದೆ. ಕನಿಷ್ಠ ಸ್ವಿಸ್‌ ಬ್ಯಾಂಕ್‌ನಲ್ಲಿರುವ ಹಣವಾದರೂ ವಾಪಸ್‌ ಬಂದರೆ ಸಾಕು.

–ರಾಮದಾಸ ಶಾನಭಾಗ್‌ಮಾನವ ಸಬಲೀಕರಣ ಸಂಸ್ಥೆಯ ನಿರ್ದೇಶಕ

ತಲೆಕೆಡಿಸಿಕೊಂಡಿಲ್ಲ


ಚುನಾವಣೆ, ರಾಜಕೀಯ ಚಟುವಟಿಕೆ ಇತ್ಯಾದಿ ತಲೆ ಕೆಡಿಸಿಕೊಂಡಿಲ್ಲ. ಮತದಾನದ ದಿನ ಮತ ಹಾಕಿ ಬರುತ್ತೇನೆ. ಒಳ್ಳೆಯ ಜನಪ್ರತಿನಿಧಿ, ಉತ್ತಮ ಆಡಳಿತ ಬರಬೇಕು ಎಂಬ ಆಶೆ ಇದೆ. ಆದರೆ ಹಾಗೆ ಆಗುವುದು ಕಷ್ಟ. ಬಡವರ ಉದ್ದಾರ, ದೇಶದ ರಕ್ಷಣೆ ಇತ್ಯಾದಿ ಭರವಸೆಗಳು ಈಡೇರುವುದು ಇಂದಿನ ಪರಿಸ್ಥಿತಿಯಲ್ಲಿ ಕಷ್ಟ. ನನ್ನ ಕೆಲಸ ಮಾಡಿಕೊಂಡು ದಿನದೂಡುತ್ತಿದ್ದೇನೆ, ಜೀವನ ಸಾಗಿಸುತ್ತಿದ್ದೇನೆ. ಎಂದಾದರೂ ಬದಲಾವಣೆಯ ಗಾಳಿ ಬೀಸಿದರೆ ಒಳ್ಳೆಯದು.

–ಮನ್ಸೂರ್‌ ಇಲಾಲಿ ಟಾಕಿವಾಲೆ, ಹೂವಿನ ವ್ಯಾಪಾರಿಅರ್ಹ ವ್ಯಕ್ತಿ ಆಯ್ಕೆಯಾಗಲಿ

ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸಲು ಕೇವಲ ಎರಡು ಪಕ್ಷಗಳು ಇರುವುದು ಅತ್ಯಗತ್ಯ. ಕೇಂದ್ರದಲ್ಲಿ ಕಾಂಗ್ರೆಸ್‌ ಅಥವಾ ಬಿಜೆಪಿಯಲ್ಲಿ ಯಾವುದೇ ಪಕ್ಷ ಬಂದರೂ ಸರಿ. ಆದರೆ ಯಾವುದೇ ಪಕ್ಷ ಸ್ಪಷ್ಟ ಬಹುಮತದಿಂದ ಗೆದ್ದು, ಆಡಳಿತ ನಡೆಸಿದರೆ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕ. ಇಲ್ಲ ವಾದರೆ ಆಂತರಿಕ ಕಚ್ಚಾಟ, ಅಧಿಕಾರದ ಲಾಲಸೆಯಿಂದ ಕಿತ್ತಾಟಕ್ಕೆ ದಿನಕ್ಕೊಂದು ಸಮಸ್ಯೆ ಶುರುವಾಗಿ, ಜನಸಾಮಾನ್ಯರ ಮೇಲೆ ಎಲ್ಲ ರೀತಿಯಿಂದಲೂ ಹೊರೆ ಬೀಳಲಿದೆ. ಜನರ ಬದುಕು ಮತ್ತಷ್ಟು ದುಸ್ತರವಾಗಲಿದೆ.

- ಮಹೇಶ ಮಾಳಗೊಂಡ, ಧಾರವಾಡ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.