ಶುಕ್ರವಾರ, ಮೇ 7, 2021
23 °C
ಕೇಂದ್ರ ಸಂಪುಟಕ್ಕೆ 8 ಜನ ಸೇರ್ಪಡೆ- ಒಟ್ಟು ಸಚಿವರು 77

ಚುನಾವಣೆ ಮೇಲೆ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ : ಮುಂಬರುವ ಲೋಕಸಭಾ ಮತ್ತು ಕೆಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಸಂಪುಟ ಪುನರ್ ರಚನೆ ಕಸರತ್ತಿಗೆ ಕೈ ಹಾಕಿರುವ ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ  ಎಂಟು ಹೊಸ ಮುಖಗಳಿಗೆ ಮಣೆ ಹಾಕಿದೆ. ಸೋಮವಾರ ನಡೆದ ಸಚಿವ ಸಂಪುಟ ಪುನರ್ ರಚನೆಯಲ್ಲಿ ಕರ್ನಾಟಕದ ಆಸ್ಕರ್ ಫರ್ನಾಂಡಿಸ್ ಸೇರಿದಂತೆ ಎಂಟು ಜನರಿಗೆ ಅವಕಾಶ ನೀಡಲಾಗಿದೆ. ಪ್ರಧಾನಿ ಮನಮೋಹನ್ ಸಿಂಗ್ ಸಂಪುಟಕ್ಕೆ ಸೇರ್ಪಡೆಯಾದ ಎಲ್ಲರೂ ಕಾಂಗ್ರೆಸ್ ಪಕ್ಷದವರೇ ಆಗಿದ್ದು, ಆ ಪೈಕಿ ಬಹುತೇಕ ಹೊಸಬರು. ಕರ್ನಾಟಕ ಮುಖ್ಯಮಂತ್ರಿ ಹುದ್ದೆ ಕೈತಪ್ಪಿದ ಕಾರಣ ಅಸಮಾಧಾನಗೊಂಡಿದ್ದ ಹಿರಿಯ ದಲಿತ ಮುಖಂಡ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಹತ್ವದ ರೈಲ್ವೆ ಖಾತೆ ನೀಡಿ ಸಮಾಧಾನ ಪಡಿಸುವ ಯತ್ನ ಮಾಡಲಾಗಿದೆ.ಸೋನಿಯಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಾಜ್ಯಸಭಾ ಸದಸ್ಯ 72 ವರ್ಷದ ಆಸ್ಕರ್ ಫರ್ನಾಂಡಿಸ್ ಅವರಿಗೆ ನಿರೀಕ್ಷೆಯಂತೆ ಸಂಪುಟ ದರ್ಜೆಯ ಸಚಿವ ಸ್ಥಾನ ದೊರಕಿದ್ದು, ನಾಲ್ಕು ವರ್ಷಗಳ ನಂತರ ಸಂಪುಟಕ್ಕೆ ಹಿಂದಿರುಗಿದ್ದಾರೆ.

ಯುಪಿಎ ಮೊದಲ ಅವಧಿ ಆಡಳಿತದಲ್ಲಿ ಕಾರ್ಮಿಕ, ಕ್ರೀಡೆ ಮತ್ತು ಯುವಜನ ಸೇವೆ, ಅಂಕಿಸಂಖ್ಯೆ ಮತ್ತು ಕಾರ್ಯಕ್ರಮ ಅನುಷ್ಠಾನ, ಸಾಗರೋತ್ತರ ವ್ಯವಹಾರ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರಿಗೆ ಸಿ.ಪಿ. ಜೋಷಿ ನಿರ್ವಹಿಸುತ್ತಿದ್ದ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ನೀಡಲಾಗಿದೆ. ರಾಜಸ್ತಾನದ ಹಿರಿಯ ಮುಖಂಡ ಸಿಸ್‌ರಾಂ ಓಲಾ, ಗಿರಿಜಾ ವ್ಯಾಸ್ ಹಾಗೂ ಆಂಧ್ರಪ್ರದೇಶದ ಕೆ.ಎಸ್.ರಾವ್ ಸಂಪುಟ ದರ್ಜೆ ಸಚಿವರಾಗಿದ್ದಾರೆ.  ಮಹಾರಾಷ್ಟ್ರದ ಮಾಣಿಕ್‌ರಾವ್ ಗಾವಿಟ್, ಪಂಜಾಬ್‌ನ ಸಂತೋಷ್ ಚೌಧರಿ, ಆಂಧ್ರಪ್ರದೇಶದ ಜೆ.ಡಿ. ಸೀಲಂ ಮತ್ತು  ತಮಿಳುನಾಡಿನ ಇ.ಎನ್.ಎಸ್. ನಾಚಿಯಪ್ಪನ್ ರಾಜ್ಯ ದರ್ಜೆ ಸಚಿವರಾಗಿದ್ದಾರೆ. ಇದರಿಂದಾಗಿ ಕೇಂದ್ರ ಸಚಿವರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ. ಇನ್ನು ನಾಲ್ಕು ತಿಂಗಳ ಒಳಗೆ ರಾಜಸ್ತಾನ ವಿಧಾನಸಭಾ ಚುನಾವಣೆ ಎದುರಾಗಲಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಗಿರಿಜಾ ವ್ಯಾಸ್ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಲಾಗಿದೆ.ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿಗೆ ಆಂಧ್ರ ಪ್ರದೇಶ ವಿಧಾನಸಭೆಗೂ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆ ರಾಜ್ಯದ ಕೆ.ಎಸ್. ರಾವ್ ಮತ್ತು ಮಾಜಿ ಐಎಎಸ್ ಅಧಿಕಾರಿ ಸೀಲಂ ಅವರಿಗೆ ಇದೇ ಮೊದಲ ಬಾರಿಗೆ ಸಚಿವ ಸ್ಥಾನ ನೀಡಲಾಗಿದೆ. 

ಆಂಧ್ರ ಕರಾವಳಿ ಭಾಗದ 69 ವರ್ಷದ ಕೆ.ಎಸ್. ರಾವ್ ಐದು ಸಲ ಲೋಕಸಭೆಗೆ ಆಯ್ಕೆ ಆದರೂ ಸಂಪುಟದಲ್ಲಿ ಅವರಿಗೆ ಸ್ಥಾನ ದೊರಕಿರಲಿಲ್ಲ.

ಕಳೆದ ವರ್ಷ ಸಂಪುಟ ಪುನರ್ ರಚನೆಯಾದಾಗಲೇ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಅವರು, ಅದು ಸಿಗದ ಕಾರಣ ಅಸಮಾಧಾನಗೊಂಡು ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಈ ಬಾರಿ ಅವರಿಗೆ ಜವಳಿ ಖಾತೆ ಹೊಣೆ ವಹಿಸಲಾಗಿದೆ. ಸೀಲಂ ಅವರಿಗೆ ಹಣಕಾಸು ಖಾತೆ ನೀಡಲಾಗಿದೆ. ಖಾತೆ ವಿವರ: ನಾಲ್ಕು ವರ್ಷಗಳ ನಂತರ ಮತ್ತೆ ಸಚಿವರಾಗುವ ಅದೃಷ್ಟ ಪಡೆದಿರುವ 86 ವರ್ಷದ ಸಿಸ್‌ರಾಂ ಓಲಾ ಸಂಪುಟದ ಅತ್ಯಂತ ಹಿರಿಯ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನಿಗಿಂತಲೂ ವಯಸ್ಸಿನಲ್ಲಿ ಐದು ವರ್ಷ ಹಿರಿಯರಾದ ರಾಜಸ್ತಾನದ ಜಾಟ್ ಸಮುದಾಯದ ಪ್ರಭಾವಿ ನಾಯಕರಾದ ಅವರು ಯುಪಿಎ-1 ಸರ್ಕಾರದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವರಾಗಿದ್ದರು. ಈಗಲೂ ಅವರಿಗೆ ಅದೇ ಖಾತೆ ವಹಿಸಲಾಗಿದೆ.ಅಜಯ್ ಮಾಕನ್ ಅವರ ರಾಜೀನಾಮೆಯಿಂದ ತೆರವಾದ ವಸತಿ, ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಖಾತೆಯು ಗಿರಿಜಾ ವ್ಯಾಸ್ ಅವರಿಗೆ ದೊರಕಿದೆ. ಅವರು ಇದೇ ಮೊದಲ ಬಾರಿಗೆ ಸಚಿವರಾಗುವ ಅವಕಾಶ ಪಡೆದಿದ್ದಾರೆ. ಮಹಾರಾಷ್ಟ್ರದ ಬುಡಕಟ್ಟು ಜನಾಂಗದ 78 ವರ್ಷದ ಮಾಣಿಕ್ ರಾವ್ ಗಾವಿಟ್ ಒಂಬತ್ತನೆಯ ಬಾರಿಗೆ ಸಂಸದರಾಗಿದ್ದು, ಎರಡನೇ ಬಾರಿಗೆ ಸಚಿವಾರಗುವ ಅವಕಾಶ ಪಡೆದಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಹೊಣೆ ವಹಿಸಲಾಗಿದೆ. ಪಂಜಾಬ್‌ನ ಸಂತೋಷ್ ಚೌಧರಿ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ನೀಡಲಾಗಿದೆ.

ರಾಜ್ಯಸಭಾ ಸದಸ್ಯರಾದ ನಚಿಯಪ್ಪನ್ 2ಜಿ ತರಂಗಾಂತರ ಹಗರಣದ ತನಿಖೆಗೆ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿ ಸದಸ್ಯರೂ ಆಗಿದ್ದಾರೆ. ಅವರಿಗೆ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ದೊರಕಿದೆ. ಓಲಾ ಮತ್ತು ಫರ್ನಾಂಡಿಸ್ 70 ವರ್ಷಗಿಂತ ಮೇಲ್ಪಟ್ಟವರಾಗಿದ್ದು, ರಾವ್ ಮತ್ತು ವ್ಯಾಸ್ ಕ್ರಮವಾಗಿ 69 ಮತ್ತು 67 ವರ್ಷ ವಯಸ್ಸಿನವರಾಗಿದ್ದಾರೆ. 48 ವರ್ಷದ ಬಂದರು ಖಾತೆ ಸಚಿವ ಜಿ.ಕೆ. ವಾಸನ್ ಅವರು ಮನಮೋಹನ್ ಸಿಂಗ್ ಸಂಪುಟದ ಅತಿ ಕಿರಿಯ ಸಚಿವರಾಗಿದ್ದಾರೆ. ಯುಪಿಎ ಅಂಗಪಕ್ಷವಾಗಿದ್ದ ಡಿಎಂಕೆಯ ಆರು ಸಚಿವರು ಮಾರ್ಚ್‌ನಲ್ಲಿ ಸರ್ಕಾರದಿಂದ ಹೊರ ನಡೆದ ಕಾರಣ ಈ ಸ್ಥಾನಗಳು ತೆರವಾಗಿದ್ದವು. ಕಳೆದ ತಿಂಗಳು ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಮತ್ತು ಕಾನೂನು ಸಚಿವ ಅಶ್ವನಿ ಕುಮಾರ್ ರಾಜೀನಾಮೆ ನೀಡಿದ್ದರು. ಸಚಿವರಾಗಿದ್ದ ಸಿ.ಪಿ. ಜೋಶಿ, ಅಜಯ್ ಮಾಕನ್ ಅವರಿಗೆ ಪಕ್ಷದ ಸಂಘಟನಾ ಹೊಣೆ ವಹಿಸಲಾಗಿದೆ.ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಈ ಎಂಟು ಮಂದಿಗೆ ಅಧಿಕಾರ ಮತ್ತು ಗೋಪ್ಯತೆ ಪ್ರಮಾಣ ವಚನ ಬೋಧಿಸಿದರು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಕೇಂದ್ರದ ಬಹುತೇಕ ಸಚಿವರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.