ಭಾನುವಾರ, ಜೂನ್ 20, 2021
20 °C
ಚುನಾವಣಾಪೂರ್ವ ಸಮೀಕ್ಷೆ ನಿಷೇಧ ನಿರ್ಧಾರ

ಚೆಂಡು ಸರ್ಕಾರದ ಅಂಗಳಕ್ಕೆ?

ಅಜಿತ್‌ ಅತ್ರಾಡಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಚುನಾವಣಾ ಸಂದರ್ಭದಲ್ಲಿ ಜನಮತ ಸಮೀಕ್ಷೆ ನಡೆಸುವುದನ್ನು ತನ್ನ ಸಾಂವಿ­ಧಾನಿಕ ಅಧಿಕಾರ ಬಳಸಿ ಚುನಾವಣಾ ಆಯೋಗವು ನಿಷೇಧಿಸಬೇಕು ಎಂದು ಕಾನೂನು ಸಚಿವಾಲಯ ಹೇಳಿದೆ. ಆದರೆ ಸರ್ಕಾರ ಮಾತ್ರ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಹೇಳುವ ಮೂಲಕ ಚೆಂಡನ್ನು ಮರಳಿ ಸರ್ಕಾರದ ಅಂಗಳಕ್ಕೆ ಕಳುಹಿಸಲು ಆಯೋಗ ಸಜ್ಜಾಗಿದೆ ಎಂದು ತಿಳಿದು ಬಂದಿದೆ.ಜನಮತ ಸಮೀಕ್ಷೆ ನಿಷೇಧಕ್ಕೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಸಂಸತ್ತಿನ ಮೂಲಕ ಸರ್ಕಾರ ಮಾತ್ರ ಈ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯ. ಇದು ಚುನಾವಣಾ ಆಯೋಗದ ವ್ಯಾಪ್ತಿಯ­ಲ್ಲಿರುವ ಕೆಲಸ ಅಲ್ಲ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದಾಗಿ 2009ರಿಂದ ಮತಗಟ್ಟೆ ಸಮೀಕ್ಷೆಯನ್ನು ಆಯೋಗ ನಿಷೇಧಿಸಿದೆ. ಹಾಗೆಯೇ ಜನಮತ ಸಮೀಕ್ಷೆಗೆ ಸಂಬಂಧಿಸಿ­ದಂತೆಯೂ ಕಾನೂನು ಸಚಿವಾಲಯವು ಅಗತ್ಯ ತಿದ್ದುಪಡಿಗೆ ಕ್ರಮ ಕೈಗೊಳ್ಳಬೇಕು ಎಂದು ಆಯೋಗದ ಮೂಲಗಳು ತಿಳಿಸಿವೆ.ಜನಮತ ಸಮೀಕ್ಷೆ ಬಗ್ಗೆ ಆಯೋಗವು ತನ್ನ ನಿಲುವನ್ನು ಇನ್ನೂ ಸರ್ಕಾರಕ್ಕೆ ತಿಳಿಸಿಲ್ಲ. ಆದರೆ ಶೀಘ್ರವೇ ಕಾನೂನು ಸಚಿವಾಲಯಕ್ಕೆ ಪತ್ರ ಬರೆದು ನಿಲುವು ಸ್ಪಷ್ಟಪಡಿಸಲಿದೆ.ಸಂವಿಧಾನದ 324ನೇ ವಿಧಿ ಪ್ರಕಾರ ಇರುವ ಅಧಿಕಾರ ಬಳಸಿ ಆಯೋಗವೇ ಸಮೀಕ್ಷೆಗೆ ನಿಷೇಧ ಹೇರಬೇಕು ಎಂದು ಕಾನೂನು ಸಚಿವಾಲಯ ಹೇಳಿತ್ತು.ಪಕ್ಷವೊಂದರ ಪರವಾಗಿ ಸಮೀಕ್ಷೆ ಬರು-­ವಂತೆ ಕಂಪೆನಿಯೊಂದು ಹಣ ಪಡೆ­ಯು­ತ್ತಿ­ರು­ವು­ದನ್ನು ಸುದ್ದಿ ವಾಹಿನಿಯೊಂದು ಮಾರು­ವೇಷದ ಕಾರ್ಯಾಚರಣೆಯಲ್ಲಿ ಬಹಿ­ರಂಗ­ಪಡಿಸಿತ್ತು. ಆನಂತರ ಸಮೀಕ್ಷೆ ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಆಯೋಗವು ಸರ್ಕಾರ­ವನ್ನು ಕೋರಿತ್ತು. ಕಾಂಗ್ರೆಸ್‌ ಕೂಡ ಸಮೀಕ್ಷೆ ನಿಷೇಧಿಸ­ಬೇಕು ಎಂದು ವಿನಂತಿಸಿಕೊಂಡಿತ್ತು.ಜನಮತ ಸಮೀಕ್ಷೆ ಪ್ರಕಟಣೆ ಮತ್ತು ಪ್ರಸಾರವನ್ನು ನಿಷೇಧಿಸಿ ಆಯೋಗವು 1999ರಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತಂದಿತ್ತು. ಆದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ  ಎಂಬ ಅಭಿಪ್ರಾಯ ವ್ಯಕ್ತವಾದ್ದರಿಂದ ಈ ಮಾರ್ಗದರ್ಶಿ ಸೂತ್ರಗಳನ್ನು ಕೈಬಿಟ್ಟಿತ್ತು.ಚುನಾವಣಾ ಪ್ರಕ್ರಿಯೆ ಆರಂಭವಾದ ನಂತರ ಜನಮತ ಸಮೀಕ್ಷೆ ನಿಷೇಧಿಸಲು ಕ್ರಮ ಕೈಗೊಳ್ಳಲು ಕಳೆದ ವರ್ಷವೇ ಸರ್ಕಾರಕ್ಕೆ ಆಯೋಗ ಪತ್ರ ಬರೆದು ಕೇಳಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.