ಶುಕ್ರವಾರ, ಮೇ 7, 2021
26 °C

ಛಾಯಾಗ್ರಹಣ ಅಕಾಡೆಮಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಛಾಯಾಗ್ರಾಹಕರ ಹಿತಾಸಕ್ತಿ ಕಾಪಾಡುವ ಜೊತೆಗೆ ಛಾಯಾಗ್ರಹಣವನ್ನು ಪ್ರೋತ್ಸಾಹಿಸಲು ರಾಜ್ಯ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಲು ಸರಕಾರದ ಮೇಲೆ ಒತ್ತಡ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.ನಗರದ ಬಸವ ಭವನದ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ತಾಲ್ಲೂಕು ಛಾಯಾಗ್ರಾಹಕರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೇಂದ್ರದ ಮಾಜಿ ಸಚಿವ ಸಿದ್ದು ನ್ಯಾಮಗೌಡ ಸಂಘದ ನಾಮಫಲಕ ಅನಾವರಣಗೊಳಿಸಿ ಮಾತನಾಡಿ, ವೃತ್ತಿ ಗೌರವ ಬೆಳೆಸಿಕೊಳ್ಳಲು ಛಾಯಾಗ್ರಾಹಕರು ಆದ್ಯತೆ ನೀಡಬೇಕು. ಕೇವಲ ರಾಜಕಾರಣಿಗಳಿಗೆ ಅವಹೇಳನ ಆಗುವಂತಹ ಚಿತ್ರ ಪ್ರಕಟಣೆಗೆ ಮುನ್ನ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ ಮಾತನಾಡಿ, ಛಾಯಾಚಿತ್ರಕ್ಕೆ ಜಾಗತಿಕ ಭಾಷೆ ಇದೆ. ಅನಕ್ಷರಸ್ಥರು ಕೂಡ ಚಿತ್ರವನ್ನು ನೋಡಿ ಸಹಜವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.ಸಾಕ್ಷ್ಯಾಧಾರಕ್ಕಾಗಿ ನೆಗೆಟಿವ್ ಸಹಿತ ಛಾಯಾಚಿತ್ರಗಳನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಿದರೆ ನ್ಯಾಯಾಲಯ ಕೂಡ ಮಾನ್ಯ ಮಾಡುತ್ತದೆ. ಹಾಗಾಗಿ ಛಾಯಾಗ್ರಾಹಕರು ವಿಶ್ವಾಸಾರ್ಹರಾಗಿದ್ದರು. ಆದರೆ ಡಿಜಿಟಲ್ ತಂತ್ರಜ್ಞಾನ ಬಂದ ಬಳಿಕ ವಿಶ್ವಾಸರ್ಹತೆಯನ್ನು ಪ್ರಶ್ನಿಸುವಂತಾಗಿದೆ ಎಂದರು.ಛಾಯಾಗ್ರಾಹಕರು ವಿಶ್ವಾಸದಿಂದ ಕೆಲಸ ಮಾಡಬೇಕು. ಹೊಸ ತಂತ್ರಜ್ಞಾನದ ಜೊತೆಗೆ ವೃತ್ತಿ ಕೌಶಲವನ್ನು ಬೆಳೆಸಿಕೊಂಡು ಗ್ರಾಹಕರನ್ನು ಆಕರ್ಷಿಸುವಂತೆ ನೈಪುಣ್ಯತೆ ಬೆಳೆಸಿಕೊಳ್ಳಬೇಕು. ತಂತ್ರಜ್ಞಾನಕ್ಕೆ ಬದಲಾವಣೆ ಅಗತ್ಯ ಎಂದು ನುಡಿದರು.ರಾಜ್ಯ ಫೋಟೊಗ್ರಾಫರ್ಸ್‌ ಸಂಸ್ಥೆ ಅಧ್ಯಕ್ಷ ಬಿ.ಎಸ್. ಶಶಿಧರ, ಬೆಂಗಳೂರಿನ ಎಸ್.ಎನ್. ಸಿಂಗ್ ಅವರು ಛಾಯಾಗ್ರಹಣದಲ್ಲಿರುವ ಹೊಸ ವಿನ್ಯಾಸ, ತಂತ್ರಜ್ಞಾನ, ವೃತ್ತಿ ಕೌಶಲ ಹಾಗೂ ಇನ್ನಿತರ ವಿಷಯಗಳ ಕುರಿತು ಮಾಹಿತಿ ನೀಡಿದರು. ಛಾಯಾಗ್ರಾಹಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸದಾನಂದ ಹಿರೇಮಠ, ನಗರಸಭೆ ಅಧ್ಯಕ್ಷ ಶ್ರೀಶೈಲ ರಾಂಬಳ್ಳಿ, ಜಮಖಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಡು ಮಾಳಿ, ಜಿ.ಪಂ. ಸದಸ್ಯೆ ಲಕ್ಷ್ಮಿಬಾಯಿ ನ್ಯಾಮಗೌಡ, ಜಿ.ಪಂ. ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಛಾಯಾಗ್ರಾಹಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಸ ಕಾಶೀದ, ಏಗಪ್ಪ ಸವದಿ ಉಪಸ್ಥಿತರಿದ್ದರು.ಶಾಂಭವಿ ದೇಸಾಯಿ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕ ಮ.ಕೃ. ಮೇಗಾಡಿ ಸ್ವಾಗತ ಗೀತೆ ಹಾಡಿದರು. ರಮೇಶ ಹಲವಾಯಿ ಸ್ವಾಗತಿಸಿದರು. ಆರ್.ಪಿ.ನ್ಯಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಕೇಶ ಮಾಳಿ ಮನವಿ ಪತ್ರ ಸಲ್ಲಿಸಿದರು. ಡಾ.ಬಿ.ಬಿ. ಶಿರಡೋಣಿ, ಅಶೋಕ ಜೋಶಿ ನಿರೂಪಿಸಿದರು. ರವೀಂದ್ರ ಕೋಳಿ ವಂದಿಸಿದರು.ಸನ್ಮಾನ: ಹಿರಿಯ ಛಾಯಾಚಿತ್ರಗ್ರಾಹಕರಾದ ಮಹಾದೇವಪ್ಪ ಹರಕಂಗಿ (1945ರಿಂದ), ಬಾಳಾಸಾಹೇಬ ಕಾಶೀದ (1950 ರಿಂದ), ಬಸವರಾಜ ಹಲವಾಯಿ, ಕಲ್ಯಾಣಪ್ಪ ಬಾಂಗಿ, ರಾಮನಿವಾಸ ಚಿಂಡಕ(ಬನಹಟ್ಟಿ) ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.ಮನವಿ: ಛಾಯಾಗ್ರಾಹಕರ ಕಲೆಯನ್ನು ಗುರುತಿಸಿ ಮಾಸಾಶನ/ ಗೌರವಧನ ನೀಡಬೇಕು. ಸಂಘದ ಕಚೇರಿ ನಿರ್ಮಾಣಕ್ಕಾಗಿ ನಗರಸಭೆಯ ವ್ಯಾಪ್ತಿಯಲ್ಲಿ ನಿವೇಶನ ಒದಗಿಸಬೇಕು ಎಂದು ಒತ್ತಾಯಿಸಿ ಸಂಘದ ಪರವಾಗಿ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಸಂಘದ ಕಚೇರಿ ನಿರ್ಮಾಣಕ್ಕಾಗಿ ಮತ್ತು ಛಾಯಾಗ್ರಾಹಕರ ಕ್ಷೇಮಾಭಿವೃದ್ದಿ ನಿಧಿಗೆ ಶಾಸಕರ ನಿಧಿಯಿಂದ ಅನುದಾನ ಬಿಡುಗಡೆ ಮಾಡಬೇಕು ಎಂದು ಸಂಘದ ಮುಖಂಡರು ಶಾಸಕರು ಮತ್ತು ಸಂಘದ ಪದಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.