ಮಂಗಳವಾರ, ಮೇ 11, 2021
28 °C

ಜತೆಗಿರುವನು ಚಂದಿರ

- ಡಿ.ಕೆ. ರಮೇಶ್ Updated:

ಅಕ್ಷರ ಗಾತ್ರ : | |

ದುರಿಗೆ ಕಂಪ್ಯೂಟರ್. ವೃತ್ತಿ ಸಾಫ್ಟ್‌ವೇರ್. ಮನಸು ಮಾತ್ರ ಇಯರ್‌ಫೋನ್‌ನತ್ತ. ಕೇಳಿದಷ್ಟೂ ಹಾಡುಗಳು. ಮೊಗೆದಷ್ಟೂ ಪದಗಳು. ಮೈಸೂರಿನಲ್ಲಿ ಕುಳಿತರೂ ಗಾಂಧಿನಗರದ ಧ್ಯಾನ. ಮುಂದೆ ನಡೆದುದಕ್ಕೆಲ್ಲಾ ಅದೇ ಸೋಪಾನ.ಅವರು ಪೂರ್ಣಚಂದ್ರ ತೇಜಸ್ವಿ. ಕುವೆಂಪು ಅಭಿಮಾನಿ, ಲೇಖಕರೂ ಆದ ತಂದೆ ಸಾವೇರ ಸ್ವಾಮಿ ಇಟ್ಟ ಹೆಸರದು. ಅಪ್ಪನಂತೆಯೇ ಚಿಕ್ಕಂದಿನಿಂದಲೂ ಸಂಸ್ಕೃತಿ ವ್ಯಾಮೋಹ. ಅರಮನೆ ನಗರಿಯ `ನಿರಂತರ' ಪ್ರತಿಷ್ಠಾನದೊಂದಿಗೆ ಗುರುತಿಸಿಕೊಂಡ ಮೇಲೆ ರಂಗಭೂಮಿಯ ನಂಟು. ಬಿ.ವಿ.ಕಾರಂತ, ಜೆನ್ನಿ, ಸಿ. ಅಶ್ವತ್ಥ್‌ರ ಪ್ರಭಾವ. ಇತ್ತ `ಸ್ಟೋನೇಜ್' ಎಂಬ ರಾಕ್‌ಬ್ಯಾಂಡ್‌ನೊಂದಿಗೂ ಕೈ ಜೋಡಿಸಿದ್ದಾಯಿತು.

ಸಂಗೀತದ ಅಲೆ ಸಾಫ್ಟ್‌ವೇರ್ ಕಚೇರಿಯಿಂದ ನಾದತೀರಕ್ಕೆ ಕರೆತಂದಿತು. ಶ್ರೀರಂಗಪಟ್ಟಣದ ಕಾವೇರಿ ತಟದಲ್ಲಿ ಗುರುಗಳಾದ ಸುಂದರಮೂರ್ತಿ ಅವರಿಂದ ರಾಗದ ಪಾಠ. ಜೊತೆಗೆ ಕೊಳಲಿನ ಸಹವಾಸ.ಅವೆಲ್ಲಾ ಪ್ರಯತ್ನಗಳಾಗಿದ್ದವೆಯೇ ಹೊರತು `ಪೂರ್ಣ'ತೆ ಲಭಿಸಿರಲಿಲ್ಲ. ಹಾಗೊಂದು ಅವಕಾಶ ಸಿಕ್ಕದ್ದು ಸಾಮಾಜಿಕ ಜಾಲತಾಣದಲ್ಲಿ. `ಲೂಸಿಯಾ' ಚಿತ್ರ ಸಿದ್ಧವಾಗುತ್ತಿದೆ ಎಂದು ಫೇಸ್‌ಬುಕ್‌ನಲ್ಲಿ ಸಂದೇಶ ಹರಿಬಿಟ್ಟಿದ್ದರು ನಿರ್ದೇಶಕ ಪವನ್‌ಕುಮಾರ್. ಎಲ್ಲರೂ ಹಾಗೆ ಮಾಡಿ, ಹೀಗೆ ಮಾಡಿ ಎಂದು ಸಲಹೆ ನೀಡುವವರೇ.

ಆದರೆ ತೇಜಸ್ವಿ ಶೀರ್ಷಿಕೆಗೀತೆಯೊಂದನ್ನು ಸಿದ್ಧಪಡಿಸಿ ಪವನ್ ಅವರಿಗೆ ಮೇಲ್ ಮಾಡಿದರು. ಇತ್ತ ಪ್ರತಿಕ್ರಿಯೆಗಳ ಭಾರದಲ್ಲಿ ನೊಣೆದಿದ್ದ ಪವನ್‌ರಿಗೆ ಒಂದು ಬಗೆಯ ರೋಮಾಂಚನ. ನಾದದ ಮೂಲಕವೂ ಸ್ಪಂದನ ದೊರೆಯಿತೆಂಬ ಖುಷಿ. ಯಾರು ನೀವು? ಕೃತಿಗಳನ್ನೆಲ್ಲ ತೆಗೆದುಕೊಂಡು ಬೆಂಗಳೂರಿಗೆ ಬನ್ನಿ ಎಂಬ ಆಹ್ವಾನ.ಅಲ್ಲಿ ಯೋಗರಾಜ್ ಭಟ್‌ರಂತಹ ಘಟಾನುಘಟಿಗಳು ಕುಳಿತಿದ್ದಾರೆ. ಇವರಿಗೆ ದಿಗಿಲು. ಸಂಗೀತದ ಬಗ್ಗೆ ಸರಿಯಾದ ಹಿನ್ನೆಲೆ ಬೇರೆ ಇಲ್ಲ ಎಂಬ ಆತಂಕ. ಭಟ್ಟರು ಹಿಂದಿನ ಸಿನಿಮಾಗಳ ತಿರಸ್ಕೃತ ಸಾಹಿತ್ಯವನ್ನು ನೀಡುತ್ತ ಒಂದು ಕೈ ನೋಡಿ ಎಂದರು. ಲೂಸಿಯಾದ `ಹೇಳು ಶಿವಾ' ಹಾಡು ಹುಟ್ಟಿದ್ದು ಹೀಗೆ. ತೇಜಸ್ವಿ ಬಗ್ಗೆ ಪವನ್ ಇರಿಸಿದ್ದ ನಂಬಿಕೆ ಇನ್ನಷ್ಟು ಗಟ್ಟಿಯಾಗುತ್ತಾ ಹೋಯಿತು.`ತಿನ್ಬೇಡ ಕಮ್ಮೀ ತಿನ್ ತಿನ್ಬೇಡ ಕಮ್ಮೀ' ಹಾಡು ಹೆಣೆದಾಗಲಂತೂ ತೇಜಸ್ವಿ ಕೇಳುಗರ ಹೃದಯ ಕವಾಟದಲ್ಲಿ ಭದ್ರವಾಗಿ ಕುಳಿತಿದ್ದರು. `ಲೂಸಿಯಾ'ದ ಕಥಾನಾಯಕನಿಗೆ ಪ್ರೇಯಸಿ ಇಂಗ್ಲಿಷ್ ಕಲಿಸಲು ಹೊರಡುತ್ತಾಳೆ. ವಿದೇಶಿ ಗೆಳತಿಯರನ್ನು ಕರೆತರುತ್ತಾಳೆ.

ಆಗ ಹುಟ್ಟುವ ಹಾಡು ಇದು. ಚಾಮರಾಜನಗರ, ಕೊಳ್ಳೇಗಾಲ ಸುತ್ತಮುತ್ತ ಕಂಪೆನಿ ನಾಟಕಗಳು ನಡೆಯುವಾಗ `ತಿನ್ಬೇಡ ಕಮ್ಮಿ' ಹಾಡು ಬಳಕೆಯಾಗುತ್ತಿತ್ತು. ಅದರ ಒಂದು ಸಾಲನ್ನು ಪಡೆದು ಕತೆಗೆ ಪೂರಕವಾಗಿ ಗೀತೆ ಹುಟ್ಟಿತು.ತಮಿಳಿನ `ಕೊಲವೆರಿ ಡಿ'ಯನ್ನು ನೆನಪಿಸಿದರೂ ಈ ಹಾಡು ಬೇರೊಂದು ಮಜಲು ಪಡೆದಿದೆ. ಅದಕ್ಕೆ ಕಾರಣ ಪದಗಳನ್ನು ದುಡಿಸಿಕೊಂಡಿರುವ ತೇಜಸ್ವಿ ಅವರ ಜಾಣ್ಮೆ. ಇದರೊಂದಿಗೆ ನಾಲ್ಕು ಹಾಡುಗಳಿಗೆ ಅವರು ಸಾಹಿತ್ಯ ರಚಿಸಿದ್ದಾರೆ. ಏಳನೇ ತರಗತಿಯಲ್ಲೇ ಪದ್ಯ ಬರೆಯುವ ಗೀಳು ತೇಜಸ್ವಿ ಅವರಿಗೆ. ಆಗ ಬರೆದ ಗಾಳಿಪಟ ಕುರಿತ ಪದ್ಯವೊಂದು `ಪ್ರಜಾವಾಣಿ'ಯಲ್ಲಿ ಪ್ರಕಟವಾಗಿ ಅವರೊಳಗೆ ರೋಮಾಂಚನ ತಂದಿತ್ತು.

ಜಿ.ಪಿ. ರಾಜರತ್ನಂ ನಂತರ ಪದ ಪ್ರಯೋಗಗಳನ್ನು ನಡೆಸಿದವರು ಬಹಳ ಕಡಿಮೆ. ಅಂಥದ್ದೊಂದು ಪ್ರಯತ್ನ `ಲೂಸಿಯಾ'ದಲ್ಲಿ ನಡೆದಿದೆಯಂತೆ. ಮುಂದೆಯೂ ಇಂಥದೇ ವಿಶಿಷ್ಟ ಪ್ರಯೋಗಗಳನ್ನು ಮಾಡುವ ತವಕ ಅವರದು.ತೇಜಸ್ವಿಯವರಂತೆ `ಲೂಸಿಯಾ'ದ ಗಾಯಕರೂ ಹೊಸಬರೇ. ಅದರಲ್ಲಿಯೂ ನಾಲ್ಕು ಹಾಡುಗಳಿಗೆ ದನಿ ನೀಡಿರುವ ನವೀನ್ ಸಜ್ಜು ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಕಲಾವಿದ. ಅವರ ಕಂಠ ತೇಜಸ್ವಿಯವರನ್ನು ಸೆಳೆದಿತ್ತು. ಸರಿ ಬೆಳ್ಳಿತೆರೆಗೆ ಅವರನ್ನು ಹೊಂದಿಸುವ ಯತ್ನಕ್ಕೆ ಆರೇಳು ತಿಂಗಳು ಹಿಡಿಯಿತು. ಆದರೆ ಕಮರ್ಷಿಯಲ್ ಅಂಶಗಳನ್ನೂ ಗಮನಿಸಬೇಕಿತ್ತು.

ಆಗ ಪರಿಣತ ಗಾಯಕರೇ ಬೇಕು ಎಂಬ ಸವಾಲು ಎದುರಾಯಿತು. ಬೇಡವೇ ಬೇಡ ಎಂಬ ನಿರ್ಣಯಕ್ಕೆ ಚಿತ್ರತಂಡ ಬಂದಿತ್ತು. ಪರಿಣಾಮ ಅನನ್ಯ ಭಟ್, ಬಪ್ಪಿ ಬ್ಲಾಸಮ್, ಉದಿತ್ ಹರಿದಾಸ್, ಅರುಣ್ ಎಂ.ಸಿ, ಮೋನಿಶ್ ಕುಮಾರ್ ಎಂಬ ಹೊಸ ಪ್ರತಿಭೆಗಳು ಬೆಳಕಿಗೆ ಬಂದವು. ಹೊಸಬರೇ ಇದ್ದ ಲೂಸಿಯಾದ ಗಾಯಕರ ತಂಡ ಪ್ರಯೋಗಕ್ಕೆ ಸಾಕ್ಷಿಯಾಯಿತು ಎಂಬುದನ್ನು ತೇಜಸ್ವಿ ಮರೆಯದೇ ಹೇಳುತ್ತಾರೆ.`ತಿನ್ಬೇಡ ಕಮ್ಮಿ'ಯಷ್ಟೇ ಜನಮನ್ನಣೆ ಪಡೆದ ಹಾಡು `ನೀ ಮಾಯೆಯೊಳಗೋ'. ಕನಕದಾಸರ ಕೀರ್ತನೆಯ ಸಾಲೊಂದು ಈ ಹಾಡಿನ ಮೂಲಕ ಬಳಕೆಯಾಗಿದೆ. ಅದಕ್ಕೆ ಅನನ್ಯವಾದ ಧ್ವನಿ ನೀಡಿರುವುದು ಅನನ್ಯ ಭಟ್ ಹಾಗೂ ಉದಿತ್ ಹರಿದಾಸ್. ಈ ಹಾಡು ಬರೆಯಲು ತೇಜಸ್ವಿ ಅವರ ತಂದೆ ಪ್ರೇರಣೆಯಂತೆ.ಈಗ ತೇಜಸ್ವಿ ಇನ್ನೊಂದು ಮಗ್ಗುಲಿಗೆ ಹೊರಳಿದ್ದಾರೆ. `ದಿಲ್‌ದಾರ್' ನಿರ್ದೇಶಿಸಿದ್ದ ಅಮರ್‌ರ ಹೊಸ ಚಿತ್ರ `ನಾನು ನಂ ಹುಡ್ಗಿ'ಗೆ ರಾಗ ಸಂಯೋಜಿಸುತ್ತಿದ್ದಾರೆ. ಕೃಷ್ಣ ಲೇಖನ ಆಕ್ಷನ್ ಕಟ್ ಹೇಳುತ್ತಿರುವ `ಚತುರ್ಭುಜ'ದಲ್ಲೂ ಅವರ ನಾದಲೀಲೆ ಇದೆ. `ಲೂಸಿಯಾ'ಗಿಂತ ಇವೆರಡೂ ಭಿನ್ನ ಸವಾಲುಗಳು ಎನ್ನುತ್ತಾರೆ ಅವರು.

`ತಿನ್ಬೇಡ ಕಮ್ಮಿ' ಹಾಡಿನ ಅಬ್ಬರ ಹೆಚ್ಚಾದ ನಂತರ ಅನೇಕ ಅವಕಾಶಗಳು ಅರಸಿ ಬಂದರೂ ಒಂದೆರಡನ್ನು ಮಾತ್ರ ಆರಿಸಿಕೊಂಡಿದ್ದಾರೆ. ಅವರ ಆಯ್ಕೆ ವಿಧಾನ ಅಷ್ಟರಮಟ್ಟಿಗೆ ನಾಜೂಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.