ಶನಿವಾರ, ಜನವರಿ 18, 2020
22 °C

ಜನಪದ ಕಲೆ ಗ್ರಾಮೀಣ ಬದುಕಿನ ಅಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಿಬಂಡೆ: ಗ್ರಾಮೀಣ ಜನ ಜೀವನದ ಅವಿಭಾಜ್ಯ ಅಂಗವಾಗಿರುವ ಜನಪದ ಕಲೆಯನ್ನು ಉಳಿಸಿ, ಬೆಳೆಸಲು ಯುವ ಪೀಳಿಗೆ ಮುಂದಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ  ವೈ.ಎಲ್.ಹನುಮಂತರಾವ್ ಸಲಹೆ ನೀಡಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಹಾಗೂ ರಾಷ್ಟ್ರಪಿತ ಯುವಜನ ಸೇವಾ ಸಂಘದ ಸಹಯೋಗದಲ್ಲಿ ಈಚೆಗೆ ನಡೆದ ತಾಲ್ಲೂಕು ಮಟ್ಟದ ಯುವಜನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.ತಾಲ್ಲೂಕಿನ ಕಲಾವಿದರಾದ ಮುಖವೀಣೆ ಅಂಜಿನಪ್ಪ, ಕಡೇಹಳ್ಳಿ ನಂಜುಂಡಪ್ಪ, ಗಮಕ ಸಾಹಿತಿ ರಾಮಾಚಾರ್, ರಂಗಕರ್ಮಿ ಜಿ.ಬಿ.ಶೆಟ್ಟಪ್ಪ, ನಾಟಕಕಾರ ಎಂ.ಶ್ರೀನಿವಾಸ ಮೂರ್ತಿ ತಾಲ್ಲೂಕಿನ ಸಂಸ್ಕೃತಿಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಿದ ಖ್ಯಾತಿ ಹೊಂದಿದ್ದಾರೆ. ಆದರೆ ಇಂದಿನ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಯ ನೆರಳಿನಲ್ಲಿ ಗ್ರಾಮೀಣ ಜನಪದ ಕಲಾ ಸೊಗಡನ್ನು ಮರೆಯುತ್ತಿರುವುದು ನೋವಿನ ಸಂಗತಿ ಎಂದರು.ಚಲನಚಿತ್ರಗಳಲ್ಲಿ ನಮ್ಮ ನಾಡಿನ ಶ್ರೇಷ್ಠ ಜನಪದ ಮತ್ತು ಭಾವಗೀತೆಗಳ ಸೊಬಗನ್ನು ನಾಶಮಾಡಿ ಕರ್ಕಶ ಸಂಗೀತ ಸಂಯೋಜನೆಯೊಂದಿಗೆ ಬಳಸಲಾಗುತ್ತಿದೆ. ಈ ಧೋರಣೆಯನ್ನು ಸಾಹಿತ್ಯ ಪರಿಷತ್ ಒಪ್ಪುವುದಿಲ್ಲ. ಯುವಕರು ಕೋಲಾಟ, ಗೀಗೀಪದ, ಲಾವಣಿ, ಸೋಬಾನೆ ಪದ, ಜನಪದ ಗೀತೆ, ಭಾವಗೀತೆ, ರಾಗಿ ಬೀಸುವ ಪದಗಳನ್ನು ಕಳೆತು ಮುಂದಿನ ತಲೆಮಾರಿಗೆ ಉಳಿಸಬೇಕು ಎಂದರು.ಪ.ಪಂ. ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಅಬ್ದುಲ್ ನಜೀರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಲ್.ವಿಜಯ್, ಕೃಷ್ಣಮೂರ್ತಿ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ಜಿ.ವಿ.ವಿಶ್ವನಾಥ್, ಚಿಕ್ಕಬಳ್ಳಾಪುರದ ವಿಷ್ಣು ಪ್ರಿಯ ಕಾಲೇಜಿನ ಪ್ರಾಂಶುಪಾಲ ಸಿ.ಎನ್.ಅನಿಲ್ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)