ಮಂಗಳವಾರ, ಮೇ 11, 2021
20 °C

ಜನಪ್ರತಿನಿಧಿಗಳು, ವಿವಿಧ ಕ್ರೀಡಾ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕೆಲವು ನಿಬಂಧನೆಗಳೊಂದಿಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಕೊನೆಗೂ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆಗೆ ಸರ್ವಾನುಮತದಿಂದ ತೀರ್ಮಾನಿಸಲಾಯಿತು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನೆಹರು ಕ್ರೀಡಾಂಗಣದಲ್ಲಿ ಉದ್ದೇಶಿತ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿಗೆ ಸಂಬಂಧಿತ ಕ್ರೀಡಾಪಟುಗಳು ಹಾಗೂ ಜನಪ್ರತಿನಿಧಿಗಳ ವಿಶೇಷ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿದ ನಂತರವೂ ನಾಡಹಬ್ಬವಾದ ದಸರಾ, ರಾಷ್ಟ್ರೀಯ ದಿನಾಚರಣೆಗಳನ್ನು ನೆಹರೂ ಕ್ರೀಡಾಂಗಣದಲ್ಲಿ ಆಚರಿಸಲು ಅನುಮತಿ ನೀಡಲು ಒಪ್ಪಿಗೆ ಸೂಚಿಸಲಾಯಿತು. ಸಿಂಥೆಟಿಕ್ ಟ್ರ್ಯಾಕ್ ಮತ್ತು ಟರ್ಫ್ ಅಂಕಣ ಮಾಡಿದ ನಂತರ ಎಲ್ಲರಿಗೂ ವಾಕಿಂಗ್‌ಗೆ ಅವಕಾಶ. ಫುಟ್‌ಬಾಲ್, ಕ್ರಿಕೆಟ್, ಖೋಖೋ, ಬಾಲಬ್ಯಾಂಡಿಟ್ಮನ್ ಆಟಗಳಿಗೆ ಪ್ರತಿ ನಿತ್ಯ ಅಭ್ಯಾಸ ಮಾಡಲು ಅವಕಾಶ. ಕೆಲ ದಿನ ವಾಲಿಬಾಲ್, ಹ್ಯಾಂಡ್‌ಬಾಲ್, ಕಬಡ್ಡಿ, ಕುಸ್ತಿ ಮುಂತಾದ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಗಳನ್ನು ಟರ್ಫ್ ಅಂಕಣದ ಮಧ್ಯೆ ನಡೆಯಲು ಅವಕಾಶ ನೀಡಲು ತೀರ್ಮಾನಿಸಲಾಯಿತು.ಇಲ್ಲಿ ಕ್ರೀಡಾಕೂಟಗಳನ್ನು ನಡೆಸಿದರೆ ಹಿಂದಿನಂತೆ ನಿಗದಿಪಡಿಸಿದ ಬಾಡಿಗೆ ಮುಂದುವರಿಸಲಾಗುವುದು. ಹಿಂದಿನಂತೆಯೇ ಶಾಲಾ-ಕಾಲೇಜು ಕ್ರೀಡಾಕೂಟಗಳಿಗೆ ಅವಕಾಶ ಮಾಡಿ ಕೊಡಲಾಗುವುದು. ಕ್ರೀಡಾಪಟುಗಳು ಬರಿಗಾಲಲ್ಲಿ ಓಡಿದರೆ ಯಾವುದೇ ತೊಂದರೆಗಳಾಗುವುದಿಲ್ಲ ಎಂಬ ಖಾತ್ರಿಯನ್ನೂ ಸಭೆಯಲ್ಲಿ ನೀಡಲಾಯಿತು.

ಹಾಗೆಯೇ, ಈಗಿರುವ ಸ್ಟೇಡಿಯಂ ನಿರ್ವಹಣಾ ಸಮಿತಿಯನ್ನು ಪರಿಷ್ಕರಿಸಲೂ ಇದೇ ಸಂದರ್ಭದಲ್ಲಿ ತೀರ್ಮಾನಿಸಲಾಯಿತು.ಸಭೆಯಲ್ಲಿ ಹಾಜರಿದ್ದ ವಿವಿಧ ಕ್ರೀಡಾಪರ ಸಂಘಟನೆಗಳ ಪ್ರಮುಖರು ಹಾಗೂ ಕ್ರೀಡಾಳುಗಳು ಸಭೆಯ ಆರಂಭದಲ್ಲಿ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆಗೆ ಭಾರೀ ವಿರೋಧ ವ್ಯಕ್ತಪಡಿಸಿದರು. ಅದರ ಜತೆಗೆ ಇನ್ನೊಂದೆಡೆ ಅಷ್ಟೇ ಪ್ರಮಾಣದಲ್ಲಿ ಟ್ರ್ಯಾಕ್ ಅಳವಡಿಕೆಗೆ ಬೆಂಬಲವೂ ವ್ಯಕ್ತವಾಯಿತು.ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆಗೆ ವಿರೋಧ ವ್ಯಕ್ತಪಡಿಸುವವರು ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆಯ ನಂತರ ಇತರೆ ಕ್ರೀಡೆಗಳಿಗೆ ಅಲ್ಲಿ ಅವಕಾಶ ದೊರೆಯುವುದಿಲ್ಲ. ಈಗಾಗಲೇ ಒಳಾಂಗಣ ಕ್ರೀಡಾಂಗಣದಲ್ಲಿ ಷಟಲ್‌ಕಾಕ್ ಮಾತ್ರ ಆಟವಾಡಲು ಅವಕಾಶ ದೊರೆತಿದೆ. ಅಲ್ಲದೇ, ಸಾರ್ವಜನಿಕರಿಗೆ ಅದು ಉಪಯೋಗವಾಗುತ್ತಿಲ್ಲ. ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆ ನಂತರ ಇಲ್ಲಿಯೂ ಹಾಗೇ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆಯಿಂದ ಈಗಿನ ಕ್ರೀಡಾಂಗಣ ಮೇಲ್ದರ್ಜೆಗೇರಲಿದೆ. ಅಲ್ಲದೇ ಭವಿಷ್ಯದ ದೃಷ್ಟಿಯಿಂದ ಹೆಚ್ಚಿನ ಕ್ರೀಡಾಪಟುಗಳು ಬೆಳೆಯಲು ಅನುಕೂಲ ಆಗಲಿದೆ. ನಿರ್ವಹಣೆಯೂ ಕಡಿಮೆಯಾಗಲಿದೆ. ಈ ಟ್ರ್ಯಾಕ್ ಅಳವಡಿಕೆ ನಂತರವೂ ಹಿಂದಿನಂತೆಯೇ ಎಲ್ಲ ಕ್ರೀಡೆಗಳನ್ನೂ ಆಡಬಹುದಾಗಿದೆ. ಆದರೆ, ಅಲ್ಲಿ ಬೆಳಗ್ಗಿನ ಹೊತ್ತು ವಾಕಿಂಗ್ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸುಸಜ್ಜಿತ ವಾಕಿಂಗ್ ಟ್ರ್ಯಾಕ್ ನಿರ್ಮಿಸುವಂತೆ ಸಿಂಥೆಟಿಕ್ ಟ್ರ್ಯಾಕ್ ಪರವಾಗಿರುವವರು ವಾದ ಮಂಡಿಸಿದರು.ಸಭೆಯಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ಜಿ.ಪಂ. ಸಿಇಒ ಡಾ.ಸಂಜಯ್ ಬಿಜ್ಜೂರು, `ಸೂಡಾ~ ಅಧ್ಯಕ್ಷ ಎಸ್. ದತ್ತಾತ್ರಿ ಹಾಗೂ ವಿವಿಧ ಕ್ರೀಡಾ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.