ಶುಕ್ರವಾರ, ಫೆಬ್ರವರಿ 26, 2021
31 °C
ಬದಲಾವಣೆ ಬೇಕಾಗಿದೆ

ಜನಪ್ರತಿನಿಧಿಗಳ ಹಿಡಿತಕ್ಕೆ ಸಿಗದ ಜಲಮಂಡಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಪ್ರತಿನಿಧಿಗಳ ಹಿಡಿತಕ್ಕೆ ಸಿಗದ ಜಲಮಂಡಳಿ

ಸಮಾಜದ ಎಲ್ಲ ನಾಗರಿಕರಿಗೆ ಕುಡಿಯುವ ನೀರು ಹಾಗೂ ನೈರ್ಮಲ್ಯ ಸೇವೆ ಒದಗಿಸುವುದು ಸ್ಥಳೀಯ ಆಡಳಿತದ ಮೂಲಭೂತ ಜವಾಬ್ದಾರಿ. ಜಲಮೂಲದ ಬಳಿಯಲ್ಲೇ ಎಲ್ಲ ಪ್ರಾಚೀನ ನಾಗರಿಕತೆಗಳು ಪೂರ್ಣ ಪ್ರಮಾಣದಲ್ಲಿ ಬೆಳೆದವು. ಎಲ್ಲ ಯಶಸ್ವಿ ಸಮಾಜಗಳು ನೀರಿನ ಸಮರ್ಪಕ ನಿರ್ವಹಣೆ ಜಾಣ್ಮೆ ತೋರಿದವು.ಕರ್ನಾಟಕ ಉದಯಿಸುವ ಮುನ್ನ ಹಾಗೂ ಚುನಾಯಿತ ಪ್ರತಿನಿಧಿಗಳ ಆಡಳಿತಕ್ಕೆ ಮುಂಚಿತವಾಗಿ ರಾಜ, ರಾಣಿಯರು ಹಾಗೂ ಸಾಮಂತರು ನೀರಿನ ಸಮಗ್ರ ನಿರ್ವಹಣೆ ಮಾಡಿದ ಸಾಕಷ್ಟು ಉದಾಹರಣೆಗಳು ಇವೆ. ನದಿಗಳ ಜಲಾನಯನ ಪ್ರದೇಶಗಳಲ್ಲಿ ದೀರ್ಘಾವಧಿ ಅಭಿವೃದ್ಧಿ ಕಾರ್ಯಕ್ರಮಗಳು, ಮಳೆ ನೀರಿನ ಸಂಗ್ರಹಕ್ಕೆ ಯೋಜಿತ ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಕೆರೆ ಕುಂಟೆಗಳು ಹಾಗೂ ಬಾವಿಗಳ ನಿರ್ಮಾಣ, ನೀರಿನ ಕಾಲುವೆಗಳ ನಿರ್ಮಾಣ ಮಾಡಲಾಗಿತ್ತು.ಇವುಗಳ ಜೊತೆಗೆ ಅತ್ಯಂತ ಜನದಟ್ಟಣೆ ಇದ್ದ ನಗರಗಳಾದ  ಆದಿಲ್‌ ಶಾಹಿಗಳ ವಿಜಯಪುರ ಹಾಗೂ ಕೃಷ್ಣದೇವರಾಯ ಅವರ ಹಂಪಿಯಲ್ಲಿ ಓವರ್‌ ಹೆಡ್‌ ಟ್ಯಾಂಕ್‌ಗಳ ನಿರ್ಮಾಣ ಮಾಡಿದ್ದು ಐತಿಹಾಸಿಕ ಸಾಧನೆ. ಈ ಮಹಾರಾಜರ ಕಾಲದಲ್ಲಿ ಶುದ್ಧ ಕುಡಿಯುವ ನೀರಿನ ಲಭ್ಯತೆ ಇಲ್ಲದ ಒಬ್ಬ   ವ್ಯಕ್ತಿಯೂ ಸಿಗುತ್ತಿರಲಿಲ್ಲ ಎನ್ನಬಹುದು. ಆ ಕಾಲದ ನೀರಿನ ನಿರ್ವಹಣೆಯು ನ್ಯಾಯ ಹಾಗೂ ಸಂರಕ್ಷಣೆ ಎಂಬ ಪ್ರಗತಿಪರ ತತ್ವಗಳಿಂದ ಪ್ರಭಾವಿತವಾಗಿತ್ತು. ನದಿಗಳ ಸಂರಕ್ಷಣೆ ಬಗ್ಗೆ ಆದಿಲ್‌ ಶಾಹಿಗಳ ತತ್ವ ವಿಶಿಷ್ಟವಾಗಿತ್ತು. ನದಿಗಳು ಪೂಜನೀಯ. ಅವುಗಳ ಸರಾಗ ಹರಿವಿಗೆ ಯಾವುದೇ ಅಡ್ಡಿ ಆತಂಕ ಉಂಟಾಗಬಾರದು. ನದಿಗಳಿಗೆ ಅಡ್ಡಲಾಗಿ ಅಣೆಕಟ್ಟೆಗಳನ್ನು ನಿರ್ಮಿಸಬಾರದು ಎಂಬುದು ಅವರ ನಿಲುವಾಗಿತ್ತು.ಸಾಲು ಸಾಲು ಕೃತಕ ಕೆರೆಗಳು, ಜಲಾಶಯಗಳು, ಸಣ್ಣ ನದಿಗಳು, ತೊರೆಗಳ ಮೂಲಕ ಮಳೆ ನೀರನ್ನು ಸಂಗ್ರಹಿಸಿ ಜನಸಂಖ್ಯೆಗೆ ಅಗತ್ಯವಿರುವ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆ ಕಾಲದಲ್ಲಿ  ವಿದ್ಯುತ್‌ ಚಾಲಿತ ಪಂಪ್‌ಗಳಾಗಲಿ, ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳಾಗಲಿ ಇರಲಿಲ್ಲ. ಹೀಗಾಗಿ ಆಡಳಿತಗಾರರ ಈ ಕೆಲಸ ಹೆಚ್ಚು ಮೆಚ್ಚುಗೆಗೆ ಪಾತ್ರವಾಗುವಂತಹುದು.  ಕುಡಿಯುವ ನೀರು ಇಡೀ ಸಮುದಾಯಕ್ಕೆ ಸೇರಿದ್ದು. ಅದನ್ನು ಎಲ್ಲರೂ ಜತೆಗೂಡಿ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಳಿಸಬೇಕು ಎಂಬ ಸಂಸ್ಕೃತಿ ಎಲ್ಲ ಜನರಲ್ಲಿ ಬೇರೂರಿತ್ತು. ಮುಂದಿನ ಪೀಳಿಗೆ ಹಿತಚಿಂತನೆ ಹಾಗೂ ಸಮಾಜದ ಹಿತದೃಷ್ಟಿಯಿಂದ ನಾಗರಿಕರು ಕೆರೆ ಕೊಳ್ಳಗಳನ್ನು ನಿರ್ಮಾಣ ಮಾಡುತ್ತಿದುದು ಸಾಮಾನ್ಯವಾಗಿತ್ತು.ಕರ್ನಾಟಕದಲ್ಲಿ ಕಳೆದ ಎರಡು ದಶಕಗಳಲ್ಲಿ ನೀರಾವರಿ ವಲಯದ ನೀತಿಗಳ ದೋಷಗಳಿಂದ ಸಮಸ್ಯೆ ಬಿಗಡಾಯಿಸಿದೆ. ಆ ದೋಷಗಳು ಸ್ಪಷ್ಟವಾಗಿ ಗೋಚರಿಸುವುದು ರಾಜಧಾನಿ ಬೆಂಗಳೂರಿನಲ್ಲಿ.ಉದ್ಯಾನನಗರದ ಹೆಚ್ಚುತ್ತಿರುವ ಅಗತ್ಯತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು 1964 ಕಾಯ್ದೆಯಡಿ ಬೆಂಗಳೂರು ಜಲಮಂಡಳಿಯನ್ನು ಆರಂಭಿಸಿದ್ದೇ ನೀತಿಯಲ್ಲಿನ ಮೂಲ ಲೋಪ. ನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಸರ್ಕಾರಿ ಸಂಸ್ಥೆಗಳ ಸಾಲಿಗೆ ಇದೂ ಒಂದು ಸೇರ್ಪಡೆಯಾಯಿತು.1964ರ ಕಾಯ್ದೆ ಮೂಲ ಉದ್ದೇಶಗಳನ್ನು ಪಾಲನೆ ಮಾಡುವ ಮಹತ್ತರ ಉದ್ದೇಶದಿಂದ ಈ ಸಂವಿಧಾನಾತ್ಮಕ ಸಂಸ್ಥೆ ರಚನೆಯಾಯಿತು. ಅದು ನಗರ ಸ್ಥಳೀಯ ಸಂಸ್ಥೆಯ ಅಧೀನಕ್ಕೆ ಒಳಗಾಗದೆ ಒಂದು ರೀತಿಯ ಸ್ವಾಯತ್ತ ಸಂಸ್ಥೆಯಾಗಿ ಗುರುತಿಸಿಕೊಂಡಿತು.ಜನಪ್ರತಿನಿಧಿಗಳ ಹಿಡಿತಕ್ಕೆ ಇದು ಸಿಗಲಿಲ್ಲ.     ಮಂಡಳಿ ರಚನೆಯ ಸಮಯದಲ್ಲಾದ ದೋಷದ ಫಲವನ್ನು ಬೆಂಗಳೂರಿನ ನಿವಾಸಿಗಳು ಈಗಲೂ ಉಣ್ಣುತ್ತಿದ್ದಾರೆ. ಶುರುವಾತಿನಿಂದ ಇಂದಿನವರೆಗೂ ಸಾಂಸ್ಥಿಕ ದೋಷವನ್ನು ಸರಿಪಡಿಸುವ ಕೆಲಸ ಆಗಿಲ್ಲ. ಇಲ್ಲಿ ಒಂದು ಉದಾಹರಣೆಯನ್ನು ಗಮನಿಸೋಣ. ಜಲಮಂಡಳಿಗೆ ಸ್ವತಂತ್ರವಾಗಿ ನೀತಿ ರೂಪಿಸುವ ಅಧಿಕಾರ ಲಭ್ಯವಾಗಿದೆ. ಈ ಸಂದರ್ಭದಲ್ಲಿ ಮಂಡಳಿಯು ಬಿಬಿಎಂಪಿ ಕಡೆಯಿಂದ ಯಾವುದೇ ಬೇಡಿಕೆಗಳನ್ನಾಗಿ ಅಥವಾ ಜವಾಬ್ದಾರಿಗಳನ್ನಾಗಲಿ ಕೇಳುವ ಅಗತ್ಯ ಇಲ್ಲ.ಸಂವಿಧಾನದ 74ನೇ ತಿದ್ದುಪಡಿ (ನಗರ ಪಾಲಿಕೆ ಕಾಯ್ದೆ) ಪ್ರಕಾರ ಸ್ಥಳೀಯ ನಗರ ಸಂಸ್ಥೆಗಳು ಕುಡಿಯುವ ನೀರು ಪೂರೈಕೆ ಸೇರಿದಂತೆ ಜನರ ಎಲ್ಲ ಬೇಡಿಕೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಬೇಕು. ಇದರ ಪ್ರಕಾರ ಬಿಬಿಎಂಪಿಯು ಸಾಮಾನ್ಯ ಜನರು, ವಾಣಿಜ್ಯ ಬಳಕೆದಾರರು ಹಾಗೂ ಉದ್ಯಮಿಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಬೇಕಿದೆ. ಆದರೆ, ಬೆಂಗಳೂರಿನಲ್ಲಿ ಇದಕ್ಕೆ ವ್ಯತಿರಿಕ್ತ ಪ್ರಕ್ರಿಯೆ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ  ಆಯ್ಕೆಯಾದ ಬಿಬಿಎಂಪಿ ಪ್ರತಿನಿಧಿಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯ ಜವಾಬ್ದಾರಿ ಇಲ್ಲ. ಇವುಗಳ ಹೊಣೆ ಜಲಮಂಡಳಿಗೆ ಸೇರಿದ್ದು.  ಉದಾಹರಣೆಗೆ, ನಗರದ ಕಡುಬಡವರು ವಾಸಿಸುತ್ತಿರುವ ಪ್ರದೇಶಗಳ 12,000 ಸಾರ್ವಜನಿಕ ನಲ್ಲಿಗಳನ್ನು ಕಿತ್ತು ಹಾಕಲು ಜಲಮಂಡಳಿ ಕಳೆದ 10 ವರ್ಷಗಳಲ್ಲಿ ಏಕಪಕ್ಷೀಯ ತೀರ್ಮಾನ ಮಾಡಿತು. ಈ ಪ್ರದೇಶಗಳಲ್ಲಿ ಸರಾಸರಿ ಮತದಾನದ ಪ್ರಮಾಣ ಶೇ 90ಕ್ಕಿಂತ ಜಾಸ್ತಿ ಇದೆ. ಜನಪ್ರತಿನಿಧಿಗಳು ಉತ್ತಮ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಮತದಾರರು ಹಂಬಲಿಸುತ್ತಾರೆ.ಆದರೆ, ಇಲ್ಲಿ ಜಲಮಂಡಳಿ ಈ ಯಾವ ವಿಷಯ ಗಮನಿಸಲಿಲ್ಲ. ನಿರ್ದಾಕ್ಷಿಣ್ಯವಾಗಿ ನೀರಿನ ಸಂಪರ್ಕ ಕಡಿತಗೊಳಿಸಲು ತೀರ್ಮಾನ ಮಾಡಿತು. ಇದಕ್ಕೆ ಕಾರಣ ರಾಜ್ಯ ನೀರಿನ ನೀತಿ. ಈ ನೀತಿ ಕುಡಿಯುವ ನೀರನ್ನು ವಾಣಿಜ್ಯೀಕರಣ ಮಾಡಬೇಕು ಎಂದು ಹೇಳುತ್ತದೆ. ಅಲ್ಲದೆ  ಸಾರ್ವಜನಿಕ ನಲ್ಲಿಗಳು ನೀರಿನ ಸೋರಿಕೆಗೆ ಕಾರಣ ಎಂದು ಪರಿಭಾವಿಸಿದೆ. ಈ ನೀತಿಗೆ ಯಾವತ್ತೂ ಬಿಬಿಎಂಪಿಯಿಂದ ಒಪ್ಪಿಗೆ ಪಡೆದಿರಲಿಲ್ಲ.ರಾಜಧಾನಿ ಈಗ 800 ಚದರ ಕಿ.ಮೀ. ವಿಸ್ತರಿಸಿದೆ. ಮಹಾನಗರಿಯಲ್ಲಿ ಸುರಿಯುವ ವಾರ್ಷಿಕ ಮಳೆಯನ್ನು ಗಣನೆಗೆ ತೆಗೆದುಕೊಂಡರೆ ನಗರದ ಪ್ರತಿಯೊಬ್ಬ ನಾಗರಿಕರಿಗೆ ಪ್ರತಿದಿನ 150 ಲೀಟರ್‌ ನೀರು ಪೂರೈಕೆ ಮಾಡಬಹುದು. ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ನಾವು ಮಗ್ಗುಲಲ್ಲಿ ಇಟ್ಟುಕೊಳ್ಳೋಣ. ನಗರದಾದ್ಯಂತ ಯೋಜನಾಬದ್ಧವಾಗಿ ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸುವ ಕೆಲಸ ಆಗಬೇಕು.ರಾಜಧಾನಿಯನ್ನು ಸುಸ್ಥಿರ ಜಲ ನಗರಿಯನ್ನಾಗಿ ಹಾಗೂ ಹಸಿರು ನಗರಿಯನ್ನಾಗಿ ಮತ್ತೆ ಮಾರ್ಪಡಿಸಲು ಬಿಬಿಎಂಪಿ ಸಹಯೋಗದಲ್ಲಿ ನೀರಿನ ಆಡಳಿತ ವಿಕೇಂದ್ರೀಕರಣ ಮಾಡಬೇಕು. ನೀರಿನ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವಕ್ಕೆ ಒತ್ತು ನೀಡಬೇಕು. ಜನರ ಹಾಗೂ ಸರ್ಕಾರದ ಸಹಭಾಗಿತ್ವದಲ್ಲಿ ಎಲ್ಲ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಇದು ಜಲಮಂಡಳಿ ಈಗಿನ ಖಾಸಗೀಕರಣದ ಉದ್ದೇಶ ಹೊಂದಿರುವ ನೀರಿನ ಸುಧಾರಣಾ ಯೋಜನೆಗಳಿಗೆ ವಿರುದ್ಧವಾದುದು. ಈ ಯೋಜನೆಗಳ ಮೂಲಕ ಬಿಬಿಎಂಪಿಯ ಪ್ರಜಾಪ್ರಭುತ್ವ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿದೆ.ನೀರಿನ ಪೂರೈಕೆ ವಿಷಯದಲ್ಲಿ ಖಾಸಗಿಕರಣದ ಜಾಲದಿಂದ ಬಿಡುಗಡೆ ಹೊಂದುವ ಕುರಿತು ಕಿಂಚಿತ್ತೂ ಗಮನ ಹರಿಸುತ್ತಿಲ್ಲ.  ಈ ಖಾಸಗೀಕರಣ ಎಂಬುದು ಜನಸಾಮಾನ್ಯರು ಸಾಕಷ್ಟು ಹಕ್ಕುಗಳನ್ನು ಹೊಂದಿದ್ದರೂ ಅದನ್ನು ಬಳಸಿಕೊಳ್ಳಲಾಗದ, ಮತದಾನದ ಹಕ್ಕಿದ್ದರೂ ಬದಲಾವಣೆ ತರಲಾಗದ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ‌ ರಾಜಕೀಯ ಸಮಾನತೆ ಹೆಸರಿನಲ್ಲಿ ಖಾಸಗೀಕರಣದ ಪರವಾಗಿರುವ ಸಂಸ್ಥೆಗಳು ಹಾಗೂ ಚುನಾಯಿತ ಸರ್ಕಾರದ ನಡುವೆ ಅಸಮಾನ್ಯ ಸಂಬಂಧವನ್ನು ಮುಚ್ಚಿಡುವಂತಹ ವಾತಾವರಣವನ್ನು ಇದು ನಿರ್ಮಿಸುತ್ತದೆ. ಇಂತಹ ಅನೇಕ ಉದಾಹರಣೆಗಳಿವೆ.ಒಂದೆಡೆ ಬಿಬಿಎಂಪಿ ಮತ್ತು ಬಿಡಿಎ ಜತೆಗೂಡಿ ನಗರದ ನೀರಿನ ಮೂಲಗಳ ಕತ್ತು ಹಿಚುಕುತ್ತಿವೆ. ಇನ್ನೊಂದೆಡೆ ಜಲಮಂಡಳಿ ಪೂರೈಸಲು ನೀರಿನ ಕೊರತೆ ಅನುಭವಿಸುತ್ತಿದೆ. ಹೀಗಾಗಿ ನೂರಾರು ಕಿ.ಮೀ. ದೂರದ ಕಾವೇರಿ ನದಿಯಿಂದ ನೀರು ಪಡೆಯಬೇಕಿದೆ. ನದಿ ಮಟ್ಟದಿಂದ 400 ಮೀಟರ್‌ ಎತ್ತರಕ್ಕೆ ನೀರನ್ನು ಪಂಪ್‌ ಮಾಡಬೇಕಿದೆ.ಇಂತಹ ಯೋಜನೆಗಳ ಫಲಿತ ಏನೆಂದರೆ ರಾಜ್ಯದ ಜನತೆ ಮೇಲೆ ₨ 15 ಸಾವಿರ ಕೋಟಿಗೂ ಅಧಿಕ ಅಂತರರಾಷ್ಟ್ರೀಯ ಬ್ಯಾಂಕ್‌ಗಳ ಸಾಲ. ಜಲಮಂಡಳಿ ಕಾಯ್ದೆ ಪ್ರಕಾರ ಅದಕ್ಕೊಂದು ಸಲಹಾ ಸಮಿತಿ ಇದೆ. ಈ ಸಮಿತಿಯಲ್ಲಿ ಬಿಬಿಎಂಪಿ ಪ್ರತಿನಿಧಿಗಳೂ ಸದಸ್ಯರಾಗಿರಬೇಕು. ಈ ಸಮಿತಿ ಎಂದಿಗೂ ಕ್ರಿಯಾಶೀಲವಾಗಿ ಕೆಲಸ ಮಾಡಿಲ್ಲ. ಕೊಟ್ಟ ಸಲಹೆ ಎಲ್ಲ ಕೇವಲ ಕಾವೇರಿಯಿಂದ ನೀರು ತರುವುದು. ಸ್ವಾವಲಂಬನೆಯತ್ತ ದೃಷ್ಟಿಯನ್ನೇ ಹರಿಸಿಲ್ಲ.ಸರ್ಕಾರದ ನೀತಿ ನಿರೂಪಣೆಯಲ್ಲಿ ಆಗಿರುವ ದೋಷ ಸರಿಪಡಿಸಲು ಬಿಬಿಎಂಪಿ ಚುನಾವಣೆ ಒಂದು ಒಳ್ಳೆಯ ಅವಕಾಶ. ತಾಂತ್ರಿಕವಾಗಿ ಪಳಗಿದ ಜಲಮಂಡಳಿ ನೀರು ನಿರ್ವಹಣೆ ಇಲಾಖೆಯಾಗಿ ಬಿಬಿಎಂಪಿ ಸುಪರ್ದಿಗೆ ಒಳಪಡಬೇಕು. ಬಿಬಿಎಂಪಿ ಸಹ ಸಾಮಾಜಿಕ ನ್ಯಾಯದ, ಸಾಂಸ್ಕೃತಿಕವಾಗಿ ಸೂಕ್ಷ್ಮವಾದ, ಆರ್ಥಿಕವಾಗಿ ಹೊರೆಯಲ್ಲದ ಮತ್ತು ಸುಸ್ಥಿರ ಪರಿಸರಕ್ಕೂ ಪೂರಕವಾದ ನೀರು ನಿರ್ವಹಣೆ ವ್ಯವಸ್ಥೆ ಜಾರಿಗೆ ತರಬೇಕು.ಪ್ರಜಾಸತ್ತಾತ್ಮಕವಲ್ಲದ ಜಲಮಂಡಳಿ ಹಿಡಿತದಿಂದ ನೀರನ್ನು ‘ಮುಕ್ತ’ ಮಾಡಿ, ಬಿಬಿಎಂಪಿಗೆ ಅದರ ಹೊಣೆ ವಹಿಸಲು ನಡೆಸುವ ಹೋರಾಟ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.(ಲೇಖಕ– ರಾಷ್ಟ್ರೀಯ ಕಾನೂನು ಶಾಲೆಯ ಸಂಶೋಧಕ)***

ಬಿಬಿಎಂಪಿಗೆ ಚುನಾವಣೆ ಘೋಷಣೆ ಆಗಿದೆ. ಅದನ್ನೇ ನೆಪವಾಗಿಟ್ಟುಕೊಂಡು ‘ಪ್ರಜಾವಾಣಿ’ ತಜ್ಞರಿಂದ ಲೇಖನ ಆಹ್ವಾನಿಸಿ ಪ್ರಕಟಿಸುತ್ತಿದೆ. ಬಿಬಿಎಂಪಿಯಲ್ಲಿ ಬರುವ ಹೊಸ ಕೌನ್ಸಿಲ್‌ನ ಆಡಳಿತಕ್ಕೆ ಈ ಲೇಖನಮಾಲೆ ಒಂದು ದಿಕ್ಸೂಚಿ ಆಗಬೇಕು ಎನ್ನುವ ಆಶಯ ಪತ್ರಿಕೆಯದಾಗಿದೆ. ಓದುಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು: bangalore@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.