ಶನಿವಾರ, ಫೆಬ್ರವರಿ 27, 2021
27 °C
ನಿಜದನಿ

ಜನಪ್ರಿಯ ಯೋಜನೆ, ಸಾಮಾಜಿಕ ಜವಾಬ್ದಾರಿ

ಪೃಥ್ವಿ ದತ್ತ ಚಂದ್ರ ಶೋಭಿ Updated:

ಅಕ್ಷರ ಗಾತ್ರ : | |

ಜನಪ್ರಿಯ ಯೋಜನೆ, ಸಾಮಾಜಿಕ ಜವಾಬ್ದಾರಿ

ಸಾಹಿತಿ ಎಸ್.ಎಲ್. ಭೈರಪ್ಪನವರು ಸಾಂದರ್ಭಿಕವಾಗಿ ಸಾರ್ವಜನಿಕ ಸಮಾರಂಭಗಳಲ್ಲಿ ರಾಜಕೀಯ ಇಲ್ಲವೇ ಸಾಮಾಜಿಕ ವಿದ್ಯಮಾನಗಳ ಕುರಿತಾಗಿ ವ್ಯಕ್ತಪಡಿಸುವ ಅಭಿಪ್ರಾಯಗಳು ಗಂಭೀರ ಚರ್ಚೆಗೆ ಅವಕಾಶ ಮಾಡಿಕೊಡುತ್ತವೆ. ಅಂತಹುದೇ ಒಂದು ಸನ್ನಿವೇಶ ಇದೀಗ ಸೃಷ್ಟಿಯಾಗಿದೆ. ಕೆಲದಿನಗಳ ಹಿಂದೆ ಮೈಸೂರಿನಲ್ಲಿ ಮಾತನಾಡುತ್ತ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಪಾಪ್ಯುಲಿಸ್ಟ್ ಕಾರ್ಯಕ್ರಮಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ‘ಅನ್ನಭಾಗ್ಯ’ದಂತಹ ಕಾರ್ಯಕ್ರಮಗಳಿಂದ ಬಡವರನ್ನು ಸ್ವಾವಲಂಬಿಗಳಾಗಿ ಮಾಡಲು ಸಾಧ್ಯವಿಲ್ಲ.ಬದಲಿಗೆ ಇಂತಹ ಕಾರ್ಯಕ್ರಮಗಳು ದೀರ್ಘಾವಧಿಯಲ್ಲಿ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗುತ್ತವೆ. ನಮ್ಮ ಸರ್ಕಾರಗಳು ಉದ್ಯೋಗ ಸೃಷ್ಟಿಯತ್ತ ಗಮನ ಹರಿಸಿದರೆ ಘನತೆಯ ಬದುಕನ್ನು ಬಡವರ್ಗದವರಿಗೆ ನಡೆಸುವ ಅವಕಾಶಗಳನ್ನು ಹುಟ್ಟುಹಾಕಬಹುದು ಎಂಬ ವಾದ ಅವರದು. ಭೈರಪ್ಪನವರ ಈ ಅಭಿಪ್ರಾಯದೊಡನೆ ಸಹಮತ ಹೊಂದಿರುವವರು ನಮಗಿಂದು ವ್ಯಾಪಕವಾಗಿಯೇ ಸಿಗುತ್ತಾರೆ. ಅವರುಗಳ ಪೈಕಿ ಹಲವರು ಬಹುತೇಕ ಇತರೆ ವಿಚಾರಗಳಲ್ಲಿ ಭೈರಪ್ಪನವರನ್ನು ವಿರೋಧಿಸುವವರು.ಮೇಲ್ನೋಟಕ್ಕೆ ಸತ್ಯವೆನಿಸುವ ಇವರೆಲ್ಲರ ಒಮ್ಮತದ ಅಭಿಪ್ರಾಯದ ಸಾರ ಹೀಗಿದೆ:  ರಾಜ್ಯಸರ್ಕಾರದ ಇಂದಿನ  ‘ಭಾಗ್ಯ’ ಕಾರ್ಯಕ್ರಮಗಳು ಬಡವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದರೆ, ಅವರಾರಿಗೂ ದುಡಿಮೆ ಅಗತ್ಯವಿರುವುದಿಲ್ಲ. ಇದು ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಮಿಕರ ಲಭ್ಯತೆಯ ಮೇಲೆ ಪರಿಣಾಮ ಬೀರಿದೆ. ಕೆಲಸ ಮಾಡಲು ಯಾರೂ ಸಿಗುವುದಿಲ್ಲ. ಜೊತೆಗೆ ಪ್ರತಿದಿನದ ಕೂಲಿಯ ದರ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಕೃಷಿ ಖರ್ಚು ಮತ್ತು ಅದರಿಂದಾಗಿ ರೈತರ ಮೇಲಿನ ಹೊರೆ ಹೆಚ್ಚುತ್ತಿದೆ. ಪಾಪ್ಯುಲಿಸ್ಟ್ ಕಾರ್ಯಕ್ರಮಗಳ ಟೀಕಾಕಾರರು ಎರಡು ನೆಲೆಗಳಿಂದ ತಮ್ಮ ಅಭಿಪ್ರಾಯಗಳನ್ನು ಮುಂದಿಡುತ್ತಿದ್ದಾರೆ. ನಾನಿಲ್ಲಿ ಮೇಲೆ ಗುರುತಿಸಿದ್ದು ಆರ್ಥಿಕ ನೆಲೆ. ಇದರ ಇನ್ನೊಂದು ಆಯಾಮವೆಂದರೆ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಿದಂತೆ ಅನ್ನಭಾಗ್ಯದಂತಹ ಕಾರ್ಯಕ್ರಮಗಳ ನಿರ್ವಹಣೆಗೆ ಸರ್ಕಾರ ಮಾಡಬೇಕಿರುವ ಖರ್ಚು ಸಹ ಹೆಚ್ಚುತ್ತದೆ. ಹೀಗಾಗಿ ದೀರ್ಘಾವಧಿಯಲ್ಲಿ ಈ ಬಗೆಯ ಕಾರ್ಯಕ್ರಮಗಳನ್ನು ನಿರ್ವಹಿಸಲು ಆಗುವುದಿಲ್ಲ.ಬಹುಶಃ ಇದಕ್ಕಿಂತ ಮುಖ್ಯವಾದುದು ನೈತಿಕನೆಲೆಯಿಂದ ಭೈರಪ್ಪನವರು ಮುಂದಿಡುತ್ತಿರುವ ವಾದ. ‘ಅನ್ನಭಾಗ್ಯ’ದಂತಹ ಕಾರ್ಯಕ್ರಮಗಳು ಸೋಮಾರಿಗಳ ಮತ್ತು ಜವಾಬ್ದಾರಿರಹಿತರ ವರ್ಗವನ್ನು ಹುಟ್ಟುಹಾಕುತ್ತವೆ. ಈ ವರ್ಗವನ್ನು ಇತರರು ಯಾವಾಗಲೂ ಸಲಹಬೇಕಾಗುತ್ತದೆ. ಹೀಗೆ ದುಡಿಯದೆ ಸುಲಭವಾಗಿ ದೊರಕುವ ಸೌಲಭ್ಯಗಳನ್ನು ಅವಲಂಬಿಸಿ ಬದುಕುವುದು ಒಳ್ಳೆಯ ಚಾರಿತ್ರ್ಯದ (virtue) ಮಾದರಿಯಲ್ಲ. ದೀರ್ಘಾವಧಿಯಲ್ಲಿ ದೇಶದ ಅಭಿವೃದ್ಧಿಯ ಮೇಲೂ ಇದರ ಪರಿಣಾಮವಾಗುತ್ತದೆ. ಬಡವರ ಚಾರಿತ್ರ್ಯದ ಚರ್ಚೆಯ ಸಂದರ್ಭದಲ್ಲಿ ಕೇಳಬೇಕಾದ ಪ್ರಶ್ನೆಯಿದು: ತಿಂಗಳಿಗೆ ಒಂದಷ್ಟು ಅಕ್ಕಿ ಮತ್ತು ಇತರೆ ಸಣ್ಣಪುಟ್ಟ ಸೌಲಭ್ಯಗಳನ್ನು ಒದಗಿಸಿದ ಕೂಡಲೆ ಚಾರಿತ್ರ್ಯನಾಶವಾಗುವುದಾದರೆ, ನಮ್ಮ ಪ್ರಾಚೀನ ಸಂಸ್ಕೃತಿ ಮತ್ತು ನಾಗರಿಕತೆಗಳಿಂದ ಪಡೆದಿರುವ ನೈತಿಕತೆಯಾದರೂ ಎಷ್ಟು ಗಟ್ಟಿಯಾದುದು? ಅದಿರಲಿ.ಭೈರಪ್ಪನವರನ್ನು ಸಾಮಾನ್ಯವಾಗಿ ತಳಕು ಹಾಕುವುದು ಹಿಂದುತ್ವ ಮತ್ತು ಸಂಪ್ರದಾಯವಾದಿ ವಿಚಾರಧಾರೆಗಳೊಡನೆ. ಆದರೆ, ನನಗೆ ಅವರು ಗೋಚರಿಸಿರುವುದು ಆಧುನಿಕ ಪಶ್ಚಿಮದ ಕನ್ಸರ್ವೇಟಿವ್ ative ವಿಚಾರಧಾರೆಯಲ್ಲಿ ನಂಬಿಕೆಯಿರುವ ಚಿಂತಕರಾಗಿ. ಭಾರತದ ಸಂದರ್ಭದಲ್ಲಿ 1950ರ ದಶಕದ ಸ್ವತಂತ್ರ ಪಕ್ಷದ ಹೊರತಾಗಿ ಈ ಪರಂಪರೆ ಗಟ್ಟಿಯಾಗಿ ಬೆಳೆಯಲೇ ಇಲ್ಲ. ಹಾಗಾಗಿಯೇ ಭೈರಪ್ಪರಂತಹವರಿಗೆ ಬಲಪಂಥೀಯ ಹಿಂದೂ ಶಕ್ತಿಗಳು ಮಾತ್ರ ಆಯ್ಕೆಯಾಗಿ ಉಳಿಯುವುದು.ಆರ್ಥಿಕ ವಿಚಾರಗಳಲ್ಲಿ ಬಲಪಂಥೀಯ ನಿಲುವನ್ನು ತಳೆಯುವ ಕನ್ಸರ್ವೇಟಿವ್ ಪರಂಪರೆ ಮಾರುಕಟ್ಟೆ ಮತ್ತು ವೈಯಕ್ತಿಕ ಜವಾಬ್ದಾರಿಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತದೆ. ಹಾಗಾಗಿಯೇ ಅದು ಮುಂದಿಡುವ ಬದುಕಿನ ಚಿತ್ರಣ ಮಾರುಕಟ್ಟೆ ಮತ್ತು ವ್ಯಕ್ತಿ ಸ್ವಾತಂತ್ರ್ಯ ಕೇಂದ್ರಿತವಾಗಿದೆ. ಎಲ್ಲ ಬಗೆಯ ಅವಕಾಶಗಳನ್ನು ಮಾರುಕಟ್ಟೆ ಸೃಷ್ಟಿಸುತ್ತದೆ. ಉತ್ತಮ ಚಾರಿತ್ರ್ಯವುಳ್ಳ ಜವಾಬ್ದಾರಿಯುತ ವ್ಯಕ್ತಿ ಕೌಶಲಗಳನ್ನು ಶಿಕ್ಷಣದ ಮೂಲಕ ಗಳಿಸಿಕೊಂಡು, ವೃತ್ತಿಯೊಂದನ್ನು ಅನುಸರಿಸುತ್ತ ತನ್ನ ಮತ್ತು ತನ್ನ ಕುಟುಂಬವನ್ನು ನಿರ್ವಹಿಸುತ್ತಾನೆ. ಉಳಿತಾಯ, ವಿಮೆಗಳೂ ಸೇರಿದಂತೆ ತನ್ನ ಬದುಕಿನ ಎಲ್ಲ ಆಯಾಮಗಳನ್ನು ರೂಪಿಸಿಕೊಳ್ಳಬಲ್ಲ ಸಾಮರ್ಥ್ಯ ಅವನಿಗಿದೆ ಮತ್ತು ಆ ಸ್ವಾತಂತ್ರ್ಯ ಅವನಿಗಿರಬೇಕು ಎಂದು ಈ ಪರಂಪರೆ ನಂಬುತ್ತದೆ.ಸ್ವಾಭಾವಿಕವಾಗಿಯೇ ರಾಜ್ಯ (sಸ್ಟೇಟ್) ಮತ್ತು ಸರ್ಕಾರಗಳ (ಗವರ್ನಮೆಂಟ್) ಪಾತ್ರ ಸಮಾಜದಲ್ಲಿ ಸೀಮಿತವಾಗಿರಬೇಕು ಎಂದು cಕನ್ಸರ್ವೇಟಿವ್on aive ಪರಂಪರೆ ವಾದಿಸುತ್ತದೆ. ಏಕೆಂದರೆ ವ್ಯಕ್ತಿಗಳು ಮತ್ತು ಕುಟುಂಬಗಳು ಜವಾಬ್ದಾರಿಯಿಂದ ಬದುಕಿದಲ್ಲಿ ಸಾಮಾಜಿಕ ಭದ್ರತೆ ಒದಗಿಸುವ ಕಲ್ಯಾಣ ಕಾರ್ಯಕ್ರಮಗಳ ಅಗತ್ಯವೇ ಇರುವುದಿಲ್ಲ. ಸರ್ಕಾರಗಳು ಉದ್ಯೋಗ ಸೃಷ್ಟಿಗೆ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಖಾಸಗಿ ವಲಯಕ್ಕೆ ಒದಗಿಸಿದರೆ ಸಾಕು. ಬಡತನ ನಿರ್ಮೂಲನ, ಆರೋಗ್ಯ ಮತ್ತು ಶಿಕ್ಷಣಗಳಂತಹ ಮೂಲಭೂತ ಸೌಕರ್ಯಗಳ ಒದಗಿಸುವಿಕೆ ಹಾಗೂ ವಿಮೆ ಮತ್ತು ನಿವೃತ್ತಿವೇತನಗಳಂತಹ ಬದುಕಿನ ಭದ್ರತೆಯ ಕಾರ್ಯಕ್ರಮಗಳನ್ನು ಸರ್ಕಾರ ನಿರ್ವಹಿಸಬೇಕಿಲ್ಲ, ಮಾರುಕಟ್ಟೆಯೇ ಒದಗಿಸುತ್ತದೆ ಎಂದು  ಕನ್ಸರ್ವೇಟಿವ್conservative ಪರಂಪರೆ ನಂಬುತ್ತದೆ.ತಾತ್ವಿಕವಾಗಿ ಈ ಪರಂಪರೆಯ ಬೇರುಗಳು ಎರಡು ಶತಮಾನಗಳಷ್ಟು ಹಿಂದಕ್ಕೆ ಹೋಗುವುದಾದರೂ ಇದರ ಇತ್ತೀಚಿನ ಅವತರಿಣಿಕೆಯನ್ನು ರಾಜಕಾರಣದಲ್ಲಿ ಅನುಷ್ಠಾನಗೊಳಿಸಿದವರು ಇಂಗ್ಲೆಂಡಿನ ಥ್ಯಾಚರ್ ಮತ್ತು ಅಮೆರಿಕದ ರೇಗನ್. 1980ರ ದಶಕದಲ್ಲಿ ಸಾರ್ವಜನಿಕ ಉದ್ದಿಮೆಗಳ ಮತ್ತು ಸಾಮಾಜಿಕ ಭದ್ರತೆಯ ಕಾರ್ಯಕ್ರಮಗಳ ಖಾಸಗೀಕರಣವನ್ನು ಅವರು ವ್ಯಾಪಕವಾಗಿ ಆರಂಭಿಸಿದರು. ಅನ್ನಭಾಗ್ಯಕ್ಕೆ ಸಂವಾದಿಯಾಗುವ ಅಮೆರಿಕದ f‘ಫುಡ್ ಸ್ಟಾಂಪ್’ ಕಾರ್ಯಕ್ರಮದ ವಿರುದ್ಧ ರೇಗನ್ ಮತ್ತು ಅವರ ರಿಪಬ್ಲಿಕನ್ ಪಕ್ಷದವರು ಅಂದಿನಿಂದ ಇಂದಿನವರೆಗೂ ಯುದ್ಧವನ್ನೇ ಸಾರಿದ್ದಾರೆ. ಈ ಕಾರ್ಯಕ್ರಮದ ಮೂಲಕ ಅಮೆರಿಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಮೆರಿಕನ್ನರು ಆಹಾರ ಪದಾರ್ಥಗಳನ್ನು ದಿನಸಿ ಅಂಗಡಿಯಲ್ಲಿ ಕೊಳ್ಳಬಹುದು.2014ರಲ್ಲಿ 4.65 ಕೋಟಿ ಅಮೆರಿಕನ್ನರು (ಅಂದರೆ ಅಲ್ಲಿನ ಜನಸಂಖ್ಯೆಯ ಶೇ 15ರಷ್ಟು) ಕೇಂದ್ರ ಸರ್ಕಾರದ ಈ ಯೋಜನೆಯ ಲಾಭ ಪಡೆದರು. ಹೆಚ್ಚಾಗಿ ಕಪ್ಪುವರ್ಣೀಯರು, ಮೆಕ್ಸಿಕೊ ಮೂಲದ ಲಾಟಿನೊ ಸಮುದಾಯದವರು ಹಾಗೂ ಎಲ್ಲ ವರ್ಣಗಳಿಗೆ ಸೇರಿದ ದುಡಿಯುವ ವರ್ಗಗಳಿಗೆ ಸೇರಿದವರಿಗೆ ಅನುಕೂಲ ಮಾಡಿಕೊಡುವ ಈ ಕಾರ್ಯಕ್ರಮವೂ ಕೂಡ ಸೋಮಾರಿತನವನ್ನು ಮತ್ತು ಬೇಜವಾಬ್ದಾರಿ ವ್ಯಕ್ತಿತ್ವಗಳಿಗೆ ಆಸ್ಪದ ಮಾಡಿಕೊಟ್ಟು ವ್ಯಕ್ತಿ ಚಾರಿತ್ರ್ಯ ನಾಶ ಮಾಡುತ್ತದೆ ಎಂದೇ ಅಮೆರಿಕದ ಕನ್ಸರ್ವೇಟಿವ್ se ಚಿಂತಕರು ವಾದಿಸುತ್ತಲೇ ಬಂದಿದ್ದಾರೆ.

ಅನ್ನಭಾಗ್ಯದ ಚರ್ಚೆಯಲ್ಲಿ ಅಮೆರಿಕದ ವಿವರಗಳನ್ನು ನೀಡಲು ಎರಡು ಕಾರಣಗಳಿವೆ.ಒಂದು ಭೈರಪ್ಪನವರಂತಹ ಟೀಕಾಕಾರರು ಪಶ್ಚಿಮದ ಕನ್ಸರ್ವೇಟಿವ್ ಪರಂಪರೆಯೊಡನೆ ಹೊಂದಿರುವ ಸಂಬಂಧವನ್ನು ಸ್ಪಷ್ಟಪಡಿಸಲು.  ಇದು ನನ್ನ ದೃಷ್ಟಿಯಲ್ಲಿ ಅಪರಾಧವೇನಲ್ಲ. ಆದರೆ ತಮ್ಮ ಎದುರಾಳಿಗಳು ಸಮಾಜವಾದ–ಉದಾರವಾದಗಳಂತಹ ಆಧುನಿಕ ಪಾಶ್ಚಿಮಾತ್ಯ ಪರಂಪರೆಗಳಿಂದ ಪ್ರೇರೇಪಿತರಾದವರು. ತಮ್ಮ ಚಿಂತನೆಯ ನೆಲೆಗಳು ಭಾರತೀಯ ದರ್ಶನ ಮತ್ತು ಅನುಭವಗಳೊಳಗಿವೆ ಎಂದು ವಾದಿಸಬಾರದಷ್ಟೆ. ಎರಡನೆಯದು ಸಾಮಾಜಿಕ ಭದ್ರತೆ ಒದಗಿಸುವ ಕಲ್ಯಾಣ ಕಾರ್ಯಕ್ರಮಗಳ ನಿಜವಾದ ಪರಿಣಾಮಗಳ ಬಗ್ಗೆ ವಿಶ್ವಾಸಾರ್ಹ ಸಮಾಜಶಾಸ್ತ್ರೀಯ ಅಧ್ಯಯನಗಳು ಅಮೆರಿಕದ ಸಂದರ್ಭದಲ್ಲಿ ನಡೆದಿವೆ. ಕರ್ನಾಟಕ ಇಲ್ಲವೇ ಭಾರತದ ಸಂದರ್ಭದಲ್ಲಿ ಮೇಲ್ನೋಟಕ್ಕೆ ಕಾಣುವ ಕೆಲವು ಅನಿಸಿಕೆಗಳ ಆಧಾರದ ಮೇಲೆ ತೀರ್ಮಾನಕ್ಕೆ ಬರುತ್ತಿದ್ದೇವೆಯೇ ಹೊರತು ಆಳವಾದ ಅಧ್ಯಯನ ಇಲ್ಲವೇ ಸೂಕ್ಷ್ಮವಾದ ತಾತ್ವಿಕ ಚಿಂತನೆಯ ಆಧಾರದ ಮೇಲಲ್ಲ.ಬಡವರ ಮತ್ತು ದುಡಿಯುವ ವರ್ಗಗಳ ಚಾರಿತ್ರ್ಯದ ಬಗ್ಗೆ ಸಡಿಲವಾಗಿ, ಸುಲಭವಾಗಿ ಮಾತನಾಡುವ ಪರಂಪರೆ ನಮ್ಮಲ್ಲಾಗಲಿ ಪಶ್ಚಿಮದಲ್ಲಾಗಲಿ ಹೊಸದೇನಲ್ಲ. ಬಡತನಕ್ಕೆ ಕಾರಣ ವೈಯಕ್ತಿಕ ಜವಾಬ್ದಾರಿ ಮತ್ತು ಚಾರಿತ್ರ್ಯದ ಅಭಾವ ಎಂದು ಹೇಳುವ ಚಿಂತಕರೂ ಇದ್ದಾರೆ. ಅವರು ಗುರುತಿಸಲು ಹಿಂಜರಿಯುವುದು ಬಡತನ ಅಥವಾ ಸಾಮಾಜಿಕ ಹಿಂದುಳಿದಿರುವಿಕೆಯ ಐತಿಹಾಸಿಕ ಮತ್ತು ಸ್ವರೂಪಾತ್ಮಕ (ಸ್ಟ್ರಕ್ಚರಲ್)  ಕಾರಣಗಳನ್ನು. ಇದಲ್ಲದೆ ಈ ಯಾವ ಚರ್ಚೆಗಳಲ್ಲಿಯೂ ಮಧ್ಯಮ ಮತ್ತು ಮೇಲ್ವರ್ಗದವರಿಗೆ ಅವರ ಸ್ಥಾನಮಾನ ಹಾಗೂ ಬದುಕಿನ ಸುರಕ್ಷತೆಗಾಗಿ ವಿನಿಯೋಗವಾಗುವ ಸಾರ್ವಜನಿಕ (ಸರ್ಕಾರಿ) ಸಂಪನ್ಮೂಲಗಳ ಲೆಕ್ಕ ಎಂದೂ ಕೇಳುವಂತಿಲ್ಲ. ಈ ವರ್ಗಗಳಿಗೆ ದೊರಕುವ ಗೋಚರವಾಗದ (ಹಿಡನ್h) ಸಬ್ಸಿಡಿಗಳನ್ನೇ ಗಮನಿಸಿ.ವೈಯಕ್ತಿಕ ಉದಾಹರಣೆಯನ್ನು ನೀಡುವುದಾದರೆ, ಏಳು ವರ್ಷಗಳ ನನ್ನ ಉನ್ನತ ಶಿಕ್ಷಣಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಾನು ಕಟ್ಟಿದ ಫೀಸಿನ ಕನಿಷ್ಠ ಮೂವತ್ತು ಪಟ್ಟನ್ನು ಖರ್ಚು ಮಾಡಿವೆ. ಇದು ನನ್ನ ಕುಟುಂಬ ವರ್ಗದವರ ಅಥವಾ ನಾನಿಂದು ಕಟ್ಟುವ ತೆರಿಗೆಯ ಮೂಲಕ ಖಂಡಿತವಾಗಿಯೂ ವಾಪಸು ನೀಡಿಲ್ಲ. ನನ್ನ ಇಂದಿನ ಬದುಕು ಕೇವಲ ನನ್ನ ಶ್ರಮ ಮತ್ತು ಜವಾಬ್ದಾರಿಯುತ ಜೀವನಶೈಲಿಯಿಂದ ಸಾಧಿಸಿದ್ದು ಎಂದುಕೊಂಡರೆ ಅದು ಕಗ್ಗ ಮಾತ್ರವಲ್ಲ, ಅಪ್ರಾಮಾಣಿಕತೆಯ ಪರಮಾವಧಿ.  ನಮಗೆ ಲಭ್ಯವಾಗುವ ಸಬ್ಸಿಡಿಗಳ ಕಡೆಗೆ ಕಣ್ಮುಚ್ಚುತ್ತ, ಬಡವರ ಚಾರಿತ್ರ್ಯದ ಬಗ್ಗೆ ಮಾತ್ರ ಚಿಂತಿಸುವುದೇಕೆ?ಪಾಪ್ಯುಲಿಸ್ಟ್ ಕಾರ್ಯಕ್ರಮಗಳನ್ನು ಸಿದ್ದರಾಮಯ್ಯನವರು ಮಾತ್ರ ರೂಪಿಸಿಲ್ಲ ಮತ್ತು ಈ ವಿಚಾರದಲ್ಲಿ ಅವರು ಮೊದಲಿಗರೂ ಅಲ್ಲ. ಅವರ ಹೆಗ್ಗಳಿಕೆ ಭಾಗ್ಯ ಎಂಬ ಪ್ರತ್ಯಯ ಸೇರಿಸಿದ್ದು. ಜೊತೆಗೆ ಅವರ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಉದ್ಯೋಗಖಾತ್ರಿ ಯೋಜನೆ ಮತ್ತು ಆಹಾರಭದ್ರತೆ ಕಾನೂನುಗಳಂತಹ ಸಾಮಾಜಿಕ ಭದ್ರತೆಯ ಕಾನೂನುಗಳಂತಹ ಕ್ರಮ ತೆಗೆದುಕೊಂಡದ್ದು ಅವರ ಲೆಕ್ಕಕ್ಕೆ ಸೇರಿದೆ. ಆದರೆ ಎಲ್ಲ ರಾಜಕೀಯ ಪಕ್ಷಗಳೂ ಅನ್ನಭಾಗ್ಯದಂತಹ ಕಾರ್ಯಕ್ರಮಗಳನ್ನು ತಮ್ಮ ಪ್ರಣಾಳಿಕೆಗಳಲ್ಲಿ ಘೋಷಿಸಿವೆ ಮತ್ತು ಅಧಿಕಾರ ದೊರೆತಾಗ, ತಮ್ಮ ಪ್ರಮುಖ ಬೆಂಬಲಿಗ ವರ್ಗಗಳಿಗೆ ಅನುಕೂಲವಾಗುವ ಕಾರ್ಯಕ್ರಮಗಳ ಅನುಷ್ಠಾನವನ್ನೂ ಮಾಡಿವೆ. ಈ ಅರ್ಥದಲ್ಲಿ ನಮ್ಮ ವ್ಯವಸ್ಥೆಯೊಳಗೆ ಖಾಸಗೀಕರಣದ ಪರವಾಗಿ ಹೇಗೆ ಒಮ್ಮತವಿದೆಯೋ ಹಾಗೆಯೇ ಪಾಪ್ಯುಲಿಸ್ಟ್  ಕಾರ್ಯಕ್ರಮಗಳ ವಿಚಾರದಲ್ಲಿ ಸಹ ಸಹಮತವಿದೆ. ವಿವಿಧ ಭಾಗ್ಯಗಳ ಬಗ್ಗೆ ಪ್ರಶ್ನೆಯೆತ್ತುವ, ಸಾಹಿತಿ-ಬುದ್ಧಿಜೀವಿಗಳ ಮಾತು ಕೇಳುವಂತೆ ಸಲಹೆ ನೀಡುವ ರಾಜಕಾರಣಿಗಳೆಲ್ಲ ಬೂಟಾಟಿಕೆಯವರಷ್ಟೆ.ನಮ್ಮ ಮುಂದಿರುವ ಪ್ರಶ್ನೆ ಸರಳವಾದುದು. ನಮ್ಮ ಸಮಾಜದಲ್ಲಿ ಹಸಿದವರಿದ್ದರೆ (ಅಂತೆಯೇ ಇತರ ಮೂಲಭೂತ ಅಗತ್ಯಗಳಾದ ವಸತಿ, ಆರೋಗ್ಯ ಮತ್ತು ಶಿಕ್ಷಣ) ಅದೊಂದು ಕಳಂಕ, ಹೀಗಾಗಿ ಅದರ ನಿವಾರಣೆಗೆ ಏನು ಮಾಡಬೇಕು?  ವೈಯಕ್ತಿಕ ಜವಾಬ್ದಾರಿ ಮತ್ತು ಚಾರಿತ್ರ್ಯದ ಮಂತ್ರ ಹೇಳುವ  ಕನ್ಸರ್ವೇಟಿವ್conಪರಂಪರೆ ಸಮಸ್ಯೆಯ ಗಾಂಭೀರ್ಯತೆಯನ್ನು, ತೀವ್ರತೆಯನ್ನು ಅರ್ಥ ಮಾಡಿಕೊಂಡಂತೆ ತೋರುವುದಿಲ್ಲ. ನಮ್ಮ ಮನೆಗಳಲ್ಲಿ ಇಲ್ಲವೆ ಜಮೀನುಗಳಲ್ಲಿ ಕೆಲಸ ಮಾಡಲು ನಿರಾಕರಿಸಿದ ಕೂಡಲೇ ಬಡವರು ಚಾರಿತ್ರ್ಯ ಕಳೆದುಕೊಳ್ಳುವುದಿಲ್ಲ. ಚಾರಿತ್ರ್ಯದ ಚರ್ಚೆ ಪ್ರಾರಂಭಿಸುವ ಮೊದಲು ಹಸಿವನ್ನು ತೊಡೆಯುವುದು ಮುಖ್ಯ. ಪಡಿತರ ವ್ಯವಸ್ಥೆಯಲ್ಲಿ ಅಥವಾ ಇತರೆ ಕಲ್ಯಾಣ ಕಾರ್ಯಕ್ರಮಗಳಲ್ಲಿ ಭ್ರಷ್ಟತೆಯಿದ್ದರೆ ಅದನ್ನು ಸುಧಾರಿಸುವ ಪ್ರಶ್ನೆಯೆತ್ತಬೇಕು. ಆದರೆ, ಇಂತಹ ಸಾಮಾಜಿಕ ಭದ್ರತೆ ಒದಗಿಸುವ ಜವಾಬ್ದಾರಿ ಪ್ರಜಾರಾಜ್ಯ/ ಪ್ರಜಾಪ್ರಭುತ್ವದ ಸರ್ಕಾರಗಳದ್ದೇ ಆಗಬೇಕು.  ಏಕೆಂದರೆ ಬದುಕಿನ ಮೂಲಭೂತ ಅಗತ್ಯಗಳನ್ನು ಕನಿಷ್ಠ ಪ್ರಮಾಣದಲ್ಲಿಯಾದರೂ ಒದಗಿಸುವ ಹೊಣೆಗಾರಿಕೆ ನಾಗರಿಕ ಸಮಾಜದ ದಾನಿಗಳ ಉದಾರತೆಯ ಮೇಲೆ ಅಥವಾ ಮಾರುಕಟ್ಟೆಯ ದಕ್ಷತೆಯ ಮೇಲೆ ನಿರ್ಧಾರವಾಗಬಾರದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.