ಗುರುವಾರ , ಏಪ್ರಿಲ್ 22, 2021
28 °C

ಜನಸಂಪರ್ಕ ಸಭೆಗಳಿಗೆ ಮತ್ತೆ ಚಾಲನೆ

ಪ್ರಜಾವಾಣಿ ವಾರ್ತೆ/ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಗರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಜನರ ಕುಂದು-ಕೊರತೆ ನಿವಾರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ನಡೆಯುತ್ತಿದ್ದ ವಾರ್ಡ್ ಮಟ್ಟದ ಜನಸಂಪರ್ಕ ಸಭೆಗಳಿಗೆ ಮತ್ತೆ ಚಾಲನೆ ದೊರೆತಿದೆ. ಕಳೆದ ಕೆಲವು ತಿಂಗಳಿಂದ ಸ್ಥಗಿತಗೊಂಡಿದ್ದ ವಾರ್ಡ್ ಮಟ್ಟದ ಸಭೆಗಳನ್ನು ಈಗ ಮತ್ತೆ ನಡೆಸಲಾಗುತ್ತಿದ್ದು, ಪೊಲೀಸರು ಆಯಾ ವಾರ್ಡ್‌ಗಳಲ್ಲಿನ ಪ್ರಮುಖರು ಮತ್ತು ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ.ನಗರ ಪ್ರದೇಶದ 31 ವಾರ್ಡ್‌ಗಳಲ್ಲೂ ಜನಸಂಪರ್ಕ ಸಭೆ ನಡೆಸುವ ಗುರಿ ಹೊಂದಿರುವ ಪೊಲೀಸ್ ಇಲಾಖೆ ಮೂರು ದಿನಗಳಿಗೊಮ್ಮೆ ಆಯಾ ವಾರ್ಡ್‌ಗಳಲ್ಲಿ ಸಭೆ ನಡೆಸುತ್ತಿದೆ. ಅಲ್ಲಿನ ಮಹಿಳೆಯರು, ಹಿರಿಯರು ಸೇರಿದಂತೆ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಲಹೆ-ಸೂಚನೆ ಪಡೆದುಕೊಳ್ಳುತ್ತಿರುವ ಪೊಲೀಸರು ಆಯಾ ವಾರ್ಡ್‌ಗಳಲ್ಲಿ ಆಗಬೇಕಿರುವ ಸುಧಾರಣೆ ಮತ್ತು ಕೈಗೊಳ್ಳಬೇಕಿರುವ ಕಾರ್ಯಗಳ ಬಗ್ಗೆ ಹೆಚ್ಚಿನಆಸಕ್ತಿ ತೋರುತ್ತಿದ್ದಾರೆ.ಜನಸಂಪರ್ಕ ಸಭೆ ನಡೆಸಿದರೆ ಸಾಲದು, ಆಯಾ ಬಡಾವಣೆಗಳಲ್ಲಿ ಮತ್ತು ವಾರ್ಡ್‌ಗಳಲ್ಲಿ ನಾಗರಿಕ ಸಮಿತಿಗಳನ್ನು ಸಹ ರಚಿಸಿರುವ ಪೊಲೀಸ್ ಇಲಾಖೆ ಸಮಿತಿ ಸದಸ್ಯರಿಂದ ಅಗತ್ಯ ಮಾಹಿತಿ, ಸಲಹೆ-ಸೂಚನೆ ಪಡೆದುಕೊಳ್ಳುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆದಲ್ಲಿ ಅಥವಾ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗುವ ಆತಂಕ ವ್ಯಕ್ತವಾದಲ್ಲಿ, ಆಯಾ ನಾಗರಿಕ ಸಮಿತಿ ಸದಸ್ಯರು ಪೊಲೀಸರಿಗೆ ತಕ್ಷಣ ವಿಷಯ ತಿಳಿಸಿ ಕಾರ್ಯಪ್ರವೃತ್ತರಾಗುತ್ತಾರೆ.`ಕಳೆದ ಕೆಲ ತಿಂಗಳಿಂದ ಬೇರೆ ಬೇರೆ ಕಾರಣಗಳಿಗಾಗಿ ಜನಸಂಪರ್ಕ ಸಭೆ ನಡೆದಿರಲಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದ ಮೇಲೆ ಮತ್ತೆ ಈಗ ಸಭೆ ನಡೆಸುವುದನ್ನು ಆರಂಭಿಸಿದ್ದೇವೆ. ಸಭೆ ನಡೆಸುವುದರಿಂದ ನಮಗೆ ಜನಸಂಪರ್ಕ ಬೆಳೆಯುವುದಲ್ಲದೇ ಆಯಾ ವಾರ್ಡ್‌ಗಳ ಪ್ರಮುಖ ವಿಷಯ ಬೆಳಕಿಗೆ ಬರುತ್ತದೆ. ಜನರು ಎದುರಿಸುತ್ತಿರುವ ತೊಂದರೆ ಮತ್ತು ಇತರ ಸಮಸ್ಯೆ ಚರ್ಚಿಸಲು ಸಾಧ್ಯವಾಗುತ್ತದೆ~ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಮಹೇಶ್‌ಕುಮಾರ್ ತಿಳಿಸಿದರು.`ಪೊಲೀಸರೆಂದ ಕೂಡಲೆ ಜನರಲ್ಲಿ ಆತಂಕ, ಭೀತಿ ಮೂಡುತ್ತದೆ. ಪೊಲೀಸ್ ಇಲಾಖೆ ಅಪರಾಧಿಗಳಿಗೆ ಮಾತ್ರ ಕಠಿಣವಾಗಿದೆಯೇ ಹೊರತು ಜನಸಾಮಾನ್ಯರೊಂದಿಗೆ ಸ್ನೇಹಭಾವದಿಂದ ಇರುತ್ತದೆ ಎಂಬ ಭಾವನೆ ಮೂಡಿಸುವುದು ಸಭೆಯ ಪ್ರಮುಖ ಉದ್ದೇಶಗಳಲ್ಲಿ ಒಂದು.

 

ಬಹುತೇಕ ಮಂದಿ ಪೊಲೀಸರೊಂದಿಗೆ ಮಾತನಾಡಲು ಹೆದರುತ್ತಾರೆ. ಮಾಹಿತಿ ನೀಡಲು ಹಿಂಜರಿಯುತ್ತಾರೆ. ಒಂದು ರೀತಿಯ ಅಪನಂಬಿಕೆ ಮೂಡಿಸಿಕೊಂಡಿರುತ್ತಾರೆ. ಜನಸಾಮಾನ್ಯರಲ್ಲಿ ಇರುವ ಅಂತಹ ಭಾವನೆ ಹೊರಹಾಕುವಲ್ಲಿ ಪ್ರಯತ್ನಿಸುತ್ತೇವೆ.

 

ಪೊಲೀಸರನ್ನು ಸ್ನೇಹಿತರನ್ನಾಗಿ ಭಾವಿಸಿ, ಜನಸಾಮಾನ್ಯರು ಸಹಕರಿಸಿದ್ದಲ್ಲಿ ಬಹುತೇಕ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯೂ ಇರುವುದಿಲ್ಲ~ ಎಂದು ಅವರು ತಿಳಿಸಿದರು.ಈಗಾಗಲೇ ಮೂರು ಕಡೆ ಜನಸಂಪರ್ಕ ಸಭೆ ನಡೆಸಿರುವ ಪೊಲೀಸ್ ಇಲಾಖೆ ಆಗಸ್ಟ್ ವೇಳೆಗೆ ಎಲ್ಲ 31 ವಾರ್ಡ್‌ಗಳಲ್ಲೂ ಸಭೆ ಪೂರ್ಣಗೊಳಿಸಲು ನಿರ್ಧರಿಸಿದೆ. ಆಯಾ ವಾರ್ಡ್‌ಗಳಲ್ಲಿ ಸೌಹಾರ್ದ ವಾತಾವರಣ ಕಾಯ್ದುಕೊಳ್ಳಲು ಮನವಿ ಮಾಡುತ್ತಿದೆ.ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲು ಮನವಿ ಮಾಡಿದೆ. ನಾಗರಿಕ ಸಮಿತಿಗೆ ಹೊಸ ರೂಪ ನೀಡಲು ಸಹ ಚಿಂತನೆ ನಡೆಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.