ಗುರುವಾರ , ಫೆಬ್ರವರಿ 25, 2021
29 °C
150 ಅರ್ಜಿಗಳು ಸಲ್ಲಿಕೆ, 79 ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದವು

ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳ ಅನಾವರಣ

ಚನ್ನರಾಯಪಟ್ಟಣ:  ಅಕ್ರಮ ಗುಡಿಸಲು ತೆರವುಗೊಳಿಸಿ, ಜಮೀನು ಖಾತೆ ಮಾಡಿಸಿಕೊಡಿ.., ಸರ್ವೆ ಸಿಬ್ಬಂದಿಯಿಂದ ಕರ್ತವ್ಯ ಲೋಪ ... ಹೀಗೆ ಸಾರ್ವಜನಿಕರು ಸಚಿವ ಎ.ಮಂಜು ಅವರ ಎದುರು ದೂರುಗಳ ಸುರಿಮಳೆಗೈದರು. ಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಕಂಡ ದೃಶ್ಯವಿದು.ಪಟ್ಟಣದ ಅಮಾನೀಕೆರೆ ಬಳಿ ಕೆಲವರು ಅಕ್ರಮವಾಗಿ ಗುಡಿಸಲು ಹಾಕಿದ್ದಾರೆ. ಇದನ್ನು ತೆರವುಗೊಳಿಸು ವಂತೆ ತಹಶೀಲ್ದಾರ್‌, ಪುರಸಭೆ, ಹೇಮಾವತಿ ಎಡದಂಡೆ ನಾಲಾವೃತ್ತದ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ. ಇಲಾಖೆಗೆ ಎಡತಾಕಿ ಚಪ್ಪಲಿ ಸವೆಯಿತೇ ಹೊರತು ಕೆಲಸ ಆಗಿಲ್ಲ ಎಂದು ಸಾರ್ವಜನಿಕರೊಬ್ಬರು ದೂರಿದರು.‘ನನ್ನ ಪತಿ ಮೃತಪಟ್ಟು ಕೆಲ ವರ್ಷಗಳಾದರೂ ಅವರ ಹೆಸರಿನಲ್ಲಿದ್ದ ಜಮೀನನ್ನು ನನಗೆ ಖಾತೆ ಮಾಡಿಕೊಟ್ಟಿಲ್ಲ. ಅಧಿಕಾರಿಗಳು ಇಲ್ಲದ ಸಬೂಬು ಹೇಳುತ್ತಾರೆ. ಕೂಡಲೇ ಖಾತೆ ಮಾಡಿಸಿಕೊಡಿ’ ಎಂದು ತಂಗ್ಯಮ್ಮ ಕಣ್ಣೀರಿಟ್ಟರು.ಜಮೀನು ಖಾತೆ ಮಾಡುವಲ್ಲಿ ಸರ್ವೆ ಇಲಾಖೆಯ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಈ ಇಲಾಖೆಯಲ್ಲಿ ನಡೆಯುವ ಅವ್ಯವಹಾರ ತಡೆಗಟ್ಟಬೇಕು ಎಂದು ರೈತ ಸಂಘದ ಮುಖಂಡ ಸತ್ತೀಗೌಡ  ಹೇಳಿದರು.ತಾಲ್ಲೂಕಿನ ಎಲ್ಲ ಕೆರೆ– ಕಟ್ಟೆಗಳಿಗೆ ನೀರು ತುಂಬಿಸಿದರೆ ಮಾತ್ರ ರೈತರ ಬಾಳು ಹಸನಾಗಲು ಸಾಧ್ಯ. ಈ ವಿಚಾರದಲ್ಲಿ ಉದಾಸೀನ ಸಲ್ಲದು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಬೇಕು. ವೈದ್ಯರ ನಡುವೆ ನಡೆಯುತ್ತಿರುವ ಘರ್ಷಣೆ ತಪ್ಪಿಸಬೇಕು ಎಂದು ರೈತಸಂಘದ ಮತ್ತೊಬ್ಬ ಮುಖಂಡ ಎ.ಎನ್‌. ಮಂಜೇಗೌಡ ಮನವಿ ಮಾಡಿದರು.ಪಟ್ಟಣದಲ್ಲಿ ಒಳಾಂಗಣ ರಂಗಮಂದಿರ ನಿರ್ಮಾಣಕ್ಕೆ  ಕ್ರಮ ಕೈಗೊಳ್ಳಬೇಕೆಂದು ಕಲಾವಿದ ನಂಜುಂಡ ಮೈಮ್ ಹೇಳಿದರು. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿ ಸ್ಥಾಪಿಸಲಾಗಿದೆ. ಚನ್ನರಾಯಪಟ್ಟಣದಲ್ಲಿ ಪುತ್ಥಳಿ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಬಿ.ರಂಗಪ್ಪ ಮನವಿ ಮಾಡಿದರು.ಸಚಿವರ ಎ.ಮಂಜು ಮಾತನಾಡಿ, ಅಮಾನೀಕೆರೆ ಬಳಿ ಅಕ್ರಮವಾಗಿ ನಿರ್ಮಿಸಿರುವ ಗುಡಿಸಲು ತೆರವುಗೊಳಿಸ ಲಾಗುವುದು. ಇಷ್ಟು ಮಾತ್ರವಲ್ಲದೇ ಎಲ್ಲೆಲ್ಲಿ ಕೆರೆ ಒತ್ತುವರಿ ಮಾಡಲಾಗಿ ದೆಯೋ ಅವೆಲ್ಲವನ್ನೂ ತೆರವುಗೊಳಿಸ ಲಾಗುವುದು ಎಂದರು. ಸಾಧ್ಯತೆಗಳನ್ನು ಪರಿಶೀಲಿಸಿ ಚನ್ನರಾಯಪಟ್ಟಣದಲ್ಲಿ ಅಂಬೇಡ್ಕರ್‌ ಪುತ್ಥಳಿ ನಿರ್ಮಿಸಲಾಗು ವುದು ಎಂದು ಭರವಸೆ ನೀಡಿದರು. ತಾಲ್ಲೂಕು ಕ್ರೀಡಾಂಗಣದಲ್ಲಿರುವ ವ್ಯಾಯಾಮದ ಪರಿಕರಗಳು ಹಲವು ವರ್ಷಗಳಿಂದ ತುಕ್ಕು ಹಿಡಿಯುತ್ತಿದೆ ಎಂದು ಜನತೆ ದೂರಿದ್ದಾರೆ.ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಂಡು ಜನರಿಗೆ ಉಪಯೋಗವಾಗುವಂತೆ ನೋಡಿಕೊಳ್ಳ ಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು. ಯಾವುದೇ ದೂರು ಬರದಂತೆ ಕೆಲಸ ಮಾಡಿಕೊಡಬೇಕು. ಜನಸಂಪರ್ಕ ಸಭೆಯಲ್ಲಿ 150 ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲಿ 79 ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿವೆ. ಇನ್ನೂ 15 ದಿನಗಳಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ತಹಶೀಲ್ದಾರ್‌ಗೆ ಹೇಳಿದರು. ಇನ್ನೊಂದು ತಿಂಗಳಲ್ಲಿ ತಾಲ್ಲೂಕು ಕಚೇರಿಗೆ  ಭೇಟಿ ನೀಡುತ್ತೇನೆ. ಅಷ್ಟರಲ್ಲಿ ಜನರ ಕೆಲಸ ಆಗಿರಬೇಕು ಎಂದು ತಾಕೀತು ಮಾಡಿದರು.ಜಿಲ್ಲಾಧಿಕಾರಿ ಚೈತ್ರಾ ಮಾತನಾಡಿ, ಜಿಲ್ಲೆಯಲ್ಲಿ 59 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ ಇದೆ. ಸದ್ಯದಲ್ಲಿ ಆ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು. ಶಾಸಕ ಸಿ.ಎನ್‌. ಬಾಲಕೃಷ್ಣ, ವಿಧಾನಪರಿಷತ್‌ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿದರು.ಪ್ರೊಬೆಷನರಿ ಐಎಎಸ್‌ ಅಧಿಕಾರಿ ಮಹಮದ್‌ರೋಷನ್‌, ಜಿಲ್ಲಾ ಪಂಚಾಯಿತಿ ಸಿಇಒ ವೆಂಕಟೇಶ್‌ಕುಮಾರ್‌, ಎಸ್‌ಪಿ ರಾಹುಲ್‌ಕುಮಾರ್‌ ಶಹಪೂರವಾಡ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸೌಮ್ಯಾ ಚಂದ್ರೇಗೌಡ, ಉಪಾಧ್ಯಕ್ಷ ಹೊನ್ನೇಗೌಡ, ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್. ನಾಗರಾಜು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎನ್‌. ಪುಟ್ಟಸ್ವಾಮಿ ಗೌಡ, ಶ್ವೇತಾ ಆನಂದ್‌, ಮಂಜುಳಾ ಶಂಕರ್‌, ಮಂಜೇಗೌಡ, ಶ್ರೇಯಸ್‌ ಎಂ. ಪಟೇಲ್‌, ಮಮತಾ ರಮೇಶ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.