ಮಂಗಳವಾರ, ಜೂನ್ 15, 2021
26 °C

ಜನಸ್ನೇಹಿ ಬಜೆಟ್ ಮಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿಯಾಗಿ ಉಳಿದ ಅವಧಿಯನ್ನು ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಈ ಬಾರಿ ಜನಸ್ನೇಹಿ ಬಜೆಟ್ ಮಂಡಿಸುವುದಾಗಿ ಭಾನುವಾರ ಇಲ್ಲಿ ತಿಳಿಸಿದರು.59ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ನಂತರ ನಗರದ ಗವಿಗಂಗಾಧರೇಶ್ವರ ದೇವಾಲಯ, ದೊಡ್ಡ ಗಣಪತಿ ದೇವಾಲಯ, ಶಂಕರಮಠ ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಬಜೆಟ್ ತಯಾರಿ ಪೂರ್ಣಗೊಂಡಿದೆ. ರಾಜ್ಯದ ಜನತೆ ಮೆಚ್ಚುವಂತಹ ಮುಂಗಡ ಪತ್ರವನ್ನು ಇದೇ 21ರಂದು ಮಂಡಿಸಲಿದ್ದೇನೆ. ಎಲ್ಲ ವರ್ಗಗಳ ಹಿತಾಸಕ್ತಿ ಕಾಪಾಡುವಂತಹ ಬಜೆಟ್ ನೀಡಲಿದ್ದೇನೆ. ಮುಂಗಡ ಪತ್ರ ಮಂಡನೆ ಬಗ್ಗೆ ಯಾವುದೇ ಗೊಂದಲವಿಲ್ಲ~ ಎಂದರು.`ಪಕ್ಷದಲ್ಲಿ ಸಮಸ್ಯೆಗಳಿರುವುದು ನಿಜ. ಅವುಗಳನ್ನು ಮೆಟ್ಟಿ ನಿಲ್ಲುವ ಶಕ್ತಿ, ಆತ್ಮವಿಶ್ವಾಸ ಇದೆ. ಹಿಂದೆ ಪಕ್ಷದ ಅಧ್ಯಕ್ಷನಾಗಿದ್ದಾಗಲೂ ಗೊಂದಲಗಳು ಇದ್ದವು. ಎಲ್ಲವನ್ನೂ ನಿವಾರಿಸಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ಬರುವಂತೆ ಮಾಡಿದೆ. ರಾಜಕೀಯ ಪಕ್ಷಗಳಲ್ಲಿ ಗೊಂದಲ, ಭಿನ್ನಾಭಿಪ್ರಾಯಗಳು ಸಹಜ. ಗೊಂದಲ ಪರಿಹರಿಸುವ ಚಾಕಚಕ್ಯತೆ ಇದೆ. ರಾಜ್ಯಕ್ಕೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ~ ಎಂದು ತಿಳಿಸಿದರು.ಸಂಭ್ರಮ: ಸದಾನಂದ ಗೌಡರ ನಿವಾಸ `ಅನುಗ್ರಹ~ದಲ್ಲಿ ಭಾನುವಾರ ಸಡಗರದ ವಾತಾವರಣವಿತ್ತು. ದೇವಾಲಯಗಳಿಗೆ ಭೇಟಿ ನೀಡಿ ಹಿಂತಿರುಗಿದ ನಂತರ ಗೌಡರು ತಮ್ಮ ಮನೆಯಲ್ಲಿ ಐಡಿಯಲ್ ಅಂಧ ಶಾಲೆಯ ಮಕ್ಕಳಿಗೆ ಸಿಹಿ ಹಂಚಿದರು.ಸಚಿವರಾದ ಜಗದೀಶ ಶೆಟ್ಟರ್, ಉಮೇಶ್ ಕತ್ತಿ, ಸಿ.ಎಂ.ಉದಾಸಿ, ಮುರುಗೇಶ ನಿರಾಣಿ, ಬಿ.ಎನ್.ಬಚ್ಚೇಗೌಡ, ಸಿ.ಪಿ.ಯೋಗೇಶ್ವರ್, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಶಾಸಕರಾದ ಡಾ.ಅಶ್ವತ್ಥ್‌ನಾರಾಯಣ, ಎಲ್.ಎ. ರವಿಸುಬ್ರಹ್ಮಣ್ಯ, ಎಸ್.ಮುನಿರಾಜು ಸೇರಿದಂತೆ ಇನ್ನೂ ಹಲವು ಶಾಸಕರು, ಕಾರ್ಯಕರ್ತರು, ಅಭಿಮಾನಿಗಳು ಮುಖ್ಯಮಂತ್ರಿಗಳಿಗೆ ಹುಟ್ಟುಹಬ್ಬದ ಶುಭ ಕೋರಿದರು.ಹೈಕೋರ್ಟ್‌ನಲ್ಲಿ ಮೇಲ್ಮನವಿ

ಬೆಂಗಳೂರು:
ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಅವರ ನೇಮಕವನ್ನು ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.ಶಂಕರ ಬಿದರಿ ನೇಮಕ ವಿಚಾರದಲ್ಲಿ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ಸರ್ಕಾರ ನಿಯಮಾನುಸಾರ ನಡೆದುಕೊಂಡಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.