ಶುಕ್ರವಾರ, ಮಾರ್ಚ್ 5, 2021
27 °C
ಹಾಕಿ: ರಾಣಿ ರಾಂಪಾಲ್‌, ಲಿಲಿಮಾ ಮಿಂಚಿನ ಆಟ

ಜಪಾನ್‌ ಎದುರು ಡ್ರಾ ಸಾಧಿಸಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಪಾನ್‌ ಎದುರು ಡ್ರಾ ಸಾಧಿಸಿದ ಭಾರತ

ರಿಯೊ ಡಿ ಜನೈರೊ (ಪಿಟಿಐ): ಎರಡು ಗೋಲುಗಳ ಹಿನ್ನಡೆ ಅನುಭವಿಸಿದ್ದರೂ ಕೆಚ್ಚೆದೆಯಿಂದ ಹೋರಾಡಿದ ಭಾರತ ಮಹಿಳಾ ತಂಡದವರು ಒಲಿಂಪಿಕ್‌ ಹಾಕಿ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಪ್ರಬಲ ಜಪಾನ್‌ ಜತೆ ಡ್ರಾ ಸಾಧಿಸಿದರು.ಒಲಿಂಪಿಕ್‌ ಹಾಕಿ ಸೆಂಟರ್‌ನಲ್ಲಿ ಭಾನುವಾರ ನಡೆದ ‘ಬಿ’ ಗುಂಪಿನ ಪಂದ್ಯ 2–2 ಗೋಲುಗಳ ಡ್ರಾದಲ್ಲಿ ಕೊನೆಗೊಂಡಿತು. ಉಭಯ ತಂಡಗಳು ತಲಾ ಒಂದು ಪಾಯಿಂಟ್‌ ತಮ್ಮದಾಗಿಸಿಕೊಂಡವು.ಎಮಿ ನಿಶಿಕೊರಿ ಮತ್ತು ನಕಶಿಮ ಮೀ ಗಳಿಸಿದ ಗೋಲುಗಳ ನೆರವಿನಿಂದ ಜಪಾನ್‌ ಆರಂಭದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ರಾಣಿ ರಾಂಪಾಲ್‌ ಮತ್ತು ಲಿಲಿಮಾ ಮಿನ್ಜ್‌ ಗೋಲು ಗಳಿಸಿ ಭಾರತದ ಸೋಲು ತಪ್ಪಿಸಿದರು.36 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತ ತಂಡ ಕೊನೆಯ ನಿಮಿಷದವರೆಗೂ ಛಲ ಬಿಡದೆ ಆಡಿ ಎದುರಾಳಿ ತಂಡದ ಬೆವರಿಳಿಸಿತು.

ಪಂದ್ಯದ ಆರಂಭದಲ್ಲಿ ಭಾರತದ ಆಟಗಾರ್ತಿಯರು ಮೇಲುಗೈ ಸಾಧಿಸಿದ್ದರು. ಆದರೆ ಮೊದಲ ಅವಧಿಯ ಕೊನೆಯಲ್ಲಿ ಜಪಾನ್‌ ಚುರುಕಿನ ಆಟದ ಮೂಲಕ ಭಾರತದ ಮೇಲೆ ಒತ್ತಡ ಹೇರಿತು.ಮೊದಲ 30 ನಿಮಿಷಗಳಲ್ಲಿ ಭಾರತ ಗೋಲು ಗಳಿಸುವ ಕೆಲವು ಅವಕಾಶಗಳನ್ನು ಸೃಷ್ಟಿಸಿತಾದರೂ, ಹೊಂದಾಣಿಕೆಯ ಕೊರತೆಯಿಂದ ಚೆಂಡನ್ನು ಗುರಿ ಸೇರಿಸಲು ಆಗಲಿಲ್ಲ.ಮತ್ತೊಂದೆಡೆ ಜಪಾನ್‌ ತಂಡದವರು ಪರಿಸ್ಥಿತಿಗೆ ಹೊಂದಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಂಡರು. ಆದರೆ ಆಟ ಮುಂದುವರಿದಂತೆ ಎದುರಾಳಿಗಳ ಮೇಲೆ ಒತ್ತಡ ಹೇರಲು ಯಶಸ್ವಿಯಾದರು.ಪಂದ್ಯದ ಏಳು ಮತ್ತು ಎಂಟನೇ ನಿಮಿಷದಲ್ಲಿ ಭಾರತಕ್ಕೆ ಗೋಲು ಗಳಿಸಲು ಉತ್ತಮ ಅವಕಾಶ ದೊರೆತಿತ್ತಾದರೂ, ಪ್ರೀತಿ ದುಬೆ ಮತ್ತು ಪೂನಮ್‌ ರಾಣಿ ಚೆಂಡನ್ನು ಗುರಿ ಸೇರಿಸಲು ಯಶ ಕಾಣಲಿಲ್ಲ.ಮೊದಲ ಕ್ವಾರ್ಟರ್‌ ಕೊನೆಗೊಳ್ಳಲು 10 ಸೆಕೆಂಡ್‌ಗಳಿರುವಾಗ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಅವಕಾಶ ದೊರೆತರೂ ಅದರ ಪ್ರಯೋಜನ ಪಡೆಯಲು ಆಗಲಿಲ್ಲ. ಮರುಕ್ಷಣದಲ್ಲೇ ಜಪಾನ್‌ ಪಂದ್ಯದ ಮೊದಲ ಗೋಲು ಗಳಿಸಿತು.ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರ್ತಿಯರು ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದ್ದರು. ಆದರೂ ಕೆಲವೊಮ್ಮೆ ಚೆಂಡನ್ನು ಸುಲಭವಾಗಿ ಎದುರಾಳಿಗಳಿಗೆ ದೊರೆಯುವಂತೆ ಮಾಡಿ ಒತ್ತಡ ಅನುಭವಿಸಿದರು. ವಿರಾಮಕ್ಕೆ ಎರಡು ನಿಮಿಷಗಳಿರುವಾಗ ಜಪಾನ್‌ 2–0 ರಲ್ಲಿ ಮುನ್ನಡೆ ಪಡೆಯಿತು.ಚುರುಕಿನ ಹೋರಾಟ: ಹಿನ್ನಡೆ ಅನುಭವಿಸಿದರೂ ಭಾರತ ಎರಡನೇ ಅವಧಿಯ ಆಟವನ್ನು ಆತ್ಮವಿಶ್ವಾಸದಿಂದ ಆರಂಭಿಸಿತು. 31ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ರಾಣಿ ತಂಡಕ್ಕೆ ಮೊದಲ ಗೋಲು ತಂದಿತ್ತರು.

ಮೂರನೇ ಕ್ವಾರ್ಟರ್‌ನಲ್ಲಿ ಜಪಾನ್‌ ತನ್ನ ಎರಡನೇ ಪೆನಾಲ್ಟಿ ಕಾರ್ನರ್‌ ಅವಕಾಶ ಹಾಳುಮಾಡಿಕೊಂಡಿತು. ಆದರೆ ಭಾರತ ಆ ಬಳಿಕ ತನಗೆ ಲಭಿಸಿದ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳಲ್ಲಿ ಒಂದನ್ನು ಸದುಪಯೋಗಪಡಿಸಿಕೊಂಡು 2–2 ರಲ್ಲಿ ಸಮಬಲ ಸಾಧಿಸಿತು.ಮೂರನೇ ಕ್ವಾರ್ಟರ್‌ ಕೊನೆಗೊಳ್ಳಲು ಕೆಲವೇ ಕ್ಷಣಗಳಿರುವಾಗ ಜಪಾನ್‌ ತಂಡದ ಯೂರಿ ನಗಾಯ್‌ ಅವರ ಪ್ರಯತ್ನವನ್ನು ಭಾರತದ ಗೋಲ್‌ಕೀಪರ್‌ ಸವಿತಾ ಸೊಗಸಾಗಿ ತಡೆದರು.  ಅಂತಿಮ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಗೆಲುವಿನ ಗೋಲಿಗಾಗಿ ಶಕ್ತಿಮೀರಿ ಪ್ರಯತ್ನಿಸಿದವು.ವಂದನಾ ಕಟಾರಿಯಾ ಅವರಿಗೆ ಗೆಲುವಿನ ಗೋಲು ಗಳಿಸಲು ಅತ್ಯುತ್ತಮ ಅವಕಾಶ ಲಭಿಸಿತ್ತಾದರೂ, ಜಪಾನ್‌ ಗೋಲ್‌ಕೀಪರ್‌ ಸಕಿಯಾ ಅಸಾನೊ ಅದನ್ನು ವಿಫಲಗೊಳಿಸಿದರು.ಮಂಗಳವಾರ ನಡೆಯುವ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡ ಬ್ರಿಟನ್‌ ಜತೆ ಪೈಪೋಟಿ ನಡೆಸಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.