ಭಾನುವಾರ, ಏಪ್ರಿಲ್ 18, 2021
30 °C

ಜಪಾನ್: ಮತ್ತೆ ಕಂಪಿಸಿದ ಭೂಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಂಡಯ್(ಜಪಾನ್) (ಎಎಫ್‌ಪಿ): ಜಪಾನಿನ ಸುನಾಮಿ ವಿಪತ್ತು ವಲಯದಲ್ಲಿ ಗುರುವಾರ ರಾತ್ರಿ ಮರುಕಳಿಸಿದ ಪ್ರಬಲ ಭೂಕಂಪನದಿಂದಾಗಿ ಕನಿಷ್ಠ ನಾಲ್ವರು ಸತ್ತಿದ್ದಾರೆ. ಸುಮಾರು 140 ಜನರು ಗಾಯಗೊಂಡಿದ್ದಾರೆ. ಫುಕುಶಿಮಾ ಪರಮಾಣು ಸ್ಥಾವರದಲ್ಲಿ ಬಿಕ್ಕಟ್ಟನ್ನು ನಿವಾರಿಸಲು ಎಂಜಿನಿಯರುಗಳು ಇನ್ನೂ ಶ್ರಮಿಸುತ್ತಿರುವಾಗಲೇ ಸಂಭವಿಸಿರುವ ಈ ಕಂಪನ ಹೊಸ ಆತಂಕ ಮೂಡಿಸಿದೆ.ಜಪಾನ್‌ನ ಉತ್ತರ ಭಾಗದಲ್ಲಿ ಕಳೆದ ರಾತ್ರಿ ವಿದ್ಯುತ್ ಕಡಿತಗೊಂಡಿತ್ತು. ಇದರಿಂದ ಪರಮಾಣು ಸ್ಥಾವರಗಳ ಶೀತಲ ವ್ಯವಸ್ಥೆಗೆ ಪರ್ಯಾಯ ಮಾರ್ಗ ಅನುಸರಿಸಬೇಕಾಯಿತು. ಅಲ್ಲದೆ 33 ಲಕ್ಷಕ್ಕೂ ಹೆಚ್ಚು ಮಂದಿ ನಿವಾಸಿಗಳು ಕತ್ತಲಲ್ಲಿ ಕಳೆಯಬೇಕಾಯಿತು. ಸುಮಾರು 7.4 ತೀವ್ರತೆಯ ಕಂಪನದಿಂದಾಗಿ ನಾಲ್ವರು ಸತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಾಲ್ಕು ವಾರಗಳ ಹಿಂದೆ ಸಂಭವಿಸಿದ ದುರಂತದ ನಂತರದಲ್ಲಿ ಜಪಾನ್ ಕಂಡ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಗುರುವಾರ ರಾತ್ರಿಯ ಘಟನೆಯೂ ಒಂದಾಗಿದೆ.ಕಳೆದ ತಿಂಗಳು ಸಂಭವಿಸಿದ 9.0 ತೀವ್ರತೆಯ ಭೂಕಂಪ ಮತ್ತು ಸುನಾಮಿಯಿಂದ ತೀವ್ರವಾಗಿ ಹಾನಿಗೊಳಗಾಗಿರುವ ಮಿಯಾಗಿ ಪ್ರಾಂತ್ಯದ ಉತ್ತರ ಮತ್ತು ಮಧ್ಯ ಭಾಗಗಳಲ್ಲೇ ಕಳೆದ ರಾತ್ರಿ 11.32ರ ವೇಳೆಗೆ ಭೂಮಿ ಅದುರಿದೆ. ಮಿಯಾಗಿಯಲ್ಲಿ ಐದು ಕಟ್ಟಡಗಳು ಸಂಪೂರ್ಣ ಅಥವಾ ಭಾಗಶಃ ನಾಶವಾಗಿವೆ. ಮಿಯಾಗಿ ಮತ್ತು ಇವಾಟೆಯಲ್ಲಿ ತಲಾ ಮೂರು ಕಟ್ಟಡಗಳು ಭಸ್ಮವಾಗಿವೆ. ಮಾರ್ಚ್ 11ರ ದುರಂತದಿಂದ ಇನ್ನೂ ಧ್ವಂಸಗೊಂಡ ಸ್ಥಿತಿಯಲ್ಲೇ ಇರುವ ಕರಾವಳಿ ತೀರದಲ್ಲಿ ಎರಡು ಮೀಟರ್ (ಆರು ಅಡಿ) ಎತ್ತರದ ಅಲೆಗಳು ಅಪ್ಪಳಿಸಬಹುದು ಎಂದು ಜಪಾನಿನ ಹವಾಮಾನ ಇಲಾಖೆಯು ತಕ್ಷಣದಲ್ಲೇ ಸುನಾಮಿ ಮುನ್ನೆಚ್ಚರಿಕೆಯನ್ನೂ ನೀಡಿತು.ಭೂಕಂಪನ ಸಂಭವಿಸಿದ 83 ನಿಮಿಷಗಳ ಬಳಿಕ ಮುನ್ನೆಚ್ಚರಿಕೆಯನ್ನು ಹಿಂದಕ್ಕೆ ಪಡೆಯಲಾಯಿತು. ಆದರೆ ಆ ವೇಳೆಗಾಗಲೇ ಜನರು ಎತ್ತರದ ಪ್ರದೇಶಗಳಿಗೆ ತೆರಳಿ ರಕ್ಷಣೆ ಪಡೆದಿದ್ದರು.

ಜಪಾನ್‌ನ ಈಶಾನ್ಯಭಾಗದಲ್ಲಿ ಕಳೆದ ತಿಂಗಳ ದುರಂತದಲ್ಲಿ ಸುಮಾರು 30 ಸಾವಿರ ಮಂದಿ ಬಲಿಯಾಗಿದ್ದ ಹಿನ್ನೆಲೆಯಲ್ಲಿ ಈಗಾಗಲೇ ಸ್ಥಳೀಯ ಶಿಬಿರಗಳಲ್ಲಿ ಅನೇಕರು ಆಶ್ರಯ ಪಡೆದಿದ್ದು ಗುರುವಾರದ ಕಂಪನ ಇವರಲ್ಲಿ ಮತ್ತೆ ಗಾಬರಿ ಮೂಡಿಸಿತು.ಕಿತಕಮಿ ಪಟ್ಟಣದಲ್ಲಿ ಜನರು ಆಹಾರ, ಕುಡಿಯುವ ನೀರು ಮತ್ತು ಬ್ಯಾಟರಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಸಲುವಾಗಿ  ಅಂಗಡಿಗಳಿಗೆ ಮುಗಿಬಿದ್ದಿದ್ದು ಕಂಡು ಬಂದಿತು.

‘ಅದು ತುಂಬಾ ಭಯಾನಕ ಆಗಿತ್ತು’ ಎನ್ನುತ್ತಾರೆ ಬ್ಯಾಟರಿಗಾಗಿ ನಾಲ್ಕು ಅಂಗಡಿಗಳಿಗೆ ಅಲೆದ ಕಜುಯುಕಿ ಶಿರಾಯ್‌ವಾ ಅವರು. ‘ಮಧ್ಯರಾತ್ರಿಯ ಕಂಪನವು ನನಗೆ ಕಳೆದ ತಿಂಗಳ  ಭೂಕಂಪನ ಸಂದರ್ಭದಲ್ಲಿ ನಾನು ಅನುಭವಿಸಿದ ಭೀತಿಯನ್ನು ನೆನಪಿಸಿತು. ಭೂಕಂಪನದಿಂದ ನನಗೆ ಸಾಕಾಗಿ ಹೋಗಿದೆ. ದಯವಿಟ್ಟು ಇನ್ನು ಯಾವ ಭೂಕಂಪನವೂ ಬೇಡ’ ಎಂದು  ಪ್ರಾರ್ಥಿಸುತ್ತಾರೆ.ಯಾಮಗತಾ ಪ್ರಾಂತ್ಯದಲ್ಲಿ ಮನೆಯಲ್ಲಿದ್ದ ಕೃತಕ ಉಸಿರಾಟದ ಉಪಕರಣ ವಿದ್ಯುತ್ ಕಡಿತದಿಂದಾಗಿ ಕಾರ್ಯ ನಿರ್ವಹಿಸದೇ 63 ವರ್ಷದ ಮಹಿಳೆಯೊಬ್ಬರು ಅಸು ನೀಗಿದರು ಎಂದು ಅಗ್ನಿ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆ ಹೇಳಿದೆ. ಮಿಯಾಗಿಯಲ್ಲಿ 79 ಮತ್ತು 85 ವರ್ಷ ವಯಸ್ಸಿನ ಇಬ್ಬರು ವ್ಯಕ್ತಿಗಳು ಸತ್ತಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದೇ ಪ್ರಾಂತ್ಯದಲ್ಲಿ ಭೂಕಂಪನದ ಬಳಿಕ 83 ವರ್ಷದ ವೃದ್ಧೆಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರದಲ್ಲಿ ಆಕೆ ಸತ್ತಿರುವುದಾಗಿ ವೈದ್ಯರು ದೃಢಪಡಿಸಿದರು ಎಂದು ಸುದ್ದಿಸಂಸ್ಥೆ ಹೇಳಿದೆ.ಫುಕುಶಿಮಾದಲ್ಲಿ ಆರು ರಿಯಾಕ್ಟರುಗಳ ಪೈಕಿ ಎಲ್ಲಿಯೂ ಯಾವುದೇ ವೈಪರೀತ್ಯ ಕಂಡು ಬಂದಿಲ್ಲ ಎಂದು ಟೆಪ್ಕೊ ಹೇಳಿದೆ. ಒಂದು ಮತ್ತು ಮೂರನೇ ರಿಯಾಕ್ಟರುಗಳು ಹೆಚ್ಚು ಬಿಸಿಯಾಗುವುದನ್ನು ತಡೆಯಲು ಇವುಗಳಿಗೆ ಎಂಜಿನಿಯರುಗಳು ನೀರನ್ನು ಪಂಪ್ ಮಾಡುತ್ತಿದ್ದಾರೆ ಅಲ್ಲದೆ ಜಲಜನಕ ಸ್ಫೋಟ ತಡೆಗೆ ಒಂದನೇ ರಿಯಾಕ್ಟರ್‌ನಲ್ಲಿ ನೈಟ್ರೋಜನ್ ತುಂಬಿಸುತ್ತಿದ್ದಾರೆ.

ನಿರುಪಮಾಗೆ  ಅನುಭವ

ನವದೆಹಲಿ (ಪಿಟಿಐ): ಜಪಾನ್‌ಗೆ ಅಧಿಕೃತ ಭೇಟಿ ನೀಡಿರುವ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರಿಗೆ ಗುರುವಾರ ರಾತ್ರಿ ಸಂಭವಿಸಿದ ಭೂಕಂಪನದ ಅನುಭವ ಆಗಿದೆ.ನಿರುಪಮಾ ಅವರು ಟೋಕಿಯೊ ನಗರದ ಹೊಟೇಲ್‌ವೊಂದರ 15ನೇ ಮಹಡಿಯಲ್ಲಿರುವ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಅವರಿಗೆ ಭೂಕಂಪನದದ ಅನುಭವವಾಯಿತು.   ‘ಕೊಠಡಿಯಲ್ಲಿದ್ದ ಸಾಮಗ್ರಿಗಳು ಅಲುಗಾಡಿದವು. ಕಟ್ಟಡವೇ ಜೋತಾಡಿದಂತೆ ಅನ್ನಿಸಿತು. ಜಪಾನೀಯರ ಧೈರ್ಯ, ಸಂಯಮ ಮೆಚ್ಚುವಂತಹದ್ದು’ ಎಂದು ಅವರು ಟ್ವಿಟ್ಟರ್‌ನಲ್ಲಿ ತಮ್ಮ  ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ನಿರುಪಮಾ ರಾವ್ ಅವರು ಜಪಾನ್‌ನ ವಿದೇಶ ಸಹಾಯಕ ಸಚಿವ ಕೆನೆಚಿರೊ ಸಾಸೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಭೂಕಂಪ-ಸುನಾಮಿ ಸಂತ್ರಸ್ತ ಜಪಾನ್‌ಗೆ ಭೇಟಿ ನೀಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.