ಸೋಮವಾರ, ಮೇ 17, 2021
21 °C

ಜಮೀನಿಗಾಗಿ ಯೋಗಾಶ್ರಮ ಟ್ರಸ್ಟ್ ಪೊಲೀಸ್ ಇಲಾಖೆ ನಡುವೆ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನಕಪುರ ರಸ್ತೆಯ ಅಗರ ಬಳಿ ಇರುವ ಹತ್ತು ಎಕರೆ ಜಮೀನಿಗಾಗಿ ಪೊಲೀಸ್ ಪಡೆ ಹಾಗೂ ಬಾಬಾ ರಾಮದೇವ ಅವರ ಪತಂಜಲಿ ಯೋಗಾಶ್ರಮ ಟ್ರಸ್ಟ್ ನಡುವೆ ತೀವ್ರ ಪೈಪೋಟಿ ನಡೆದಿದೆ.ಆ ಜಾಗದಲ್ಲಿ ಗರುಡ ಪಡೆ ಕಮಾಂಡೊಗಳಿಗಾಗಿ ತರಬೇತಿ ಕೇಂದ್ರ ಆರಂಭಿಸಬೇಕು ಎಂಬುದು ಪೊಲೀಸ್ ಪಡೆಯ ಚಿಂತನೆಯಾದರೆ, ಯೋಗಾಶ್ರಮ ಸ್ಥಾಪಿಸಲು ಜಾಗವನ್ನು ತಮಗೆ ನೀಡಬೇಕು ಎಂದು ಆಶ್ರಮದ ಆಡಳಿತ ಮಂಡಳಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ.`ಸರ್ಕಾರದ ಭೂಮಿಗಾಗಿ ಆಶ್ರಮದೊಂದಿಗೆ ಪೈಪೋಟಿ ನಡೆಸುವಂತಹ ಪರಿಸ್ಥಿತಿ ಬಂದಿರುವುದು ದುರಾದೃಷ್ಟಕರ. ಆದರೆ, ನಾವು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಆ ಜಾಗವನ್ನು ಕೇಳುತ್ತಿಲ್ಲ ಎಂಬುದನ್ನು ಸರ್ಕಾರ ಅರಿಯಬೇಕು. ತರಬೇತಿ ಕೇಂದ್ರ ಆರಂಭಿಸಲು ಐಎಸ್‌ಡಿ ಬಿಜೆಪಿ ಸರ್ಕಾರಕ್ಕೆ 40 ಎಕರೆ ಜಾಗ ಕೇಳಿತ್ತು.

ಆಗ ಸರ್ಕಾರ, ತರಬೇತಿ ಕೇಂದ್ರಕ್ಕಾಗಿ ಕೇವಲ 29 ಎಕರೆ ಜಾಗವನ್ನು ಮಾತ್ರ ನೀಡಿತ್ತು. ಇನ್ನೂ ಹತ್ತು ಎಕರೆ ಜಾಗವನ್ನು ನೀಡುವಂತೆ ವರ್ಷದ ಹಿಂದೆಯೇ ಮನವಿ ಮಾಡಲಾಗಿದೆ' ಎಂದು ಆಂತರಿಕ ಭದ್ರತಾ ವಿಭಾಗದ ಐಜಿಪಿ ಭಾಸ್ಕರ್ ರಾವ್ ಹೇಳಿದರು.ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ರಾಷ್ಟ್ರೀಯ ಭದ್ರತೆಗೆ ಒತ್ತು ನೀಡುವ ಒತ್ತಾಸೆಯನ್ನು ಹೊಂದಿದೆ. ಸರ್ಕಾರಕ್ಕೆ ಮತ್ತೊಂದು ಮನವಿ ಸಲ್ಲಿಸಲಾಗುವುದು ಎಂದರು.ಸದ್ಯ ಗರುಡ ಪಡೆಯ ಕಮಾಂಡೊಗಳು ಕೂಡ್ಲುವಿನ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ಜಾಗದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸರ್ಕಾರ ಅಗರದಲ್ಲಿರುವ ಜಮೀನನ್ನು ನೀಡಿದರೆ ವ್ಯವಸ್ಥಿತ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.