ಶುಕ್ರವಾರ, ಜೂನ್ 25, 2021
22 °C

ಜಮೀನು ಸಕ್ರಮಗೊಳಿಸುವಂತೆ ರೈತರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾನಗಲ್: ತಾಲ್ಲೂಕಿನಲ್ಲಿರುವ ಬಗರ್ ಹುಕುಂ ಸಾಗುವಳಿದಾರರು ವಿಧಾನ ಸಭಾ ಮಾಜಿ ಉಪಸಭಾಪತಿ, ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷ ಮನೋಹರ ತಹಶೀಲ್ದಾರ ನೇತೃತ್ವದಲ್ಲಿ ತಮ್ಮ ಜಮೀನನ್ನು ಸಕ್ರಮಗೊಳಿ ಸುವಂತೆ ಒತ್ತಾಯಿಸಿ ಇಲ್ಲಿನ ತಹಸೀಲ್ದಾರ ಎಸ್.ಎನ್. ರುದ್ರೇಶರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.ತಾಲ್ಲೂಕಿನ 25 ರಿಂದ 30 ಗ್ರಾಮಗಳಲ್ಲಿ 40, 45 ವರ್ಷಗಳಿಂದ ಭೂ ರಹಿತರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಅಲ್ಪ ಸಂಖ್ಯಾತರು ಸರ್ಕಾರಿ ಮತ್ತು ಅರಣ್ಯ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದಾರೆ.ಈ ಬಡ ರೈತ ಕೂಲಿ ಕಾರ್ಮಿಕರು ಬಹಳ ವರ್ಷಗಳಿಂದ ಬಗರ ಹುಕುಂ ಸಾಗುವಳಿ ಮಾಡುತ್ತಾ ಸರ್ಕಾರ ನಿಗದಿ ಪಡಿಸಿದ ದಂಡ ಶುಲ್ಕ ಪಾವತಿ ಮಾಡುತ್ತ ಬಂದರೂ ಸಹಿತಿ ಮತ್ತು ಸಂಬಂಧ ಪಟ್ಟ ಅರಣ್ಯ ಅಧಿಕಾರಿಗಳ ನೋಟಿಸಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪೂರೈಸುತ್ತಾ ಬಂದಿದ್ದಾರೆ.

 

ಹೀಗಿದ್ದರೂ ಕೂಡ  ಅಧಿಕಾರಿಗಳು ಮೇಲಿಂದ ಮೇಲೆ ಅಮಾನುಷವಾಗಿ ಕಿರುಕುಳ ಕೊಡುತ್ತಾ ಜೆಸಿಬಿ ಯಂತ್ರ  ಉಪಯೋಗಿಸಿ ಇವರನ್ನು ಬೀದಿ ಪಾಲು ಮಾಡುವ  ಕುತಂತ್ರ ನಡೆದಿರುವುದು ಕಂಡು ಬರುತ್ತದೆ.ಕೇಂದ್ರ ಸರ್ಕಾರವು ಜಿಎಸ್‌ಆರ್ 1(ಇ) ಅನು ಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) 14ನೇ ಪ್ರಕರಣ (1)ಗೆ ಉಪ ಪ್ರಕರಣದ ಮೂಲದ ಅಗತ್ಯ ಪಡಿಸಿದಂತೆ ಭಾರತ ಸರ್ಕಾರದ ಅಧಿಸೂಚನೆ ಸಂಖ್ಯೆ ಜಿಎಸ್‌ಆರ್ 437 ದಿನಾಂಕ 19-06-2007 ರ ಭಾರತ ರಾಜ ಪತ್ರದ ಭಾಗ 2 ವಿಭಾಗ 3 ಉಪ ವಿಭಾಗದ 1 ರಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡಿದವರಿಗೆ ಹಕ್ಕು ಪತ್ರ ಕೊಡಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುತ್ತದೆ.ಆದ್ದರಿಂದ ಸಾಗುವಳಿ ಮಾಡಿದ ಅರಣ್ಯ ಭೂಮಿ ಯನ್ನು ಸಕ್ರಮಗೊಳಿಸಿ ಇವರ ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.ಮನವಿ ಅರ್ಪಿಸುವ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಎಸ್.ಬಡಿಗೇರ, ಉಜ್ಜನ ಗೌಡ್ರ ಪಾಟೀಲ, ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಸಮನ್ವಯ ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಎ.ಎಂ.ಪಠಾಣ, ಕಾಶೀನಾಥ ನ್ಯಾಮತಿ, ನಜೀರಸಾಬ ಗಿರೀಶಿನಕೊಪ್ಪ, ಏಳುಕೋಟೆಪ್ಪ ಹಾವಳೇರ, ಅಬ್ದುಲ್ ಸತ್ತಾರಸಾಬ ಅರಳೇಶ್ವರ, ಆರ್ ಎಸ್.ಪಾಟೀಲ, ವಿರೇಶ ಬೈಲವಾಳ ಸೇರಿದಂತೆ ಅನೇಕರು ಸಾರ್ವಜನಿಕರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.