ಸೋಮವಾರ, ಜನವರಿ 20, 2020
25 °C

ಜಲ ಕ್ಷಾಮ: ನೀರಿನ ಅಭಾವ ನಿವಾರಣೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಗರದ ಜನಸಂಖ್ಯೆ ವಾರ್ಷಿಕವಾಗಿ ಸರಾಸರಿ ಶೇ 4ರಷ್ಟು ಏರಿಕೆಯಾಗುತ್ತಿದ್ದು, 2020ರ ವೇಳೆಗೆ ನಗರದಲ್ಲಿ ಜಲ ಕ್ಷಾಮ ಕಾಣಿಸಿಕೊಳ್ಳುವ ಲಕ್ಷಣ ಕಾಣುತ್ತಿದೆ. ಹಾಗಾಗಿ ನೀರಿನ ಅಭಾವ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ~ ಎಂದು ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯ ಹೇಳಿದರು.ಶಂಕರಪುರದ ಸಾಹಿತ್ಯ ಸಂಘವು ನಗರದ  ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಿವಂಗತ ವಿ.ಎಸ್. ಕೃಷ್ಣಯ್ಯರ್ ಅವರ 90ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. `2020ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ ಸುಮಾರು 1.40 ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ. ಆ ಹೊತ್ತಿಗೆ ನೀರಿನ ತೀವ್ರ ಅಭಾವ ಸೃಷ್ಟಿಯಾಗುವ ಸಂಭವವಿದೆ. ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ~ ಎಂದರು.`ನಗರದಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. `ಮೆಟ್ರೊ~ ರೈಲು ಸೇವೆಯಿಂದ ಸಂಚಾರ ಸಮಸ್ಯೆ ಬಗೆಹರಿಯಲಿದೆ ಎಂಬ ಭ್ರಮೆ ಬೇಡ. `ಮೆಟ್ರೊ~ ರೈಲು ಸೇವೆ ಪರಿಣಾಮಕಾರಿಯಾಗಿ ಬಳಕೆಯಾಗಬೇಕಾದರೆ ಇನ್ನೂ 15 ವರ್ಷಗಳಾದರೂ ಬೇಕು~ ಎಂದು ಹೇಳಿದರು. `ಕೃಷ್ಣಯ್ಯರ್ ನುಡಿದಂತೆ ನಡೆದ ಅಪರೂಪದ ರಾಜಕಾರಣಿ. ಅವರ ಆದರ್ಶ ಗುಣಗಳಲ್ಲಿ ಕೆಲವನ್ನಾದರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ಸದ್ಯದಲ್ಲೇ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಲಾಗುವುದು~ ಎಂದರು.ವಿಧಾನ ಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್, `ಬೆಂಗಳೂರು ಮತ್ತು ರಾಜ್ಯದ ಅಭಿವೃದ್ಧಿಗೆ ಕೃಷ್ಣಯ್ಯರ್ ಅವರ ಕೊಡುಗೆ ಅಪಾರ. ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಾಗುವಲ್ಲಿ ಕೃಷ್ಣಯ್ಯರ್ ಪಾತ್ರ ಪ್ರಮುಖವಾಗಿತ್ತು. ಅವರ ಆದರ್ಶ ರಾಜಕೀಯ ಜೀವನ ಎಲ್ಲ ರಾಜಕಾರಣಿಗಳಿಗೆ ಮಾದರಿ ಎನಿಸಿದೆ~ ಎಂದು ಹೇಳಿದರು.ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಮಾತನಾಡಿ, `ಕೃಷ್ಣಯ್ಯರ್ ಅಪರೂಪದ ಆದರ್ಶ ರಾಜಕಾರಣಿಯಾಗಿದ್ದರು. ಸರ್ಕಾರಕ್ಕಿಂತ ಮೊದಲೇ ಪಾಲಿಕೆ ಆಡಳಿತದಲ್ಲಿ ಕನ್ನಡವನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದರು. ದಲಿತರ ಹಿತಕ್ಕಾಗಿ ಶ್ರಮಿಸಿದ ಅವರು ಜನಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು~ ಎಂದರು.ಇದೇ ಸಂದರ್ಭದಲ್ಲಿ `ವಿಶ್ವಭೂಪಟದಲ್ಲಿ ಬೆಂಗಳೂರು~ ವಿಷಯ ಕುರಿತು ಉಪನ್ಯಾಸ ನೀಡಿದ ಐಐಎಂಬಿ ಪ್ರಾಧ್ಯಾಪಕ ಪ್ರೊ. ಅಶ್ವಿನ್ ಮಹೇಶ್, `ಬೆಂಗಳೂರು ಶ್ರೇಷ್ಠ ನಗರವಾಗಿ ರೂಪುಗೊಳ್ಳಬೇಕಾದರೆ ಅಭಿವೃದ್ಧಿ ಕಾರ್ಯಗಳಲ್ಲಿ ಜನರು ಪಾಲ್ಗೊಳ್ಳಬೇಕು. ಇಲ್ಲದಿದ್ದರೆ ಉತ್ತಮ ನಗರವಾಗಿ ಹೊರಹೊಮ್ಮಲು ಸಾಧ್ಯವಿಲ್ಲ~ ಎಂದರು.ಬಡ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಹೊ. ಶ್ರೀನಿವಾಸಯ್ಯ, ಕೃಷ್ಣಯ್ಯರ್ ಅವರ ಪತ್ನಿ ಸುಮಿತ್ರಾ ಕೃಷ್ಣಯ್ಯರ್, ಮಾಜಿ ಮೇಯರ್ ಪಿ.ಆರ್. ರಮೇಶ್, ಪಾಲಿಕೆ ಸದಸ್ಯ ಎ.ಎಚ್. ಬಸವರಾಜು ಇತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)