ಮಂಗಳವಾರ, ಮೇ 11, 2021
27 °C

ಜವಾಬ್ದಾರಿ ಅರಿತುಕೊಳ್ಳಲು ಶಿಕ್ಷಕರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಶಿಕ್ಷಕರ ವೃತ್ತಿ ಹೆಚ್ಚು ಪಾವಿತ್ರ್ಯವಾಗಿದ್ದು, ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯ ದಲ್ಲಿ ಏರ್ಪಡಿಸಿದ್ದ ಡಾ. ಎಸ್. ರಾಧಾಕೃಷ್ಣನ್‌ರವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಯ ಪರಿಪಾಲನೆ, ಗೌರವಯುತ ವೇಷಭೂಷಣ, ತಾಳ್ಮೆ, ಆತ್ಮಗೌರವ, ಸತತ ಅಭ್ಯಾಸ ಜೊತೆಗೆ ಪಾಠಕ್ಕೆ ಬೇಕಾಗುವ ಪೂರ್ವ ತಯಾರಿ, ವಿಷಯ ಜ್ಞಾನ ಶಿಕ್ಷಕರಲ್ಲಿ ಅಡಕವಾಗಿರಬೇಕು. ಡಾ. ಎಸ್. ರಾಧಾಕೃಷ್ಣನ್‌ರವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಶಿಕ್ಷಕರ ವ್ಯಕ್ತಿತ್ವ ಇತರರಿಗೆ ಮಾದರಿಯಾಗಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಅವರ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಬೇಕು ಎಂದು ಹೇಳಿದರು.

ಜೀವನದಲ್ಲಿ ಗುರಿ ಇರಬೇಕು. ಆ ಗುರಿ ಸಾಧನೆಗೆ ಪೂರಕವಾಗಿ ಒಬ್ಬ ಗುರು ಇರಬೇಕು ಎನ್ನುವುದನ್ನು ಎಲ್ಲರೂ ಮನಗಾಣಬೇಕು. ಆದರ್ಶಗಳಿಗೆ ಇನ್ನೊಂದು ಹೆಸರೇ ಶಿಕ್ಷಕರು ಎಂದರು.ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಶ್ರೀಶೈಲಪ್ಪ ಬಿದರೂರ ಅಧ್ಯಕ್ಷತೆ ವಹಿ ಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚಂಬವ್ವ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ದೊಡ್ಡಗೌಡರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ವೀರಣ್ಣ ತುರಮರಿ,  ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಮಲಾಬಾಯಿ ಪೂಜಾರ ಅತಿಥಿಗಳಾಗಿ ಭಾಗವಹಿಸಿದ್ದರು.ಡಯಟ್ ಪ್ರಾಚಾರ್ಯ ಅಬ್ದುಲ್ ಅಜೀಬ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಉದಯ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಐ.ಬಿ. ಬೆನಕೊಪ್ಪ, ಎಸ್.ಎಸ್. ಗುಡ್ಲಾನೂರ, ಡಿಡಿಪಿಯು ಬಿ.ಎಸ್. ಗೌಡರ, ಎಸ್.ಎನ್. ಬಳ್ಳಾರಿ ಹಾಜರಿದ್ದರು.ಸೇಬು ವಿತರಣೆ: ಶಿಕ್ಷಕರ ದಿನಾಚರ ಣೆಯಲ್ಲಿ ಪಾಲ್ಗೊಂಡಿದ್ದ ಸುಮಾರು ಒಂದೂವರೆ ಸಾವಿರ ಶಿಕ್ಷಕರಿಗೆ ಶಾಸಕ ಶ್ರೀಶೈಲಪ್ಪ ಬಿದರೂರ ಅವರು ಸೇಬು ಹಣ್ಣು ಹಾಗೂ ಗುಲಾಬಿ ಹೂ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.