ಶುಕ್ರವಾರ, ಏಪ್ರಿಲ್ 16, 2021
31 °C

ಜಾತಿಯ ಬೆತ್ತಲೆ ನರ್ತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿಗಳ ಬದಲಾವಣೆ ರಾಜಕೀಯದಲ್ಲಿ ಹೊಸದೇನಲ್ಲ. ಭ್ರಷ್ಟಾಚಾರದ ಆರೋಪ ಎದುರಾದಾಗ ಇಲ್ಲವೇ, ಶಾಸಕರ ವಿಶ್ವಾಸ ಕಳೆದುಕೊಂಡಾಗ ಮುಖ್ಯಮಂತ್ರಿಗಳ ಪದಚ್ಯುತಿ ನಡೆದುಕೊಂಡ ಬಂದ ರೂಢಿ. ಅಂತಹ ಯಾವ ಕಾರಣವೂ ರಾಜ್ಯದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಬದಲಾವಣೆಯ ಹಿಂದೆ ಕಾಣುತ್ತಿಲ್ಲ. ಇಲ್ಲಿ ಗೌಡರು, ಶೆಟ್ಟರು, ಮತ್ತೊಬ್ಬರು ಮುಖ್ಯ ಅಲ್ಲವೇ ಅಲ್ಲ, ಯಾರು ಹೋದರೂ ಬಂದರೂ ಸಾಮಾನ್ಯ ಜನರ ಬದುಕಿನಲ್ಲಿ ದೊಡ್ಡ ಬದಲಾವಣೆಯಾಗಲಾರದು. ಆದರೆ ಆತಂಕಕ್ಕೀಡುಮಾಡಿರುವುದು ಬದಲಾವಣೆಯ ಹಿಂದಿನ ಕಾರಣವಾದ ಒಂದು ನಿರ್ದಿಷ್ಟ ಜಾತಿಯವರನ್ನೇ ಮುಖ್ಯಮಂತ್ರಿ ಮಾಡಬೇಕೆಂಬ ಹಟಮಾರಿ ಧೋರಣೆ.  ರಾಜ್ಯದಲ್ಲಿ ಇಂದು ಕಾಣುತ್ತಿರುವುದು ಜಾತಿ ರಾಜಕಾರಣದ ಬೆತ್ತಲೆ ನರ್ತನ. ಸ್ವಯಂಕೃತ ಅಪರಾಧಗಳಿಂದಾಗಿ ಕಳೆದುಕೊಳ್ಳುತ್ತಿರುವ ರಾಜಕೀಯ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಡೆಸುತ್ತಿರುವ ಹತಾಶ ಪ್ರಯತ್ನ ಈ ನಿರ್ಲಜ್ಜ ಜಾತೀಯತೆ. ತನ್ನ ಸ್ವಾರ್ಥಕ್ಕಾಗಿ ಜಾತಿಯನ್ನು ಇತ್ತೀಚಿನ ದಿನಗಳಲ್ಲಿ ನಿರ್ಭಿಡೆಯಿಂದ ಬಳಸಿಕೊಳ್ಳುತ್ತಾ ಬಂದಿರುವ ಅವರು ರಾಜಕೀಯವನ್ನು ಅನೈತಿಕತೆಯ ಪರಾಕಾಷ್ಠೆಗೆ ಕೊಂಡೊಯ್ದಿದ್ದಾರೆ. ಸ್ವೇಚ್ಛಾಚಾರದಿಂದ ನಡೆದುಕೊಳ್ಳಲು ಇದೇನು ಯಾವುದೋ ಒಂದು ಕುಟುಂಬ ಇಲ್ಲವೇ ಜಾತಿಯ ಪಾಳೆಗಾರಿಕೆ ಅಲ್ಲ. ಇಲ್ಲಿರುವುದು ಪ್ರಜಾಪ್ರಭುತ್ವ, ಆಳುವ ಹಕ್ಕು ಎಲ್ಲರಿಗೂ ಇದೆ. ಅದನ್ನು ಪ್ರಜಾತಾಂತ್ರಿಕ  ಕ್ರಮಗಳ ಮೂಲಕವೇ ನಿರ್ಧರಿಸಬೇಕಾಗುತ್ತದೆ. ಅದು ಯಾವುದೋ ಮನೆಯಲ್ಲಿಯೋ, ಮಠದಲ್ಲಿಯೋ  ಕೂತು ತೀರ್ಮಾನಿಸುವಂತಹ ಕ್ಷುಲ್ಲಕ ವಿಷಯ ಅಲ್ಲ.ಭಾರತೀಯ ಜನತಾ ಪಕ್ಷ ಮುಡಿಗೇರಿಸಿಕೊಂಡಿರುವ ಅಧಿಕಾರದ ಕಮಲ ಹುಟ್ಟಿದ್ದೇ ಇಂತಹ ಅನೈತಿಕ ರಾಜಕಾರಣದ ಕೆಸರಲ್ಲಿ.  ಮೈ-ಮನಸ್ಸು ಮಾರಿಕೊಂಡ ಶಾಸಕರನ್ನು ಖರೀದಿಸಿ ಗಣಿಲೂಟಿಕೋರರ ಲಾರಿಯಲ್ಲಿ ತುಂಬಿಕೊಂಡು ಬಂದು ಬಹುಮತ ಸಾಬೀತುಗೊಳಿಸಿದ ಬಿಜೆಪಿಯಿಂದ ಇನ್ನು ಯಾವ ಬಗೆಯ ನೈತಿಕ ರಾಜಕಾರಣವನ್ನು ನಿರೀಕ್ಷಿಸಲು ಸಾಧ್ಯ? ಇವೆಲ್ಲವೂ ನಡೆಯುತ್ತಿರುವುದು ಶಿಸ್ತು-ಪ್ರಾಮಾಣಿಕತೆಯ ಪಾಠ ಹೇಳುತ್ತಾ ಬಂದ ಒಂದು ರಾಷ್ಟ್ರೀಯ ಪಕ್ಷದಲ್ಲಿ ಎನ್ನುವುದು ನಾಚಿಕೆಗೇಡಿನ ವಿಷಯ.ರಾಜ್ಯದ ಕೆಲವು ನಾಯಕರು ಈ ರೀತಿ ಎಲ್ಲೆ ಮೀರಿ ನಡೆದುಕೊಳ್ಳಲು ಅವರ ಒತ್ತಡತಂತ್ರಕ್ಕೆ ಮಣಿಯುತ್ತಾ ಬಂದ ಬಿಜೆಪಿಯ ಕೇಂದ್ರ ನಾಯಕರ ನಿಷ್ಕ್ರಿಯತೆಯೂ ಕಾರಣ. ಇಂತಹ ಸ್ವಾರ್ಥಸಾಧಕರ  ಸಾಮ್ರಾಜ್ಯದಲ್ಲಿ ಲಾಲ್‌ಕೃಷ್ಣ ಅಡ್ವಾಣಿಯವರಂತಹ ಹಿರಿಯ ನಾಯಕರು ದನಿ ಕಳೆದುಕೊಳ್ಳುತ್ತಿರುವುದು ಆ ಪಕ್ಷ ಸಾಗುತ್ತಿರುವ ಅವನತಿಯ ಹಾದಿಯನ್ನು ತೋರಿಸುತ್ತದೆ. ಈ ರೀತಿ ಜಾತಿ ನಾಯಕರೆನಿಸಿಕೊಂಡವರು ಮೂಲತ: ಸ್ವಾರ್ಥಿಗಳು. ಇಂತಹವರು ಅವರ ಜಾತಿಗೆ ಸೇರಿದ ಒಂದಷ್ಟು ಭ್ರಷ್ಟ ಅಧಿಕಾರಿಗಳು, ಗುತ್ತಿಗೆದಾರರು ಇಲ್ಲವೇ ಉದ್ಯಮಿಗಳಿಗೆ ನೆರವಾಗಬಹುದೇ ಹೊರತು ಅದೇ ಜಾತಿಯಲ್ಲಿರುವ ಕಟ್ಟಕಡೆಯ ಮನುಷ್ಯನಿಗೆ ಚಿಕ್ಕಾಸಿನ ಲಾಭವೂ ಇಲ್ಲ, ಆತನದ್ದು ಕೊನೆಯಿಲ್ಲದ ಪರಿಪಾಟಲು. ಇಂತಹ ಸಮಾಜ ವಿರೋಧಿ ನಾಯಕರ ಬಗ್ಗೆ ಎಚ್ಚೆತ್ತುಕೊಳ್ಳಲು ಇದು ಸರಿಯಾದ ಕಾಲ. ಲಿಂಗಾಯತರೋ, ಒಕ್ಕಲಿಗರೋ, ಕುರುಬರೋ, ಈಡಿಗರೋ, ಯಾರೇ ಆಗಲಿ ಜಾತಿಯನ್ನು ಬಳಸಿಕೊಂಡು ಸ್ವಾರ್ಥದ ರಾಜಕಾರಣ ಮಾಡಲು ಹೊರಟವರಿಗೆ ಜನರೇ ಸರಿಯಾದ ಬುದ್ಧಿ ಕಲಿಸಬೇಕು. ಅವರು ಮತ್ತೆ ತಲೆ ಎತ್ತಲು ಬಿಡಬಾರದು. ಇದು ಸಾಧ್ಯವಾಗಬೇಕಾದರೆ ಮತದಾರರು ಮತಗಳನ್ನು ಜಾತಿ ಮತ್ತು ಹಣಕ್ಕಾಗಿ ಮಾರಿಕೊಳ್ಳಲು ಹೋಗಬಾರದು. ಸಮಾನತೆಯ ಬುನಾದಿಯ ಮೇಲೆ ಜಾತ್ಯತೀತ ಸಮಾಜ ನಿರ್ಮಾಣಕ್ಕಾಗಿ ಆ ಪವಿತ್ರ ಮತಗಳು ಬಳಕೆಯಾಗಬೇಕು. ಉಳಿದಿರುವುದು ಇದೊಂದೇ ದಾರಿ, ಇದೇ ಸರಿಯಾದ ದಾರಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.