ಬುಧವಾರ, ಮೇ 18, 2022
23 °C

ಜಾತಿವಾದದಿಂದ ಕಯ್ಯಾರರಿಗೆ ಸಿಗದ ಸ್ಥಾನಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದಿಯಡ್ಕ: `ಕಯ್ಯಾರ ಕಿಞ್ಞಣ್ಣ ರೈ ಅವರು ವಿವಿಧ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದವರು. ಅವರ  ಸಾಧನೆಗಳಲ್ಲಿ ಕೂಡ ಪರಿಪೂರ್ಣ ಅರ್ಪಣಾ ಭಾವ ಇದೆ. ಶ್ರೀಸಾಮಾನ್ಯರೊಂದಿಗೆ ಬೆರೆತು ಸಂತಸ ಪಡುವ ದೊಡ್ಡತನ ಅವರಲ್ಲಿದೆ~ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.ಬದಿಯಡ್ಕದ ಕಯ್ಯಾರ ನಿವಾಸದಲ್ಲಿ ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕಯ್ಯಾರ ಕಿಞ್ಞಣ್ಣ ರೈ ಅಭಿನಂದನಾ ಸಮಿತಿ ಆಶ್ರಯದಲ್ಲಿ ಶುಕ್ರವಾರ ಸಂಜೆ ನಡೆದ ಕಯ್ಯಾರರ 98ನೇ ಹುಟ್ಟು ಹಬ್ಬದ ಸಂಭ್ರಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಿರಿಯ ಪತ್ರಕರ್ತ ವಿ.ಟಿ.ರಾಜಶೇಖರ್ ಮಾತನಾಡಿ, `ಕನ್ನಡ ಸಾಹಿತ್ಯದಲ್ಲಿ ಕವಿ ಕಯ್ಯಾರರಿಗೆ ಸೂಕ್ತ ಸ್ಥಾನಮಾನ ಇನ್ನೂ ದೊರಕಿಲ್ಲ. ಅದಕ್ಕೆ ಜಾತೀವಾದ ಕಾರಣ~ ಎಂದು ಅಭಿಪ್ರಾಯಪಟ್ಟರು. ಬದಿಯಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಮಾಹಿನ್ ಕೇಳೋತ್ ಮಾತನಾಡಿ, `ಕನ್ನಡ ಭಾಷಾ ರಕ್ಷಣೆಯ ದೀಕ್ಷೆಯನ್ನು ಗಡಿನಾಡಿನ ಕನ್ನಡಿಗರಲ್ಲಿ ರಕ್ತಗತಗೊಳಿಸಿದವರು ಕಯ್ಯಾರರು. ಸಪ್ತಭಾಷಾ ಸಂಗಮ ಭೂಮಿಯಾದ ಈ ಪ್ರದೇಶದ ಶೈಕ್ಷಣಿಕ ಪ್ರಗತಿಯಲ್ಲಿ ಕಯ್ಯಾರರ ಸಾಧನೆ ಅನನ್ಯ~ ಎಂದು ಹೇಳಿದರು.ಕ್ಯಾಂಪ್ಕೊ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಸಾಮಾಜಿಕ ಮುಖಂಡ ಮಧುಕರ ರೈ ಕೊರೆಕ್ಕಾನ, ವಾಮನ ನಂದಾವರ, ದುರ್ಗಾಪ್ರಸಾದ್ ರೈ ಇದ್ದರು. ಅಬೂಬಕ್ಕರ್ ಆರ್ಲಪದವು ನಿರ್ಣಯಗಳನ್ನು ಮಂಡಿಸಿದರು.

ಇದೇ ಸಂದರ್ಭದಲ್ಲಿ ರಾಧಾಕೃಷ್ಣ ಉಳಿಯತ್ತಡ್ಕ ಸಂಪಾದಿಸಿದ `ಕಯ್ಯಾರ ಗದ್ಯ ಸೌರಭ~ ಡಾ.ಸದಾನಂದ ಪೆರ್ಲ ಅವರ `ಕಾಸರಗೋಡಿನ ಕನ್ನಡ ಹೋರಾಟ~ ಹಾಗೂ ಡಾ.ನರೇಂದ್ರ ರೈ ಅವರ `ಐಕ್ಯಗಾನದ ಕಯ್ಯಾರ ಕಿಞ್ಞಣ್ಣ ರೈ~ ಕೃತಿಗಳನ್ನು ಕಯ್ಯಾರರಿಗೆ ಸಮರ್ಪಿಸಲಾಯಿತು.ಗಾಯಕರಾದ ರತ್ನಾಕರ ಓಡಂಗಲ್ಲು ಹಾಗೂ ಸಾವಿತ್ರಿ ಕೆ.ಭಟ್ ಏತಡ್ಕ ಅವರಿಂದ ಕಯ್ಯಾರರ ಗೀತೆಗಳ ಗಾಯನ ನಡೆಯಿತು.ಶಿವರಾಮ ಕಾಸರಗೋಡು ಸ್ವಾಗತಿಸಿದರು. ಭುವನಪ್ರಸಾದ್ ಹೆಗ್ಡೆ ಮಣಿಪಾಲ ವಂದಿಸಿ ದರು. ಪುತ್ತೂರು ಚಿದಾನಂದ ಕಾಮತ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೊ ಸಹಿತ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಕಯ್ಯಾರರಿಗೆ ಅಭಿನಂದನೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.