ಶುಕ್ರವಾರ, ಫೆಬ್ರವರಿ 26, 2021
28 °C
ಆಶಾಜ್ಯೋತಿ ಅಶಕ್ತ ಮಕ್ಕಳ ಮತ್ತು ಹೆತ್ತವರ ವೇದಿಕೆ: ವಿಶಿಷ್ಟರಿಗಾಗಿ ವಿಶಿಷ್ಟ ಮೇಳ

ಜಾತ್ರೆಯ ಅನುಭವ ನೀಡಿದ ಮೇಳ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತ್ರೆಯ ಅನುಭವ ನೀಡಿದ ಮೇಳ!

ಮಂಗಳೂರು: ನಗರದ ಡೊಂಗರ ಕೇರಿಯ ಕೆನರಾ ಪ್ರೌಢ ಶಾಲಾ ಆವರಣದಲ್ಲಿ ಆಶಾಜ್ಯೋತಿ ಅಶಕ್ತ ಮಕ್ಕಳ ಮತ್ತು ಹೆತ್ತವರ ವೇದಿಕೆಯ ವತಿಯಿಂದ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ–2016’ ಕಾರ್ಯಕ್ರಮವು ಭಾನುವಾರ ನಡೆಯಿತು.ಮೇಳದಲ್ಲಿ ಅಂಗವಿಕಲ ಮಕ್ಕಳಿಗೆ ವಿವಿಧ ಬಗೆಯ ತಿನಿಸು, ಪಾನೀಯ, ಆಟಗಳ ಮಳಿಗೆಗಳು ಆಕರ್ಷಿತ ಗೊಂಡವು. ವಿವಿಧ ಮಳಿಗೆಗಳಲ್ಲಿರುವ ತಿಂಡಿ ತಿನಸುಗಳನ್ನು ಪಡೆಯಲು ಮಕ್ಕಳಿಗೆ ಉಚಿತವಾಗಿ ಕೂಪನ್‌ಗಳನ್ನು ನೀಡಲಾಗಿತ್ತು. ಕೂಪನ್‌ನಲ್ಲಿ ನಮೂ ದಿಸಿದ ಸಂಖ್ಯೆಯ ಮಳಿಗೆಗೆ ತೆರಳಿ ಅಲ್ಲಿರುವ ತಿನಿಸುಗಳನ್ನು ಪಡೆಯಲು ಮಕ್ಕಳಿಗೆ ಅವಕಾಶ ನೀಡಲಾಗಿತ್ತು. ಒಟ್ಟಾರೆಯಾಗಿ ಅಂಗವಿಕಲ ಮಕ್ಕಳು ಜಾತ್ರೆಯ ಅನುಭವವನ್ನು ಪಡೆದರು.ಬಾಳೆ ಹಣ್ಣು, ಕಲ್ಲಂಗಡಿ, ಮಜ್ಜಿಗೆ, ಚುರುಮುರಿ, ಬಾಂಬೆ ಮಿಠಾಯಿ, ತಂಪು ಪಾನೀಯ, ಪೋಡಿ, ಐಸ್‌ಕ್ಯಾಂಡಿ, ಕಡಲೆ ಕಾಯಿ ಮುಂತಾದ ಆಹಾರ ಪದಾರ್ಥಗಳ ಮಳಿಗೆಗಳಲ್ಲಿ ಮಕ್ಕಳು ಮುಗಿ ಬಿದ್ದ ದೃಶ್ಯಗಳು ಕಂಡು ಬಂದವು. ಒಂಟೆ ಸವಾರಿ, ಕುದುರೆ ಸವಾರಿ, ಜಾರುಬಂಡಿ, ತಿರುಗುವ ತೊಟ್ಟಿಲು ಮತ್ತಿತರ ಆಟದ ತಾಣಗಳು ಮಕ್ಕಳ ಮನಸ್ಸಿಗೆ ಖುಷಿ ನೀಡಿದವು.ಅಂಗವಿಕಲರಿಗೆ ಗುರುತಿನ ಚೀಟಿ ಪಡೆಯಲು ಬೇಕಾದ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು. ಅಂಗವಿಕಲತೆಯ ಗುರು ತಿಸಲು ‘ನವಚೇತನ’ ಕೇಂದ್ರದಲ್ಲಿ ಕಣ್ಣಿನ ತಜ್ಞರು, ಮೂಳೆ ತಜ್ಞರು ಹಾಗೂ ಫಿಷಿಸಿ ಯನ್ ತಜ್ಞ ವೈದ್ಯರ ವ್ಯವಸ್ಥೆಯನ್ನು ಕಲ್ಪಿ ಸಲಾಗಿತ್ತು. ಅಲ್ಲದೇ, ಅಂಗವಿಕಲರ ಸಲಕರಣೆಗಳ ಮಳಿಗೆಯು ಮೇಳದಲ್ಲಿ ಇದ್ದವು.ಮೇಳವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್‌, ಅಂಗವಿಕಲ ಮಕ್ಕಳಿಗೆ ಕರುಣೆ, ಕನಿಕರ ಬೇಡ. ಅವರಿಗೆ ಸಿಗಬೇಕಾದ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಬೇಕು. ಅವರ ಜೀವನಕ್ಕೆ ಬೆಳಕು ತೋರಿಸುವ ಕೆಲಸವಾಗಬೇಕು ಎಂದರು.ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಮಾತನಾಡಿ, ಅಂಗವಿಕಲರ ಗುರುತಿನ ಚೀಟಿಯು ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ. ಎಂಡೋಸಲ್ಫಾನ್ ಪೀಡಿತರಿಗೆ ಸ್ಮಾರ್ಟ್‌ ಕಾರ್ಡ್ ಮಾಡುವ ಮೂಲಕ ಮಾಸಿಕ ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸುವ ವ್ಯವಸ್ಥೆ ಇದೆ. ರಾಜ್ಯದ 7 ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಎಂಡೊಸಲ್ಫಾನ್ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡುವ ಕುರಿತಾಗಿ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದರು.ಸನ್ಮಾನ: ಸೇಂಟ್ ಆಗ್ನೆಸ್ ವಿಶೇಷ ಮಕ್ಕಳ ಶಾಲೆಯ ಮೊಹಮ್ಮದ್ ಫರ್ದಿನ್ ಮತ್ತು ಎಸ್‌ಡಿಎಂ ಸಮಗ್ರ ಶಾಲೆಯ ಸಂಗೀತ ಶಿಕ್ಷಕಿ ಕಸ್ತೂರಿ ಅವರಿಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಾರ್ಪೊರೇಶನ್ ಬ್ಯಾಂಕ್‌ನ ಪ್ರಬಂಧಕ ಲಕ್ಷ್ಮೀನಾಥ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನ್ನಪೂರ್ಣ ಮತ್ತು ವೆಂಕಟೇಶ್ ಇದ್ದರು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘದ ಅಧ್ಯಕ್ಷ ಡಾ.ಮುರಳೀಧರ ನಾಯಕ್ ಸ್ವಾಗತಿಸಿ ದರು. ಪ್ರಕಾಶ್ ಪೈ ವಂದಿಸಿದರು, ಎಂ. ಶ್ರೀನಿಧಿ ಭಾರದ್ವಾಜ್ ನಿರೂಪಿಸಿದರು.ಆಕರ್ಷಕ ಮೆರವಣಿಗೆ: ಬೆಳಿಗ್ಗೆ 9ಗಂಟೆಗೆ ನಗರದ ಸೇಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಬಳಿಯಿಂದ ಡೊಂಗರಕೇರಿಯ ಕೆನರಾ ಪ್ರೌಢ ಶಾಲಾ ಆವರಣದವರೆಗೆ ಆಕರ್ಷಕ ಮೆರವಣಿಗೆ ನಡೆಯಿತು.ಮಧ್ಯಾಹ್ನದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆಟೋಟ ಸ್ಪರ್ಧೆಗಳು ನಡೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.