ಶುಕ್ರವಾರ, ಮೇ 14, 2021
29 °C

ಜಾದೂಗಾರರಿಗೆ ಕಾಲವಿಲ್ಲ

-ಅನಿತಾ ಈ. Updated:

ಅಕ್ಷರ ಗಾತ್ರ : | |

ಜಾದೂ ಒಂದು ದೊಡ್ಡ ಸಾಗರ. ಕಲಿಯಲು ಇಲ್ಲಿ ಏನೆಲ್ಲ ಇದೆ. ಎಷ್ಟು ಪ್ರದರ್ಶಿಸಿದರೂ ಮುಗಿಯದಷ್ಟು ಚಮತ್ಕಾರಗಳಿವೆ, ರೋಚಕ ಕವಲುಗಳಿವೆ, ಮೋಹಕ ಆಟಗಳಿವೆ. ಅಷ್ಟು ಸುಲಭವಾಗಿ ಅಲ್ಲಗಳೆಯಬಹುದಾದ ಸಂಗತಿ ಇದಲ್ಲ. ಇದೊಂದು ಐತಿಹಾಸಿಕ ಬೇರುಗಳನ್ನು ಹೊಂದಿರುವ ಕಲೆ. 64 ವಿದ್ಯೆಗಳಲ್ಲಿ ಜಾದೂ ಸಹ ಒಂದು ಎಂದು ಗುರುತಿಸಲಾಗಿತ್ತು. ರಾಜ-ಮಹಾರಾಜರ ಕಾಲದಿಂದಲೂ ತಮ್ಮದೇ ಹೆಗ್ಗುರುತು ಮೂಡಿಸುತ್ತಾ ಬಂದಿರುವ ಈ ಕಲೆ ಇಂದು ಸಂಕಷ್ಟದಲ್ಲಿದೆ.ಅದರಲ್ಲೂ ನಮ್ಮ ರಾಜ್ಯದಲ್ಲಿ ಅಳಿದಳಿದು ಬದುಕುತ್ತಿರುವ ಜಾದೂ ಕಲೆಯನ್ನು ಉಳಿಸುವ ಪ್ರಯತ್ನದಿಂದ ಮೊದಲ ಬಾರಿಗೆ ನಗರದಲ್ಲಿ `ಮಾಯಾ ಮಾಯಾ' ಎಂಬ ಅಂತರ ರಾಷ್ಟ್ರೀಯ ಜಾದೂ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಯಾವುದೇ ಪ್ರೋತ್ಸಾಹವಿಲ್ಲದಿದ್ದರೂ ಈ ಜಾದೂ ಇನ್ನೂ ಉಸಿರಾಡುತ್ತಿದೆ ಎನ್ನುವುದಕ್ಕೆ ಜಾದೂ ಪ್ರೇಮಿಗಳ ಪ್ರೋತ್ಸಾಹವೇ ಕಾರಣ. ಈಗ ನಡೆಯುತ್ತಿರುವ ಈ ಸಮ್ಮೇಳನವೂ ಅಷ್ಟೆ.ಎಲ್ಲಿಯವರೆಗೆ ದೃಶ್ಯ ಮಾಧ್ಯಮಗಳು, ಚಲನಚಿತ್ರಗಳು ಇರಲಿಲ್ಲವೋ ಅಲ್ಲಿಯವರೆಗೆ ಜಾದೂಗೆ ಹೆಚ್ಚಿನ ಮಹತ್ವ ಸಿಗುತ್ತಿತ್ತು. ಎಲ್ಲಿ ಪ್ರದರ್ಶನಗಳು ನಡೆದರೂ ಜನ ಬರುತ್ತಿದ್ದರು. ಆದರೆ ಈಗ ಇಂಟರ್‌ನೆಟ್, ಚಲನಚಿತ್ರಗಳಿಂದಾಗಿ ಜಾದೂಗೆ ಅಷ್ಟೊಂದು ಮಹತ್ವ ಸಿಗುತ್ತಿಲ್ಲ. ಇಷ್ಟಾದರೂ ಇಂದಿಗೂ ಹಲವರು ಜಾದೂವನ್ನು ಹವ್ಯಾಸವಾಗಿ ಕಲಿತು, ನಂತರ ಅದನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಪ್ರದರ್ಶನಕ್ಕೆ ಬೇಡಿಕೆ ಇದೆ. ಅದೇ ಈ ಜಾದೂವಿನ ಜಾದೂ.   `ಬಹಳ ಪುರಾತನವಾದ ಈ ಜಾದೂ ವಿದ್ಯೆಗೆ ಇನ್ನೂ ನಮ್ಮ ರಾಜ್ಯದಲ್ಲಿ ಕಲೆ ಎಂಬ ಮಾನ್ಯತೆ ನೀಡಿಲ್ಲ. ಇದರಿಂದಾಗಿ ಜಾದೂ ಕಲೆ ಪ್ರಸಿದ್ಧಿಯನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಜಾದೂಗಾರರು ತುಂಬಾ ಕಷ್ಟ ಎದುರಿಸಬೇಕಾಗುತ್ತಿದೆ. ಇದರ ಜೊತೆಗೆ ದೃಶ್ಯ ಮಾಧ್ಯಮಗಳಲ್ಲಿ ಜಾದೂ ಚಮತ್ಕಾರ ಹಾಗೂ ಜಾದೂಗಾರರ ಕೈಚಳಕಗಳ ರಹಸ್ಯವನ್ನು ತೋರಿಸಲಾಗುತ್ತಿದೆ. ಇದರಿಂದ ಕೆಲವರಿಗೆ ಜಾದೂವಿನಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಆದರೆ ಜಾದೂಗಾರರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ' ಎನ್ನುತ್ತಾರೆ ಇಂಟರ್‌ನ್ಯಾಷನಲ್ ಮ್ಯಾಜಿಕ್ ಅಕಾಡೆಮಿಯ ಅಧ್ಯಕ್ಷ ಸೂರ್ಯ.ಹಿಂದೆ ಕೇವಲ ರಸ್ತೆ ಬದಿಗಳಲ್ಲಿ ಚಮತ್ಕಾರಗಳನ್ನು ಮಾಡಿ ಜಾದೂಗಾರರು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದರು. ನಮ್ಮ ದೇಶದಲ್ಲಿ ಅಂತಹ ಸ್ಥಿತಿಯಲ್ಲಿದ್ದ ಜಾದೂವಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು ಜಾದೂಗರ್ ಪಿ.ಸಿ ಸರ್ಕಾರ್. ರಸ್ತೆ ಬದಿಯಿಂದ ವೇದಿಕೆಗೆ ಬಂದ ಜಾದೂ ಈಗ ಮದುವೆ, ಹುಟ್ಟುಹಬ್ಬದ ಸಮಾರಂಭ ಹಾಗೂ ಗಣೇಶನ ಉತ್ಸವಗಳ ಸಮಯದಲ್ಲಿ ಪ್ರದರ್ಶನಗೊಳ್ಳುವ ಮಟ್ಟಕ್ಕೆ ಬೆಳೆದಿದೆ. ಜಾಗತೀಕರಣದ ಫಲವಾಗಿ ಒಂದೆಡೆ ಹಿನ್ನಡೆ ಅನುಭವಿಸಿದರೂ, ಇನ್ನೊಂದೆಡೆ ಹೊಸ ಹೊಸ ಸವಾಲುಗಳೊಂದಿಗೆ ಅವಕಾಶಗಳ ಬಾಗಿಲೂ ತೆರೆದುಕೊಳ್ಳುತ್ತಿವೆ ಎನ್ನುವ ಸೂರ್ಯ, ತಾವು ಕಂಡ ಜಾದೂ ಪ್ರಪಂಚದ ಅನುಭವವನ್ನು ಹಂಚಿಕೊಳ್ಳುವುದು ಹೀಗೆ:   `ಮಾಧ್ಯಮದವರು ಭೇದಿಸುವ ರಹಸ್ಯಗಳು ಸಾಗರದಲ್ಲಿನ ಒಂದು ಹನಿ ನೀರಿನಂತೆ. ಮಾಧ್ಯಮಗಳಲ್ಲಿ ಒಂದು ಚಮತ್ಕಾರದ ಹಿಂದಿನ ರಹಸ್ಯ ತೋರಿಸಿದರೆ ಅಂತಹ 10 ಹೊಸ ಚಮತ್ಕಾರಗಳನ್ನು ಜಾದೂಗಾರರು ಹುಟ್ಟು ಹಾಕುತ್ತಾರೆ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲೂ ಇನ್ನೂ ಜಾದೂ ಕಲೆ ಉಳಿದುಕೊಂಡು ಬಂದಿದೆ. ಹಾಗೆಯೇ ಹೊಸಬರು ಜಾದೂವಿನತ್ತ ಆಕರ್ಷಿತರಾಗಿ ಬರುತ್ತಿದ್ದಾರೆ.ಜಾದೂಗಾರನಾಗಬೇಕೆಂಬ ಆಸಕ್ತಿ ಹೊರತುಪಡಿಸಿ ಬೇರೆ ಯಾವ ಅರ್ಹತೆಗಳೂ ಬೇಕಾಗುವುದಿಲ್ಲ. ನಾನು 1988ರಲ್ಲಿ 8ನೇ ತರಗತಿ ವ್ಯಾಸಂಗ ಮಾಡುವಾಗ ತಂದೆ ಜೊತೆ ಟೌನ್‌ಹಾಲ್‌ನಲ್ಲಿ ಪಿ.ಸಿ. ಸರ್ಕಾರ್ ಜೂನಿಯರ್ ಜಾದೂಗರ್ ಅವರ ಜಾದೂ ಪ್ರದರ್ಶನ ನೋಡಲು ಹೋಗಿದ್ದೆ.  ಅವರ ಪ್ರದರ್ಶನ ನೋಡಿದ ಕ್ಷಣದಲ್ಲೇ ನಾನೂ ಜಾದೂಗಾರನಾಗಬೇಕು ಎಂದು ನಿರ್ಧಾರ ಮಾಡಿದೆ.ಅದಕ್ಕೆ ನನ್ನ ತಂದೆ ಸಹ ಪೋತ್ಸಾಹಿಸಿದರು. ನನ್ನ ತಂದೆಯ ಸ್ನೇಹಿತರಾದ ವೀರಾಸ್ವಾಮಿ ಅವರು ನನ್ನ ಮೊದಲ ಗುರು. ಜಾದೂ ಕಲಿಯಲು ನನಗೆ ಇದ್ದ ಆಸಕ್ತಿ ಕಂಡು ತಮಗೆ ತಿಳಿದಿದ್ದ ವಿದ್ಯೆಯನ್ನು ನನಗೆ ಧಾರೆಯೆರೆದರು. ನಂತರ `ಡವ್‌ಮ್ಯಾನ್ ಆಫ್ ಮ್ಯಾಜಿಕ್' ನ ಜಾದೂಗರ್ ರವಿಚಂದ್ರನ್ ಅವರ ಬಳಿ ಆ ಕಾಲಕ್ಕೆ 5 ಸಾವಿರ ಶುಲ್ಕ ನೀಡಿ ಒಂದು ತಿಂಗಳ ಕಾಲ ಜಾದೂ ಕಲಿತೆ. ಇದಾದ ದುಬಾರಿ ಹಣ ಕೊಟ್ಟು ಬೇರೆ ಕಡೆ ಜಾದೂ ಕಲಿಯುವ ಬದಲು ದೇಶ ವಿದೇಶಗಳಲ್ಲಿ ಬಿಡುಗಡೆಯಾಗುವ ಜಾದೂ ಸಿಡಿಗಳನ್ನು ತಂದು ಅಭ್ಯಾಸ ಮಾಡಲು ಪ್ರಾರಂಭಿಸಿದೆ.ಹೀಗೆ ವರ್ಷಗಳು ಕಳೆದಂತೆ ಇಂಟರ್‌ನೆಟ್ ಬಳಕೆ ಹೆಚ್ಚಾಯಿತು. ಆಗ ಆನ್‌ಲೈನ್‌ನಲ್ಲಿ ಜಾದೂ (ಟ್ರಿಕ್ಸ್) ಚಮತ್ಕಾರ ಹಾಗೂ ಕೈಚಳಕಗಳನ್ನು ಕಲಿಯಲು ಪ್ರಾರಂಭಿಸಿದೆ. ಹೀಗಾಗಿ ಮತ್ತೆ ಬೇರೆ ಯಾರ ಬಳಿಯೂ ಹೋಗಿ ಕಲಿಯುವ ಪ್ರಮೇಯ ಬರಲಿಲ್ಲ. ನಂತರ ತನ್ನದೇ ಆದ ಒಂದು  ಇಂಟರ್‌ನ್ಯಾಷನಲ್ ಮ್ಯಾಜಿಕ್ ಅಕಾಡೆಮಿಯನ್ನು ಪ್ರಾರಂಭಿಸಿದೆ. ಇಲ್ಲಿ ಜಾದೂ ಕಲಿಯಲು ಆಸಕ್ತಿ ಉಳ್ಳವರು ವಯಸ್ಸಿನ ಬೇಧವಿಲ್ಲದೆ ಬರುತ್ತಾರೆ.ಹಿಂದೆ ವಿದೇಶಗಳಲ್ಲಿ ಜಾದೂ ಚಮತ್ಕಾರದ ಸಿಡಿ ಬಿಡುಗಡೆಯಾದರೆ ಅದು ನಮ್ಮ ದೇಶದಲ್ಲಿ 6 ತಿಂಗಳ ನಂತರ ದೊರೆಯುತ್ತಿತ್ತು. ಆದರೆ ಪರಿಸ್ಥಿತಿ ಹಾಗಿಲ್ಲ, ಸಿಡಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅದನ್ನು ನಾವು ಇಂಟರ್‌ನೆಟ್‌ನಲ್ಲಿ ತೆಗೆದುಕೊಳ್ಳಬಹುದು.ಹದಿನೈದು ವರ್ಷದ ಹಿಂದೆ ಜಾದೂ ಕಲಿಯಲು 20 ಕಿ.ಮೀ ದೂರ ಹೋದರೂ ಯಾರೂ ಜಾದೂಗಾರರು ಸಿಗುತ್ತಿರಲಿಲ್ಲ. ಆದರೆ ಈಗ ಇಂಟರ್‌ನೆಟ್‌ನಿಂದಾಗಿ ಯಾವುದೇ ಕಷ್ಟವಿಲ್ಲದೆ ಟ್ರಿಕ್ಸ್ (ಚಮತ್ಕಾರಗಳನ್ನು)ನೋಡಿ, ಓದಿ ಕಲಿಯಬಹುದು. ಹೀಗಾಗಿ ಇಂತಹವರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಆದರೆ ಈ ರೀತಿ ಕಲಿತರೆ ಅವರು ಪ್ರತಿಭಾವಂತ ಜಾದೂಗಾರನಾಗದಿದ್ದರೂ, ಸಾಮಾನ್ಯ ಜಾದೂಗಾರನಾಗುತ್ತಾನೆ. ಹೀಗಾಗೆ ಪ್ರತಿಭಾವಂತ ಹಾಗೂ ತನ್ನ ಶೈಲಿಯನ್ನು ಗುರುತಿಸಿಕೊಳ್ಳಲು ಜಾದೂ ಕಲಿಯುವ ಪ್ರಾರಂಭದಲ್ಲಿ ಒಬ್ಬ ಗುರುವನ್ನು ಆಶ್ರಯಿಸುವುದು ಅತ್ಯಗತ್ಯ.'ರಾಜ್ಯದಲ್ಲಿ ಕೇವಲ ಮೂರು ನೋಂದಾಯಿತ ಜಾದೂ ತರಬೇತಿ ಸಂಸ್ಥೆಗಳಿದ್ದು, ಅವುಗಳಲ್ಲಿ ಜಾದೂ ತರಬೇತಿ ನೀಡಲಾಗುತ್ತಿದೆ. ಆದರೆ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಜಾದೂವನ್ನು ಒಂದು ಕಲೆ ಎಂದು ಗುರುತಿಸಿ, ಪ್ರೋತ್ಸಾಹಿಸಲಾಗುತ್ತಿದೆ. ಹೀಗಾಗಿ ಇನ್ನಾದರೂ ಪುರಾತನ ಕಲೆಯಾದ ಜಾದೂವನ್ನು ರಾಜ್ಯ ಸರ್ಕಾರ ಕಲೆ ಎಂದು ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂಬುದು ಎಲ್ಲಾ ಜಾದೂಗಾರರ ಆಶಯ.ಟೌನ್‌ಹಾಲ್‌ನಲ್ಲಿ ಪ್ರದರ್ಶನವಿಲ್ಲ

ಟೌನ್‌ಹಾಲ್‌ನಲ್ಲಿ ಇನ್ನು ಮುಂದೆ ಜಾದೂ ಪ್ರದರ್ಶನವಿಲ್ಲ. ಇಲ್ಲಿಯವರೆಗೆ ಟೌನ್‌ಹಾಲ್‌ನಲ್ಲಿ ಮ್ಯಾಜಿಕ್ ಷೋ ನಡೆಸಲು ಅವಕಾಶ ನೀಡಲಾಗುತ್ತಿತ್ತು. ಆದರೆ ಈಗ ವಿನಾ ಕಾರಣ ಜೂದು ಪ್ರದರ್ಶನಕ್ಕೆ ಅನುಮತಿ ನೀಡುವುದಿಲ್ಲ ಎಂದು ಟೌನ್‌ಹಾಲ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಲಿಖಿತ ರೂಪದಲ್ಲಿ ಪತ್ರ ನೀಡುವಂತೆ ಅಧಿಕಾರಿಗಳನ್ನು ಕೇಳಿದರೆ ಆಗುವುದಿಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಾರೆ.

-ಜಾದೂ ಶ್ರೀಕಂಠಯ್ಯ, ರಂಗಭೂಮಿ ಕಲಾವಿದ

​ಅಧ್ಯಯನದ ವಿಷಯವಾಗಿ ಜಾದೂ

ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಜಾದೂಗೆ ಅಷ್ಟೊಂದು ಪ್ರೋತ್ಸಾಹವಾಗಲೀ ಜನ ಬೆಂಬಲವಾಗಲೀ ಇಲ್ಲ. ಆದರೂ ಇನ್ನೂ ಈ ಕಲೆ ಕೇವಲ ಕೆಲವರ ಹವ್ಯಾಸ ಹಾಗೂ ಪರಿಶ್ರಮದಿಂದ ಉಳಿದುಕೊಂಡಿದೆ. ಹೀಗೆ ಹಲವರ ಪರಿಶ್ರಮದಿಂದ ಅಳಿದಳಿದು ಉಳಿದಿರುವ ಈ ಜಾದೂವನ್ನು ಪದವಿ ಹಾಗೂ ಸ್ನಾತಕೋತ್ತರ ಮಟ್ಟದಲ್ಲಿ ಅಧ್ಯಯನ ಮಾಡಲು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೆಲವು ವಿಶ್ವವಿದ್ಯಾಲಯಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಹೀಗಾಗಿ ಶೀಘ್ರದಲ್ಲೇ ಕೆಲವು ವಿದ್ಯಾಲಯಗಳಲ್ಲಿ ಮ್ಯಾಜಿಕ್ ಒಂದು ವಿಷಯವಾಗಿ ಆಸಕ್ತ ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದು.

-ಸೂರ್ಯ, ಇಂಟರ್‌ನ್ಯಾಷನಲ್ ಮ್ಯಾಜಿಕ್ ಅಕಾಡೆಮಿಯ ಅಧ್ಯಕ್ಷ

ಅದು ವಿಭಿನ್ನ ಚಟುವಟಿಕೆ

ಜಾದೂಗೆ ಯಾವುದೇ ಸಾಂಸ್ಕೃತಿಕ ಹಿನ್ನೆಲೆ ಇರುವಂತೆ ಇಲ್ಲಿಯವರೆಗೂ ಕಂಡು ಬಂದಿಲ್ಲ. ದಾಖಲೆಯೂ ದೊರೆತಿಲ್ಲ. ಜಾದೂ ಒಂದು ವಿಭಿನ್ನವಾದ ಚಟುವಟಿಕೆ. ಕೆಲವೊಮ್ಮೆ ಅದನ್ನು ಕ್ರೀಡೆಗಳ ಗುಂಪಿಗೆ ಸೇರಿಸಲಾಗುತ್ತದೆ. ಆದರೆ ಇತ್ತೀಚೆಗೆ ದೃಶ್ಯ ಮಾಧ್ಯಮಗಳು ಜಾದೂವಿನ ರಹಸ್ಯಗಳನ್ನು ಭೇದಿಸುತ್ತಿರುವ ಕಾರಣ ನಮ್ಮ ರಾಜ್ಯದಲ್ಲಿ ಜನರೂ ಜಾದೂ ಪ್ರದರ್ಶನಗಳತ್ತ ಗಮನ ಹರಿಸುವುದು ಕಡಿಮೆ ಮಾಡಿದ್ದಾರೆ. ಆದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೆಲವೊಮ್ಮೆ ಸ್ವಲ್ಪ ಮಟ್ಟಿಗೆ ಪ್ರೋತ್ಸಾಹ ನೀಡಿದ್ದೇವೆ. ಜಾದೂ ವಿದ್ಯೆಗೆ ಸಾಂಸ್ಕೃತಿಕ ಹಿನ್ನೆಲೆ ಇದೆ ಎಂದು ಯಾರಾದರೂ ದಾಖಲೆಗಳನ್ನು ಒದಗಿಸಿದರೆ, ಅದಕ್ಕೆ ತಜ್ಞರ ಸಮಿತಿಯನ್ನು ನೇಮಿಸಿ ಅಲ್ಲಿ ಈ ಬಗ್ಗೆ ಚರ್ಚೆ ನಡೆಸಿ ನಂತರ ಜಾದೂವನ್ನು ಕಲೆ ಎಂದು ಗುರುತಿಸಬೇಕೋ ಅಥವಾ ಬೇಡವೂ ಎಂಬ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು.

-ಬಸವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ

ಶಿಕ್ಷಕರ ಸದನದಲ್ಲಿ 300 ಜಾದೂಗಾರರು

ಜೂನ್ 28ರಿಂದ 30ರವರೆಗೆ ನಗರದ ಶಿಕ್ಷಕರ ಸದನದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ವಿದೇಶಿ ಜಾಗೂಗಾರರು ತಮ್ಮ ಕೈಚಳಕ ಹಾಗೂ ಚಮತ್ಕಾರಗಳನ್ನು ಯುವ ಜಾದೂಗಾರರಿಗೆ ಕಲಿಸಿಕೊಡಲಿದ್ದಾರೆ. ಇಲ್ಲಿ ಬೆಳಗಿನಿಂದ ಸಂಜೆಯವರೆಗೆ ನಡೆಯುವ ಸಮ್ಮೇಳನದಲ್ಲಿ ದೇಶ ವಿದೇಶಗಳ ಜಾದೂಗಾರರು ತಾವು ಕಲಿತ ಚಮತ್ಕಾರಗಳನ್ನು ಹೇಳಿಕೊಡುತ್ತಾರೆ. ನಗರದ ಇಂಟರ್‌ನ್ಯಾಷನಲ್ ಮ್ಯಾಜಿಕ್ ಅಕಾಡೆಮಿ ಮೊದಲ ಬಾರಿಗೆ 20 ವಿದೇಶಿ ಜಾದೂಗಾರರನ್ನು ಒಂದೇ ವೇದಿಕೆಗೆ ಕರೆತರುತ್ತಿದೆ. ಇವರೊಂದಿಗೆ ಭಾರತದ ಮೂಲೆ ಮೂಲಗೆಳಿಂದ 300 ಮಂದಿ ಶ್ರೇಷ್ಠ ಜಾದೂಗಾರರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.  ನಂತರ ಸಂಜೆ 6ಕ್ಕೆ ಸಾರ್ವಜನಿಕರಿಗಾಗಿ ವಿಶೇಷ ಚಮತ್ಕಾರಗಳ ಜಾದೂ ಪ್ರದರ್ಶನ ನಡೆಯಲಿದೆ. ಅದರಲ್ಲೂ ಬ್ಯಾಂಕಾಕ್ ನಿಂದ ಬಂದಿರುವ `ಪಿಚ್ ಮ್ಯಾಜಿಕ್' ಎಂಬ ಜಾದೂಗಾರ್ತಿ ಮೊದಲು ಹುಡುಗಿಯಾಗಿ ಬಂದು ನಂತರ ಆಕೆಯೆ ನವಿಲಾಗಿ ಹೋಗುತ್ತಾಳೆ. ಈ ರೀತಿಯ ಹಲವಾರು ವಿಶೇಷ ಚಮತ್ಕಾರಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದು. ಈ ಪ್ರದರ್ಶನಕ್ಕೆ 100 ಮತ್ತು 200 ರೂಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.