ಬುಧವಾರ, ಮಾರ್ಚ್ 3, 2021
19 °C
ಬಾಲ್ಯ ನೆನಪಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ

ಜಾನಪದ ವಿ.ವಿಯಲ್ಲಿ ‘ಜನತಾ ಪರಿವಾರ’ದ ಜುಗಲ್‌ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾನಪದ ವಿ.ವಿಯಲ್ಲಿ ‘ಜನತಾ ಪರಿವಾರ’ದ ಜುಗಲ್‌ಬಂದಿ

ಗೊಟಗೋಡಿ (ಹಾವೇರಿ ಜಿಲ್ಲೆ): ಇಲ್ಲಿನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ವಿವಿಧ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಾಲ್ಯದ ದಿನಗಳಿಗೆ ಜಾರಿದರು.‘ನಾನು ಜನಪದ ಕಲೆ ಮೂಲಕವೇ ಜೀವನ ಆರಂಭಿಸಿದವ. ಆರಂಭದಲ್ಲಿ ವೀರಕುಣಿತ, ಪೂಜಾ ಕುಣಿತ, ನಂದಿ ಕುಣಿತ ಕಲಿಯುತ್ತಿದ್ದೆ. ಕುಣಿತದ ಜೊತೆ ನಂಜೇಗೌಡರು ಅಕ್ಷರಾಭ್ಯಾಸ ನೀಡಿದರು. ಬಳಿಕ ಎಮ್ಮೆ ಮೇಯಿಸಲು ಹೋದೆ. ಆಗ ಊರಿಗೆ ಬಂದಿದ್ದ ರಾಜಪ್ಪ ಎಂಬ ಮೇಷ್ಟ್ರು, ‘ನಿನ್ನ ಮಗನ ಕನ್ನಡ ಚೆನ್ನಾಗಿದೆ’ ಎಂದು ತಂದೆಗೆ ಹೇಳಿ ನೇರವಾಗಿ ಐದನೇ ತರಗತಿಗೆ ಸೇರಿಸಿದರು’ ಎನ್ನುತ್ತ ಅವರು ಬಾಲ್ಯವನ್ನು ನೆನಪಿಸಿಕೊಂಡರು.ಆಗ ವೇದಿಕೆಯಲ್ಲಿದ್ದ ಶಾಸಕ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ‘ರಾಜಕಾರಣದಲ್ಲೂ ಅದೇ ರೀತಿ ಸಿಎಂ ಆಗಿಬಿಟ್ಟಿರಿ’ ಎಂದು ಛೇಡಿಸಿದರು. ತಕ್ಷಣ ಪ್ರತಿಕ್ರಿಯೆ ನೀಡಿದ ಸಿಎಂ, ‘ನೀನೂ ನಮ್ಮ ಗರಡಿಯಲ್ಲೇ ತಯಾರಾಗಿರುವುದು. ನಿನಗೂ ಇದು ಅನ್ವಯ ಆಗುತ್ತದೆ. ನಾನು ಕಾಂಗ್ರೆಸ್‌ಗೆ ಬಂದು ಸಿಎಂ ಆದೆ. ನೀನು ಬಿಜೆಪಿಗೆ ಹೋಗಿ ಜಲಸಂಪನ್ಮೂಲ ಸಚಿವನಾದೆ. ನೀನು ಮಾತನಾಡದೇ ಇರುವುದು ಒಳ್ಳೆಯದು’ ಎಂದರು.‘ನಿಮ್ಮ (ಜನರ) ಆಶೀರ್ವಾದ ಇರುವ ತನಕ ಮುಖ್ಯಮಂತ್ರಿ ಆಗಿರುತ್ತೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದ ಅವರು, ರಾಜಪ್ಪ ಎಂಬ ಸರ್ಕಾರಿ ಶಾಲೆಯ ಶಿಕ್ಷಕ ತಮ್ಮ ಹಳ್ಳಿಗೆ ಬರದೇ ಇದ್ದರೆ, ತಮಗೆ ಶಾಲೆಯೂ ಇರುತ್ತಿರಲಿಲ್ಲ; ತಾವಿಂದು ಮುಖ್ಯಮಂತ್ರಿಯೂ ಆಗಿರುತ್ತಿರಲಿಲ್ಲ ಎಂದರು.ಕುಸ್ತಿಗೆ ಕರೆದ ಹೊರಟ್ಟಿ: ‘ಶಾಸಕರ ದಿನಾಚರಣೆಯಲ್ಲಿ ಹೊರಟ್ಟಿ ನನ್ನನ್ನು ಕುಸ್ತಿಗೆ ಕರೆದರು. ನನಗೆ ಏನೂ ಬರುವುದಿಲ್ಲ ಎಂದು ಭಾವಿಸಿದ್ದರು. ನಾನಾಗಿ ಹೋಗಿರಲಿಲ್ಲ. ಇವನೇ ಕರೆದಿದ್ದು’ ಎಂದು ವೇದಿಕೆಯಲ್ಲಿದ್ದ ಬಸವರಾಜ ಹೊರಟ್ಟಿಯತ್ತ ಕೈ ತೋರಿಸಿದರು. ಆಗ ಹಿಂಭಾಗದಿಂದ ಯಾರೋ ಅವರು ‘ಪಿ.ಟಿ ಟೀಚರ್‌ ಇದ್ದರು. ಹಾಗಾಗಿ ಕರೆದಿದ್ದಾರೆ’ ಎಂದರು.‘ನಾನು, ಹೈಸ್ಕೂಲ್‌ನಲ್ಲಿ ಇದ್ದಾಗ ಮೈಸೂರಿನಲ್ಲಿ ಗರಡಿಗೆ ಹೋಗುತ್ತಿದ್ದೆ. ಹೀಗಾಗಿ ಸ್ವಲ್ಪ ಕುಸ್ತಿ ಗೊತ್ತಿತ್ತು. ಸೋಲಿಸಿಬಿಟ್ಟೆ. ಅವರ ಅತಿ ಆತ್ಮವಿಶ್ವಾಸವೇ ಅವರಿಗೆ ಮುಳುವಾಯಿತು’ ಎಂದರು. ‘ನನಗೆ, ತಮಟೆ ಹಾಗೂ ಡೊಳ್ಳು ಶಬ್ದ ಕೇಳಿದರೆ ಈಗಲೂ ಮನಸ್ಸಿನೊಳಗೆ ಕುಣಿಯುವ ಎಂದು ಅನಿಸುತ್ತದೆ. ಜಾನಪದದ ಸೌಂದರ್ಯ ಯಾವುದೇ ಶಿಷ್ಟ ಕಲೆಯಲ್ಲಿ ಇಲ್ಲ’ ಎಂದರು.ಇದಕ್ಕೂ ಮೊದಲು ಉನ್ನತ ಶಿಕ್ಷಣ ಸಚಿವ ಆರ್‌. ವಿ ದೇಶಪಾಂಡೆ ಮಾತಿನ ಮಧ್ಯೆ, ‘ಮಾನ್ಯ ಮುಖ್ಯಮಂತ್ರಿಗಳೇ’ ಎಂದರು. ಈ ವಿಚಾರವು ಅವರ ಗಮನಕ್ಕೆ ಬಾರದಿದ್ದಾಗ, ‘ಸಿದ್ದರಾಮಯ್ಯಾ..’ ಎಂದು ಕೂಗಿದರು.‘ಕಬ್ಬಿನ ಬಾಕಿ ಪಾವತಿಗೆ ಸರ್ಕಾರ ಬದ್ಧ’

ಹುಬ್ಬಳ್ಳಿ:
‘ಕಾರ್ಖಾನೆಗಳಿಂದ ಮುಟ್ಟುಗೋಲು ಹಾಕಿಕೊಂಡ ಸಕ್ಕರೆ ಮಾರಾಟ ಮಾಡಿಯಾದರೂ ಕಬ್ಬು ಪೂರೈಕೆ ಮಾಡಿರುವ ರೈತರ ಬಾಕಿ ಪಾವತಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಲ್ಲಿ ಹೇಳಿದರು.

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಬ್ಬಿನ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಿಂದ ಸಕ್ಕರೆ ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಕಾರ್ಖಾನೆಗಳ ಆಡಳಿತ ಮಂಡಳಿಗಳಿಗೆ ನೊಟೀಸ್ ನೀಡಲಾಗಿದೆ. ಕಬ್ಬು ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ’ ಎಂದರು.‘ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿನ ಕ್ರಿಕೆಟ್‌ ಬೆಟ್ಟಿಂಗ್ ದಂಧೆಯ ತನಿಖೆಯನ್ನು ಈಗಾಗಲೇ ಸಿಐಡಿಗೆ ವಹಿಸಲಾಗಿದೆ. ಪೊಲೀಸರು ಇರಲಿ, ಮಾಧ್ಯಮದವರಾಗಿರಲಿ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.