ಶುಕ್ರವಾರ, ಏಪ್ರಿಲ್ 16, 2021
31 °C

ಜಾನಪದ ವಿವಿಯಿಂದ ಸಂಸ್ಕೃತಿ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ಜಾನಪದ ವಿವಿ ಸ್ಥಾಪನೆಯಿಂದ ಕರ್ನಾಟಕದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಗುರುತರ ಜವಾಬ್ದಾರಿ ಈ ಭಾಗದ ಪ್ರತಿಯೊಬ್ಬರ ಮೇಲಿದೆ’ ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯ ಶಿಗ್ಗಾಂವದಲ್ಲಿ ಭಾನುವಾರ ಕರ್ನಾಟಕ ಜಾನಪದ ಅಕಾಡೆಮಿ, ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ಹಾಗೂ ಜಾನಪದ ಸಂಭ್ರಮ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.‘ಶಿಗ್ಗಾಂವನಲ್ಲಿ ಜಾನಪದ ವಿವಿ ಸ್ಥಾಪನೆಯಾಗುವ ಮೂಲಕ ಅದು ಜಾಗತಿಕ ಭೂಪಟದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳ ಲಿದೆಯಲ್ಲದೇ ಮುಂಬರುವ ದಿನಗಳಲ್ಲಿ ಶಿಗ್ಗಾಂವ ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಹೊಂದಲಿದೆ’ ಎಂದರು.‘ನಮ್ಮ ಬದುಕಿನ ಮೂಲ ಶಕ್ತಿ ಇರುವುದು ಸಂಸ್ಕೃತಿಯಲ್ಲಿ. ಜನರ ಸಂಸ್ಕೃತಿಯೇ ನೈಜ ಸಂಸ್ಕೃತಿಯಾಗಿದೆ. ಅದನ್ನು ಉಳಿಸುವ ಕೆಲಸ ಈ ಜಾನಪದ ವಿವಿಯಿಂದ ಆಗಲಿದೆ. ಅದಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದು ಹೇಳಿದ ಅವರು, ಜಾನಪದ ವಿವಿ ಸ್ಥಾಪನೆಗೆ ಅವಶ್ಯವಿರುವ ಕಾನೂನು, ಆಡಳಿತಾತ್ಮಕ ಅಷ್ಟೇ ಅಲ್ಲದೇ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ’ ಎಂದು ಅವರು ತಿಳಿಸಿದರು.‘ಈ ನೆಲದಲ್ಲಿ ಆಗಿ ಹೋದ ಮೌಖಿಕ ಪರಂಪರೆಯ ಸಂತ ಶಿಶುವಿನಾಳ ಷರೀಫರು, ಕನಕದಾಸರು, ಸರ್ವಜ್ಞರಂತಹ ದಾರ್ಶನಿಕರ ಹಾಗೂ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ ಗೋಕಾಕರ ಶ್ರಮದ ಪರಿಣಾಮ ಜಾನಪದ ವಿವಿ ಜಿಲ್ಲೆಗೆ ಬಂದಿದೆ. ಅದನ್ನು ವ್ಯವಸ್ಥಿತವಾಗಿ ಬೆಳೆಸಿಕೊಂಡು ಅವರ ಹೆಸರನ್ನು ಅಜರಾಮಗೊಳಿಸಬೇಕಿದೆ’ ಎಂದು ಹೇಳಿದರು.‘ಶಿಗ್ಗಾಂವ ಪಟ್ಟಣದಲ್ಲಿ ಪುರಸಭೆ ವತಿಯಿಂದ ಸಿ.ಎಂ. ವಿಶೇಷ ಅನುದಾನದಿಂದ ಸಾಂಸ್ಕೃತಿಕ ಸಭಾಭವನ ನಿರ್ಮಿಸಲಾಗುತ್ತದೆ. ಅದಕ್ಕೆ ಮುಂದಿನ ವಾರವೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದ ಅವರು, ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಕೂಲ ವಾಗುವ ಶಾಶ್ವತ ವೇದಿಕೆಯೊಂದನ್ನು ನಿರ್ಮಿಸಲಾಗುತ್ತದೆ’ ಎಂದು ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಜಾನಪದ ಕಲೆಯನ್ನು ಉಳಿಸಿಕೊಂಡ ಜಿಲ್ಲೆಯಲ್ಲಿ ಜಾನಪದ ವಿವಿ ಸ್ಥಾಪನೆಯಾಗುತ್ತಿರು ವುದು ಹೆಮ್ಮೆಯ ಸಂಗತಿ. ಅದರ ಸ್ಥಾಪನೆ ಕಾರ್ಯಕ್ಕೆ ಚಾಲನೆ ನೀಡಲು ಅಗತ್ಯವಿರುವ ಎಲ್ಲ ಕೆಲಸಗಳನ್ನು ಮಾಡುವುದಾಗಿ ಅವರು ಭರವಸೆ ನೀಡಿದರು.ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಜಾನಪದ ವಿವಿಗೆ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡಲು ರಾಜ್ಯದ ಸಂಸದರ ಜತೆಗೂಡಿ ಕೆಲಸ ಮಾಡುವ ಭರವಸೆ ನೀಡಿದರು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಜಿ.ಪಂ. ಅಧ್ಯಕ್ಷ ಮಂಜುನಾಥ ಓಲೇಕಾರ್. ಟಿ.ಬಿ. ಸೋಲಬಕ್ಕನವರ, ವೀರನಗೌಡ ಪಾಟೀಲ, ಇಂದ್ರಮ್ಮ ಹಾವೇರಿ, ಜಿಪಂ ಸದಸ್ಯೆ ಶೋಭಾ ನಿಸ್ಸೀಮಗೌಡ್ರ, ಜಾನಪದ ವಿ.ವಿ. ವಿಶೇಷಾಧಿಕಾರಿ ಡಾ.ಅಂಬಳಿಕೆ ಹಿರಿಯಣ್ಣ, ಜಾನಪದ ವಿದ್ವಾಂಸ ಡಾ.ಬಸವರಾಜ ಮಲಶೆಟ್ಟಿ, ಸಿ ವೀರಣ್ಣ ಸೇರಿದಂತೆ ಹಲವರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.